ಕರ್ನಾಟಕ: ಜೆಬಿ ಕಾವಲ್ ಮೀಸಲು ಅರಣ್ಯ ಪರಿವರ್ತಿನೆಯ ಯೋಜನೆಯನ್ನು ವಿರೋಧಿಸಿ ನಾಗರಿಕರಿಂದ ಸಿಎಂ ಹಾಗೂ ಇತರರಿಗೆ ಪತ್ರ.

ಬೆಂಗಳೂರು, ಅಕ್ಟೋಬರ್ 13, 2021 (www.justkannada.in): ಬೆಂಗಳೂರಿನ ಜೆಬಿ ಕಾವಲ್ ಮೀಸಲು ಅರಣ್ಯ ಪ್ರದೇಶದಲ್ಲಿ ೩೭೦ ಎಕರೆ ವ್ಯಾಪ್ತಿಯಲ್ಲಿ ‘ಟ್ರೀ ಪಾರ್ಕ್’ ಅನ್ನು ಸ್ಥಾಪಿಸುವ ಸರ್ಕಾರದ ಇತ್ತೀಚಿನ ಪ್ರಸ್ತಾವನೆಯನ್ನು ವಿರೋಧಿಸಿ ಬೆಂಗಳೂರಿನ ಪ್ರಜ್ಞಾವಂತ ನಾಗರಿಕರು ಅಕ್ಟೋಬರ್ ೧೩ರಂದು ಕರ್ನಾಟಕದ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ, ಅರಣ್ಯ ಇಲಾಖೆಯ ಅಧಿಕಾರಿಗಳು, ತೋಟಗಾರಿಕಾ ಸಚಿವರಾದ ಎನ್. ಮುನಿರತ್ನ ಹಾಗೂ ಅರಣ್ಯ ಸಚಿವರಾದ ಉಮೇಶ್ ವಿಶ್ವನಾಥ್ ಕತ್ತಿ ಅವರಿಗೆ ಪತ್ರವನ್ನು ಬರೆದು ಈ ಪ್ರಸ್ತಾವನೆಯನ್ನು ಕೈಬಿಡುವಂತೆ ಮನವಿ ಮಾಡಿದ್ದಾರೆ.

ಮಾಜಿ ಭಾರತೀಯ ಅರಣ್ಯ ಸೇವೆ ಅಧಿಕಾರಿ ಡಾ. ಯು.ವಿ. ಸಿಂಗ್ ಅವರು ಅರಣ್ಯ ಹಾಗೂ ‘ಟ್ರೀ ಪಾರ್ಕ್’ಗಳೆರಡೂ ಬೇರೆ ಬೇರೆ ರೀತಿಯ ಭೂದೃಶ್ಯಗಳು ಎಂದು ಅಭಿಪ್ರಾಯಿಸಿದ್ದಾರೆ. “ಅರಣ್ಯಗಳು ಮಾನವೇತರ ಕೇಂದ್ರಿತವಾಗಿದ್ದರೆ, ‘ಟ್ರೀ ಪಾರ್ಕ್’ಗಳು ಮಾನವ ಕೇಂದ್ರಿತವಾಗಿರುವಂತಹ ಭೂದೃಶ್ಯಗಳು. ‘ಟ್ರೀ ಪಾರ್ಕ್’ಗಳನ್ನು ಮೀಸಲು ಅರಣ್ಯಗಳನ್ನು ಬಲಿ ಕೊಟ್ಟು ನಿರ್ಮಿಸಲಾಗುವುದಿಲ್ಲ. ನೈಸರ್ಗಿಕವಾಗಿರುವಂತಹ ಅರಣ್ಯ ರೂಪುಗೊಳ್ಳಲು ಸಾವಿರಾರು ವರ್ಷಗಳೇ ಬೇಕಾಗುತ್ತದೆ. ನಾವು ಈಗಾಗಲೇ ಬೃಹತ್ ಪ್ರಮಾಣದ ಭೂಪ್ರದೇಶವನ್ನು ಕಳೆದುಕೊಂಡಿದ್ದೇವೆ,” ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ವನ್ಯಜೀವಿ ಕಾರ್ಯಕರ್ತ ಜೋಸೆಫ್ ಹೂವರ್ ಅವರು ಈ ಕುರಿತು ಮಾತನಾಡಿ, “ಮಾನ್ಯ ಸರ್ವೋಚ್ಛ ನ್ಯಾಯಾಲಯವು ಒಂದು ಕೆರೆ ಕೆರೆಯಾಗಿಯೇ ಉಳಿಯಬೇಕು ಎಂದು ಆದೇಶ ನೀಡಿದ್ದರೂ ಸಹ, ಕಳೆದ ವರ್ಷ ಜೆಬಿ ಕಾವಲ್‌ನ ಅಂಚಿನಲ್ಲಿದ್ದಂತಹ ಸುಮಾರು ೫.೮೯ ಎಕರೆ ಪ್ರದೇಶ ವ್ಯಾಪ್ತಿಯ ಕೆರೆಯೊಂದನ್ನು ವಸತಿ ಬಡಾವಣೆಯಾಗಿ ಪರಿವರ್ತಿಸಲಾಗಿದೆ. ಈಗ ತೋಟಗಾರಿಕಾ ಇಲಾಖೆ ಉಳಿದಿರುವ ಅರಣ್ಯ ಪ್ರದೇಶವನ್ನು ಒಂದು ಉದ್ಯಾನವನ್ನಾಗಿ ಪರಿವರ್ತಿಸಲು ಹೊರಟಿದೆ. ಕರ್ನಾಟಕ ಅರಣ್ಯ ಕಾಯ್ದೆ ಹಾಗೂ ಅರಣ್ಯ ಸಂರಕ್ಷಣಾ ಕಾಯ್ದೆಗಳ ಪ್ರಕಾರ ಅರಣ್ಯ ಭೂದೃಶ್ಯವನ್ನು ಉದನ್ಯಾವನ್ನಾಗಿ ಪರಿವರ್ತಿಸುವಂತಿಲ್ಲ ಎಂದು ಸೂಚಿಸಿದ್ದರೂ ಸಹ ಅರಣ್ಯ ಇಲಾಖೆಯನ್ನು ಯೋಜನೆಯನ್ನು ಹಸಿರೀಕರಣಗೊಳಿಸಲು ಬಲವಂತಪಡಿಸಲಾಗುತ್ತಿದೆ,” ಎಂದರು.

