ತವರಿಗೆ ತೆರಳಲು ಕಾಶ್ಮೀರಿ ಪಂಡಿತರು ಸಿದ್ಧ: ಯುವ ಜನರಲ್ಲಿ ಹೆಚ್ಚಿನ ತುಡಿತ

ಬೆಂಗಳೂರು:ಆ-8: ಕಾಶ್ಮೀರದ ಮೂಲ ನಿವಾಸಿಗಳು ಹಾಗೂ ಕಾಶ್ಮೀರಿ ಪಂಡಿತ ಸಮುದಾಯದ ನಾವೆಲ್ಲರೂ 70 ವರ್ಷದಿಂದ ಕಾಯುತ್ತಿದ್ದ ಘಳಿಗೆ ಕೊನೆಗೂ ಬಂದಿದೆ. ಸಂವಿಧಾನದ 370ನೇ ವಿಧಿ ರದ್ದುಗೊಳಿಸಿ ಮಹತ್ತರ ನಿರ್ಧಾರ ಕೈಗೊಂಡಿರುವ ಕೇಂದ್ರ ಸರ್ಕಾರಕ್ಕೆ ಧನ್ಯವಾದ ಎಂದು ಕಾಶ್ಮೀರದಲ್ಲಿ ಚಿತ್ರಹಿಂಸೆಗೊಳಗಾಗಿ ಅನಿವಾರ್ಯವಾಗಿ ತಮ್ಮಮೂಲಸ್ಥಾನವನ್ನು ತ್ಯಜಿಸಿ ವಿಶ್ವದ ವಿವಿಧೆಡೆ ಆಶ್ರಯ ಪಡೆದಿರುವವರ ಪೈಕಿ ನಗರದಲ್ಲಿರುವ ದಿಲೀಪ್ ಕಾಚರೂ ಸಂತಸ ವ್ಯಕ್ತಪಡಿಸಿದ್ದಾರೆ.್

ಈ ಕುರಿತು ಮಾತನಾಡಿದ ಅವರು, ಕಾಶ್ಮೀರದಿಂದ ಹೊರಹೋಗಲು ಅನಿವಾರ್ಯವಾದ ನಂತರ ಪ್ರಮುಖವಾಗಿ ಹೆಚ್ಚಿನ ಜನರು ಜಮ್ಮುವಿನಲ್ಲಿ, ನಂತರದಲ್ಲಿ ದೆಹಲಿಯಲ್ಲಿ ನೆಲೆಸಿದ್ದಾರೆ. ಪುಣೆ, ಬೆಂಗಳೂರಿನಂತಹ ನಗರಗಳಲ್ಲಿ ಖಾಸಗಿ ಕಂಪನಿಗಳಲ್ಲಿ ಉದ್ಯೋಗಿಗಳಾಗಿ ದುಡಿಯುತ್ತಿದ್ದಾರೆ. ವಿಶ್ವಾದ್ಯಂತ ಇಂದು ಅಂದಾಜು 7 ಲಕ್ಷ ಕಾಶ್ಮೀರಿಗಳಿದ್ದಾರೆ. ಬೆಂಗಳೂರಿನಲ್ಲಿ ಕಾಶ್ಮೀರಿ ಪಂಡಿತರ ಅಂದಾಜು 400 ಕುಟುಂಬಗಳಿವೆ ಎಂದು ತಿಳಿಸಿದರು.

