Sunday, August 23, 2026

BDA Apartments

Home Front Page ಎಬೋಲಾ ಪೀಡಿತ ದೇಶಗಳಿಂದ ಬರುವ ಪ್ರಯಾಣಿಕರ ಮೇಲೆ ತೀವ್ರ ನಿಗಾ- ಸಚಿವ ದಿನೇಶ್ ಗುಂಡೂರಾವ್

ಎಬೋಲಾ ಪೀಡಿತ ದೇಶಗಳಿಂದ ಬರುವ ಪ್ರಯಾಣಿಕರ ಮೇಲೆ ತೀವ್ರ ನಿಗಾ- ಸಚಿವ ದಿನೇಶ್ ಗುಂಡೂರಾವ್

ಬೆಂಗಳೂರು,ಮೇ,23,2026 (www.justkannada.in): ಎಬೋಲಾ ಪೀಡಿತ ದೇಶಗಳಿಂದ ಬರುವ ಪ್ರಯಾಣಿಕರ ಮೇಲೆ ತೀವ್ರ ನಿಗಾ ಇಡಲಾಗಿದೆ. ಸದ್ಯದ ಪರಿಸ್ಥಿತಿಯಲ್ಲಿ ಭಾರತದಲ್ಲಿ ಎಬೋಲಾ ಸೋಂಕಿನ ಯಾವುದೇ ಪ್ರಕರಣಗಳು ಪತ್ತೆಯಾಗಿಲ್ಲ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ತಿಳಿಸಿದ್ದಾರೆ.

ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಸಚಿವ ದಿನೇಶ್ ಗುಂಡೂರಾವ್,  ಎಬೋಲಾ ಸೋಂಕಿನ ಬಗ್ಗೆ ಸಾರ್ವಜನಿಕರು ಭಯ ಪಡುವ ಅಗತ್ಯವಿಲ್ಲ. ಆದರೆ ಮುಂಜಾಗ್ರತಾ ಕ್ರಮವಾಗಿ ತೀವ್ರ ಎಚ್ಚರಿಕೆ ವಹಿಸುವುದು ಅತ್ಯಗತ್ಯವಾಗಿದೆ .  ಎಬೋಲಾ ಪೀಡಿತ ದೇಶಗಳಿಂದ ರಾಜ್ಯಕ್ಕೆ ಆಗಮಿಸುವ ಪ್ರಯಾಣಿಕರ ಮೇಲೆ ತೀವ್ರ ನಿಗಾ ಇಡಲು ತೀರ್ಮಾನಿಸಲಾಗಿದೆ. ಕಡ್ಡಾಯವಾಗಿ ಕ್ವಾರಂಟೈನ್‌ ನಲ್ಲಿ (ಪ್ರತ್ಯೇಕವಾಸ) ಇಡುವಂತೆ ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ. ಈ ಅವಧಿಯಲ್ಲಿ ಪ್ರಯಾಣಿಕರಲ್ಲಿ ಏನಾದರೂ ಅನಾರೋಗ್ಯದ ಲಕ್ಷಣಗಳು ಅಥವಾ ಎಬೋಲಾ ಸೋಂಕಿನ ಗುಣಲಕ್ಷಣಗಳು ಕಂಡುಬಂದರೆ, ತಕ್ಷಣವೇ ಅವರಿಗೆ ವೈದ್ಯಕೀಯ ತಪಾಸಣೆ ಹಾಗೂ ಸೂಕ್ತ ಟೆಸ್ಟ್‌ ಗಳನ್ನು ಮಾಡಲು ವ್ಯವಸ್ಥೆ ಕಲ್ಪಿಸಲಾಗಿದೆ ಎಂದು ತಿಳಿಸಿದರು.

ವಿಶ್ವ ಆರೋಗ್ಯ ಸಂಸ್ಥೆಯು ಎಬೋಲಾ ಕುರಿತು ಜಾಗತಿಕ ಎಚ್ಚರಿಕೆ ನೀಡಿರುವ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕೆ ಕ್ರಮವಾಗಿ ಬೆಂಗಳೂರು ಮತ್ತು ಮಂಗಳೂರು ನಗರಗಳಲ್ಲಿ ಎಬೋಲಾ ಚಿಕಿತ್ಸೆಗಾಗಿಯೇ ಪ್ರತ್ಯೇಕ ಆಸ್ಪತ್ರೆಗಳನ್ನು ಕಾಯ್ದಿರಿಸಲಾಗಿದೆವೈದ್ಯಕೀಯ ಸಿಬ್ಬಂದಿಗೆ ಎಬೋಲಾ ನಿರ್ವಹಣೆ ಕುರಿತು ಈಗಾಗಲೇ ಸೂಕ್ತ ತರಬೇತಿ ನೀಡಲಾಗಿದ್ದು, ಅಗತ್ಯವಿರುವ ಪಿಪಿಇ ಕಿಟ್‌ ಗಳು ಹಾಗೂ ಔಷಧಿಗಳನ್ನು ಮುಂಚಿತವಾಗಿಯೇ ದಾಸ್ತಾನು ಮಾಡಿಕೊಳ್ಳಲು ಸೂಚಿಸಲಾಗಿದೆ ಎಂದರು.

ಹಾಗೆಯೇ ರಾಜ್ಯದ ಪ್ರಮುಖ ಅಂತರರಾಷ್ಟ್ರೀಯ ವಿಮಾನ ನಿಲ್ದಾಣಗಳು ಹಾಗೂ ಬಂದರುಗಳಲ್ಲಿ ಪ್ರಾಥಮಿಕ ಹಂತದ ಕಟ್ಟುನಿಟ್ಟಿನ ನಿಗಾ ವಹಿಸಲಾಗಿದೆ. ವಿದೇಶ ಪ್ರವಾಸ ಮುಗಿಸಿ ಹಿಂದಿರುಗುವ ಪ್ರತಿಯೊಬ್ಬ ಪ್ರಯಾಣಿಕರ ಮೇಲೂ ಹೆಚ್ಚಿನ ನಿಗಾ ಇರಿಸಲಾಗುತ್ತದೆ ಸಚಿವ ದಿನೇಶ್ ಗುಂಡೂರಾವ್ ತಿಳಿಸಿದರು.

Key words: Strict vigilance, passengers, Ebola, countries, Minister, Dinesh Gundu Rao