Friday, October 2, 2026

BDA Apartments

You should utilize any platform that you get to learn: Nagathihalli Chandrashekar BDA JK_Adv BDA Adv
Home Front Page ಸಾಹಿತ್ಯವು ಜನರಲ್ಲಿ ಜಾಗೃತಿ ಮೂಡಿಸಲಿ:- ಸಚಿವ ಡಾ.ಹೆಚ್.ಸಿ.ಮಹದೇವಪ್ಪ

ಸಾಹಿತ್ಯವು ಜನರಲ್ಲಿ ಜಾಗೃತಿ ಮೂಡಿಸಲಿ:- ಸಚಿವ ಡಾ.ಹೆಚ್.ಸಿ.ಮಹದೇವಪ್ಪ

ಮೈಸೂರು,ಅಕ್ಟೋಬರ್,17,2023(www.justkannada.in): ಸಾಹಿತ್ಯ ಕ್ಷೇತ್ರವು ಸಮಾಜದ ಮೇಲೆ ಬಹಳ ಪ್ರಭಾವ ಬೀರುತ್ತದೆ. ಸಾಹಿತ್ಯಕ್ಕೆ ಸಮಾಜದ ಅಂಕುಡೊಂಕುಗಳನ್ನು ತಿದ್ದುವ ಶಕ್ತಿ ಇದೆ. ಈ ಹಿನ್ನೆಲೆ ಸಾಹಿತ್ಯದ ಮೂಲಕ ಜನರಲ್ಲಿ ಜಾಗೃತಿ ಮೂಡಿಸುವಂತಾಗಲಿ ಎಂದು ಸಮಾಜ ಕಲ್ಯಾಣ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಡಾ.ಹೆಚ್.ಸಿ.ಮಹದೇವಪ್ಪ ಅವರು ತಿಳಿಸಿದರು.

ದಸರಾ ಮಹೋತ್ಸವದ ಅಂಗವಾಗಿ ಮಂಗಳವಾರ ಕಲಾಮಂದಿರಲ್ಲಿ ನಡೆದ ಕವಿಗೋಷ್ಠಿ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದ ಸಚಿವ ಹೆಚ್.ಸಿ ಮಹದೇವಪ್ಪ, ನಾಲ್ವಡಿ ಕೃಷ್ಣರಾಜರವರ ಆಡಳಿತವು ಈಗಿನ ಸಾಹಿತ್ಯ ಚಳುವಳಿಗೆ ಪ್ರೇರಣೆಯಾಗಲಿ. ಈ ಕವಿಗೋಷ್ಠಿ ವೇದಿಕೆಯಲ್ಲಿ ಸಮಾಜದ ಎಲ್ಲಾ ಸಮಸ್ಯೆಗಳನ್ನು ಕುರಿತು ಸುದೀರ್ಘ ಚರ್ಚೆಯಾಗಲಿ ಎಂದು ಸಲಹೆ ನೀಡಿದರು.

ವಚನ ಸಾಹಿತ್ಯ ಚಳುವಳಿಯ ಮೂಲಕ ಸಮಾಜದಲ್ಲಿನ ಬದಲಾವಣೆಗಾಗಿ ಜಾಗೃತಿಯನ್ನು ಮೂಡಿಸಲಾಗಿದೆ. ಅದರಂತೆ ಪ್ರಸ್ತುತ ನಮ್ಮ ದೇಶದಲ್ಲಿ ನಡೆಯುತ್ತಿರುವ ಅಸ್ಪೃಶ್ಯತೆ ಆಚರಣೆ, ಮಾನವ ಹಕ್ಕುಗಳ ಉಲ್ಲಂಘನೆ, ಲಿಂಗ ತಾರತಮ್ಯ, ಜಾತಿ ಪ್ರಭಾವ, ಅಧರ್ಮದ ನಡೆ ಇವೆಲ್ಲವನ್ನೂ ತಿದ್ದಿ ಸರಿದಾರಿಗೆ ತರಬೇಕಿದೆ. ಅದರೊಂದಿಗೆ ನಮ್ಮ ವಾಕ್ ಸ್ವಾತಂತ್ರ್ಯದ ಮೂಲಕ ಪ್ರಜಾಪ್ರಭುತ್ವ ತಳಹದಿಯನ್ನು ಸದೃಢಪಡಿಸುವ ಕೆಲಸ ಸಾಹಿತ್ಯ ಕ್ಷೇತ್ರದಿಂದ ಆಗಬೇಕಿದೆ ಎಂದು ನುಡಿದರು.

