ರಾಜ್ಯದಲ್ಲಿ ಕಾವೇರಿ ನದಿ ನೀರು ಸಂಕಷ್ಟ: ಮಳೆಗಾಗಿ ಮಲೆ ಮಹದೇಶ್ವರ ಮೊರೆ ಹೋದ ಸಿಎಂ ಸಿದ್ಧರಾಮಯ್ಯ

ಚಾಮರಾಜನಗರ,ಸೆಪ್ಟಂಬರ್,27,2023(www.justkannada.in):  ರಾಜ್ಯದಲ್ಲಿ ಮುಂಗಾರು ಮಳೆ ಕೈಕೊಟ್ಟಿದ್ದು ಜಲಾಶಯಗಳಲ್ಲಿ ನೀರಿಲ್ಲದೇ ರೈತರು ಕಂಗಾಲಾಗಿದ್ದಾರೆ. ಈ ಮಧ್ಯೆಯೂ ಸುಪ್ರೀಂಕೋರ್ಟ್ ಆದೇಶದಂತೆ ತಮಿಳುನಾಡಿಗೆ ನೀರು ಹರಿಸುವ ಪರಿಸ್ಥಿತಿ ರಾಜ್ಯಸರ್ಕಾರಕ್ಕೆ ಎದುರಾಗಿದೆ. ಈ ಹಿನ್ನೆಲೆಯಲ್ಲಿ ಇದೀಗ ಮಳೆಗಾಗಿ ಹಾಗೂ ಸಂಕಷ್ಟ ಪರಿಹರಿಸುವಂತೆ ಸಿಎಂ ಸಿದ್ಧರಾಮಯ್ಯ ಮಲೆ ಮಹದೇಶ್ವರ ಮೊರೆ ಹೋಗಿದ್ದಾರೆ.

ಚಾಮರಾಜನಗರ ಜಿಲ್ಲೆಯ ಮಲೆ ಮಹದೇಶ್ವರ ಬೆಟ್ಟಕ್ಕೆ ಭೇಟಿ ನೀಡಿದ ಸಿಎಂ ಸಿದ್ಧರಾಮಯ್ಯ,  20 ನಿಮಿಷಕ್ಕೂ ಹೆಚ್ಚು ಕಾಲ‌ ಮಹದೇಶ್ವರನ ದರ್ಶನ ಪಡೆದರು.

ಬಳಿಕ ಮಾತನಾಡಿದ ಸಿಎಂ ಸಿದ‍್ಧರಾಮಯ್ಯ, ಮಹದೇಶ್ವರರಲ್ಲಿ ರೈತರಿಗೆ ಒಳ್ಳೆಯದಾಗಲಿ ಎಂದು ಕೋರಿಕೊಂಡಿದ್ದೇನೆ.   ತಮಿಳುನಾಡಿಗೆ 18 ದಿನಗಳ 3 ಸಾವಿರ ಕ್ಯೂಸೆಕ್ ನೀರು ಬಿಡುಗಡೆ ಆದೇಶವಾಗಿದೆ. ಸುಪ್ರೀಂ ಕೋರ್ಟ್ ನಲ್ಲಿ ಈ ವಿಚಾರದ ಕುರಿತು ಚಾಲೆಂಜ್ ಮಾಡುತ್ತೇವೆ. ಸದ್ಯ ನಮ್ಮ ಬಳಿ ನೀರು ಇಲ್ಲ. ಈಗಾಗಲೇ ಕಾನೂನು ತಜ್ಞರ ಸಲಹೆ ಪಡೆದಿದ್ದೇವೆ. ನೀರು ಹಂಚಿಕೆ ವಿಚಾರದಲ್ಲಿ ಯಾವುದೇ ರಾಜಿಯಿಲ್ಲ ಎಂದರು.

ಚಾಮರಾಜನಗರಕ್ಕೆ ಅಂಟಿದ ಮೌಡ್ಯ ತೊಡೆದು ಹಾಕಿರುವೆ. ಕಳೆದ ಬಾರಿ 12 ಭೇಟಿ ನೀಡಿ 5 ವರ್ಷ ಗಟ್ಟಿಯಾಗಿ ಆಡಳಿತ ನಡೆಸಿದ್ದೆ. ಕಾವೇರಿ ವಿಚಾರದಲ್ಲಿ ಬಿಜೆಪಿ ಹಾಗೂ ಜೆಡಿಎಸ್ ರಾಜಕೀಯ ಮಾಡುತ್ತಿವೆ. ವಿಪಕ್ಷಗಳು ಕಾವೇರಿ ವಿಚಾರದಲ್ಲಿ ರಾಜಕೀಯ ಮಾಡುತ್ತಲೇ ಇರುತ್ತವೆ ಎಂದು ಸಿಎಂ ಸಿದ್ಧರಾಮಯ್ಯ ತಿಳಿಸಿದರು.

Key words: Kaveri river –dispute- CM Siddaramaiah -Male Mahadeshwara hills