ಸರಕಾರಿ ನೌಕರರ ತುಟ್ಟಿಭತ್ಯೆಗೆ ತಡೆ ನೀಡುವ ಮೂಲಕ ‘ ಕರೋನಾ ವಾರಿಯರ್ಸ್’ ಜೇಬಿಗೇ ಕತ್ತರಿ..

 

ಬೆಂಗಳೂರು, ಮೇ 06,2020 : ( www.justkannada.in news ) ಕರೋನಾ ವಾರಿಯರ್ಸ್ ಆಗಿ ಕೆಲಸ ಮಾಡುತ್ತಿರುವ ರಾಜ್ಯ ಸರಕಾರಿ ನೌಕರರ ತುಟ್ಟಿಭತ್ಯೆಗೆ ತಡೆ ನೀಡುವ ಮೂಲಕ ರಾಜ್ಯ ಸರಕಾರ ವಾರಿಯರ್ಸ್ ಜೇಬಿಗೇ ಕತ್ತರಿ ಹಾಕಿದೆ.

ಕರೋನ ಆರ್ಥಿಕ ಬಿಕ್ಕಟ್ಟು ಹಿನ್ನೆಲೆಯಲ್ಲಿ ಜನವರಿ 2020 ಜುಲೈ 20 ಮತ್ತು ಜನವರಿ 21 ರ ಮೂರು ತುಟ್ಟಿ ಭತ್ಯೆಯನ್ನು ತಡೆ ಹಿಡಿಯುವುದಾಗಿ ಸರಕಾರ ಮೇ 05 ರಂದು ಆದೇಶಿಸಿದೆ. ಇದು ಒಂದು ರೀತಿ ನಮಗೆ ಶಿಕ್ಷೆಯ ರೂಪದಲ್ಲಿ ಪ್ರಕಟವಾಗಿದೆ ಎಂಬುದು ಸರಕಾರಿ ನೌಕರರ ಅಭಿಮತ.
ವಾಸ್ತವವೇನೆಂದರೆ ಈ ಮೂಲಕ ಪ್ರತ್ತಿಯೊಬ್ಬ ಸರಕಾರಿ ನೌಕರ, ರಾಜ್ಯ ಸರಕಾಕ್ಕೆ ಆತನ ಒಂದು ತಿಂಗಳ ವೇತನಕ್ಕಿಂತಲೂ ಹೆಚ್ಚು ಹಣವನ್ನು ನೀಡಿದಂತಾಗುತ್ತದೆ.

 

ಸರಕಾರ ತಡೆಹಿಡಿದಿರುವ ಪ್ರತೀ ಆರು ತಿಂಗಳಿಗೊಮ್ಮೆ ನೌಕರರಿಗೆ ನೀಡಬೇಕಾಗಿದ್ದ ತುಟ್ಟಿಭತ್ಯೆಯ ಈ ಮೊತ್ತವು ಒಬ್ಬ ನೌಕರನ ಒಂದು ತಿಂಗಳ ವೇತನಕ್ಕಿಂತಲೂ ಹೆಚ್ಚು. ಕರಾರುವಕ್ಕಾಗಿ ಒಬ್ಬ ನೌಕರನ ಮೂಲ ವೇತನಕ್ಕೆ ಬರಬೇಕಾಗಿದ್ದ ಕನಿಷ್ಠ ತುಟ್ಟಿಭತ್ಯೆಯನ್ನು ಲೆಕ್ಕ ಹಾಕಿದರೆ ಈ ಅಂಶ ಸ್ಪಷ್ಟವಾಗುತ್ತದೆ.

ಒಂದೆಡೆ, ಸರಕಾರ ಖಾಸಗೀ ಕಂಪನಿಗಳಿಗೆ ಮತ್ತು ಖಾಸಗೀ ಮಾಲೀಕರಿಗೆ ಕರೋನಾ ಅವಧಿಯಲ್ಲಿ ಕೆಲಸ ಮಾಡದಿದ್ದರೂ ನಿಮ್ಮ ನೌಕರರಿಗೆ ಸಂಪೂರ್ಣ ಸಂಬಳ ಹಾಗೂ ಅಗತ್ಯ ಸೌಲಭ್ಯ ಕಲ್ಪಿಸಬೇಕೆಂದು ಹೇಳುತ್ತದೆ. ಮತ್ತೊಂದೆಡೆ ಅದೇ ಸರಕಾರ, ಹಗಲಿರುಳೂ ಕರೋನಾ ವಾರಿಯರ್ಸ್ ಆಗಿ ಕೆಲಸ ಮಾಡುತ್ತಿರುವ ಸರಕಾರಿ ನೌಕರರ ತುಟ್ಟಿಭತ್ಯೆಯನ್ನು ತಡೆಹಿಡಿಯಲು ಆದೇಶಿಸುತ್ತದೆ. ಇದ್ಯಾವ ಬಗೆಯ ನ್ಯಾಯ ಎಂಬುದು ಬಹುತೇಕ ನೌಕರರ ಅಭಿಪ್ರಾಯ .
ಸರಕಾರಿ ನೌಕರರು ಈಗಾಗಲೇ ಒಂದು ದಿನದ ವೇತನವನ್ನು ಕರೋನ ನಿಧಿಗೆ ಕೊಟ್ಟಿದ್ದಾರೆ. ಮತ್ತು ಈಗಲೂ ಸರಕಾರ ಕಾಲಕಾಲಕ್ಕೆ ನೌಕರರಿಗೆ ಬರಬೇಕಾದ ತುಟ್ಟಿಭತ್ಯೆಯನ್ನು ಮಂಜೂರು ಮಾಡಿದರೆ ಅದರ ಸಂಪೂರ್ಣ ಮೊತ್ತವನ್ನು ಸರಕಾರಕ್ಕೆ ವಾಪಸ್ ನೀಡಲು ನೌಕರರು ಸಿದ್ಧರಿದ್ದಾರೆ.

ಮುಖ್ಯಮಂತ್ರಿ ಯಡಿಯೂರಪ್ಪ, ಯಾವಾಗಲೂ ಸರಕಾರಿ ನೌಕರರ ಪರವಾಗಿರುವವರು. ಆದರೆ ಈ ಬಾರಿ ಯಾಕೋ ಅಧಿಕಾರಿಗಳು ಅವರಿಗೆ ತಪ್ಪು ಮಾಹಿತಿ ನೀಡಿ ದಾರಿ ತಪ್ಪಿಸುತ್ತಿದ್ದಾರೆಂಬುದು ಈ ನೌಕರರ ಅಭಿಪ್ರಾಯವಾಗಿದೆ.

ಈಗಲೂ ಸರಕಾರ ತನ್ನ ಕಾರ್ಯಕ್ರಮಗಳ ಅನುಷ್ಠಾನಕ್ಕಾಗಿ ಹಗಲಿರುಳು ದುಡಿಯುತ್ತಿರುವ ಸರಕಾರಿ ನೌಕರರ ಈ ಆದೇಶವನ್ನು ಪುನರ್ಪರಿಶೀಲಿಸಿ ತುಟ್ಟಿಭತ್ಯೆಯನ್ನು ಮಂಜೂರು ಮಾಡಿ, ಬಳಿಕ ಆ ಹಣವನ್ನು ಕರೋನಾ ನಿಧಿಗೆ ವಾಪಸ್ ಪಡೆಯಲಿ ಎಂಬುದೇ ಮುಖ್ಯಂತ್ರಿಗಳಿಗೆ ಸರಕಾರಿ ನೌಕರರ ಅಹವಾಲಾಗಿದೆ.

key words : karnataka-governament-employee-da-cut