ದಶಕಗಳ ಹಿಂದೆ ಶ್ಯಾಮಪ್ರಸಾದ್ ಮುಖರ್ಜಿ ಸೇರಿ ಅನೇಕರು ಜಮ್ಮುಮತ್ತು ಕಾಶ್ಮೀರದ ವಿಶೇಷ ಸ್ಥಾನಮಾನ ತೆರವುಗೊಳಿಸಲು ಶ್ರಮಿಸಿದ್ದಾರೆ. ಕಳೆದ 10 ವರ್ಷಗಳಿಂದ ಈ ಬಗ್ಗೆ ವಿಶ್ವದಾದ್ಯಂತ ಜಾಗೃತಿ, ಹೋರಾಟಗಳ ಮೂಲಕ ಕ್ರಿಯಾಶೀಲವಾಗಿರುವ ಜಮ್ಮು-ಕಾಶ್ಮೀರ ಅಧ್ಯಯನ ಕೇಂದ್ರದ ಕರ್ನಾಟಕ ಚಟುವಟಿಕೆ ಸಂಚಾಲಕರಾಗಿರುವ ಕಾಚರೂ ಆನಂದಕ್ಕೆ ಈಗ ಪಾರವೇ ಇಲ್ಲ. ಕಾಶ್ಮೀರದಿಂದ ನಮ್ಮನ್ನು ಹೊರದಬ್ಬಿದ ನಂತರದಲ್ಲಿ ಹಲವಾರು ಸಮಸ್ಯೆ ಎದುರಿಸಿದ್ದೇವೆ. ಪ್ರಮುಖವಾಗಿ ವಾತಾವರಣದ ವ್ಯತ್ಯಾಸದಿಂದಾಗಿ ಅನುಭವಿಸಿದ ಶಾರೀರಿಕ ಸಮಸ್ಯೆ. ತಲೆತಲಾಂತರಗಳಿಂದ 20-25 ಡಿಗ್ರಿಗಿಂತ ಕಡಿಮೆ ತಾಪಮಾನದಲ್ಲಿ ವಾಸಿಸುತ್ತಿದ್ದ ಸಮುದಾಯ ಇದ್ದಕ್ಕಿದ್ದಂತೆ ದೆಹಲಿಯ 40 ಡಿಗ್ರಿ ತಾಪಮಾನಕ್ಕೆ ದೂಡಲ್ಪಟ್ಟಿತು. ತಾಪಮಾನ ವ್ಯತ್ಯಾಸದಿಂದಾಗಿಯೇ ಅನೇಕರು ಮೃತಪಟ್ಟಿದ್ದಾರೆ ಎಂದರು.

ಕಾಶ್ಮೀರಕ್ಕೆ ವಾಪಸಾಗುತ್ತೀರ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಕಾಚರೂ, ಈಗಿನ ಯುವ ಕಾಶ್ಮೀರಿ ಪಂಡಿತರಲ್ಲಿ ಈ ತುಡಿತ ಅತಿ ಹೆಚ್ಚಾಗಿದೆ. ಗೌರವಯುತವಾಗಿ ಕಾಶ್ಮೀರಕ್ಕೆ ತೆರಳಿ ವಾಸಿಸಲು ವಾತಾವರಣ ಕಲ್ಪಿಸಿದರೆ, ವಿಶ್ವಾದ್ಯಂತ ಹರಡಿಕೊಂಡಿರುವ ನೂರಕ್ಕೆ ನೂರು ಕಾಶ್ಮೀರಿ ಪಂಡಿತರು ತವರಿಗೆ ಸೇರುತ್ತಾರೆ. ಆದರೆ, ಅಲ್ಲಿ ನಮ್ಮ ಯಾವುದೇ ಆಸ್ತಿ ಪಾಸ್ತಿ ಉಳಿದಿಲ್ಲ. ಅದೇ ಮನೆಗೆ ಹೋಗಿ ಉಳಿಯಲು ಮನೆಯೇ ಇಲ್ಲ. ಇದ್ದರೂ ಸುಸ್ಥಿತಿಯಲ್ಲಿಲ್ಲ ಅಥವಾ ನೆರೆಹೊರೆಯಲ್ಲಿದ್ದವರು ಅತಿಕ್ರಮಿಸಿಕೊಂಡಿದ್ದಾರೆ. ಕೇಂದ್ರ ಸರ್ಕಾರ 6,500 ಎಕರೆ ಪ್ರದೇಶವನ್ನು ಯಾವುದೇ ರಾಷ್ಟ್ರೀಯ ಹೆದ್ದಾರಿಗೆ ಹೊಂದಿಕೊಂಡಂತೆ ನೀಡಿ ಅಲ್ಲಿ ವಸತಿಗೆ ಅವಕಾಶ ಕಲ್ಪಿಸಿದರೆ ಅಲ್ಲಿ ಮನೆ, ಶಾಲೆ, ದೇವಸ್ಥಾನಗಳನ್ನು ನಿರ್ವಿುಸಿಕೊಂಡು ವಾಸಿಸುತ್ತೇವೆ ಎಂದು ಹೇಳಿದರು.

