ಗಡಿ ಜಿಲ್ಲೆ ಚಾಮರಾಜನಗರದಲ್ಲಿ ಶಾಲಾ-ಕಾಲೇಜು ಆರಂಭದ ಬಗ್ಗೆ ಸಚಿವ ಎಸ್.ಟಿ.ಸೋಮಶೇಖರ್ ಹೇಳಿಕೆ.

 

ಕೊಳ್ಳೇಗಾಲ, ಆ.16, 2021 : (www.justkannada.in news) ಶೇಕಡಾ 2ಕ್ಕಿಂತ ಕಡಿಮೆ ಕೋವಿಡ್ ಪಾಸಿಟಿವಿಟಿ ದರ ಇರುವ ಕಡೆ ಶಾಲೆಗಳನ್ನು ಆರಂಭಿಸುವ ಬಗ್ಗೆ ಮುಖ್ಯಮಂತ್ರಿಗಳು ನಿರ್ಧಾರ ಪ್ರಕಟಿಸಿದ ಬೆನ್ನಲ್ಲೇ ಚಾಮರಾಜನಗರ ಜಿಲ್ಲೆಯ ಗಡಿ ಭಾಗದ ತಾಲೂಕುಗಳ ಸ್ಥಿತಿಗತಿ ಬಗ್ಗೆ ಸಭೆ ನಡೆಸಿದ ಸಹಕಾರ ಹಾಗೂ ಮೈಸೂರು ಮತ್ತು ಚಾಮರಾಜನಗರ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್, ಸಮಗ್ರ ವಿವರಣೆಯನ್ನು ಪಡೆದುಕೊಂಡರು. ಬಳಿಕ ಶೀಘ್ರದಲ್ಲಿ ಶಾಲೆ-ಕಾಲೇಜು ಆರಂಭಿಸುವ ಬಗ್ಗೆ ತೀರ್ಮಾನವನ್ನು ಕೈಗೊಳ್ಳಲಾಗುವುದು ಎಂದು ತಿಳಿಸಿದರು.

ಕೊಳ್ಳೇಗಾಲದ ಡಾ.ಬಿ.ಆರ್.ಅಂಬೇಡ್ಕರ್ ಭವನದಲ್ಲಿ ಕೊಳ್ಳೇಗಾಲ ಮತ್ತು ಹನೂರು ವಿಧಾನಸಭಾ ಕ್ಷೇತ್ರಗಳ ಕೋವಿಡ್ 19ರ ಸ್ಥಿತಿಗತಿಗಳು, ತೆಗೆದುಕೊಂಡ ಕ್ರಮಗಳು ಹಾಗೂ ಇದೇ ಆಗಸ್ಟ್ ಕೊನೇ ವಾರದಲ್ಲಿ ಶಾಲಾ-ಕಾಲೇಜುಗಳನ್ನು ಪ್ರಾರಂಭಿಸುವ ಬಗ್ಗೆ ಸರ್ಕಾರ ತೀರ್ಮಾನ ಕೈಗೊಂಡಿರುವ ಹಿನ್ನೆಲೆಯಲ್ಲಿ ಅಗತ್ಯ ಸಿದ್ಧತೆಗಳ ಬಗ್ಗೆ ಪ್ರಗತಿ ಪರಿಶೀಲನಾ ಸಭೆ ನಡೆಸಿದರು.

