ಹಾಲಿನ ದರ ಏರಿಕೆ ಬಗ್ಗೆ ಪರೋಕ್ಷ ಸುಳಿವು: ಹೆಚ್.ಡಿಕೆ ಪೆನ್ ಡ್ರೈವ್ ಕುರಿತು ಹೊಸಬಾಂಬ್ ಸಿಡಿಸಿದ ಸಚಿವ ಕೆ.ಎನ್ ರಾಜಣ್ಣ.

ಮೈಸೂರು,ಜುಲೈ,8,2023(www.justkannada.in):  ಹೆಚ್.ಡಿ ಕುಮಾರಸ್ವಾಮಿ ಪೆನ್ ಡ್ರೈವ್ ಬಿಡುಗಡೆ ಮಾಡಲು ವಿಳಂಬ ಮಾಡುತ್ತಿರುವುದರ ಹಿಂದಿನ ಉದ್ದೇಶ ಏನು…? ಪೆನ್ ಡ್ರೈವ್ ಹೆಸರಿನಲ್ಲಿ ಅವರೇನಾದರೂ ದಂಧೆ ಮಾಡ್ತಾ ಇದ್ದಾರಾ..? ಎಂದು ಸಹಕಾರ ಸಚಿವ ಕೆ.ಎನ್ ರಾಜಣ್ಣ ಹೊಸಬಾಂಬ್ ಸಿಡಿಸಿದರು.

ಮೈಸೂರಿನಲ್ಲಿ ಇಂದು ಮಾತನಾಡಿದ ಸಚಿವ ಕೆ.ಎನ್ ರಾಜಣ್ಣ, ವರ್ಗಾವಣೆಯಾಗುತ್ತಿದೆ ಆದರೆ ಅದು ದಂಧೆಯಲ್ಲ. ವರ್ಗಾವಣೆ ಅವರ ಸರ್ಕಾರವಿದ್ದಾಗ ಆಗ್ತಿರ್ಲಿಲ್ವಾ..? ಎಲ್ಲಾ ಕಾಲದಲ್ಲೂ ವರ್ಗಾವಣೆ ನಡೆಯುತ್ತೆ. ಅದನ್ನ ದಂಧೆ ಅನ್ನೊದು ತಪ್ಪು. ವೈಎಸ್‌ಟಿ ಅಂದ್ರೆ ಏನು ಅಂತಾ ನಂಗೆ ಗೊತ್ತಿಲ್ಲ.ಅವರನ್ನೇ ಕೇಳಬೇಕು. ಪೆನ್ ಡ್ರೈವ್ ಹೆಸರಿನಲ್ಲಿ ಎಚ್.ಡಿ ಕುಮಾರಸ್ವಾಮಿ ದಂಧೆ ಮಾಡ್ತಾ ಇದಾರಾ.? ತಾಕತ್ ಇದ್ದರೇ ಈಗಲೇ ಪೆನ್ ಡ್ರೈವ್ ನಲ್ಲಿ ಏನಿದೆ ತೋರಿಸಲಿ. ನನಗೆ ಆ ಪೆನ್ ಡ್ರೈವ್ ವಿಚಾರದಲ್ಲಿ ಯಾವ ಕುತೂಹಲ ಇಲ್ಲ. ಹಳ್ಳಿ ಜಾತ್ರೆಗಳಲ್ಲಿ ಬುಟ್ಟಿ ಹಿಡ್ಕೊಂಡು ಹಾವಿದೆ ಹಾವಿದೆ ಅಂತಾ ಹೇಳ್ತಾರೆ. ಬುಟ್ಟಿಯಲ್ಲಿ ಯಾವ ಹಾವು ಇರುವುದಿಲ್ಲ. ಅದೇ ರೀತಿ ಇವರು ಮಾಡ್ತಾ ಇದ್ದಾರೆ. ಪೆನ್‌ಡ್ರೈವ್ ಇದೆ ಅಂತಾರೆ ಅದರಲ್ಲಿ ಏನು ಇಲ್ಲ. ಪೆನ್ ಡ್ರೈವ್ ಹಿಡ್ಕೊಂಡು ಸುಮ್ಮನೆ ಓಡಾಡುತ್ತಿದ್ದಾರೆ. ಒಂದು ವೇಳೆ ಪೆನ್ ಡ್ರೈವ್ ನಲ್ಲಿ ಅಂತಹ ಮಹತ್ವದ ವಿಚಾರ ಇದ್ದರೆ ತಡ ಯಾಕೆ. ತಾಕತ್ತಿದ್ರೆ ತೋರಿಸಲಿ. ನಾನು ಇದನ್ನ ಬ್ಲಾಕ್ ಮೇಲ್ ಅಂತಾ ಹೇಳುವುದಿಲ್ಲ‌. ಮುಂದೆ ಗೊತ್ತಾಗುತ್ತದೆ ಎಂದು ಹೇಳಿದರು.

