ಪ್ರತಾಪ್ ಸಿಂಹನಿಗೆ ಸುಳ್ಳು ಹೇಳೋದೆ ಒಂದು ಚಾಳಿ: ಕೆಪಿಸಿಸಿ ವಕ್ತಾರ ಲಕ್ಷ್ಮಣ್ ವಾಗ್ದಾಳಿ

ಮೈಸೂರು, ಸೆಪ್ಟೆಂಬರ್ 03, 2023 (www.justkannada.in): ಸಿಎಂ ಸಿದ್ದರಾಮಯ್ಯ ವಿರುದ್ಧ ಸಂಸದ ಪ್ರತಾಪ್ ಸಿಂಹ ಹೇಳಿಕೆ ವಿಚಾರಕ್ಕೆ ಸಂಬಂಧಪಟ್ಟಂತೆ ಕಾಂಗ್ರೆಸ್ ವಕ್ತಾರ ಲಕ್ಷ್ಮಣ್ ಸುದ್ದಿಗೋಷ್ಠಿ ನಡೆಸಿ ವಾಗ್ದಾಳಿ ನಡೆಸಿದರು.

ನಗರದ ಪತ್ರಕರ್ತರ ಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಲಕ್ಷ್ಮಣ್, ಪ್ರತಾಪ್ ಸಿಂಹನಿಗೆ ಸುಳ್ಳು ಹೇಳೋದೆ ಒಂದು ಚಾಳಿ. ಗ್ರೇಟರ್ ಮೈಸೂರು ಮಾಡಲಿಕ್ಕೆ ಸಿದ್ದರಾಮಯ್ಯ ಅಡ್ಡಿಗಾಲು ಅಂತ ಹೇಳಿದ್ದಾರೆ. ಗ್ರೇಟರ್ ಮೈಸೂರು ಮಾಡಲಿಕ್ಕೆ ಕೆಲ ಮಾನದಂಡಗಳು ಇವೆ. ಗ್ರೇಟರ್ ಮೈಸೂರು ಮಾಡುವುದು ಕೇಂದ್ರ ಸರ್ಕಾರವೊ? ಅಥವಾ ರಾಜ್ಯ ಸರ್ಕಾರವೊ? ಜನರಿಗೆ ಸತ್ಯ ಕೇಳಿ ಪ್ರತಾಪ್ ಸಿಂಹ ಎಂದು ಟೀಕಿಸಿದರು.

ಗ್ರೇಟರ್ ಮೈಸೂರು ಮಾಡೋದು ಯಾರು ಎನ್ನುವ ಸಾಮಾನ್ಯ ಜ್ಞಾನವು ನಿಮಗೆ ಇಲ್ಲವಾ? ಗ್ರೇಟರ್ ಮೈಸೂರು ಮಾಡಲಿಕ್ಕೆ 200ಕಿಮೀ ವಿಸ್ತೀರ್ಣ ಇರಬೇಕು. ಆದರೆ ಮೈಸೂರು ನಗರ ಪಾಲಿಕೆ ವ್ಯಾಪ್ತಿ ವಿಸ್ತೀರ್ಣ 128ಕಿಮೀ ಮಾತ್ರ ಇರೋದು. ನಿಮ್ಮದೇ ಸರ್ಕಾರ ಇದ್ದಾಗ ಗ್ರೇಟರ್ ಮೈಸೂರು ಬಗ್ಗೆ ಚಕಾರು ಎತ್ತಲಿಲ್ಲ. ಈಗ ಗ್ರೇಟರ್ ಮೈಸೂರು ನೆನಪಾಯ್ತಾ ? ಎಂದು ಸಂಸದ ಪ್ರತಾಪ್ ಸಿಂಹಗೆ ಕೆಪಿಸಿಸಿ ವಕ್ತಾರ ಲಕ್ಷ್ಮಣ್ ಪ್ರಶ್ನೆ ಮಾಡಿದರು.

ಎಚ್’ಡಿಕೆ ಚೇತರಿಕಗೆ ಪ್ರಾರ್ಥನೆ: ಕುಮಾರಸ್ವಾಮಿ ಅವರ ಆರೋಗ್ಯ ಬೇಗ ಗುಣಮುಖವಾಗಲಿ ಎಂದು ಚಾಮುಂಡೇಶ್ವರಿಗೆ ನಾವು ಪ್ರಾರ್ಥನೆ ಮಾಡುತ್ತೇವೆ. ಸಿದ್ದರಾಮಯ್ಯ, ಡಿ ಕೆ ಶಿವಕುಮಾರ್ ಸೇರಿ ನಮ್ಮ‌ ನಾಯಕರು ಆರೋಗ್ಯ ವಿಚಾರಿಸಿದ್ದಾರೆ. ರಾಜಕೀಯ ಬೇರೆ ಮಾನವೀಯತೆ ಬೇರೆ. ಒಂದು ತಿಂಗಳು ವಿಶ್ರಾಂತಿ ಪಡೆಯಿರಿ. ರಾಜಕಾರಣ ಮಾಡುವುದು ಇದ್ದೇ ಇರುತ್ತದೆ. ಸಂಪೂರ್ಣ ವಿಶ್ರಾಂತಿ ಪಡೆದು ಗುಣಮುಖರಾಗಿ ಬನ್ನಿ ಎಂದು ಕೆಪಿಸಿಸಿ ವಕ್ತಾರ ಎಂ ಲಕ್ಷ್ಮಣ ಹಾರೈಸಿದರು.

