ಸಾಫ್ಟ್​ವೇರ್ ಕಂಪನಿಯಲ್ಲಿ ಇಂಟರ್ನ್​ಶಿಪ್ ಮಾಡುತ್ತಿದ್ದ ಯುವತಿಗೆ ಟೆಕ್ಕಿ ಕೊಟ್ಟ ಕಿರುಕುಳ ಶಾಕ್​ ಆಗುವಂತದ್ದು

ಬೆಂಗಳೂರು:ಆ-8: ಗೆಳೆತನದ ನೆಪದಲ್ಲಿ ಪ್ರತಿಷ್ಠಿತ ಸಾಫ್ಟ್​ವೇರ್ ಕಂಪನಿಯಲ್ಲಿ ಪ್ರಶಿಕ್ಷಣ ಪಡೆಯುತ್ತಿದ್ದ ಯುವತಿ ಬೆನ್ನು ಬಿದ್ದು, ಮೊಬೈಲ್ ಆಪ್ ಮೂಲಕ ಆಕೆಯನ್ನು ಹಿಂಬಾಲಿಸುತ್ತಿದ್ದ ಟೆಕ್ಕಿಯ ಕಿರುಕುಳಕ್ಕೆ ಬೇಸತ್ತ ಯುವತಿ ಆತ್ಮಹತ್ಯೆಗೆ ಯತ್ನಿಸಿದ್ದಾಳೆ. ಆತಂಕಗೊಂಡ ಪಾಲಕರು ವನಿತಾ ಸಹಾಯವಾಣಿ ಮೊರೆ ಹೋಗಿದ್ದಾರೆ.

ಕೋರಮಂಗಲದ ನಿವಾಸಿ 29 ವರ್ಷದ ಯುವಕ ಬೆಳ್ಳಂದೂರಿನಲ್ಲಿರುವ ಕಂಪನಿಯಲ್ಲಿ ಸಾಫ್ಟ್​ವೇರ್ ಇಂಜಿನಿಯರ್ ಆಗಿದ್ದಾನೆ. 4 ತಿಂಗಳ ಹಿಂದೆ ಮಹಾರಾಷ್ಟ್ರ ಮೂಲದ ಯುವತಿ ಇಂಟರ್ನ್ ಶಿಪ್​ಗಾಗಿ ಬಂದಿದ್ದಳು. ಕೆಲಸ ಕಲಿಸುವ ನೆಪದಲ್ಲಿ ಪರಿಚಯಿಸಿಕೊಂಡಿದ್ದ ಟೆಕ್ಕಿ, ತನ್ನ ಕಾರಿನಲ್ಲಿ ಸುತ್ತಾಡಿಸುತ್ತಿದ್ದ. ಕೆಲ ದಿನಗಳ ಬಳಿಕ ಯುವತಿಗೆ ಬೇರೆ ಕಂಪನಿಯಲ್ಲಿ ಕೆಲಸ ಸಿಕ್ಕಿತ್ತು. ಇತ್ತೀಚೆಗೆ ಆಕೆ ತನ್ನ ಸಹಪಾಠಿಯೊಬ್ಬನನ್ನು ಪ್ರೀತಿಸುತ್ತಿದ್ದಳು. ಅದನ್ನು ಗಮನಿಸಿದ ಟೆಕ್ಕಿ ಆತನ ಜತೆ ಓಡಾಡದಂತೆ ಸೂಚಿಸಿದ್ದ. ಆದರೆ, ಇದನ್ನು ಯುವತಿ ಗಣನೆಗೆ ತೆಗೆದುಕೊಂಡಿರಲಿಲ್ಲ.

ಇದರಿಂದ ಸಿಟ್ಟಾಗಿದ್ದ ಟೆಕ್ಕಿ, ಮಾತನಾಡಿಸುವ ನೆಪದಲ್ಲಿ ಯುವತಿಯನ್ನು ಹೋಟೆಲ್​ವೊಂದಕ್ಕೆ ಕರೆಸಿಕೊಂಡು ಕರೆ ಮಾಡುವ ನೆಪದಲ್ಲಿ ಮೊಬೈಲ್ ಪಡೆದು ಗಮನಕ್ಕೆ ಬಾರದಂತೆ ಆಪ್ ಡೌನ್​ಲೋಡ್ ಮಾಡಿ ಮೊಬೈಲ್ ಹಿಂದಿರುಗಿಸಿದ್ದ. ಆ ಆಪ್ ಸಹಾಯದಿಂದ ಯುವತಿ ಎಲ್ಲೆಲ್ಲಿ ಓಡಾಡುತ್ತಿದ್ದಾಳೆ ಎಂಬ ಮಾಹಿತಿ ಪಡೆಯುತ್ತಿದ್ದ. ವಾರಾಂತ್ಯದಲ್ಲಿ ಕಾರಿನಲ್ಲಿ ಯುವತಿಯನ್ನು ಹಿಂಬಾಲಿಸುತ್ತಿದ್ದ. ಯುವತಿ ಹೋಟೆಲ್​ವೊಂದರಲ್ಲಿ ತನ್ನ ಪ್ರಿಯಕರನ ಜತೆಯಲ್ಲಿದ್ದಾಗ ಅಲ್ಲಿಗೆ ಹೋಗಿ ಪ್ರಶ್ನಿಸಿದ್ದ. ಆಗ ಆಕೆ, ನನ್ನಿಷ್ಟದಂತೆ ಬದುಕುತ್ತೇನೆ. ನನಗೆ ಕಿರುಕುಳ ನೀಡಬೇಡ’ ಎಂದು ಮನವಿ ಮಾಡಿದ್ದಳು. ಆದರೂ ಟೆಕ್ಕಿ ಸುಮ್ಮನಾಗಿರಲಿಲ್ಲ.

