Saturday, August 22, 2026

BDA Apartments

Home Front Page ಶಿವಮೊಗ್ಗ: KPS ಶಾಲೆಯ ನೂತನ ಕಟ್ಟಡ ನಿರ್ಮಾಣಕ್ಕೆ ಸಚಿವ ಮಧು ಬಂಗಾರಪ್ಪ ಶಂಕುಸ್ಥಾಪನೆ

ಶಿವಮೊಗ್ಗ: KPS ಶಾಲೆಯ ನೂತನ ಕಟ್ಟಡ ನಿರ್ಮಾಣಕ್ಕೆ ಸಚಿವ ಮಧು ಬಂಗಾರಪ್ಪ ಶಂಕುಸ್ಥಾಪನೆ

ಶಿವಮೊಗ್ಗ, ಆಗಸ್ಟ್,22,2026 (www.justkannada.in):  ಪ್ರತಿಯೊಬ್ಬರಿಗೂ ಗುಣಮಟ್ಟದ ಶಿಕ್ಷಣ ನೀಡಬೇಕೆಂಬ ಉದ್ದೇಶದಿಂದ ರಾಜ್ಯ ಸರ್ಕಾರವು ಕರ್ನಾಟಕ ಪಬ್ಲಿಕ್‌ ಶಾಲೆಗಳನ್ನು ನಿರ್ಮಿಸುತ್ತಿದ್ದು, ರಾಜ್ಯಾದ್ಯಂತ 1,000  ಪಬ್ಲಿಕ್‌ ಶಾಲೆಗಳ ನಿರ್ಮಾಣಕ್ಕೆ ನಮ್ಮ ಸರ್ಕಾರ ಚಾಲನೆ ನೀಡಿದೆ. ಇದಕ್ಕೆ ಅಗತ್ಯ ಸಂಪನ್ಮೂಲದ ಕ್ರೋಢೀಕರಣ ನಡೆಯುತ್ತಿದ್ದು, ಈ ಶಾಲೆಗಳಲ್ಲಿ ಎಲ್‌ಕೆಜಿಯಿಂದ ದ್ವಿತೀಯ ಪಿಯುಸಿಯವರೆಗೂ ಒಂದೇ ಕಡೆ ಮಕ್ಕಳಿಗೆ ಶಿಕ್ಷಣ ದೊರೆಯಲಿದೆ ಎಂದು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಸಚಿವ ಮಧು ಬಂಗಾರಪ್ಪ ಹೇಳಿದ್ದಾರೆ.

ಶಿವಮೊಗ್ಗ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಹಾಗೂ ಎಜಾಕ್ಸ್ ಇಂಜಿನಿಯರಿಂಗ್ ಲಿಮಿಟೆಡ್ ಮತ್ತು ಎಜಾಕ್ಸ್ ಇಂಜಿನಿಯರಿಂಗ್ ಚಾರಿಟೇಬಲ್ ಟ್ರಸ್ಟ್ ಸಂಯುಕ್ತವಾಗಿ ಶಿವಮೊಗ್ಗದ ಸೈನ್ಸ್ ಮೈದಾನದಲ್ಲಿ ʻಕರ್ನಾಟಕ ಪಬ್ಲಿಕ್ ಸ್ಕೂಲ್ ʼ(ಕೆಪಿಎಸ್)ನ ನೂತನ ಕಟ್ಟಡ ನಿರ್ಮಾಣಕ್ಕೆ ಶಂಕುಸ್ಥಾಪನೆ ನೆರವೇರಿಸಿ ಸಚಿವ ಮಧು ಬಂಗಾರಪ್ಪ ಅವರು ಮಾತನಾಡಿದರು.

