ಮುಕ್ತ ವಿವಿಯಲ್ಲಿ 80 ಕೋರ್ಸ್ ಗಳು: ಏಕಕಾಲದಲ್ಲೇ ಎರಡು ಪದವಿಗೆ ಅವಕಾಶ- ಕುಲಪತಿ ಪ್ರೊ.ಶರಣಪ್ಪ ವಿ.ಹಲಸೆ

ಮೈಸೂರು,ಆಗಸ್ಟ್,2,2025 (www.justkannada.in): ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯದಲ್ಲಿ 2025-26ನೇ ಶೈಕ್ಷಣಿಕ ಸಾಲಿನ ಜುಲೈ ಆವೃತ್ತಿಯ ಪ್ರವೇಶಾತಿ ಜುಲೈ 1ರಿಂದ ಪ್ರಾರಂಭವಾಗಿದ್ದು, ಯುಜಿಸಿ ಅನುಮೋದಿತ 80 ಕೋರ್ಸ್‌ ಗಳ ಪ್ರಾರಂಭವಾಗಿದೆ. ಪ್ರವೇಶಾತಿಗೆ ಸೆಪ್ಟಂಬರ್ 15 ಕೊನೆಯ ದಿನವಾಗಿದೆ ಎಂದು ಕುಲಪತಿ ಪ್ರೊ.ಶರಣಪ್ಪ ವಿ.ಹಲಸೆ ತಿಳಿಸಿದರು.

ಮುಕ್ತ  ವಿವಿಯ ಅತಿಥಿಗೃಹದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಪ್ರೊ.ಶರಣಪ್ಪ ವಿ.ಹಲಸೆ ಅವರು, ಉನ್ನತ ಶಿಕ್ಷಣ ಎಲ್ಲರಿಗೂ ಎಲ್ಲೆಡೆ ಆಶಯದಲ್ಲಿ 1996ರಲ್ಲಿ ಕರಾಮುವಿವಿ ಆರಂಭಗೊಂಡಿತು. ಲಕ್ಷಾಂತರ ಮಂದಿ ತಮ್ಮ ಉನ್ನತ ವಿದ್ಯಾಭ್ಯಾಸದ ಕನಸ್ಸನ್ನು ನನಸಾಗಿಸಿಕೊಂಡಿದ್ದಾರೆ ಎಂದರು.

2023 ರಿಂದ ಯುಜಿಸಿ ಮಾನ್ಯತೆ ಹೊಂದಿದ ಕಾರ್ಯಕ್ರಮಗಳಿಗೆ ಪ್ರವೇಶಾತಿ ನೀಡುತ್ತಿದೆ. ಶೈಕ್ಷಣಿಕ ಗುಣಮಟ್ಟಕ್ಕೆ ನ್ಯಾಕ್‌ನಿಂದ ಎ+ ಮ್ಯಾನತೆ ಪಡೆದುಕೊಂಡಿದೆ. ಸಾಂಪ್ರದಾಯಿಕ ವಿವಿಗಳು ನೀಡುವ ಪದವಿಗೆ ಸಮಾನವಾಗಿ ಮುಕ್ತವಿವಿ ಪದವಿ ನೀಡುತ್ತಿದೆ. ಯುಜಿಸಿ ನಿಯಮಾವಳಿ ಪ್ರಕಾರ ಪೂರ್ಣಾವಧಿಯಲ್ಲಿ ಒಂದು ಕೋರ್ಸ್ ಮತ್ತು ದೂರ ಶಿಕ್ಷಣದಲ್ಲಿ ಮತ್ತೊಂದು ಕೋರ್ಸ್ ಅನ್ನು ಪಡೆಯಲು ಅವಕಾಶ ಇದೆ. ಈವರೆಗೆ 69 ಕೋರ್ಸ್‌ ಗಳು ಲಭ್ಯ ಇತ್ತು. ಜ್ಯೋತಿಷ್ಯಶಾಸ್ತ್ರ ವಿಜ್ಞಾನ, ಯುಜಿಸಿ ಅನುಮೋದಿತ 10 ಆನ್ ಲೈನ್ ಕೋರ್ಸ್ ಗಳು ಸೇರಿದಂತೆ ಒಟ್ಟು 80 ಕೋರ್ಸ್ ಗಳು ಲಭ್ಯವಿದೆ.  ಬಿ.ಎ, ಬಿಕಾಂ,ಬಿಬಿಎ, ಬಿಸಿಎ, ಬಿಎಸ್ ಡಬ್ಲ್ಯು, ಬಿಎಲ್ ಐಎಸ್ ಸಿ, ಬಿಇಡಿ, ಬಿಎಸ್ ಸಿ, ಎಂಎ, ಎಂಸಿಜೆ, ಎಂಕಾಂ, ಎಂಎಲ್ ಐಎಸ್ ಸಿ, ಎಂಸಿಎ, ಎಂಎಸ್ ಡಬ್ಲ್ಯು, ಎಂಎಸ್ ಸಿ, ಎಂಬಿಎ, ಪಿಜಿ ಡಿಪ್ಲೋಮಾ, ಡಿಪ್ಲೋಮಾ ಹಾಗೂ ಸರ್ಟಿಫಿಕೇಟ್ ಕೋರ್ಸ್ ಗಳಿವೆ ಎಂದರು.

