ರಾಜ್ಯದಲ್ಲಿ ಶೇ.50ಕ್ಕಿಂತ ಹೆಚ್ಚು ಪ್ರದೇಶಗಳಲ್ಲಿ ಮಳೆಯ ಕೊರತೆ: ಎಲ್ಲದಕ್ಕೂ ನಾವು ಸನ್ನದ್ಧ-ಕಂದಾಯ ಸಚಿವ ಕೃಷ್ಣಭೈರೇಗೌಡ.

ಬೆಂಗಳೂರು,ಆಗಸ್ಟ್,22,2023(www.justkannada.in): ರಾಜ್ಯದಲ್ಲಿ  ಶೇ.50ಕ್ಕಿಂತ ಹೆಚ್ಚು ಪ್ರದೇಶದಲ್ಲಿ ಮಳೆ ಕೊರತೆಯಾಗಿದೆ. ಮುಂದಿನ ದಿನಗಳಲ್ಲಿ ಮಳೆಯ ಮುನ್ಸೂಚನೆ ಇಲ್ಲ. ನಾವು ಸನ್ನದ್ಧರಾಗಬೇಕಾಗುತ್ತದೆ ಎಂದು ಕಂದಾಯ ಸಚಿವ ಕೃಷ್ಣಭೈರೇಗೌಡ ತಿಳಿಸಿದರು.

ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಸಚಿವ ಕೃಷ್ಣೇಭೈರೇಗೌಡ,  ಜೂನ್​ ನಲ್ಲಿ ತೀವ್ರ ಮಳೆ ಕೊರತೆಯಾಗಿದೆ, ಜುಲೈನಲ್ಲಿ ಹೆಚ್ಚುವರಿ ಮಳೆ, ಆಗಸ್ಟ್​​ ನಲ್ಲಿ ತೀವ್ರ ಮಳೆ ಕೊರತೆಯಾಗಿದೆ. ಸೆಪ್ಟೆಂಬರ್​ ತಿಂಗಳಲ್ಲೂ ವಾಡಿಕೆಗಿಂತ ಮಳೆ ಕಡಿಮೆ ಆಗಬಹುದು. ಆಗಸ್ಟ್​ನಲ್ಲಿ ಮಳೆ ಕೊರತೆ ಹಿನ್ನೆಲೆಯಲ್ಲಿ ಕ್ಯಾಬಿನೆಟ್ ಸಬ್ ಕಮಿಟಿ ಸಭೆ ಮಾಡಿದ್ದೇವೆ. ಸಭೆಯಲ್ಲಿ ಮೇವಿನ ಸ್ಥಿತಿ, ಜಲಾಶಯಗಳ ನೀರಿನ ಸಂಗ್ರಹ ಸ್ಥಿತಿಗತಿ ಬಗ್ಗೆ ಮಾಹಿತಿ ಮಾಹಿತಿ ಸಂಗ್ರಹಿಸಿದ್ದೇವೆ. ಬಿತ್ತನೆ ಬೆಳೆಗಳು ಒಣಗುತ್ತಿರುವುದರಿಂದ ಕ್ರಮ ತೆಗೆದುಕೊಳ್ಳಬೇಕಿದೆ ಎಂದು ಹೇಳಿದರು.

ರಾಜ್ಯದಲ್ಲಿ ಕುಡಿಯುವ ನೀರಿಗೆ ಅಂತಹ ಸಮಸ್ಯೆ ಏನೂ ಆಗಿಲ್ಲ

ಕುಡಿಯುವ ನೀರಿನ ಸಮಸ್ಯೆ ಬಗ್ಗೆ ಮಾತನಾಡಿದ ಸಚಿವ ಕೃಷ್ಣಭೈರೇಗೌಡ,  ರಾಜ್ಯದಲ್ಲಿ ಕುಡಿಯುವ ನೀರಿಗೆ ಅಂತಹ ಸಮಸ್ಯೆ ಏನೂ ಆಗಿಲ್ಲ. 140ಕ್ಕೂ ಹೆಚ್ಚು ಗ್ರಾಮಗಳಿಗೆ ಟ್ಯಾಂಕರ್ ಮೂಲಕ ನೀರು ಪೂರೈಕೆ ಮಾಡಲಾಗುತ್ತಿದೆ. ಜಾನುವಾರು ಮೇವು 15-30 ವಾರಗಳಿಗೆ ಆಗುವಷ್ಟು ಸಂಗ್ರಹವಿದೆ. ಆಲಮಟ್ಟಿ ಜಲಾಶಯ ಶೇ 100 ರಷ್ಟು ಭರ್ತಿಯಾಗಿದೆ. ಬೆಳೆಗಳ ಪರಿಸ್ಥಿತಿ ಬಗ್ಗೆ ತಿಳಿಯಲು ಸ್ಥಳಕ್ಕೆ ಜಿಲ್ಲಾಧಿಕಾರಿಗಳು ಹೋಗಬೇಕು. ಬೆಳೆ ಸಮೀಕ್ಷೆ ಮಾಡಬೇಕೆಂದು ಅಧಿಕಾರಿಗಳಿಗೆ ಸೂಚನೆ ನೀಡಿದ್ದೇವೆ ಎಂದು ತಿಳಿಸಿದರು.

Key words: Lack – rain -more than- 50% areas – state-Revenue Minister- Krishnabhairegowda.