ಇಲವಾಲದಲ್ಲಿ ಅಂಬೇಡ್ಕರ್ ಥೀಮ್ ಪಾರ್ಕ್ ನಿರ್ಮಾಣ: ಸಚಿವ ಡಾ.ಹೆಚ್.ಸಿ.ಮಹದೇವಪ್ಪ

ಮೈಸೂರು, ಏಪ್ರಿಲ್,14,2026 (www.justkannada.in): ತಾಲ್ಲೂಕಿನ ಇಲವಾಲ ಹೋಬಳಿಯಲ್ಲಿ ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಅವರ ಹೋರಾಟ, ಸಾಧನೆ, ರಾಜತಾಂತ್ರಿಕತೆ‌ ಮತ್ತು ತತ್ವಗಳನ್ನು ತಿಳಿಸಲು ಥೀಮ್ ಪಾರ್ಕ್ ನಿರ್ಮಾಣ ಮಾಡಲಾಗುವುದು ಎಂದು ಸಮಾಜ ಕಲ್ಯಾಣ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಾ. ಹೆಚ್.ಸಿ. ಮಹದೇವಪ್ಪ ಅವರು ತಿಳಿಸಿದರು.

ಜಿಲ್ಲಾ ಪಂಚಾಯತ್ ಸಭಾಂಗದಲ್ಲಿ ಬುಧವಾರ ಡಾ.ಬಿ.ಆರ್.ಅಂಬೇಡ್ಕರ್ ಥೀಮ್ ಪಾಕ್೯ ನಿರ್ಮಾಣ ಕುರಿತು ಜಿಲ್ಲಾ ಮಟ್ಟದ ಅಧಿಕಾರಿಗಳೊಡನೆ ಸಭೆ ನಡೆಸಿ ಮಾತನಾಡಿದ ಅವರು, ಥೀಮ್ ಪಾಕ್೯ ಅಥವಾ ಮ್ಯೂಸಿಯಂ ನಿರ್ಮಾಣ ಮಾಡಲು 10 ಎಕರೆ ಭೂಮಿಯನ್ನು ಕಾಯ್ದಿರಿಸಲಾಗಿದೆ. ಡಿ.ಪಿ.ಆರ್ ತಯಾರಿಸಿ ನೀಲಿ‌ ನಕ್ಷೆಯೊಂದಿಗೆ ಮ್ಯೂಸಿಯಂ ನಿರ್ಮಾಣಕ್ಕೆ ಬೇಕಿರುವ ಅನುದಾನದೊಂದಿಗೆ ಯೋಜನೆ ಸಿದ್ಧವಾಗಬೇಕು ಎಂದರು.

ಡಾ.ಬಿ.ಆರ್. ಅಂಬೇಡ್ಕರ್ ಅವರು ರಚಿಸಿರುವ ಸಂವಿಧಾನದಲ್ಲಿ ದೇಶದ ಆರ್ಥಿಕತೆ, ನಿರುದ್ಯೋಗ, ನೀರಿನ ಸಮಸ್ಯೆ ಸೇರಿದಂತೆ ಹಲವಾರು ಜ್ವಲಂತ ಸಮಸ್ಯೆಗಳಿಗೆ ಪರಿಹಾರವಿದೆ. ಅವುಗಳನ್ನು ಸಮಾನ್ಯ ಜನರಿಗೆ ಅರ್ಥವಾಗುವ ರೀತಿ ವಿಷಯಗಳನ್ನು ‌ತಿಳಿಸಬೇಕು ಎಂದರು.

ಬಾಬಾಸಾಹೇಬರ ಹುಟ್ಟಿನಿಂದ ಪರಿನಿರ್ವಾಣದವರೆಗೆ ಅವರ ಕಾಲಘಟ್ಟದ ಮುಖ್ಯ ಸಂಗತಿಗಳು ಸೇರಿದಂತೆ ಸಾಹು ಮಹಾರಾಜರು ಹಾಗೂ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರುಗಳ ಚಿಂತನೆಗಳನ್ನು‌ ಇಲ್ಲಿ ಅನಾವರಣವಾಗಬೇಕು ಎಂದು ಸೂಚಿಸಿದರು.

