ನಾವು ಮಾಡುವ ತಪ್ಪಿಗೆ ಕಿಡ್ನಿಗೇಕೆ ಶಿಕ್ಷೆ…

ಮೈಸೂರು, ಮಾರ್ಚ್ 09, 2022 (www.justkannada.in): ಮನುಷ್ಯರಿಗೆ ಮಿದುಳು, ಹೃದಯದಂತೆ ಕಿಡ್ನಿಯೂ ಅತಿ ಅಗತ್ಯವಾದ ಅಂಗ. ಕಿಡ್ನಿಯ ಕಾರ್ಯ ಚಟುವಟಿಕೆಯಲ್ಲಿ ಸ್ವಲ್ಪವೂ ವ್ಯತ್ಯಾಸವಾದರೆ ತುಂಬಾ ದಿನ ಕಿಡ್ನಿ ಸಮಸ್ಯೆಯಿಂದ ಬಳಲಬಹುದು. ಹಾಗೆಯೇ ಸಾವು ಕೂಡ ಸಂಭವಿಸಬಹುದು. ಹೀಗಾಗಿ ಕಿಡ್ನಿಯ ಆರೋಗ್ಯದ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವ ಸಲುವಾಗಿ ಪ್ರತಿವರ್ಷ ಮಾರ್ಚ್‌ ತಿಂಗಳ ಎರಡನೇ ಗುರುವಾರದಂದು ವಿಶ್ವ ಕಿಡ್ನಿ ದಿನವನ್ನು ಆಚರಿಸಲಾಗುತ್ತದೆ.

ಈಗಿನ ಜೀವನಶೈಲಿಯ ಕಾರಣ ಜನರು ಹೆಚ್ಚಿನ ಸಂಖ್ಯೆಯಲ್ಲಿ ಕಿಡ್ನಿ ಸಂಬಂಧಿತ ಕಾಯಿಲೆಗಳಿಗೆ ತುತ್ತಾಗುತ್ತಿದ್ದಾರೆ. ಅನಿಯಮಿತ ಆಹಾರ ಸೇವನೆ, ಬೊಜ್ಜು, ಮಧುಮೇಹ ಇತ್ಯಾದಿಗಳು ಕಿಡ್ನಿಯ ಮೇಲೆ ಪ್ರತಿಕೂಲ ಪರಿಣಾಮ ಬೀರುತ್ತವೆ. ಕೊನೆಗೆ ಕಿಡ್ನಿ ವೈಫಲ್ಯಗೊಳ್ಳುತ್ತದೆ. ಹೀಗಾಗಿ ಕಿಡ್ನಿ ಆರೋಗ್ಯದ ಕುರಿತು ಸಾಕಷ್ಟು ಎಚ್ಚರಿಕೆ ವಹಿಸಬೇಕಿದೆ. ಕಿಡ್ನಿ ಆರೋಗ್ಯ ಕಾಳಜಿ ಕುರಿತು ಕೆ.ಆರ್.ಆಸ್ಪತ್ರೆಯ ಮೂತ್ರಪಿಂಡ ತಜ್ಞ ವೈದ್ಯರಾದ ಡಾ.ನಿರಂಜನ್ ಅವರು ಕೆಲವೊಂದು ಮಾಹಿತಿ ಹಂಚಿಕೊಂಡಿದ್ದಾರೆ.

ಕಿಡ್ನಿ ಸಮಸ್ಯೆಯ ಲಕ್ಷಣಗಳ ಬಗ್ಗೆ ಮಾಹಿತಿ ನೀಡಿರುವ ಡಾ. ನಿರಂಜನ್, ಬೆಳಿಗ್ಗೆ ಎದ್ದಾಗ ಮುಖ ಊದಿಕೊಳ್ಳುವುದು. ಕಾಲು ಊತ ಬರುವುದು. ರಾತ್ರಿ ಅತಿಯಾದ ಮೂತ್ರ ವಿಸರ್ಜನೆ. ಮೂತ್ರದಲ್ಲಿ ನೊರೆ ಬರುವುದು. ಕೆಂಪು ಬಣ್ಣದಲ್ಲಿ ಮೂತ್ರ ಹೋಗುವುದು. ಹಸಿವು ಕಡಿಮೆಯಾಗುವುದು.  ವಾಂತಿ ಬರುವಂತೆ ಬಾಸವಾಗುವುದು ಕಿಡ್ನಿ ಸಮಸ್ಯೆ ಲಕ್ಷಣಗಳಾಗಿವೆ.