ಖಾಸಗಿ ದೃಶ್ಯ ಸೆರೆ: ಈ ಹಿಂದೆ ಮೊಬೈಲ್​ನಲ್ಲಿ ನಡೆಸಿದ ಸಂಭಾಷಣೆ ರೆಕಾರ್ಡ್ ಮಾಡಿಕೊಂಡಿದ್ದ. ಜತೆಗೆ, ಆಕೆಯ ಜತೆ ತಾನಿದ್ದ ಖಾಸಗಿ ದೃಶ್ಯವನ್ನು ಸೆರೆಹಿಡಿದಿದ್ದ. ಅದನ್ನು ಆಕೆಗೆ ತೋರಿಸಿ ತನ್ನನ್ನು ಪ್ರೀತಿಸದಿದ್ದರೆ ನಿನ್ನ ಸ್ನೇಹಿತರು, ಸಂಬಂಧಿಕರಿಗೆ ಕಳಿಸುವುದಾಗಿ ಬೆದರಿಸಿದ್ದ. ಜತೆಗೆ, ಆಕೆಯ ಪಾಲಕರಿಗೆ ಕರೆ ಮಾಡಿ, ನಿಮ್ಮ ಮಗಳು ಯುವಕನೊಬ್ಬನ ಜತೆ ದೈಹಿಕ ಸಂಪರ್ಕ ಹೊಂದಿದ್ದಾಳೆ ಎಂದು ಹೇಳುತ್ತಿದ್ದ.

ಆತ್ಮಹತ್ಯೆಗೆ ಯತ್ನ: ಟೆಕ್ಕಿ ಕಿರುಕುಳ ಹೆಚ್ಚಾದಾಗ ನೊಂದ ಯುವತಿ ಉದ್ಯೋಗ ತೊರೆದು ಮಹಾರಾಷ್ಟ್ರಕ್ಕೆ ಹಿಂದಿರುಗಿದ್ದಳು. ಕೆಲ ದಿನಗಳ ಹಿಂದೆ ಯುವತಿಗೆ ಬೇರೆ ಯುವಕನ ಜತೆ ಪಾಲಕರು ವಿವಾಹ ನಿಶ್ಚಯ ಮಾಡಿದ್ದರು. ಈ ವಿಚಾರ ತಿಳಿದುಕೊಂಡ ಟೆಕ್ಕಿ, ವರನ ಮೊಬೈಲ್ ನಂಬರ್ ನೀಡುವಂತೆ ಕಿರುಕುಳ ನೀಡಲು ಆರಂಭಿಸಿದ್ದ. ಬೇಸತ್ತ ಯುವತಿ ಆತ್ಮಹತ್ಯೆಗೆ ಯತ್ನಿಸಿದ್ದಳು. ಆಕೆಯ ಪಾಲಕರು ನ್ಯಾಯಕ್ಕಾಗಿ ವನಿತಾ ಸಹಾಯವಾಣಿ ಮೊರೆ ಹೋಗಿದ್ದಾರೆ. ಆಪ್ತ ಸಮಾಲೋಚಕರು ಟೆಕ್ಕಿಯನ್ನು ಕರೆಸಿ ಎಚ್ಚರಿಸಿದ್ದಾರೆ.

ಯುವತಿಯರು ಗೆಳೆತನ ಮಾಡುವಾಗ ಎಚ್ಚರಿಕೆಯಿಂದಿರಬೇಕು. ಹಿನ್ನೆಲೆ ಗೊತ್ತಿಲ್ಲದ, ಎಲ್ಲೆಂದರಲ್ಲಿ ಪರಿಚಯವಾಗುವ ಯುವಕರ ಜತೆ ಅಂತರ ಕಾಯ್ದುಕೊಳ್ಳುವುದು ಒಳಿತು. ಯುವತಿಯರನ್ನು ಬ್ಲಾ್ಯಕ್ ಮೇಲ್ ಮಾಡುತ್ತಿರುವ ಪ್ರಕರಣಗಳು ಇತ್ತೀಚೆಗೆ ಹೆಚ್ಚುತ್ತಿರುವುದು ಆತಂಕಕಾರಿ ವಿಚಾರವಾಗಿದೆ.

| ಬಿ.ಎಸ್ ಸರಸ್ವತಿ ಹಿರಿಯ ಆಪ್ತ ಸಮಾಲೋಚಕಿ
ಕೃಪೆ:ವಿಜಯವಾಣಿ

ಸಾಫ್ಟ್​ವೇರ್ ಕಂಪನಿಯಲ್ಲಿ ಇಂಟರ್ನ್​ಶಿಪ್ ಮಾಡುತ್ತಿದ್ದ ಯುವತಿಗೆ ಟೆಕ್ಕಿ ಕೊಟ್ಟ ಕಿರುಕುಳ ಶಾಕ್​ ಆಗುವಂತದ್ದು
girl-bengaluru-techie-software-company-sexual-harassment-suicide-attempt