ಮದ್ಯದ ದರ ಏರಿಕೆ ವಿಚಾರ: ಊಹಾಪೋಹಗಳಿಗೆ ತೆರೆ ಎಳೆದ ಸಚಿವ ಆರ್.ಬಿ ತಿಮ್ಮಾಪುರ.

ಬೆಂಗಳೂರು, ಜನವರಿ,2,2024(www.justkannada.in):  ರಾಜ್ಯದಲ್ಲಿ ಮತ್ತೆ ಮದ್ಯದ ದರ ಹೆಚ್ಚಳವಾಗಿದೆ. ಬಡವರು ಹೆಚ್ಚಾಗಿ ಕುಡಿಯುವ ಬ್ರ್ಯಾಂಡ್​ ಗಳ ದರ ಏರಿಕೆ ಮಾಡಲಾಗಿದೆ. ಜೊತೆಗೆ ಮದ್ಯ ಉತ್ವಾದಕ ಕಂಪನಿಗಳು 20 ರಿಂದ 30 ರೂಪಾಯಿ ಹೆಚ್ಚಳ ಮಾಡಿವೆ ಎಂದು ಸುದ್ದಿ ಹರಡಿತ್ತು. ಈ ಬಗ್ಗೆ ಸ್ಪಷ್ಟನೆ ನೀಡಿರುವ ಅಬಕಾರಿ ಸಚಿವ ಆರ್​.ಬಿ. ತಿಮ್ಮಾಪುರ , ಊಹಾಪೋಹಗಳಿಗೆ ತೆರೆ ಎಳೆದಿದ್ದಾರೆ.

ಮಾಧ್ಯಮದೊಂದಿಗೆ ಮಾತನಾಡಿದ ಸಚಿವ ಆರ್.ಬಿ. ತಿಮ್ಮಾಪುರ, ರಾಜ್ಯ ಸರ್ಕಾರದಿಂದ ಯಾವುದೇ ಮದ್ಯದ ದರ ಏರಿಕೆ ಮಾಡಿಲ್ಲ. ಮದ್ಯ ಉತ್ಪಾದಕರು ದರ ಹೆಚ್ಚಳ ಮಾಡಿರಬಹುದು. ಆದರೆ ನಾವಂತೂ ಹೆಚ್ಚಿಸಿಲ್ಲ. ಅಬಕಾರಿ ಶುಲ್ಕ ಹೆಚ್ಚಳ ಮಾಡೋದಾದರೆ ಮೊದಲೇ ಹೇಳುತ್ತೇವೆ. ಇನ್ನು ಬಜೆಟ್​​ ನಲ್ಲೂ ಸದ್ಯ ತೆರಿಗೆ ಹೆಚ್ಚಳದ ಬಗ್ಗೆ ಪ್ರಸ್ತಾಪ ಮಾಡಿಲ್ಲ. ಯಾವುದೇ ಟಾರ್ಗೆಟ್ ಕೂಡ ನೀಡಿಲ್ಲ, ಆದರೆ, ಆದಾಯ ಸಂಗ್ರಹದ ಗುರಿ ಇದೆ ಎಂದು ತಿಳಿಸಿದರು.

ರಾಮಲಲ್ಲಾ ಪ್ರತಿಷ್ಠಾಪನೆ ವಿಚಾರದ ಬಗ್ಗೆ ಪ್ರತಿಕ್ರಿಯಿಸಿದ ಆರ್.ಬಿ ತಿಮ್ಮಾಪುರ, ರಾಮನ ಗುಡಿ ಕಟ್ಟಿದರೆ ಸಾಲದು, ರಾಮರಾಜ್ಯ ಆಗಬೇಕು. ಧರ್ಮ, ದೇವರು ಯಾರಪ್ಪನ ಮನೆ ಆಸ್ತಿಯೂ ಆಗಬಾರದು, ಧರ್ಮ, ದೇವರು ವಿಚಾರದಲ್ಲಿ ನಮಗೆ ನಂಬಿಕೆ ಇರಬೇಕು. ಆದರೆ, ನನ್ನದೇ ಧರ್ಮ, ನಾನೇ ಸ್ಥಾಪನೆ ಮಾಡುತ್ತೇನೆ ಎನ್ನುವುದು ನಾನೇ ದೇವಸ್ಥಾನ ಕಟ್ಟುಬಿಡುತ್ತೇನೆ ಎನ್ನುವುದು ಸರಿಯಲ್ಲ, ಇಂತಹ ವಿಚಾರಗಳಿಂದ ದೇಶ ದಿವಾಳಿಯಾಗಲಿದೆ  ಎಂದು ಹೇಳಿದರು.

Key words: Liquor price-hike-issue-Minister -RB Thimmapura -Clarification