ಹಾಗೆಯೇ ಸುಮಾರು ಜನರಲ್ಲಿ ಮೂತ್ರಪಿಂಡದ ಸಮಸ್ಯೆ ಗೊತ್ತಾಗದ ರೀತಿ ಇರುತ್ತದೆ. ಇದು ವಾರ್ಷಕವಾಗಿ ಮೂತ್ರಪಿಂಡ ತಪಾಸಣೆ ಮಾಡಿಸಿದಾಗ ಈ ಸಮಸ್ಯೆ ಇರುವುದು ತಿಳಿದು ಬರುತ್ತದೆ.  ಇನ್ನು ಒಳಗಿರುವ ಕಿಡ್ನಿ ಕಾಯಿಲೆ  ಬಿಪಿ ರೂಪದಲ್ಲೂ ಕಾಣಿಸಿಕೊಳ್ಳುತ್ತದೆ. ಹೀಗಾಗಿ ಬಿಪಿ ಇರುವವರು ಮೂತ್ರ ಪರೀಕ್ಷೆ ಮಾಡಿಸಲೇಬೇಕು ಎಂದು ಸಲಹೆ ನೀಡಿದ್ದಾರೆ.

ಹಾಗೆಯೇ ಹೊಟ್ಟೆಯ ಎಡಭಾಗದಲ್ಲಿ ಅಥವಾ ಬಲಕ್ಕೆ ನೀವು ಅಸಹನೀಯ ನೋವು ಕಾಣಿಸುತ್ತಿದ್ದರೆ, ಅದನ್ನು ಲಘುವಾಗಿ ತೆಗೆದುಕೊಳ್ಳಬೇಡಿ. ಏಕೆಂದರೆ ಇದು ಮೂತ್ರಪಿಂಡದ ಸಮಸ್ಯೆಯಿಂದ ಉಂಟಾಗಿರುವ ಹೊಟ್ಟೆ ನೋವು ಆಗಿರುವ ಸಾಧ್ಯತೆಯಿದೆ. ಹಾಗೆಯೇ ಮೂತ್ರ ವಿಸರ್ಜನೆಯ ಸಮಯದಲ್ಲಿ ರಕ್ತ ಬಂದರೂ ಸಹ ಅದು ಕಿಡ್ನಿ ಸಮಸ್ಯೆಯಾಗಿರುತ್ತದೆ.

ಡಾ.ನಿರಂಜನ್

ಇಂತಹ ಸಂದರ್ಭದಲ್ಲಿ ತಕ್ಷಣ ವೈದ್ಯರನ್ನು ಭೇಟಿಯಾಗುವ ಮೂಲಕ ಪರಿಹಾರ ಕಾಣಬಹುದು. ನೀವು ಅನೇಕ ಬಾರಿ ಇದೇ ಮಾದರಿಯ ಸಮಸ್ಯೆಗಳು ಅನುಭವಿಸುತ್ತಿದ್ದರೆ, ಇದು ಮೂತ್ರಪಿಂಡದ ಹಲವು ರೀತಿಯ ರೋಗವನ್ನು ಸೂಚಿಸುತ್ತದೆ. ಅಂತಹ ಸಂದರ್ಭದಲ್ಲಿ ತಮ್ಮ ಆರೋಗ್ಯದ ಬಗ್ಗೆ ಹೆಚ್ಚಿನ ಕಾಳಜಿ ವಹಿಸಬೇಕಾಗುತ್ತದೆ. ಇನ್ನು ಸಾಮಾನ್ಯವಾಗಿ ಕಾಣಿಸಿಕೊಳ್ಳುವ ಕಿಡ್ನಿ ಸ್ಟೋನ್ ಅಥವಾ ಮೂತ್ರದಲ್ಲಿನ ಕಲ್ಲು ಸಮಸ್ಯೆಗೆ ಹೆಚ್ಚು ನೀರು ಕುಡಿಯುವುದರಿಂದ ಪರಿಹಾರ ಕಾಣಬಹುದು. ಇದೀಗ ಬೇಸಿಗೆ ಕಾಲ ಆಗಿರುವುದರಿಂದ ಹೆಚ್ಚು ನೀರು ಕುಡಿಯುವುದು ಸಹ ಕಿಡ್ನಿಯ ಆರೋಗ್ಯ ದೃಷ್ಟಿಯಿಂದ ಒಳ್ಳೆಯದು.

ಆರೋಗ್ಯಕರ ಜೀವನಶೈಲಿಯಲ್ಲಿದೆ ಆರೋಗ್ಯ…

ನಿಮ್ಮ ಆಹಾರ ಕ್ರಮದಲ್ಲಿ ಹಣ್ಣುಗಳು ಮತ್ತು ತರಕಾರಿಗಳನ್ನು ಹೆಚ್ಚಾಗಿ ಸೇವಿಸುವುದರಿಂದ ಮೂತ್ರಪಿಂಡ ಅಥವಾ ಕಿಡ್ನಿಯ ಸಮಸ್ಯೆಗಳನ್ನು ದೂರ ಮಾಡಿಕೊಳ್ಳಬಹುದು. ಆದರೆ ಈಗಾಗಲೇ ಮೂತ್ರಪಿಂಡದ ಸಮಸ್ಯೆಗೆ ಒಳಗಾದವರು ತಮ್ಮ ಆಹಾರದಲ್ಲಿ ಪೊಟಾಷಿಯಂ ಅಂಶ ಕಡಿಮೆ ಇರುವ ಆಹಾರಗಳನ್ನು ಸೇವಿಸುವುದು ಉತ್ತಮ. ಇಂತಹ ಸಮಯದಲ್ಲಿ ಸೇಬು, ಪೇರಳೆ, ಪಪ್ಪಾಯಿ ಮುಂತಾದ ಹಣ್ಣುಗಳನ್ನು ತಿನ್ನುವುದರಿಂದ ದೇಹದಲ್ಲಿ ಸಕ್ಕರೆ ಅಂಶ ಕೂಡ ನಿಯಂತ್ರಣದಲ್ಲಿಟ್ಟುಕೊಳ್ಳಬಹುದು.