ಶಾರದಾ ದೇಶ ಸಂಸ್ಕೃತಿ

ಶಾರದಾ ದೇಶ ಎನ್ನಲಾಗುತ್ತಿದ್ದ ಕಾಶ್ಮೀರದ ಮೂಲ ನಿವಾಸಿಗಳು ಕಾಶ್ಮೀರಿ ಪಂಡಿತರು. ವಿಕ್ರಮ ಸಂವತ್ಸರವನ್ನು ಅನುಸರಿಸುತ್ತೇವಾದರೂ ಸಪ್ತಋಷಿ ಸಂವತ್ಸರ ಪಂಚಾಂಗ ನಮ್ಮ ಮೂಲ. ಇಂದಿಗೂ 5,094 ವರ್ಷ ಹಳೆಯ ಸಪ್ತಋಷಿ ಪಂಚಾಂಗ ನನ್ನ ಬಳಿಯಿದೆ. ಇಂತಹ ಪ್ರಾಚೀನ ಸಂಸ್ಕೃತಿಯನ್ನು ಪೂರ್ಣಪ್ರಮಾಣದಲ್ಲಿ ಆಚರಿಸಲು ಆಗುತ್ತಿಲ್ಲ. ಭಾಷೆಯನ್ನು ಸಂಪೂರ್ಣವಾಗಿ ಉಳಿಸಲು ಸಾಧ್ಯವಾಗುತ್ತಿಲ್ಲ ಎಂದು ದಿಲೀಪ್ ಕಾಚರೂ ಬೇಸರ ವ್ಯಕ್ತಪಡಿಸುತ್ತಾರೆ.

10 ವರ್ಷ ಅವಕಾಶ ನೀಡಿ ಸಾಕು

370ನೇ ವಿಧಿಯನ್ನು ತೆರವುಗೊಳಿಸಿದ್ದು ಕಾಶ್ಮೀರಿಗಳ ಸ್ವಾಭಿಮಾನ ಹಾಗೂ ಗೌರವಕ್ಕೆ ಧಕ್ಕೆ ತಂದಿದೆ ಎಂಬ ಕೆಲವರ ವಾದವನ್ನು ಕಾಚರೂ ಅಲ್ಲಗಳೆದಿದ್ದಾರೆ. 370 ನೇ ವಿಧಿ ಹಾಗೂ 35ಎ ನಮ್ಮ ಒಳಿತಿಗಾಗಿಯೇ ಇದ್ದಿದ್ದರೆ 70 ವರ್ಷದಲ್ಲಿ ಭಯೋತ್ಪಾದನೆ ಏಕೆ ನಿಲ್ಲಲಿಲ್ಲ? ಇತರೆ ರಾಜ್ಯಗಳಂತೆ ಜಮ್ಮು-ಕಾಶ್ಮೀರ ಏಕೆ ಅಭಿವೃದ್ಧಿ ಆಗಲಿಲ್ಲ ? ಕೆಲವರನ್ನು ಈ ವಿಚಾರದಲ್ಲಿ ದಾರಿ ತಪ್ಪಿಸಲಾಗುತ್ತಿದೆ. 370 ಇದ್ದರಷ್ಟೇ ಕಾಶ್ಮೀರ ಎಂಬ ಭ್ರಮೆ ಮೂಡಿಸಲಾಗುತ್ತಿದೆ. ಈಗ ವಿಶೇಷ ಸ್ಥಾನಮಾನವನ್ನು ತೆಗೆಯಲಾಗಿದೆ. ಇದಕ್ಕೂ 10 ವರ್ಷ ಸಮಯ ನೀಡೋಣ. ಆಗ ಜಮ್ಮು-ಕಾಶ್ಮೀರ ಅಭಿವೃದ್ಧಿ ಆಗುತ್ತದೆ ಎಂಬ ನಂಬಿಕೆ ನನಗಿದೆ. ಕಾಶ್ಮೀರಿ ಪಂಡಿತರಿಗಷ್ಟೆ ಅಲ್ಲ, ಅಲ್ಲಿನ ಮುಸ್ಲಿಂ ಸಮುದಾಯಕ್ಕೂ ಅನುಕೂಲವಾಗಲಿದೆ ಎಂದು ದಿಲೀಪ್ ವಿಶ್ವಾಸ ವ್ಯಕ್ತಪಡಿಸಿದರು.