ಪರೋಕ್ಷವಾಗಿ ಹಾಲಿನ ದರ ಏರಿಕೆ ಬಗ್ಗೆ ಸುಳಿವು ನೀಡಿದ ಸಚಿವ ರಾಜಣ್ಣ.

ಪರೋಕ್ಷವಾಗಿ ಹಾಲಿನ ದರ ಏರಿಕೆ ಬಗ್ಗೆ ಸುಳಿವು ನೀಡಿದ ಸಚಿವ ರಾಜಣ್ಣ, ಹಾಲು ಉತ್ಪಾದಕರಿಗೆ ಸಹಾಯಧನ ಏರಿಕೆ ಮಾಡುವ ಚಿಂತನೆ ಇದೆ.  ಹಾಲಿನ ದರ ಏರಿಕೆ ಎಂದ ಕೂಡಲೇ ಎಲ್ಲರೂ ಗಾಬರಿಯಾಗುತ್ತಾರೆ‌. ದರ ಏರಿಕೆ ಎಂದರೆ ಎರಡು ರೀತಿ ಇದೆ‌. ಒಂದು ಹಾಲು ಉತ್ಪಾದಕರಿಗೆ ಹೆಚ್ಚಿನ ದರ ಕೊಡೋದು. ಇನ್ನೊಂದು ಖರೀದಿ ಮಾಡುವವರಿಗೆ ದರ ಜಾಸ್ತಿ ಮಾಡುವುದು. ಬೇರೆ ರಾಜ್ಯಗಳಿಗೆ ಹೋಲಿಕೆ ಮಾಡಿದರೆ ನಮ್ಮಲ್ಲಿ ಎರಡು ದರ ಕಡಿಮೆ ಇದೆ. ಹಾಲು ಉತ್ಪಾದಕರಿಗೆ ನಾವು ಸಹಾಯ ಮಾಡಬೇಕಿದೆ‌. ಇದಕ್ಕಾಗಿ ಮುಂದಿನ ದಿನಗಳಲ್ಲಿ ಯಾರಿಗೂ ಹೊರೆ ಆಗದಂತೆ ಸೂಕ್ತ ತೀರ್ಮಾನ ಕೈಗೊಳ್ಳುತ್ತೇವೆ. ಇದರ ಜೊತೆಗೆ ಅಮುಲ್ ಜೊತೆ ನಂದಿನ ವಿಲೀನ ಮಾಡುವ ಪ್ರಶ್ನೆ ಇಲ್ಲ. ಅಮೂಲ್ ಪ್ರತ್ಯೇಕವಾದ ಸಂಸ್ಥೆ. ನಂದಿನಿ ಪ್ರತ್ಯೇಕ ಸಂಸ್ಥೆ. ಎರಡನ್ನು ವಿಲೀನ ಮಾಡುವ ಪ್ರಶ್ನೆ ಇಲ್ಲ ಎಂದು ಸ್ಪಷ್ಟಪಡಿಸಿದರು.

ಪಶುಸಂಗೋಪನಾ ಸಚಿವ ಕೆ. ವೆಂಕಟೇಶ್ ಹೇಳಿಕೆ ಸಮರ್ಥನೆ

ಪಶುಸಂಗೋಪನಾ ಸಚಿವ ಕೆ. ವೆಂಕಟೇಶ್ ಹೇಳಿಕೆ ಸಮರ್ಥಿಸಿಕೊಂಡ ಸಚಿವ ಕೆ.ಎನ್ ರಾಜಣ್ಣ, ನಾನು ಮಾಂಸ‌ ತಿನ್ನುತ್ತೇನೆ. ನೀವು ಬೇಡ ಎಂದರೆ ನಿಲ್ಲಿಸುವುದಿಲ್ಲ. ಹಾಗೆಯೇ ವೆಜ್ ತಿನ್ನೊರಿಗೆ ಮಾಂಸ ತಿನ್ನಿ ಎನ್ನಲು ಆಗಲ್ಲ. ಅವರವರಿಗೆ ಬೇಕಾದದ್ದನ್ನ ಬಳಸುತ್ತಾರೆ.  ಹಿಂದಿನಿಂದಲೂ ಏನು ನಡೆದುಕೊಂಡು ಬಂದಿದೆ ಅದು ನಡೆಯುತ್ತದೆ. ಅದನ್ನು ತಡೆಯುಕ್ಕಾಗುತ್ತಾ.? ಎಂದು ಪ್ರಶ್ನಿಸಿದರು.