ಕಾವೇರಿ ವಿವಾದ ವಿಚಾರ: ಕಾವೇರಿ ಮಾನಿಟರಿಂಗ್ ಬೋರ್ಡ್ ರಚನೆ ಮಾಡಿದ್ದು ಮೋದಿ. ಇದಕ್ಕೆ ಕೇಂದ್ರ ಸರ್ಕಾರದ ಚೀಫ್ ಇಂಜಿನಿಯರ್ ಮುಖ್ಯಸ್ಥರು. ಎಲ್ಲಾ ರಾಜ್ಯದ ಇಂಜಿನಿಯರ್’ಗಳು ಅಲ್ಲಿ ಇರುತ್ತಾರೆ. ಅಲ್ಲಿ ನಿರ್ಧಾರ ಮಾಡುವವರು ನೀವೆ. ನೀರು ಕೊಡಿ ಅಂತಾ ಹೇಳಿದವರು ನೀವೆ. ನೀರು ಇದ್ದರೆ ತಾನೇ ಕೊಡುವುದು ? ಇಲ್ಲದಿರುವುದು ಹೇಗೆ ಕೊಡುವುದು?  ಇಲ್ಲಿ ಬಂದು ಪರಿಸ್ಥಿತಿ ನೋಡಿ ತೀರ್ಮಾನ ಮಾಡಲಿಲ್ಲ. ಈಗ ಇಲ್ಲಿ ಬಂದು ಬಾಯಿ ಬಡಿದುಕೊಳ್ಳುತ್ತಿದ್ದೀರಾ ಎಂದು ಕೆಪಿಸಿಸಿ ವಕ್ತಾರ ಎಂ ಲಕ್ಷ್ಮಣ ಹೇಳಿದರು.

ಈ ವಿಚಾರದಲ್ಲಿ ಡಿ.ಕೆ.ಶಿವಕುಮಾರ್ ಅವರ ಕೆಲಸ ಮೆಚ್ಚಬೇಕು. ನಮಗೆ ಕುಡಿಯಲು ನೀರಿಲ್ಲದ ಪರಿಸ್ಥಿತಿ ನಿರ್ಮಾಣವಾಗಲಿದೆ. ಇದರ ಜೊತೆಗೆ ಕೃಷಿಗೂ ನೀರು ಬೇಕು. ನಿಮ್ಮ ಯೋಗ್ಯತೆಗೆ ಮೇಕೆದಾಟು ಯೋಜನೆಗೆ ಅನುಮತಿ ಕೊಡಿಸಲಿಲ್ಲ. ಅದರಲ್ಲಿ ನೀರು ಶೇಖರಣೆಯಾಗಿದ್ದರೆ ಈಗ ಅನುಕೂಲವಾಗುತಿತ್ತು. 25 ಸಂಸದರು ಮಾಡಬೇಕಿತ್ತು ಎಲ್ಲಿ ಹೋಗಿದ್ದಾರೆ. ಬೊಮ್ಮಾಯಿ ಇಬ್ಬರು‌ ಮೂವರು ಜೋಕರ್ ಜೊತೆ ಸೇರಿ ಅವರು ಜೋಕರ್ ಆಗಿದ್ದಾರೆ. ‘ಇಂಡಿಯಾ’ ದಿನೇ ದಿನೇ ಎಲ್ಲರಿಗೂ ಇಷ್ಟವಾಗುತ್ತಿದೆ. ಅದಕ್ಕಾಗಿ ಒಂದೇ‌ ದೇಶ ಒಂದೇ ಚುನಾವಣೆ ಅನ್ನುತ್ತಿದ್ದೀರಾ. ಇದೊಂದು ಕೇಂದ್ರದ ಕುತಂತ್ರ. ಬಿಜೆಪಿ ಅಣ್ಣಾಮಲೈ ಮೂಲಕ ಪತ್ರ ಬರೆಸುತ್ತಾರೆ. ಇಲ್ಲಿ ಬಂದು ಪ್ರತಿಭಟನೆ ಮಾಡುತ್ತಾರೆ. ನೀರು ಬಿಡುವ ಕೀಲಿ ದೆಹಲಿಯಲ್ಲಿದೆ. ಅಲ್ಲಿ ಕುಳಿತುಕೊಂಡು ಬಟನ್ ಒತ್ತಿದರೆ ಸಾಕು ನೀರು ಹೋಗುತ್ತದೆ. ನೀರು ಬಿಡುವುದು ಕೇಂದ್ರ ಸರ್ಕಾರದ ಕೈನಲ್ಲಿ ಇದೆ ಎಂದರು.