ಇತರ ಕಾಲೇಜುಗಳಲ್ಲಿ ಅಥವಾ ರೆಗ್ಯುಲರ್  ಆಗಿ ಓದುತ್ತಿರುವ ವಿದ್ಯಾರ್ಥಿಗಳು ಮೊದಲ ವರ್ಷ ವ್ಯಾಸಂಗ ಮಾಡಿ ಕಾರಣಾಂತರಗಳಿಂದ ಮುಂದುವರಿಸಲು ಆಗಿಲ್ಲದಿದ್ದರೆ ಅರ್ಹತಾ ಮಾನದಂಡಗಳನ್ನು ಪೂರೈಸಿ 2 ಮತ್ತು 3ನೇ ವರ್ಷಕ್ಕೆ ಲ್ಯಾಟರಲ್ ಪ್ರವೇಶ ಪಡೆದುಕೊಳ್ಳಬುದು ಇನ್ನು ವರ್ಷದಿಂದ ವರ್ಷಕ್ಕೆ ಪ್ರವೇಶಾತಿ ಸಂಖ್ಯೆಯಲ್ಲಿ ಹೆಚ್ಚಳವಾಗಿದೆ ಎಂದು ಹೇಳಿದರು.

ಶುಲ್ಕದಲ್ಲಿ ರಿಯಾಯಿತಿ..

ಬಿಪಿಎಲ್ ಕಾರ್ಡ್ ಹೊಂದಿರುವ ಮಹಿಳಾ ಅಭ್ಯರ್ಥಿಗಳಿಗೆ, ಡಿಫೆನ್ಸ್ ಹಾಗೂ ಮಾಜಿ ಸೈನಿಕ ಅಭ್ಯರ್ಥಿಗಳಿಗೆ, ಆಟೋ, ಕ್ಯಾಬ್ ಚಾಲಕರು ಮತ್ತು ಅವರ ಪತಿ, ಪತ್ನಿ ಹಾಗೂ ಇಬ್ಬರು ಮಕ್ಕಳಿಗೆ ಬೋಧನಾ ಶುಲ್ಕದಲ್ಲಿ ಶೇ 10 ರಿಯಾಯಿತಿ ನೀಡಲಾಗಿದೆ.

