ಕೆ.ಎಸ್ ಈಶ್ವರಪ್ಪಗೆ ಪ್ರಧಾನಿ ಮೋದಿ ಫೋಟೊ ಬಳಸುವ ಅಧಿಕಾರ ಇಲ್ಲ- ಆರ್.ಅಶೋಕ್

ಬೆಂಗಳೂರು, ಏಪ್ರಿಲ್, 6,2024 (www.justkannada.in):  ಶಿವಮೊಗ್ಗ ಲೋಕಸಭಾ ಕ್ಷೇತ್ರದಿಂದ ಬಂಡಾಯ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತಿರುವ ಮಾಜಿ ಸಚಿವ ಕೆಎಸ್ ಈಶ್ವರಪ್ಪಗೆ ಚುನಾವಣಾ ಪ್ರಚಾರದ ವೇಳೆ ಪ್ರಧಾನಿ ನರೇಂದ್ರ ಮೋದಿ ಅವರ ಫೋಟೊ ಬಳಸುವ ಅಧಿಕಾರವಿಲ್ಲ ಎಂದು ವಿಪಕ್ಷ ನಾಯಕ ಆರ್ ಅಶೋಕ ತಿಳಿಸಿದರು.

ಈ ಕುರಿತು ಇಂದು ಮಾತನಾಡಿದ ಆರ್.ಅಶೋಕ್,  ಕೆಎಸ್ ಈಶ್ವರಪ್ಪಗೆ ಮೋದಿ ಫೋಟೋ ಬಳಕೆ ಮಾಡಿಕೊಳ್ಳುವ ಅಧಿಕಾರವಿಲ್ಲ. ಅವರು ಬಳಕೆ ಮಾಡಿದರೆ ಅದು ತಪ್ಪು. ಸರ್ಕಾರಿ ಕಾರ್ಯಕ್ರಮ ಆಗಿದ್ದರೆ ಪ್ರಧಾನಿ ಆಗಿರುವುದರಿಂದ ಮೋದಿ ಫೋಟೊ ಬಳಸಿಕೊಳ್ಳಬಹುದು. ಆದರೆ, ರಾಜಕೀಯವಾಗಿ ಚುನಾವಣೆ ವೇಳೆ‌ ಬಿಜೆಪಿಗೆ ಮಾತ್ರ ಮೋದಿ ಫೋಟೊ ಬಳಕೆಗೆ ಅಧಿಕಾರ ಇದೆ. ಈಶ್ವರಪ್ಪ ಅನಧಿಕೃತವಾಗಿ ಮೋದಿಯವರ ಫೋಟೋ ಬಳಕೆ ಮಾಡಿಕೊಳ್ಳುತ್ತಿದ್ದಾರೆ. ಅವರು ನಾಮಪತ್ರ ಸಲ್ಲಿಸಿದ ಬಳಿಕ ಅದರ ಬಗ್ಗೆ ಕ್ರಮ ಕೈಗೊಳ್ಳಲಾಗುವುದು ಎಂದು  ತಿಳಿಸಿದರು.

ಕೇಂದ್ರದಿಂದ ಬರಪರಿಹಾರ ಬಂದಿಲ್ಲ ಈ ಕುರಿತು ಚರ್ಚೆಗೆ ಬನ್ನಿ ಎಂದು ಕಾಂಗ್ರೆಸ್ ಸವಾಲು ಹಾಕಿದ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ಆರ್.ಅಶೋಕ್,  ಬರ ಪರಿಹಾರ ವಿಚಾದಲ್ಲಿ ರಾಜ್ಯ ಸರ್ಕಾರ ವಿಳಂಬ ಮಾಡಿ ನಂತರ ಕೇಂದ್ರದ ಮೇಲೆ ಆರೋಪ ಮಾಡುತ್ತಿದೆ. ಮತ್ತೆ ಸಾಮಾಜಿಕ ಜಾಲತಾಣದಲ್ಲಿ ಚರ್ಚೆಗೆ ಬನ್ನಿ ಎನ್ನುತ್ತಾರೆ. ಯಾಕೆ ಸಂಸತ್​​​ ನಲ್ಲಿ ಕಾಂಗ್ರೆಸ್ ಪಕ್ಷ ಸತ್ತು‌ ಹೋಗಿದ್ಯಾ? ಕಾಂಗ್ರೆಸ್ಸಿಗರಿಗೆ ಸಾಮರ್ಥ್ಯ ಇಲ್ಲ ಅಂತ ತೀರ್ಮಾನಿಸಿದ್ದಾರೆ ಎಂದು ವಾಗ್ದಾಳಿ ನಡೆಸಿದರು.

Key words: KS Eshwarappa, Modi, photo, R. Ashok