ಕರವೇ ರಾಜ್ಯಾಧ್ಯಕ್ಷ ನಾರಾಯಣಗೌಡರಿಗೆ ಜಾಮೀನು ಮಂಜೂರು.

ಬೆಂಗಳೂರು ಗ್ರಾಮಾಂತರ,ಜನವರಿ,6,2024(www.justkannada.in):  ಕನ್ನಡ ನಾಮಫಲಕ ಕಡ್ಡಾಯಕ್ಕೆ ಆಗ್ರಹಿಸಿ ಪ್ರತಿಭಟನೆ ನಡೆಸಿದ್ದ ವೇಳೆ ಬಂಧಿತರಾಗಿದ್ದ ಕರ್ನಾಟಕ ರಕ್ಷಣಾ ವೇದಿಕೆ  ರಾಜ್ಯಾಧ್ಯಕ್ಷ ಟಿ.ಎ ನಾರಾಯಣಗೌಡರಿಗೆ ಜಾಮೀನು ಮಂಜೂರಾಗಿದೆ.

ದೇವನಹಳ್ಳಿಯ 5ನೇ ಹೆಚ್ಚುವರಿ ಸೆಷನ್ಸ್ ಕೋರ್ಟ್ ನ್ಯಾಯಾಧೀಶ ಬಿರಾದಾರ ದೇವೇಂದ್ರಪ್ಪ ಅವರು ಟಿ.ಎ ನಾರಾಯಣಗೌಡರಿಗೆ ಜಾಮೀನು ಮಂಜೂರು ಮಾಡಿದ್ದಾರೆ.

ಬೆಂಗಳೂರಲ್ಲಿ ವಾಣಿಜ್ಯ ಮಳಿಗೆ, ಕೈಗಾರಿಕೆಗಳಲ್ಲಿ ನಾಮಫಲಕವನ್ನ ಕಡ್ಡಾಯವಾಗಿ ಕನ್ನಡದಲ್ಲಿ ಬರೆಯಬೇಕು ಎಂದು ಆಗ್ರಹಿಸಿ ಕರವೇಯಿಂದ ಬೃಹತ್ ಪ್ರತಿಭಟನೆ ನಡೆದಿತ್ತು. ಈ ವೇಳೆ ಕರವೇ ಕಾರ್ಯಕರ್ತರು ಕನ್ನಡವಿಲ್ಲದ ನಾಮಫಲಕಗಳ ಮೇಲೆ ದಾಳಿ ಮಾಡಿ ನಾಮಫಲಕಗಳನ್ನ ಕಿತ್ತೆಸೆದಿದ್ದರು.  ಈ ಸಮಯದಲ್ಲಿ ಕೆಲ ಕಡೆ ಕಲ್ಲನ್ನೂ ತೂರಾಲಾಗಿತ್ತು ಎನ್ನಲಾಗಿದೆ.

ಈ ಸಂಬಂಧ ಪ್ರತಿಭಟನೆಯಲ್ಲಿ ಭಾಗವಹಿಸಿದ್ದ ಕರವೇ ರಾಜ್ಯಾಧ್ಯಕ್ಷ ಟಿ.ಎ ನಾರಾಯಣಗೌಡ ಸೇರಿದಂತೆ 32 ಮಂದಿಯ ವಿರುದ್ಧ ಪ್ರಕರಣ ದಾಖಲಾಗಿತ್ತು.  ಟಿ.ಎ ನಾರಾಯಣಗೌಡರ ವಿರುದ್ದ ಚಿಕ್ಕಜಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ನಂತರ ಟಿ.ಎ ನಾರಾಯಣಗೌಡರನ್ನ ಬಂಧಿಸಿ ಜೈಲಿಗೆ ಕಳುಹಿಸಲಾಗಿತ್ತು.

ಪ್ರಕರಣ ಸಂಬಂಧ  ಜಾಮೀನು ಕೋರಿ ಕರವೇ ಅಧ್ಯಕ್ಷ ನಾರಾಯಣಗೌಡ ಅರ್ಜಿ ಸಲ್ಲಿಸಿದ್ದರು. ಈ ಅರ್ಜಿಯನ್ನು ವಿಚಾರಣೆ ನಡೆಸಿದ  ನ್ಯಾಯಮೂರ್ತಿ ಬಿರಾದಾರ ದೇವೇಂದ್ರಪ್ಪ ಅವರು, ತೀರ್ಪನ್ನು ಇಂದಿಗೆ ಕಾಯ್ದಿರಿಸಿದ್ದರು. ಇದೀಗ ತೀರ್ಪು ಪ್ರಕಟಿಸಿದ್ದು ಟಿ.ಎ ನಾರಾಯಣಗೌಡರಿಗೆ ಜಾಮೀನು ಮಂಜೂರು ಮಾಡಲಾಗಿದೆ.

Key words: Kannada organization -State President- Narayana Gowda –granted- bail.