ಈಗಾಗಲೇ  500  ಸರ್ಕಾರಿ ಶಾಲೆಗಳನ್ನು ‘ಕರ್ನಾಟಕ ಪಬ್ಲಿಕ್ ಶಾಲೆ’ (KPS)ಗಳಾಗಿ ಉನ್ನತೀಕರಿಸಿ, ಅಭಿವೃದ್ಧಿಪಡಿಸಲು 1,750 ಕೋಟಿ ರೂ.ಗಳ ನೆರವನ್ನು ʻಏಷ್ಯನ್ ಡೆವಲಪ್‌ಮೆಂಟ್ ಬ್ಯಾಂಕ್ʼ (ADB) ನೀಡಿದೆ. ಈ ಸಂಬಂಧದ ಒಪ್ಪಂದಕ್ಕೆ ಶುಕ್ರವಾರ ಮುಖ್ಯಮಂತ್ರಿ ಶ್ರೀ ಡಿ.ಕೆ. ಶಿವಕುಮಾರ್‌ ಸಮ್ಮುಖದಲ್ಲಿ ಸಹಿ ಮಾಡಲಾಗಿದೆ. ಇದರಿಂದ ಕೆಪಿಎಸ್‌ ಶಾಲೆಗಳ ಅಭಿವೃದ್ಧಿಗೆ ಇನ್ನಷ್ಟು ವೇಗ ಸಿಕ್ಕಿದೆ. ಮುಂದಿನ ನಾಲ್ಕು ವರ್ಷಗಳಲ್ಲಿ ರಾಜ್ಯ ಸರ್ಕಾರ  750 ಕೋಟಿ ರೂ.ಗಳನ್ನು ಒದಗಿಸಿ, 500 ಕೆಪಿಎಸ್‌ ಶಾಲೆಗಳನ್ನು ಅಭಿವೃದ್ಧಿ ಪಡಿಸಲಿದೆ ಎಂದು ಸಚಿವರು ತಿಳಿಸಿದರು.

ರಾಜ್ಯಾದ್ಯಂತ ಆರಂಭವಾಗಲಿರುವ ಕೆಪಿಎಸ್‌ ಶಾಲೆಗಳ ಕಟ್ಟಡ ನಿರ್ಮಾಣ ಕಾಮಗಾರಿಗೆ ರಾಜ್ಯಮಟ್ಟದಲ್ಲಿ ಶಂಕುಸ್ಥಾಪನೆಯನ್ನು ಶಿವಮೊಗ್ಗದಲ್ಲಿ ನೆರವೇರಿಸಲು ಈ ಹಿಂದೆ ತೀರ್ಮಾನಿಸಲಾಗಿತ್ತು. ಕಾರಣಾಂತರದಿಂದ ಈ ಕಾರ್ಯಕ್ರಮ ರದ್ದಾಗಿದ್ದು, ಆದಷ್ಟು ಬೇಗ ಈ ಕಾರ್ಯಕ್ರಮವನ್ನು ಶಿವಮೊಗ್ಗದಲ್ಲಿ ನಡೆಸಲಿದ್ದೇವೆ. ಅಲ್ಲದೆ, ಶಿವಮೊಗ್ಗದ ಸಮಗ್ರ ಅಭಿವೃದ್ಧಿಗೆ ನಮ್ಮ ಸರ್ಕಾರ ಹಾಕಿಕೊಂಡಿರುವ ಹಲವಾರು ಕಾರ್ಯಕ್ರಮಗಳಿಗೂ ಈ ಸಂದರ್ಭದಲ್ಲಿ ಚಾಲನೆ ನೀಡುತ್ತೇವೆ ಎಂದು ಜಿಲ್ಲಾ ಉಸ್ತುವಾರಿ ಸಚಿವರೂ ಆಗಿರುವ ಮಧು ಬಂಗಾರಪ್ಪ ಹೇಳಿದರು.