ಚಾಮರಾಜನಗರ ಜಿಲ್ಲೆಯಲ್ಲಿ ಕೋವಿಡ್ ಸೋಂಕಿತ ಪ್ರಕರಣಗಳು ಶೇಕಡಾ 2ಕ್ಕಿಂತ ಕಡಿಮೆ ಇದೆ. ಆದರೆ, ಇದು ಕೇರಳ ಹಾಗೂ ತಮಿಳುನಾಡು ಗಡಿಭಾಗವನ್ನು ಹೊಂದಿರುವುದರಿಂದ ನಿರ್ಲಕ್ಷ್ಯ ಮಾಡುವಂತಿಲ್ಲ. ಈ ನಿಟ್ಟಿನಲ್ಲಿ ಏನೇನು ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ ಎಂಬ ಬಗ್ಗೆ ವಿವರಣೆ ನೀಡುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಚಾಮರಾಜನಗರ ಜಿಲ್ಲೆಯಲ್ಲಿ 9, 10 ಹಾಗೂ ಪಿಯುಸಿ ತರಗತಿಗಳನ್ನು ಪ್ರಾರಂಭಿಸಲು ಈಗಾಗಲೇ ಸೂಚನೆ ಇದೆ. ಕಳೆದ ವರ್ಷದ ಮಾಹಿತಿಯಂತೆ ಜಿಲ್ಲೆಯಲ್ಲಿ 9 ಮತ್ತು 10ನೇ ತರಗತಿಯ 37,580 ವಿದ್ಯಾರ್ಥಿಗಳಿದ್ದು, ಇವರಲ್ಲಿ 1716 ಮಕ್ಕಳು ಹಾಸ್ಟೆಲ್ ಗಳಲ್ಲಿ ವಾಸವಾಗಿದ್ದರು. ಎಸ್ಎಸ್ಎಲ್‌ಸಿಯಿಂದ ಉತ್ತೀರ್ಣರಾಗಿ ಪ್ರಥಮ ಪಿಯುಸಿ ಅಭ್ಯಾಸ ಮಾಡಲಿರುವ 11,600 ಮಕ್ಕಳಿದ್ದು, ಪ್ರಥಮ ಪಿಯುಸಿಯಿಂದ ದ್ವಿತೀಯ ಪಿಯುಸಿಗೆ 7502 ಮಕ್ಕಳು ಉತ್ತೀರ್ಣರಾಗಿದ್ದಾರೆ. ಪ್ರವೇಶ ಪ್ರಕ್ರಿಯೆ ಆರಂಭವಾಗಿದ್ದು, ವಿದ್ಯಾರ್ಥಿಗಳಿಗೆ ಅವಕಾಶ ಕಲ್ಪಿಸಲಾಗಿದೆ. ಜಿಲ್ಲೆಯಲ್ಲಿ 1628 ಶಿಕ್ಷಕರಿದ್ದು, ಇವರಲ್ಲಿ 1328 ಶಿಕ್ಷಕರಿಗೆ ವ್ಯಾಕ್ಸಿನೇಶನ್ ಆಗಿದೆ ಎಂದು ಅಧಿಕಾರಿಗಳು ಸಭೆಯ ಮೂಲಕ ಸಚಿವರ ಗಮನಕ್ಕೆ ತಂದರು. ಆಗ ಮಾತನಾಡಿದ ಸಚಿವರು, ಬಾಕಿ ಉಳಿದಿರುವ 294 ಮಂದಿಗೆ ಶೀಘ್ರವೇ ಲಸಿಕೆ ಹಾಕಿಸಬೇಕು. ಎಲ್ಲರೂ ಸಂಪೂರ್ಣ ವ್ಯಾಕ್ಸಿನೇಶನ್ ಪಡೆಯಬೇಕು ಎಂದು ಸೂಚನೆ ನೀಡಿದರು.

ಸರ್ಕಾರದ ಮಾರ್ಗಸೂಚಿ ಅನುಸರಿಸಿ

ಶಾಲೆಯ ಆರಂಭದ ಸಂದರ್ಭದಲ್ಲಿ ಏನೇನು ಕ್ರಮಗಳನ್ನು ಕೈಗೊಳ್ಳಬೇಕು ಎಂಬ ಸರ್ಕಾರದ ಮಾರ್ಗಸೂಚಿಗಳು ಪ್ರಕಟವಾಗಲಿದೆಯೋ ಅದನ್ನು ತಪ್ಪದೇ ಪಾಲಿಸಬೇಕು. ಇನ್ನು ಹಾಸ್ಟೆಲ್ ಗಳಲ್ಲಿ ಕಲಿಕೆ ಮಾಡುತ್ತಿರುವ ವಿದ್ಯಾರ್ಥಿಗಳ ಆರೋಗ್ಯವೂ ಬಹುಮುಖ್ಯವಾಗಿದ್ದು, ಇಂತಹ ಮಕ್ಕಳ ಸುರಕ್ಷತೆಗೆ ಏನೆಲ್ಲ ಕ್ರಮಗಳನ್ನು ತೆಗೆದುಕೊಳ್ಳಬಹುದು ಎಂಬ ಬಗ್ಗೆ ಪರಿಶೀಲನೆ ನಡೆಸಿ, ಅಲ್ಲದೆ, ಸರ್ಕಾರದ ಮಟ್ಟದಲ್ಲಿ ಯಾವ ತೀರ್ಮಾನಗಳನ್ನು ತೆಗೆದುಕೊಳ್ಳಬಹುದು ಎಂಬ ಬಗ್ಗೆ ತಾವೂ ಗಮನಹರಿಸುವುದಾಗಿ ಸಚಿವರು ಇದೇ ವೇಳೆ ತಿಳಿಸಿದರು.