“ಕಳೆದ ೬೦ ವರ್ಷಗಳಲ್ಲಿ ಬೆಂಗಳೂರಿನ ಉತ್ತರ ಭಾಗದಲ್ಲಿ ವಿವಿಧ ಅಭಿವೃದ್ಧಿ ಚಟುವಟಿಕೆಗಳಿಗಾಗಿ ೪,೯೪೭ ಎಕರೆಗೂ ಮಿಗಲಾದ ಮೀಸಲು ಅರಣ್ಯ ಪ್ರದೇಶವನ್ನು ಪರಿವರ್ತಿಸಲಾಗಿದೆ. ಈ ಪೈಕಿ ದೊಡ್ಡ ಪ್ರಮಾಣದ ಭೂಮಿಯನ್ನು ವಿಶ್ವವಿದ್ಯಾಲಯಗಳ ಸ್ಥಾಪನೆ, ರಕ್ಷಣಾ ಚಟುವಟಿಕೆಗಳು ಹಾಗೂ ಕೈಗಾರಿಕೆಗಳಂತಹ ಇತರೆ ಉದ್ದೇಶಗಳಿಗಾಗಿಯೇ ಬಳಸಿಕೊಳ್ಳಲಾಗಿದೆ.

ಹತ್ತಕ್ಕೂ ಹೆಚ್ಚಿನ ಸಂಖ್ಯೆಯ ಬಡಾವಣೆಗಳನ್ನು ಅರಣ್ಯ ಪ್ರದೇಶಗಳನ್ನು ಅತಿಕ್ರಮಿಸಿ ನಿರ್ಮಿಸಲಾಗಿದೆ. ಅರಣ್ಯ ಅಧಿಕಾರಿಗಳು ಹೇಳುವಂತೆ ಈ ಪೈಕಿ ಬಹುತೇಕ ಭೂಮಿಯನ್ನು ಅಧಿಸೂಚಿತಗೊಳಿಸಿಲ್ಲ ಹಾಗೂ ಆ ಭೂಮಿಯನ್ನು ರೂಪಾಂತರಗೊಳಿಸಲಾಗಿದೆಯೇ ಎಂದು ತಿಳಿದುಕೊಳ್ಳಲು ಕಂದಾಯ ಇಲಾಖೆಯ ಕಡತಗಳೊಂದಿಗೆ ಸರಿಹೊಂದಿಸಿ ನೋಡುತ್ತಿದೆ. ೪,೯೪೭ ಎಕರೆಗಳಲ್ಲದೆ, ಬೆಂಗಳೂರಿನಲ್ಲಿ ಸುಮಾರು ೧,೦೦೦ ಎಕರೆಗೂ ಮಿಗಿಲಾಗಿ ಅರಣ್ಯ ಭೂಮಿಯನ್ನು ಒತ್ತುವರಿ ಮಾಡಿಕೊಳ್ಳಲಾಗಿದೆ. ನಾವು ಈ ಪರಿವರ್ತನೆ ಆಗದಿರುವಂತಹ ಭೂಮಿಯನ್ನು ವಶಕ್ಕೆ ತೆಗೆದುಕೊಳ್ಳುವ ಪ್ರಯತ್ನದಲ್ಲಿದ್ದೇವೆ,” ಎಂದು ಹಿರಿಯ ಅರಣ್ಯ ಅಧಿಕಾರಿಯೊಬ್ಬರು ವಿವರಿಸಿದ್ದಾರೆ.