ಸಿಎಸ್‌ಆರ್‌ ನಿಧಿ ಬಳಕೆ

ಸಮುದಾಯ ಮತ್ತು ಕಾರ್ಪೊರೇಟ್ ಸಾಮಾಜಿಕ ಹೊಣೆಗಾರಿಕೆ (CCSR) ನಿಧಿಯನ್ನು ಕೆಪಿಎಸ್‌ ಶಾಲೆಗಳ ಅಭಿವೃದ್ಧಿಗೆ ಸಮರ್ಥವಾಗಿ ಬಳಸಿಕೊಳ್ಳಲು ಸರ್ಕಾರ ತೀರ್ಮಾನಿಸಿದ್ದು, ಇದಕ್ಕಾಗಿ ವಿಶೇಷವಾದ ಉಪಕ್ರಮವನ್ನು ಜಾರಿಗೆ ತರಲಾಗಿದೆ. ಈ ಮೂಲಕ ಶಿಕ್ಷಣ ಕ್ಷೇತ್ರದಲ್ಲಿ ಮಹತ್ತರ ಬದಲಾವಣೆ ಮಾಡಲು ನಾವು ಮುಂದಾಗಿದ್ದೇವೆ ಎಂದು ಸಚಿವ ಮಧು ಬಂಗಾರಪ್ಪ ವಿವರಿಸಿದರು. ಶಾಲೆಗಳ ಅಭಿವೃದ್ಧಿಗೆ ಎಲ್ಲರೂ ಕೈಜೋಡಿಸಬೇಕೆಂದು ಅವರು ಮನವಿ ಮಾಡಿದರು.

ಮಾಜಿ ಮುಖ್ಯಮಂತ್ರಿ ದಿವಂಗತ ಎಸ್‌. ಬಂಗಾರಪ್ಪ ಓದಿದ ಶಾಲೆಯ ಅಭಿವೃದ್ಧಿಗೆ ತಾವು ಕೊಡುಗೆ ನೀಡಿರುವುದನ್ನು ಹಾಗೂ ನಿಕಟಪೂರ್ವ ಮುಖ್ಯಮಂತ್ರಿ ಸಿದ್ದರಾಮಯ್ಯ ತಾವು ಓದಿದ ಶಾಲೆ ಅಭಿವೃದ್ಧಿ ಪಡಿಸುತ್ತಿರುವುದನ್ನು ಸ್ಮರಿಸಿದರು.

ಇಂದು ಶಂಕುಸ್ಥಾಪನೆ ನೆರವೇರಿದ ಕರ್ನಾಟಕ ಪಬ್ಲಿಕ್‌ ಶಾಲೆಯ ನೂತನ ಕಟ್ಟಡ ನಿರ್ಮಾಣಕ್ಕೆ ಎಜಾಕ್ಸ್ ಇಂಜಿನಿಯರಿಂಗ್ ಲಿಮಿಟೆಡ್  ₹13.50 ಕೋಟಿ ದೇಣಿಗೆ ನೀಡಿದೆ. ಒಂದು ವರ್ಷದ ಒಳಗೆ ಕಟ್ಟಡ ನಿರ್ಮಾಣ ಕಾರ್ಯವನ್ನು ಪೂರ್ಣಗೊಳಿಸುವುದಾಗಿ ತಿಳಿಸಿದ್ದಾರೆ.  ಅವರಿಗೆ ಇಲ್ಲಿ ಓದುವ ಎಲ್ಲಾ ಮಕ್ಕಳ ಪರವಾಗಿ ಮತ್ತು ನಮ್ಮ ಸರ್ಕಾರದ ಪರವಾಗಿ ಅಭಿನಂದಿಸುವುದಾಗಿ ತಿಳಿಸಿದರು.

15 ಸಾವಿರ ಶಿಕ್ಷಕರ ನೇಮಕ

ಕಳೆದ ಮೂರು ವರ್ಷಗಳಲ್ಲಿ ಶಿಕ್ಷಣ ಸಚಿವರಾಗಿ ತಾವು ಜಾರಿಗೆ ತಂದಿರುವ ಯೋಜನೆಗಳ ಬಗ್ಗೆ ಗಮನ ಸೆಳೆದ ಸಚಿವ ಮಧು ಬಂಗಾರಪ್ಪ, ಶಿಕ್ಷಕರ ಕೊರತೆಯನ್ನು ನೀಗಿಸುವ ಉದ್ದೇಶದಿಂದ ನಾನು ಈ ಹಿಂದೆ ಹೇಳಿದಂತೆ 15 ಸಾವಿರ ಶಿಕ್ಷಕರ ನೇಮಕ ಪ್ರಕ್ರಿಯೆ ಕೈಗೆತ್ತಿಕೊಂಡಿದ್ದೇವೆ. ಶಾಲೆಗಳಲ್ಲಿ  ಗುಣಮಟ್ಟದ ಶಿಕ್ಷಣ ನೀಡಲು ನಾವು ತೆಗೆದುಕೊಂಡ ಕ್ರಮಗಳಿಂದಾಗಿ ಈ ಬಾರಿಯ ಎಸ್‌ಎಸ್‌ಎಲ್‌ಸಿ ಮತ್ತು ದ್ವಿತೀಯ ಪಿಯುಸಿಯಲ್ಲಿ ದಾಖಲೆ ಫಲಿತಾಂಶ ಬಂದಿದೆ ಎಂದು ಹೇಳಿದರು.