ಗೋ ಹತ್ಯೆ ಅನ್ನೋದು ಅತ್ಯಂತ ಸೂಕ್ಷ್ಮ ವಿಚಾರ. ಹಸು ಕಡಿಯಬೇಕು ಎಂದು ಹೇಳುವುದಿಲ್ಲ. ಕಡಿಯ ಬಾರದು ಎಂದು ಹೇಳುವುದಿಲ್ಲ. ಆದರೆ ರೈತರ ಅನುಕೂಲಕ್ಕೆ ಕಾಯ್ದೆ ಮಾಡಬೇಕಿದೆ. ಈ ವಿಚಾರದಲ್ಲಿ ಹಸು ಅಥವಾ ಮತ್ತೊಂದು ಎನ್ನುವ ಪ್ರಶ್ನೆ ಬರುವುದಿಲ್ಲ. ಮುಂದಿನ ದಿನಗಳಲ್ಲಿ ಎಲ್ಲರೊಂದಿಗೆ ಚರ್ಚೆ ನಡೆಸಿ ತೀರ್ಮಾನ ಮಾಡುತ್ತೇವೆ ಎಂದು ಸಚಿವ ರಾಜಣ್ಣ ಹೇಳಿದರು.

ಪ್ರತಿ ಗ್ರಾಮ ಪಂಚಾಯತಿಯಲ್ಲೊಂದು ಕೃಷಿ ಪತ್ತಿನ ಸಹಕಾರ ಸಂಘವನ್ನು ಸ್ಥಾಪಿಸುವ ಗುರಿ ಇದೆ. ಇದೇ ವರ್ಷದ ಡಿಸೆಂಬರ್ ಒಳಗೆ ಎಲ್ಲಾ ಪಂಚಾಯತಿಗಳಲ್ಲೂ ಸಹಕಾರ ಸಂಘ ಮಾಡಲು ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ಈ ಹಿಂದೆ ಮೂರು, ನಾಲ್ಕು ಪಂಚಾಯತಿಗಳಿಗೆ ಒಂದರಂತೆ ಸಹಕಾರ ಸಂಘಗಳು ಇದ್ದವು. ಮುಂದಿನ ದಿನಗಳ ಪ್ರತಿ ಪಂಚಾಯತಿಗೆ ಒಂದರಂತೆ ಸಹಕಾರ ಸಂಘಗಳನ್ನು ಸ್ಥಾಪನೆ ಮಾಡಲು ಚಿಂತನೆ ಮಾಡಲಾಗಿದೆ. ಸಹಕಾರ ಇಲಾಖೆ ಜನಸಾಮಾನ್ಯರ ಇಲಾಖೆಯಾಗಬೇಕು. ಇಂದಿನ ಯುವ ಪೀಳಿಗೆ ಹೆಚ್ಚು ಹೆಚ್ಚು ಸಹಕಾರ ಆಂದೋಲನದಲ್ಲಿ ತೊಡಗಿಸಿಕೊಳ್ಳಬೇಕು. ಪ್ರತಿಯೊಬ್ಬರೂ ಸ್ವಾಭಿಮಾನದ ಬದುಕನ್ನ ನಡೆಸಬೇಕು. ಸಹಕಾರ ಕ್ಷೇತ್ರ ಮತ್ತಷ್ಟು ಅಭಿವೃದ್ಧಿ ಪಥದಲ್ಲಿ ಸಾಗಬೇಕು ಎನ್ನುವುದು ನಮ್ಮ ಉದ್ದೇಶ. ಈ ಎಲ್ಲಾ ವಿಚಾರಗಳ ಕುರಿತು ಇಂದಿನ ಸಭೆಯಲ್ಲಿ ಚರ್ಚೆ ಮಾಡಲಾಗಿದೆ ಎಂದರು.

Key words: milk- price- hike- Minister- KN Rajanna – HDK- pen drive