ಮಲ್ಲೆಗಾಲ ವ್ಯಾಲಿ ಮೀಸಲು ಅರಣ್ಯದ ಸುಮಾರು ೨,೦೫೪ ಎಕರೆ ಭೂಮಿ ಲಗ್ಗೆರೆ ಹಾಗೂ ಯಶವಂತಪುರ ಪ್ರದೇಶಗಳಿಗೆ ಬಲಿಯಾಯಿತು. ಅದೇ ರೀತಿ ಮಲ್ಲತಹಳ್ಳಿ ಮೀಸಲು ಅರಣ್ಯದ ೨೮೫ ಎಕರೆ ಭೂಮಿಯನ್ನು ವಿಶ್ವೇಶ್ವರಯ್ಯ ಬಡಾವಣೆ ಅಭಿವೃದ್ಧಿಯ ಹೆಸರಿನಲ್ಲಿ ಕಬಳಿಸಲಾಯಿತು. ಹೆಬ್ಬಾಳದಲ್ಲಿ ೧೦೦ ಎಕರೆ ಅರಣ್ಯ ಭೂಮಿಯನ್ನು ಹೆಬ್ಬಾಳ ಪಶುವೈದ್ಯಕೀಯ ಕಾಲೇಜು ನಿರ್ಮಾಣಕ್ಕಾಗಿ ಪರಿವರ್ತಿಸಿದರೆ, ಜಕ್ಕೂರಿನ ೩೭೫ ಎಕರೆ ಅರಣ್ಯ ಪ್ರದೇಶವನ್ನು ವಿಮಾನ ತರಬೇತಿ ಶಾಲೆಗಾಗಿ ಉಪಯೋಗಿಸಲಾಗಿದೆ. ತಿಂಡ್ಲು ಹಾಗೂ ಅಲ್ಲಸಂದ್ರ ಅರಣ್ಯಗಳ ೬೫೦ ಎಕರೆ ಹಾಗೂ ಕೆಂಚೇನಹಳ್ಳಿ ಮೀಸಲು ಅರಣ್ಯ ಪ್ರದೇಶದ ಪೈಕಿ ೩೪೪ ಎಕರೆ ಭೂಮಿ, ಜರಕಬಂಡೆ ಸ್ಯಾಂಡಲ್ ರಿಸರ್ವ್ ಪೈಕಿ ೪೦೦ ಎಕರೆ, ಮಾಚೊಹಳ್ಳಿ ಮೀಸಲು ಅರಣ್ಯ ಪೈಕಿ ೧೪೦ ಎಕರೆ ಪ್ರದೇಶವನ್ನು ಕಳೆದುಕೊಂಡಿದ್ದೇವೆ. ನಾಗದೇವನಹಳ್ಳಿ ಅರಣ್ಯದಲ್ಲಿ ೨೦೦ ಎಕರೆ ಭೂಮಿಯನ್ನು ಸರ್ಕರಿ ಮುದ್ರಣಾಲಯಕ್ಕೆ ಹಾಗೂ ಅರಣ್ಯ ಅಧಿಕಾರಿಗಳ ಬಡಾವಣೆ ನಿರ್ಮಾಣಕ್ಕೆ, ಪೀಣ್ಯ ಅರಣ್ಯ ಭೂಮಿಯ ಪೈಕಿ ೫೯೯ ಎಕರೆ ಭೂಮಿಯನ್ನು ಈ ಹಿಂದೆ ಇದ್ದಂತಹ ಹೆಚ್‌ಎಂಟಿ ಕಾರ್ಖಾನೆ ನಿರ್ಮಾಣಕ್ಕಾಗಿ ವಶಪಡಿಸಿಕೊಳ್ಳಲಾಗಿತ್ತು.

ಸುದ್ದಿ ಮೂಲ: ಇಂಡಿಯನ್ ಎಕ್ಸ್ಪ್ರೆಸ್

Key words: Karnataka-Letter – CM – others -against t- JB Caval- reserve forest -conversion -plan.