ಎಜಾಕ್ಸ್‌ ನಿಂದ ಜಿಲ್ಲೆಗೊಂದು ಕೆಪಿಎಸ್‌

ಎಜಾಕ್ಸ್ ಇಂಜಿನಿಯರಿಂಗ್ ಲಿಮಿಟೆಡ್ ಸಂಸ್ಥೆಯ ಅಧ್ಯಕ್ಷ ಕೆ. ವಿಜಯ್ ಅವರು ಮಾತನಾಡಿ, ಸಂಸ್ಥೆಯ ವತಿಯಿಂದ ರಾಜ್ಯದ ಪ್ರತಿ ಜಿಲ್ಲೆಯಲ್ಲಿ ಒಂದೊಂದು ಕೆಪಿಎಸ್ ಶಾಲೆಯನ್ನು ನಿರ್ಮಿಸಿಕೊಡುವ ಉದ್ದೇಶವಿದೆ. ಮುಂದಿನ ಐದು  ವರ್ಷಗಳಲ್ಲಿ ಹತ್ತು ಜಿಲ್ಲೆಗಳಲ್ಲಿ ನಮ್ಮ ಸಂಸ್ಥೆಯ ವತಿಯಿಂದ ಕೆಪಿಎಸ್‌ ಶಾಲೆಯ ಕಟ್ಟಡ ನಿರ್ಮಿಸಿಕೊಡುತ್ತೇವೆ ಎಂದು ಪ್ರಕಟಿಸಿದರು. ಅಲ್ಲದೆ, ನಾವು ನಿರ್ಮಿಸಿದ ಶಾಲೆಗಳ ಕಟ್ಟಡವನ್ನು ನಾವೇ ನಿರ್ವಹಣೆ ಮಾಡುತ್ತೇವೆ ಎಂದು ತಿಳಿಸಿದರು.

ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಿವಮೊಗ್ಗ ಶಾಸಕ ಎಸ್.ಎಸ್. ಚನ್ನಬಸಪ್ಪ ವಹಿಸಿದ್ದರು. ಎಜಾಕ್ಸ್ ಇಂಜಿನಿಯರಿಂಗ್ ಲಿಮಿಟೆಡ್ ಅಧ್ಯಕ್ಷ ಕೆ. ವಿಜಯ್  ಅವರ ಪತ್ನಿ ಕಲ್ಯಾಣಿ ವಿಜಯ್, ವಿಧಾನ ಪರಿಷತ್ ಸದಸ್ಯರಾದ ಬಲ್ಕೀಷ್ ಬಾನು, ಡಿ.ಎಸ್. ಅರುಣ್, ಜವಳಿ ಮೂಲಸೌಕರ್ಯ ಅಭಿವೃದ್ಧಿ ನಿಗಮದ ಅಧ್ಯಕ್ಷ ಚೇತನ್ ಕೆ., ರಾಜ್ಯ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ವರ್ಗ ಅಲೆಮಾರಿ ಅಭಿವೃದ್ಧಿ ನಿಗಮದ ಅಧ್ಯಕ್ಷೆ ಪಲ್ಲವಿ ಜಿ., ಜಿಲ್ಲಾಧಿಕಾರಿ ಪ್ರಭುಲಿಂಗ ಕವಳಿಕಟ್ಟಿ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಹೇಮಂತ್ ಎನ್., ಜಿಲ್ಲಾ ಪೊಲೀಸ್ ಅಧೀಕ್ಷಕ ನಿಖಿಲ್ ಬಿ.  ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಮತ್ತು ಸ್ಥಳೀಯ ಜನಪ್ರತಿನಿಧಿಗಳು ಉಪಸ್ಥಿತರಿದ್ದರು.

Key words: Shivamogga, Minister, Madhu Bangarappa, lays foundation stone, KPS School