ಮನೆಗೇ ಬಿಸಿಯೂಟ ಆಹಾರ ಸಾಮಗ್ರಿ ತಲುಪಿಸಿ

ಬಿಸಿಯೂಟ ಸೌಲಭ್ಯದ ಅಡಿ ಬರುವ ವಿದ್ಯಾರ್ಥಿಗಳಿಗೆ 2 ತಿಂಗಳ ಅವಧಿಯ ಧಾನ್ಯಗಳ ಸಹಿತ ಆಹಾರ ಸಾಮಗ್ರಿಗಳನ್ನು ಅವರ ಮನೆಗೆ ಯಾವುದೇ ಲೋಪವಾಗದಂತೆ ತಲುಪಿಸುವ ಕೆಲಸಗಳು ಆಗಬೇಕು. ಇನ್ನುಳಿದಂತೆ ಶಾಲಾ-ಕಾಲೇಜು ಆವರಣಗಳಲ್ಲಿ ಸ್ವಚ್ಛತೆ, ಮುಂಜಾಗ್ರತಾ ಕ್ರಮಗಳನ್ನು ಕಟ್ಟುನಿಟ್ಟಾಗಿ ಅನುಸರಿಸಬೇಕು ಎಂದು ಸಚಿವರು ಅಧಿಕಾರಿಗಳಿಗೆ ಇದೇ ವೇಳೆ ಸೂಚನೆ ನೀಡಿದರು.

ಜಾಗ್ರತೆಯಿಂದಿರಲು ತಾಲೂಕು ಆಡಳಿತಗಳಿಗೆ ಸೂಚನೆ

ತಾಲೂಕು ಆಡಳಿತಗಳು ಸದಾ ಜಾಗೃತವಾಗಿರಬೇಕು. ಕೋವಿಡ್ 19ರ ಈ ಸಂದರ್ಭದಲ್ಲಿ ಎಂತಹ ಪರಿಸ್ಥಿತಿ ಬಂದರೂ ಎದುರಿಸಲು ಸಜ್ಜುಗೊಂಡಿರಬೇಕು. ಏನೇ ಸಮಸ್ಯೆಗಳಿದ್ದರೆ ಗಮನಕ್ಕೆ ತನ್ನಿ. ಸರ್ಕಾರದಿಂದ ಆಗಬೇಕಿರುವ ಕೆಲಸವನ್ನು ಮಾಡಿಸಿಕೊಡಲು ನಾನೂ ಸಹ ಅಗತ್ಯ ನೆರವನ್ನು ನೀಡಲು ಸಿದ್ಧನಿದ್ದೇನೆ. ಇನ್ನು ತಾಲೂಕು ಆಸ್ಪತ್ರೆಗಳಿಗೆ ನಾನು ಯಾವಾಗ ಬೇಕಿದ್ದರೂ ಭೇಟಿ ನೀಡಬಹುದು ಎಂದು ಸಹಕಾರ ಹಾಗೂ ಮೈಸೂರು ಮತ್ತು ಚಾಮರಾಜನಗರ ಜಿಲ್ಲಾ ಉಸ್ತುವಾರಿ ಸಚಿವರಾದ ಎಸ್.ಟಿ. ಸೋಮಶೇಖರ್ ಅವರು ಅಧಿಕಾರಿಗಳಿಗೆ ಸೂಚಿಸಿದರು.

ಕೋವಿಡ್ 3ನೇ ಅಲೆ ಎಲ್ಲ ಕಡೆ ಪ್ರಾರಂಭವಾಗಿದೆ. ನಮ್ಮ ರಾಜ್ಯದಲ್ಲಿ ಇದರ ಪ್ರಭಾವ ಬೀರಬಾರದು ಎಂದಾದರೆ, ನಾವು-ನೀವು ಜಾಗ್ರತೆ ವಹಿಸಬೇಕಿದೆ. ಜಿಲ್ಲೆಯಲ್ಲಿ ಯಾವುದೇ ಸಮಸ್ಯೆಗಳಿದ್ದರೂ ಅದನ್ನು ಬಗೆಹರಿಸುವುದು ನಮ್ಮ ಆದ್ಯತೆಯಾಗಿದ್ದು, ಆಸ್ಪತ್ರೆಗಳಲ್ಲಿ ಅಗತ್ಯ ವ್ಯವಸ್ಥೆಗಳ ಬಗ್ಗೆ ಅಧಿಕಾರಿಗಳು ಗಮನಹರಿಸಬೇಕು ಎಂದು ಸಚಿವರು ಸೂಚಿಸಿದರು.