ಮರ್ಯಾದೆ ಹತ್ಯೆಯಂತಹ ಪ್ರಕರಣ ಇಡೀ ಮಾನವ ಕುಲ ತಲೆತಗ್ಗಿಸುವಂತದ್ದು. ಇಂತಹ ಅನೇಕ ಅನಿಷ್ಟ ಪದ್ದತಿಗಳನ್ನು ಖಂಡಿಸುವ ಮೂಲಕ ನಿರ್ಮೂಲನೆ ಮಾಡಬೇಕು. ಸಾಹಿತ್ಯ ಎಲ್ಲಾ ಅನಿಷ್ಟ ಪದ್ಧತಿಗಳಿಗೆ ಹರಿತವಾದ ಬರವಣಿಗೆ ಮ‌ೂಲಕ ನಿರ್ಮೂಲನೆ ಮಾಡುವ ಪ್ರಯತ್ನ ಮಾಡಬೇಕು. ಮನುಷ್ಯರು ನೆಮ್ಮದಿಯಿಂದ ಬಾಳುವಂತಹ ವಾತಾವರಣ ನಿರ್ಮಾಣವಾಗಬೇಕು ಎಂದು ಅಭಿಪ್ರಾಯಪಟ್ಟರು.ಸಾಹಿತ್ಯವು ಜನರಲ್ಲಿ ಜಾಗೃತಿ ಮೂಡಿಸಲಿ:- ಸಚಿವ ಡಾ.ಹೆಚ್.ಸಿ.ಮಹದೇವಪ್ಪ kavi

ಖ್ಯಾತ ಸಾಹಿತಿ ಹಾಗೂ ಕವಿ ಜಯಂತ್ ಕಾಯ್ಕಿಣಿ ಅವರು ಮಾತನಾಡಿ, ಸಾಹಿತ್ಯ ಎಂಬುದು ವೈಚಾರಿಕತೆಯ ಹೊಸ ಬಾಗಿಲನ್ನು ತೆರೆಯುತ್ತದೆ. ಕನ್ನಡ ಪಾಠಶಾಲೆಯಲ್ಲಿ ಪಾಠ ಮಾಡುವ ಶಿಕ್ಷಕರು ತಮ್ಮ ಮಕ್ಕಳನ್ನು ಆಂಗ್ಲ ಪಾಠಶಾಲೆಗೆ ಸೇರಿಸುತ್ತಿರುವ ಪರಿಸ್ಥಿತಿಯಲ್ಲಿ ನಾವಿದ್ದೇವೆ. ಕನ್ನಡ ಭಾಷೆ ಸಾಹಿತ್ಯದ ಕುರಿತು ಚಿಂತಿಸುವ ಅವಶ್ಯಕತೆ ನಿಜವಾಗಿಯೂ ನಮ್ಮ ಮುಂದಿದೆ ಎಂದು ಹೇಳಿದರು.

