ನಿಸರ್ಗದ ಮಧ್ಯೆ ಸಚಿವರಾದ ಎಸ್.ಟಿ.ಸೋಮಶೇಖರ್, ಬಿಸಿ ಪಾಟೀಲ್ ಯೋಗಾ ಯೋಗ..!

ಹಿರೇಕೆರೂರು, ಜೂನ್ 21, 2020 (www.justkannada.in): ವಿಶ್ವ ಯೋಗ ದಿನ ಅಂಗವಾಗಿ ಭಾನುವಾರ ಮುಂಜಾನೆ ಹಾವೇರಿ ಜಿಲ್ಲೆಯ ಹಿರೇಕೆರೂರಿನ ನಿಸರ್ಗದ ಮಡಿಲಿನಲ್ಲಿ ಸಹಕಾರ ಸಚಿವರಾದ ಎಸ್.ಟಿ.ಸೋಮಶೇಖರ್ ಹಾಗೂ ಕೃಷಿ ಸಚಿವರಾದ ಬಿ.ಸಿ.ಪಾಟೀಲ್ ಯೋಗಭ್ಯಾಸ ಮಾಡಿದರು.

ಸುಮಾರು ಒಂದು ಗಂಟೆಗಳ ಕಾಲ ನಿಸರ್ಗದ ಸುಂದರ ವಾತಾವರಣದಲ್ಲಿ ಸಚಿವದ್ವಯರು ಯೋಗದಲ್ಲಿ ನಿರತರಾದರು. ಯೋಗದ ಮೂಲ ಭಾರತ. ಇದನ್ನು ಸಹಸ್ರಾರು ವರ್ಷಗಳಿಂದ ನಮ್ಮ ಪೂರ್ವಜರು ಪಾಲಿಸಿಕೊಂಡು ಬರುತ್ತಿದ್ದಾರೆ. ಯೋಗದ ಮೂಲಕ ಆರೋಗ್ಯವನ್ನು ಕಾಯ್ದುಕೊಂಡಿದ್ದಾರೆ. ಆರೋಗ್ಯ ಹಾಗೂ ಆಯಸ್ಸನ್ನು ವೃದ್ಧಿಗೊಳಿಸುವ ಶಕ್ತಿ ಯೋಗಕ್ಕಿದೆ. ಅಲ್ಲದೆ, ಅನೇಕ ರೋಗಗಳನ್ನು ಇದು ಗುಣಪಡಿಸುವುದಲ್ಲದೆ, ಕೆಲವು ರೋಗಗಳು ನಮ್ಮ ಹತ್ತಿರಕ್ಕೂ ಬಾರದಂತೆ ತಡೆಯುತ್ತದೆ ಎಂದು ಸಹಕಾರ ಸಚಿವ ಎಸ್.ಟಿ.ಸೋಮಶೇಖರ್ ಹೇಳಿದರು.

ಯೋಗ ಬಲ್ಲವನಿಗೆ ರೋಗ ಇಲ್ಲ ಎಂಬ ನಾಣ್ಣುಡಿ ಸುಮ್ಮನೆ ಹುಟ್ಟಿಕೊಂಡಿಲ್ಲ. ನಾವು ಯೋಗ ದಿನದಂದು ಮಾತ್ರ ಯೋಗ ಮಾಡಿದರೆ ಸಾಲದು ಅದು ನಮ್ಮ ದೈನಂದಿನದ ಕಾರ್ಯಚಟುವಟಿಕೆಯ ಭಾಗವಾಗಬೇಕು. ಪ್ರತಿ ದಿನ ಯೋಗ ಮಾಡುವುದರಿಂದ ದೇಹ ಹಾಗೂ ಮನಸ್ಸು ಉಲ್ಲಸಿತವಾಗಿರುತ್ತದೆ ಎಂದು ಸಚಿವ ಸೋಮಶೇಖರ್ ಹೇಳಿದರು.

ವಿಶ್ವಕ್ಕೆ ಯೋಗ ಪಸರಿಸಿದ ಮೋದಿ

ಯೋಗದ ನಿಜವಾದ ಪ್ರಯೋಜನ ಅರಿತವರು ನಮ್ಮ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರೆಂದರೆ ಅತಿಶಯೋಕ್ತಿ ಆಗಲಾರದು. ಅವರು ಯೋಗದ ಮಹತ್ವವನ್ನು ಚೆನ್ನಾಗಿ ಅರಿತಿದ್ದರಿಂದಲೇ ಪ್ರತಿದಿನ ಯೋಗ ಮಾಡುತ್ತಾರೆ. ಅಲ್ಲದೆ, ಯೋಗಕ್ಕೆ ವಿಶ್ವದೆಲ್ಲೆಡೆ ಮನ್ನಣೆ ಸಿಗುವಂತೆ ಮಾಡಿದ್ದಾರೆಂದು ಸಚಿವರಾದ ಸೋಮಶೇಖರ್ ತಿಳಿಸಿದರು.