ಪೂರ್ಣ ಶುಲ್ಕ ವಿನಾಯಿತಿ: ಅಲ್ಪಸಂಖ್ಯಾತ ವಿದ್ಯಾರ್ಥಿಗಳಿಗೆ ಅಲ್ಪಸಂಖ್ಯಾತ ಕಲ್ಯಾಣ ಇಲಾಖೆ ಸಹಯೋಗದಲ್ಲಿ ಉಚಿತ ಶಿಕ್ಷಣ ನೀಡಲಾಗುತ್ತಿದೆ. ಹಿಂದಿನ ಸಾಲಿನಲ್ಲಿ ೨ ಸಾವಿರ ವಿದ್ಯಾರ್ಥಿಗಳು ಉಚಿತ ಶಿಕ್ಷಣ ಪಡೆದಿದ್ದಾರೆ. ಇಲಾಖೆಯು 5.5 ಕೋಟಿ ರೂ. ಪಾವತಿಸಿದೆ. ಅಲ್ಪಸಂಖ್ಯಾತ ಇಲಾಖೆಯು ಎಷ್ಟೇ ವಿದ್ಯಾರ್ಥಿಗಳು ಪ್ರವೇಶ ಪಡೆದರೂ ಶುಲ್ಕ ಭರಿಸುವುದನ್ನು ಒಪ್ಪಿಕೊಂಡಿದೆ. ಇದರಿಂದಾಗಿ ಮುಸ್ಲಿಮರು, ಸಿಖ್ಖರು, ಜೈನರು, ಬುದ್ಧರು, ಪಾರ್ಸಿ ವಿದ್ಯಾರ್ಥಿಗಳಿಗೆ ಅನುಕೂಲವಾಗಲಿದೆ ಎಂದರು. ತೃತೀಯ ಲಿಂಗದ, ದೃಷ್ಟಿಹೀನ ವಿದ್ಯಾರ್ಥಿಗಳು (ಬಿ.ಇಡಿ, ಎಂಬಿಎ ಹೊರತುಪಡಿಸಿ), ಕೋವಿಡ್ 19ರಲ್ಲಿ ಸಾಂಕ್ರಾಮಿಕ ರೋಗದಿಂದ ತಂದೆ, ತಾಯಿ ಮೃತರಾಗಿದ್ದರೆ ಮಕ್ಕಳಿಗೆ ಉಚಿತ ಪ್ರವೇಶಾತಿ ನೀಡಲಾಗುತ್ತಿದೆ ಎಂದು ಕುಲಪತಿ ಶರಣಪ್ಪ ವಿ.ಹಲಸೆ ತಿಳಿಸಿದರು.

ಎಸ್‌ಸಿ, ಎಸ್‌ಟಿ, ಒಬಿಸಿ ವಿದ್ಯಾರ್ಥಿಗಳು ಅಗತ್ಯ ದಾಖಲೆಗಳಲ್ಲಿ ಒದಗಿಸಿದಲ್ಲಿ ಎಸ್‌ಎಸ್‌ಪಿ ಮುಖಾಂತರ ವಿದ್ಯಾರ್ಥಿ ವೇತನವಿರುತ್ತದೆ ಅಥವಾ ಪೂರ್ಣ ಶುಲ್ಕ ಮರುಭರಿಕೆಯಾಗುತ್ತದೆ ಎಂದು ಹೇಳಿದರು. ರಾಜ್ಯದಲ್ಲಿರುವ 38 ಪ್ರಾದೇಶಿಕ ಕೇಂದ್ರಗಳಲ್ಲೂ ಪ್ರವೇಶಾತಿ ಪಡೆಯಬಹುದಾಗಿದೆ. ವಿವಿಯ ಅಧಿಕೃತ ವೆಬ್‌ ಸೈಟ್ ಮೂಲಕ ಪದಗಳಿಗೆ ಆನ್‌ ಲೈನ್‌ ನಲ್ಲಿ ಅರ್ಜಿ ಭರ್ತಿ ಮಾಡಿ ನಂತರ ಪ್ರಾದೇಶಿಕ ಕೇಂದ್ರಕ್ಕೆ ಖುದ್ದಾಗಿ ಭೇಟಿ ನೀಡಿ ದಾಖಲಾತಿಗಳ ಪರಿಶೀಲನೆ ನಂತರ ಆನ್‌ ಲೈನ್ ಮುಖಾಂತರ ಪ್ರವೇಶಾತಿ ಶುಲ್ಕ ಪಾವತಿಸಿ ಸಿದ್ಧಪಾಠಗಳನ್ನು ಪಡೆಯಬಹುದಾಗಿದೆ.