ಮೈಸೂರು ಐತಿಹಾಸಿಕ ಪ್ರವಾಸಿ ತಾಣವಾಗಿದ್ದು, ಥೀಮ್ ಪಾಕ್೯ ಹೆಚ್ಚಿನ‌ ಜನರನ್ನು ಆಕರ್ಷಿಸುವುದರ ಜೊತೆಗೆ ಹೊಸತನದಿಂದ ಕೂಡಿರಲಿ. ಪ್ರತಿಯೊಬ್ಬ ನಾಗರಿಕರು ಮೂಲಭೂತ ಹಕ್ಕುಗಳನ್ನು ಚಲಾಯಿಸುವ ಮೊದಲು ಡಾ.ಬಿ.ಆರ್.ಅಂಬೇಡ್ಕರ್ ಅವರನ್ನು ನೆನೆಯಬೇಕು. ಅವರು ನೀಡಿರುವ ಸಂವಿಧಾನದಿಂದ ನಾವು ಇಂದು ಉತ್ತಮ ಜೀವನ‌ ಜೀವಿಸುತ್ತಿದ್ದೇವೆ. ಮೈಸೂರಿನಲ್ಲಿ ನಿರ್ಮಾಣವಾಗುವ  ಥೀಮ್ ಪಾರ್ಕ್ ನ ನೀಲಿ‌ನಕ್ಷೆ ಮಾಡುವ ಮೊದಲು ನಿರ್ಮಾಣದ ಬಗ್ಗೆ ಮುಖ್ಯ ವ್ಯಕ್ತಿಗಳಿಂದ ಮಾಹಿತಿಗಳನ್ನು ಕ್ರೂಢೀಕರಿಸಿ ಉತ್ತಮವಾಗಿ ಮ್ಯೂಸಿಯಂ ಮೂಡಿ ಬರಲಿ ಎಂದು ತಿಳಿಸಿದರು.

ಪ್ರತಿಯೊಬ್ಬರಿಗೂ ಸಾಮಾಜಿಕ ನ್ಯಾಯ ನೀಡಲು ಡಾ.ಬಿ.ಆರ್.ಅಂಬೇಡ್ಕರ್ ಅವರು ರಚಿಸಿರುವ ಸಂವಿಧಾನದ ಬಗ್ಗೆ ಹಲವಾರು ಗಣ್ಯರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಅವುಗಳು ಸಹ ಮ್ಯೂಸಿಯಂನಲ್ಲಿ ಅನಾವರಣವಾಗಲಿ. ಸಾಮಾನ್ಯ ಜನರಿಗೂ ಸಹ ಪ್ರತಿಯೊಂದು ವಿಷಯ ಸುಲಭವಾಗಿ ತಲುಪುವ ರೀತಿ ಇರಲಿ ಎಂದು ಹೇಳಿದರು.

ಸಭೆಯಲ್ಲಿ ಜಿಲ್ಲಾಧಿಕಾರಿ ಜಿ.ಲಕ್ಷ್ಮಿ ಕಾಂತ ರೆಡ್ಡಿ, ಜಿಲ್ಲಾ ಪಂಚಾಯತ್ ಸಿಇಒ ಎಸ್.ಯುಕೇಶ್ ಕುಮಾರ್, ಮೈಸೂರು ಮಹಾನಗರ ಪಾಲಿಕೆ ಆಯುಕ್ತ ಶೇಖ್ ತನ್ವೀರ್ ಆಸಿಫ್, ಮೈಸೂರು ಅಭಿವೃದ್ಧಿ ಪ್ರಾಧಿಕಾರದ ಆಯುಕ್ತ ಕೆ.ಆರ್.ರಕ್ಷಿತ್ ಸೇರಿದಂತೆ ಇನ್ನಿತರೆ ಅಧಿಕಾರಿಗಳು ಉಪಸ್ಥಿತರಿದ್ದರು.

Key words: Construction, Ambedkar Theme Park, Minister,  Dr. H.C. Mahadevappa