ಸಾಹಿತ್ಯ ಮಾರ್ಗದಲ್ಲಿ ಬದುಕಿನ ಕುರಿತು ಹೊಸತನ್ನು ಹುಡುಕುವುದು ಹಾಗೂ ವಿಕಾಸದ ಅನ್ವೇಷಣೆ ಮುಖ್ಯ. ಇದಕ್ಕೆ ಸಾಹಿತ್ಯ ಮೂಲಾಧಾರ. ಪ್ರಶಸ್ತಿಗಳ ಆಸೆಗಾಗಿ ಕವಿತೆ, ಸಾಹಿತ್ಯ ಬರೆಯುವುದಲ್ಲ. ಹೊಸ ತಲೆಮಾರು ಮೊದಲು ಓದುವುದನ್ನು ಮುಂದುವರಿಸಬೇಕು. ಏನನ್ನು ಓದದೇ ಹೊಸದನ್ನು ಬರೆಯಲು ಸಾಧ್ಯವಿಲ್ಲ ಎಂದು ಯುವ ಕವಿಗಳಿಗೆ ಕಿವಿಮಾತು ಹೇಳಿದರು.

ಖ್ಯಾತ ಕವಯಿತ್ರಿ ಮಾಲತಿ ಶೆಟ್ಟಿ ಅವರು ಮಾತನಾಡಿ, ವಿವಿಧ ವೇದಿಕೆಗಳಲ್ಲಿ ದಸರಾ ಕವಿಗೋಷ್ಠಿಗಳು ನಡೆಯಲಿದ್ದು, ದಸರಾ ವೇದಿಕೆಯು ಕವಿಗಳಿಗೆ ಉತ್ತಮ ವೇದಿಕೆ ಕಲ್ಪಿಸಿಕೊಟ್ಟಿವೆ. ಕನ್ನಡದ ಹಿರಿಯ ಕವಿಗಳು ಕನ್ನಡ ಸಾಹಿತ್ಯಕ್ಕೆ ಮಹತ್ತರ ಕೊಡುಗೆ ನೀಡಿದ್ದಾರೆ. ಕವಿಯಾದವರಿಗೆ ಆಂತರಿಕ ಪ್ರತಿಭೆಯ ಜ್ಯೋತಿ ಇರುತ್ತದೆ. ಸಾಹಿತ್ಯದ ಸೃಷ್ಟಿಗೆ ನಿರಂತರ ಅಧ್ಯಯನದ ಅವಶ್ಯಕತೆ ಇದೆ. ಸಂತೋಷವಾದಾಗ ಅಥವಾ ದುಃಖವಾದಾಗ ಮನಸ್ಸು ನನ್ನನ್ನು ಕೊಂಡೊಯ್ಯುವುದು ಕವಿತೆಯೆಡೆಗೆ ಎಂದು ಸಾಹಿತ್ಯದ ಮೇಲಿನ ಒಲವನ್ನು ವ್ಯಕ್ತಪಡಿಸಿದರು.

ಕಾರ್ಯಕ್ರಮದಲ್ಲಿ ಶಾಸಕರಾದ ತನ್ವೀರ್ ಸೇಠ್, ಕೆ.ಹರೀಶ್ ಗೌಡ, ವಿಧಾನ ಪರಿಷತ್ತಿನ ಸದಸ್ಯ ಹೆಚ್.ವಿಶ್ವನಾಥ್, ಮೇಯರ್ ಶಿವಕುಮಾರ್, ಉಪ ಮೇಯರ್ ಡಾ.ಜಿ.ರೂಪ, ಖ್ಯಾತ ಸಾಹಿತಿ ಕುಂ. ವೀರಭದ್ರಪ್ಪ, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಮಡ್ಡಿಕೆರೆ ಗೋಪಾಲ್, ಕವಿಗೋಷ್ಠಿ ಉಪಸಮಿತಿಯ ಉಪ ವಿಶೇಷಾಧಿಕಾರಿ ಡಾ.ಎಂ.ದಾಸೇಗೌಡ, ಕಾರ್ಯಾಧ್ಯಕ್ಷರಾದ ಡಾ.ವಿಜಯಕುಮಾರಿ ಎಸ್. ಕರಿಕಲ್, ಕಾರ್ಯದರ್ಶಿ ಎಂ.ಎಸ್.ಗಿರಿಧರ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

Key words: literature- create- awareness – people:- Minister -Dr. HC Mahadevappa