ಪ್ರಾದೇಶಿಕ ಕೇಂದ್ರಕ್ಕೆ ಜಮೀನು ಮಂಜೂರು

ಪ್ರಾದೇಶಿಕ ಕೇಂದ್ರಗಳ ನಿರ್ಮಾಣಕ್ಕಾಗಿ ಯಾದಗಿರಿಯಲ್ಲಿ 2 ಎಕರೆ, ಬಿಜಾಪುರದಲ್ಲಿ 3 ಎಕರೆ, ಶಿರಾದಲ್ಲಿ2 ಎಕರೆ, ಮಡಿಕೇರಿಯಲ್ಲಿ 1 ಎಕರೆ, ಉಡುಪಿಯಲ್ಲಿ 1 ಎಕರೆ ಜಮೀನು ಮಂಜೂರಾಗಿದೆ ಎಂದು ಪ್ರೊ.ಶರಣಪ್ಪ ವಿ.ಹಲಸೆ ತಿಳಿಸಿದರು.

 ಸಿದ್ಧ ಪಾಠಕ್ಕೆ 8 ಕೋಟಿ ರೂ. ಅನುದಾನ

ವಿದ್ಯಾರ್ಥಿಗಳಿಗೆ ಸಿದ್ಧಪಾಠವನ್ನು ವಿತರಿಸಲು 8 ಕೋಟಿ ರೂ. ಅನುದಾನ ನೀಡಲಾಗಿದೆ. ಟೆಂಡರ್ ಪ್ರಕ್ರಿಯೆಯೂ ಪೂರ್ಣಗೊಂಡಿದೆ. ಸಂಶೋಧನೆಗೆ ಸಂಬಂಧಪಟ್ಟಂತೆ ಆನ್‌ ಲೈನ್‌ ನಲ್ಲಿ ಸಿದ್ಧಪಾಠಗಳು ಲಭ್ಯವಿವೆ. ಸಂಶೋಧನೆ ಉತ್ತೇಜನ ನೀಡುವಂತೆ ನ್ಯಾಕ್ ಸಲಹೆ ಮೇರೆಗೆ ಕೆಲವು ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ವಿವರಿಸಿದರು. 76 ಖಾಯಂ ಪ್ರಾಧ್ಯಾಪಕರಿದ್ದು, 55 ಅತಿಥಿ ಉಪನ್ಯಾಸಕರಿದ್ದಾರೆ. ಕೆಲವು ಕಡೆ ಪರೀಕ್ಷೆಯಲ್ಲಿ ನಕಲು ಮಾಡಿರುವ ಬಗ್ಗೆ ದೂರುಗಳು ಕೇಳಿ ಬಂದಿದ್ದವು ಕ್ರಮ ವಹಿಸುತ್ತೇವೆ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ಕುಲಸಚಿವ ಪ್ರೊ.ನವೀನ್‌ ಕುಮಾರ್, ಶೈಕಣಿಕ ಡೀನ್ ಪ್ರೊ.ರಾಮನಾಥಂ ನಾಯ್ಡು, ಪರೀಕ್ಷಾಂಗ ಕುಲಸಚಿವ ಪ್ರೊ.ಆನಂದಕುಮಾರ್, ಹಣಕಾಸು ಅಧಿಕಾರಿ ಪ್ರೊ.ನಿರಂಜನ ರಾವ್, ಪ್ರವೇಶಾತಿ ವಿಭಾಗದ ನಿರ್ದೇಶಕ ಎಂ.ನಂದೀಶ್  ಉಪಸ್ಥಿತರಿದ್ದರು.vtu

Key words: KSOU, 80 courses,  VC, Prof. Sharanappa V. Halase