ಕಾಶ್ಮೀರ ನಿವಾಸಿಗಳ ಪ್ರದೇಶಕ್ಕೆ ಭದ್ರತೆ

ಬೆಂಗಳೂರು: ಜಮ್ಮು ಮತ್ತು ಕಾಶ್ಮೀರದ ವಿಶೇಷ ಪ್ರಾತಿನಿಧ್ಯ 370ನೇ ವಿಧಿ ರದ್ದುಗೊಳಿಸಿರುವ ಹಿನ್ನೆಲೆಯಲ್ಲಿ ನಗರದಲ್ಲಿ ನೆಲೆಸಿರುವ ಜಮ್ಮು-ಕಾಶ್ಮೀರ ನಿವಾಸಿಗಳ ಪ್ರದೇಶಗಳಿಗೆ ಭದ್ರತೆ ಒದಗಿಸಲಾಗಿದೆ ಎಂದು ನಗರ ಪೊಲೀಸ್ ಆಯುಕ್ತ ಭಾಸ್ಕರ್ ರಾವ್ ತಿಳಿಸಿದ್ದಾರೆ. ಕೇಂದ್ರ ಸರ್ಕಾರ ಕೆಲವು ಮುಂಜಾಗ್ರತಾ ಕ್ರಮಗಳನ್ನು ಸೂಚಿಸಿದೆ. ಹೀಗಾಗಿ, ನಗರದಲ್ಲಿ ಯಾವುದೇ ಅವಘಡಗಳು ನಡೆಯದಂತೆ ಮುನ್ನೆಚ್ಚರಿಕೆ ವಹಿಸಲಾಗಿದೆ. ಜಮ್ಮು-ಕಾಶ್ಮೀರ ನಿವಾಸಿಗಳ ಪ್ರದೇಶಗಳಿಗೆ ಭದ್ರತೆ ನೀಡಲಾಗಿದೆ. ಸಂಬಂಧಪಟ್ಟ ಸಂಘಟನೆಗಳ ಜತೆ ಸಭೆ ಕರೆದು ರ್ಚಚಿಸಲಾಗುವುದು ಎಂದು ಅವರು ಸುದ್ದಿಗಾರರಿಗೆ ಮಾಹಿತಿ ನೀಡಿದ್ದಾರೆ.
ಕೃಪೆ:ವಿಜಯವಾಣಿ

ತವರಿಗೆ ತೆರಳಲು ಕಾಶ್ಮೀರಿ ಪಂಡಿತರು ಸಿದ್ಧ: ಯುವ ಜನರಲ್ಲಿ ಹೆಚ್ಚಿನ ತುಡಿತ
kashmiri-pandiths-ready-to-go-hometown