ಸಿಎಂ ತವರಲ್ಲಿ ಬಿಜೆಪಿ ಶಾಸಕರ ಅನುದಾನ ಕಾಂಗ್ರೆಸ್ ಶಾಸಕರ ಕ್ಷೇತ್ರಕ್ಕೆ ಹಂಚಿಕೆ:  ಮಾಜಿ ಮೇಯರ್ ಆರೋಪ.

ಮೈಸೂರು,ಫೆಬ್ರವರಿ,14,2024(www.justkannada.in):  ಸಿಎಂ ತವರಲ್ಲಿ ಬಿಜೆಪಿ ಶಾಸಕರ ಅನುದಾನ ಕಾಂಗ್ರೆಸ್ ಶಾಸಕರ ಕ್ಷೇತ್ರಕ್ಕೆ ಹಂಚಿಕೆ ಮಾಡಲಾಗಿದೆ ಎಂದು ಮೈಸೂರು ಮಹಾನಗರ ಪಾಲಿಕೆ ಮಾಜಿ ಮೇಯರ್ ಶಿವಕುಮಾರ್ ಆರೋಪ ಮಾಡಿದ್ದಾರೆ.

ಈ ಕುರಿತು ಮಾತನಾಡಿದ ಮಾಜಿ ಮೇಯರ್ ಶಿವಕುಮಾರ್,  ಮೈಸೂರು ಮಹಾನಗರ ಪಾಲಿಕೆ ಆಯುಕ್ತರಿಂದ  ಅನುದಾನ ಹಂಚಿಕೆ ಮಾಡಲಾಗಿದೆ. ಕಳೆದ ಬಿಜೆಪಿ ಸರ್ಕಾರದಲ್ಲಿ 45 ಕೋಟಿ ರೂ.  ವಿಶೇಷ ಅನುದಾನ ಮಂಜೂರಾಗಿತ್ತು. ಕೆ.ಆರ್ ಕ್ಷೇತ್ರದ ಶಾಸಕರಾಗಿದ್ದ ಎಸ್.ಎ ರಾಮದಾಸ್ ಅವಧಿಯಲ್ಲಿ ಕೆ.ಆರ್ ಕ್ಷೇತ್ರದ ಅಭಿವೃದ್ಧಿಗೆ 45 ಕೋಟಿ ರೂ. ಅನುದಾನ ಮಂಜೂರಾಗಿತ್ತು.  ಸದ್ಯ ಮಂಜೂರಾಗಿದ್ದ ಅನುದಾನವನ್ನು ಚಾಮರಾಜ, ಎನ್ ಆರ್ ಕ್ಷೇತ್ರಗಳಿಗೆ ಹಂಚಿಕೆ ಮಾಡಲಾಗಿದೆ.  ಚಾಮರಾಜ ಕ್ಷೇತ್ರಕ್ಕೆ 20 ಕೋಟಿ, ಎನ್ ಆರ್ ಕ್ಷೇತ್ರಕ್ಕೆ 25 ಕೋಟಿ ರೂ. ಹಣ ಹಂಚಿಕೆ ಮಾಡಲಾಗಿದೆ. ಬಿಜೆಪಿ ಶಾಸಕರಿದ್ದಾರೆ ಎನ್ನುವ ಕಾರಣಕ್ಕೆ ಕೆ. ಆರ್ ಕ್ಷೇತ್ರದ ಅನುದಾನ ಬೇರೆಡೆ ಹಂಚಿಕೆ ಮಾಡಲಾಗಿದೆ. ಈ ಬಗ್ಗೆ ಪಾಲಿಕೆ ಆಯುಕ್ತರ ಬಳಿ ನಮ್ಮ ಶಾಸಕರು ಮಾತನಾಡಿದ್ದಾರೆ. ಆದರೂ ಏನು ಪ್ರಯೋಜನವಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಬಿಜೆಪಿ ಕ್ಷೇತ್ರ ಎನ್ನುವ ಏಕಮೇವ ಉದ್ದೇಶದಿಂದ ಕಾಂಗ್ರೆಸ್ ಶಾಸಕರುಗಳ ಕ್ಷೇತ್ರಕ್ಕೆ ಅನುದಾನ ಹಂಚಿಕೆ ಮಾಡಿದ್ದಾರೆ. ಅಧಿವೇಶನದಲ್ಲೂ ಈ ಬಗ್ಗೆ ಶಾಸಕರು ಚರ್ಚೆ ಮಾಡಲಿದ್ದಾರೆ. ಶಾಸಕರು ಬಂದ ಮೇಲೆ ನಾವೆಲ್ಲರೂ ಪಾಲಿಕೆ ಮುಂದೆ ಉಗ್ರ ಪ್ರತಿಭಟನೆ ಮಾಡುತ್ತೇವೆ. ಹಂಚಿಕೆಯಾಗಿರುವ ಅನುದಾನ ತಡೆದು ಮತ್ತೆ ನಮ್ಮ ಕ್ಷೇತ್ರಕ್ಕೆ ನೀಡಲು ಕಾಲಾವಕಾಶವಿದೆ. ಕೂಡಲೇ ಪಾಲಿಕೆ ಆಯುಕ್ತರು ನಮ್ಮ ಕ್ಷೇತ್ರದ ಅನುದಾನವನ್ನು ನಮಗೆ ವಾಪಾಸ್ ನೀಡಬೇಕು. ಇಲ್ಲದಿದ್ದರೆ ಉಗ್ರ ಹೋರಾಟ ನಡೆಸುತ್ತೇವೆ ಎಂದು ಮಾಜಿ ಮೇಯರ್ ಶಿವಕುಮಾರ್ ಎಚ್ಚರಿಕೆ ನೀಡಿದರು.

Key words: Allocation – BJP MLA’s -grant – Congress- MLA’s -constituency -Former mayor-Shivakumar