ಕೋವಿಡ್ ಕೇರ್ ಸೆಂಟರ್, ಚೆಕ್ ಪೋಸ್ಟ್ ಭೇಟಿಗೆ ಸೂಚನೆ

ಕೋವಿಡ್ ಕೇರ್ ಸೆಂಟರ್, ತಾಲೂಕುಗಳ ಸ್ಥಿತಿಗತಿಗಳ ಬಗ್ಗೆ ನಿರಂತರವಾಗಿ ನಿಗಾ ವಹಿಸುವ ಜವಾಬ್ದಾರಿ ಆಯಾ ತಹಸೀಲ್ದಾರ್ ಗಳದ್ದಾಗಿರುತ್ತದೆ. ಅಲ್ಲದೆ, ಸಂಬಂಧಪಟ್ಟ ತಹಸೀಲ್ದಾರರು ತಮ್ಮ ಗಡಿ ಭಾಗದ ಚೆಕ್ ಪೋಸ್ಟ್ ಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಬೇಕು. ಸೂಕ್ತ ಸಲಹೆ-ಸೂಚನೆಗಳನ್ನು ಕೊಡುವ ಮೂಲಕ ಕೊರೋನಾವನ್ನು ಸಂಪೂರ್ಣ ಹತೋಟಿಗೆ ತರಲು ಶ್ರಮಿಸಬೇಕು ಎಂದು ಸಚಿವರಾದ ಎಸ್.ಟಿ.ಸೋಮಶೇಖರ್ ಅವರು ಸಭೆಯಲ್ಲಿ ಸೂಚನೆ ನೀಡಿದರು.

ಕುಡಿಯುವ ನೀರಿನ ಸಮಸ್ಯೆ ಬಗೆಹರಿಸಿ

ಜಿಲ್ಲೆಯಲ್ಲಿ ಕುಡಿಯುವ ನೀರಿನ ಕೊರತೆಗಳ ಬಗ್ಗೆ ದೂರುಗಳು ಬರಬಾರದು. ಈ ಎರಡು ತಾಲೂಕುಗಳಲ್ಲಿಯೂ ತಹಸೀಲ್ದಾರರ ಸಹಿತ ಸಂಬಂಧಪಟ್ಟ ಅಧಿಕಾರಿಗಳು ಕ್ರಮವಹಿಸಬೇಕು. ಎಲ್ಲ ನಾಗರಿಕರಿಗೂ ಕುಡಿಯುವ ನೀರು ಲಭ್ಯವಾಗಬೇಕು. ಆ ನಿಟ್ಟಿನಲ್ಲಿ ಏನೇನು ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂಬುದರ ಬಗ್ಗೆ ನನ್ನ ಗಮನಕ್ಕೆ ತರಬೇಕು. ಅಲ್ಲದೆ, ಅಧಿಕಾರಿಗಳು ಸೂಕ್ತ ಕ್ರಮವಹಿಸಿ ಕಾರ್ಯನಿರ್ವಹಣೆ ಮಾಡಬೇಕು. ಎಲ್ಲೆಲ್ಲಿ ಸಮಸ್ಯೆಗಳಿವೆ ಎಂಬುದನ್ನು ಪಟ್ಟಿ ಮಾಡಿ, ಆದ್ಯತೆಗಳನುಸಾರ ಅವುಗಳನ್ನು ಬಗೆಹರಿಸಬೇಕು ಎಂದು ಸಚಿವರು ಅಧಿಕಾರಿಗಳಿಗೆ ಸೂಚನೆ ನೀಡಿದರು.

ಆಸ್ಪತ್ರೆಗಳಿಗೆ ಖುದ್ದು ಭೇಟಿ ನೀಡುವೆ

ತಾಲೂಕು ಆಸ್ಪತ್ರೆಗಳಿಗೆ ನಾನು ಶೀಘ್ರದಲ್ಲೇ ಭೇಟಿ ನೀಡುತ್ತೇನೆ. ನಾನು ಭೇಟಿ ನೀಡುವವರೆಗೆ ಸಮಸ್ಯೆಗಳ ಬಗ್ಗೆ ಕಾಯುವುದು ಬೇಡ. ಅಗತ್ಯತೆಗಳ ಕುರಿತು ನನ್ನ ಗಮನಕ್ಕೆ ತಂದರೆ ಬಗೆಹರಿಸುವೆ. ತಾಲೂಕು ಆಡಳಿತ ಸದಾ ಜಾಗ್ರತೆಯಿಂದ ಕೆಲಸ ಮಾಡಬೇಕು ಎಂದು ಸಚಿವರಾದ ಸೋಮಶೇಖರ್ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದರು.

ಈ ವೇಳೆ ಶಾಸಕರಾದ ನರೇಂದ್ರ ಅವರು, ಜಿಲ್ಲಾಧಿಕಾರಿಗಳು, ಜಿಲ್ಲಾ ವೈದ್ಯಾಧಿಕಾರಿಗಳು, ತಾಲೂಕು ವೈದ್ಯಾಧಿಕಾರಿಗಳು, ತಹಸೀಲ್ದಾರ್ ರವರು, ಜಿಲ್ಲಾ ವರಿಷ್ಠಾಧಿಕಾರಿಗಳು, ಡಿಡಿಪಿಐ, ಬಿಇಒಗಳು ಸೇರಿದಂತೆ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.

key words : karnataka-mysore-chamarajanagara-s.t.somashekar-meeting-covid