ಪ್ರತಿದಿನ ವ್ಯಾಯಾಮ ಮಾಡುವುದರಿಂದ ಕೊಲೆಸ್ಟ್ರಾಲ್, ರಕ್ತದೊತ್ತಡ ಮತ್ತು ಸ್ಥೂಲಕಾಯತೆಯ ಸಮಸ್ಯೆಗಳನ್ನು ನಿಯಂತ್ರಿಸಬಹುದು. ಬೊಜ್ಜಿನ ಸಮಸ್ಯೆ ಹೆಚ್ಚಾಗುವುದರಿಂದ ಮಧುಮೇಹ ಮತ್ತು ರಕ್ತದೊತ್ತಡದ ಸಮಸ್ಯೆಗಳನ್ನು ಉಂಟು ಮಾಡಬಹುದು. ಇದು ಮೂತ್ರಪಿಂಡದ ಸಮಸ್ಯೆಯನ್ನು ತಂದೊಡ್ಡಬಹುದು. ಹೀಗಾಗಿ ಹೆಚ್ಚು ವ್ಯಾಯಾಮ ಮಾಡುವುದರಿಂದ ಕಿಡ್ನಿಯ ಆರೋಗ್ಯವು ಹೆಚ್ಚಾಗುತ್ತದೆ.

ರಕ್ತದಲ್ಲಿ ಸಕ್ಕರೆಯ ಮಟ್ಟವನ್ನು ನಿಯಂತ್ರಣದಲ್ಲಿಟ್ಟುಕೊಳ್ಳುವುದು ಬಹಳ ಮುಖ್ಯ. ಮಧುವೇಹಿ ರೋಗಿಗಳ ಕಿಡ್ನಿ ವೈಫಲ್ಯ ಹೊಂದಿದರೆ ಡಯಾಲಿಸಿಸ್ ಅಥವಾ ಕಿಡ್ನಿ ಕಸಿ ಮಾತ್ರ ಪರಿಹಾರವಾಗಿದೆ. ಹಾಗಾಗಿ ರಕ್ತದಲ್ಲಿನ ಸಕ್ಕರೆ ಪ್ರಮಾಣವನ್ನು ಪರೀಕ್ಷಿಸಿಕೊಳ್ಳುತ್ತಾ ಇರುವುದು ಆರೋಗ್ಯಕ್ಕೆ ಒಳ್ಳೆದು.

ಉತ್ತಮ ಆರೋಗ್ಯ ಹೊಂದಲು ನೀರು ಕುಡಿಯುವುದು ಬಹಳ ಮುಖ್ಯ. ದಿನವು ಹೆಚ್ಚಿನ ಪ್ರಮಾಣದಲ್ಲಿ ನೀರು ಕುಡಿಯಿರಿ ಅಥವಾ ಇತರೆ ಹಣ್ಣಿನ ರಸಗಳನ್ನು ಹೆಚ್ಚಾಗಿ ಸೇವಿಸಿ.

ವಿಶ್ವ ಕಿಡ್ನಿ ಡೇ ಕುರಿತು ಒಂದಷ್ಟು…

ವಿಶ್ವ ಕಿಡ್ನಿ ಡೇ ಎಂಬುದು ಒಂದು ಜಾಗತಿಕ ಆರೋಗ್ಯ ಅಭಿಯಾನವಾಗಿದ್ದು, ಇದು ಜನರಿಗೆ ಕಿಡ್ನಿಯ ಮಹತ್ವವನ್ನು ಹೇಳುತ್ತದೆ. ಈ ದಿನದಂದು ವಿಶ್ವದ ವಿವಿಧ ರಾಷ್ಟ್ರಗಳಲ್ಲಿ ಕಿಡ್ನಿಯ ಆರೋಗ್ಯಕ್ಕೆ ಸಂಬಂಧಿಸಿದಂತೆ ಹಲವಾರು ಕಾರ್ಯಕ್ರಮಗಳು ನಡೆಯುತ್ತವೆ. ಈ ದಿನಾಚರಣೆ ಮೊದಲ ಬಾರಿಗೆ ಆರಂಭಗೊಂಡಿದ್ದು 2006 ರಲ್ಲಿ. ಅಂದಿನಿಂದ ಇಂದಿನವರೆಗೆ ಈ ದಿನವನ್ನು ವಿವಿಧ ಥೀಮ್‌ಗಳಡಿಯಲ್ಲಿ ಆಚರಿಸಲಾಗುತ್ತಿದೆ.

Key words: Kidney-problem-solution