ತುರ್ತುಕ್ರಮ: ಬಹುಪಾಲು ಕನ್ನಡವಿರದ ನಾಮಫಲಕ, ಹೋರ್ಡಿಂಗ್ ತೆರವು.

ಬೆಳಗಾವಿ, ಡಿಸೆಂಬರ್, 30, 2023(www.justkannada.in): ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕಳೆದ ಎರಡು ದಿನಗಳ ಹಿಂದೆ ತುರ್ತಾಗಿ ಉನ್ನತ ಮಟ್ಟದ ಸಭೆ ನಡೆಸಿ ರಾಜ್ಯಾದ್ಯಂತ  ನಾಮಫಲಕ ನಿಯಮ ಪಾಲಿಸದವರಿಗೆ ಫೆಬ್ರುವರಿ 28ರ ಗಡುವು ನೀಡಿದ ನಂತರ ಬೆಳಗಾವಿಯಲ್ಲೂ ಮಹಾನಗರ ಪಾಲಿಕೆ ಆಯುಕ್ತರು ಇಂಗ್ಲೀಷ್ ಮತ್ತು ಮರಾಠಿಯೇ ತುಂಬಿರುವ ಹೋರ್ಡಿಂಗ್ ಗಳನ್ನು ತೆರುವು ಮಾಡುವ ಕಾರ್ಯಾಚರಣೆ ಆರಂಭಿಸಿದ್ದಾರೆ.

ಬೆಳಗಾವಿಯ ಸಿಪಿಎಡ್ ಮೈದಾನದಲ್ಲಿ ಬರುವ ಜನವರಿ 5 ರಿಂದ 14 ರವರೆಗೆ ನಡೆಯುವ “ಅನ್ನೋತ್ಸವ”ದ ನಾಮಫಲಕಗಳಲ್ಲಿ ಮರಾಠಿ ಮತ್ತು ಇಂಗ್ಲೀಷ್ ತುಂಬಿದ್ದನ್ನು ಸಾಮಾಜಿಕ ಜಾಲತಾಣದಲ್ಲಿ ಮತ್ತು ಮುದ್ರಣ ಮಾಧ್ಯಮದಲ್ಲಿ ನಿನ್ನೆ ಎತ್ತಿ ತೋರಿಸಲಾಗಿತ್ತು.

ಇಂದು ಶನಿವಾರ ಮುಂಜಾನೆ ಕಾರ್ಯಾಚರಣೆ ಆರಂಭಿಸಿದ ಪಾಲಿಕೆ ಆಯುಕ್ತ ಅಶೋಕ ದುಡಗುಂಟಿ ಅವರು, ಪ್ರತಿಶತ 60 ರಷ್ಟು ಕನ್ನಡವಿರದ ಹೋರ್ಡಿಂಗ್ ಗಳನ್ನು ತೆರುವು ಮಾಡಲು ಸೂಚಿಸಿದರು. ನಗರದ ಅನೇಕ ಕಡೆಗಳಲ್ಲಿದ್ದಇಂಥ ಬೃಹತ್ ನಾಮಫಲಕಗಳನ್ನು ಪಾಲಿಕೆ ಸಿಬ್ಬಂದಿ ತೆರುವುಗೊಳಿಸಿದ್ದಾರೆ.

ಶೀಘ್ರವೇ ರಾಜ್ಯ ಸರಕಾರ ಸುಗ್ರೀವಾಜ್ಞೆಯೊಂದನ್ನು ಹೊರಡಿಸಲಿದ್ದು 60:40 ಅನುಪಾತದಲ್ಲಿ ನಾಮಫಕಗಳಲ್ಲಿ ಕನ್ನಡ ಮತ್ತು ಇತರ ಭಾಷೆಗಳನ್ನು ಬರೆಸುವುದು ಕಡ್ಡಾಯವಾಗಲಿದೆ.

ಪಾಲಿಕೆ ಆಯುಕ್ತರ ತುರ್ತು ಕ್ರಮಕ್ಕಾಗಿ ಬೆಳಗಾವಿ ಜಿಲ್ಲಾ ಕನ್ನಡ ಸಂಘಟನೆಗಳ ಕ್ರಿಯಾ ಸಮಿತಿ ಧನ್ಯವಾದ ತಿಳಿಸಿದೆ. ಮುಂದಿನ ದಿನಗಳಲ್ಲಿ ಮಹಾನಗರದ ಅಂಗಡಿ ಮುಗ್ಗಟ್ಟುಗಳು, ವಾಣಿಜ್ಯ ಸಂಸ್ಥೆಗಳ ನಾಮಫಲಕಗಳಲ್ಲಿ ರಾಜ್ಯ ಸರಕಾರದ ನಿಯಮವನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ಕ್ರಮ ಕೈಕೊಳ್ಳಲು ಕೋರಿದೆ.

ಸುಗ್ರೀವಾಜ್ಞೆ ಹೊರಬಂದ ನಂತರ ಬೆಳಗಾವಿಯ ಚೇಂಬರ್ ಆಫ್ ಕಾಮರ್ಸ್, ಹೊಟೆಲ್ ಮಾಲೀಕರ ಸಂಘ, ವರ್ತಕರ ಸಂಘ, ಚಿತ್ರಮಂದಿರಗಳ ಮಾಲೀಕರ ಸಂಘ, ಹೋರ್ಡಿಂಗ್ ಗುತ್ತಿಗೆದಾರರ ಸಭೆಗಳನ್ನು ಪ್ರತ್ಯೇಕವಾಗಿ ಕರೆದು ರಾಜ್ಯ ಸರಕಾರದ ನಾಮಫಲಕ ನಿಯಮಗಳ ಪಾಲನೆಗೆ ಸೂಚಿಸುವಂತೆ ಜಿಲ್ಲಾ ಕನ್ನಡ ಅನುಷ್ಠಾನ ಸಮಿತಿಯ ಅಧ್ಯಕ್ಷರೂ ಆಗಿರುವ ಜಿಲ್ಲಾಧಿಕಾರಿಗಳನ್ನು ಒತ್ತಾಯಿಸಲು ಕನ್ನಡ ಸಂಘಟನೆಗಳು ನಿರ್ಧರಿಸಿವೆ.

ನಾಮಫಲಕ ನಿಯಮ ಸಂಬಂಧ ಬೆಳಗಾವಿ ಕ್ಯಾಂಟೋನ್ ಮೆಂಟ್ ಅಧಿಕಾರಿಗಳನ್ನೂ ಸಹ ಕನ್ನಡ ಕ್ರಿಯಾ ಸಮಿತಿ ಇಂದು ಸಂಪರ್ಕಿಸಿದೆ. ಸಿಪಿಎಡ್ ಮೈದಾನವು ಅವರ ವ್ಯಾಪ್ತಿಯಲ್ಲಿದ್ದು ಮರಾಠಿಯೇ ತುಂಬಿದ್ದ ಹಾಗೂ ಕನ್ನಡವನ್ನು ಕಾಟಾಚಾರಕ್ಕೆ ಬಳಸಲಾಗಿದ್ದ “ಅನ್ನೋತ್ಸವ” ನಾಮಫಲಕವನ್ನು ಶನಿವಾರ ಮಧ್ಯಾಹ್ನ ತೆರವುಗೊಳಿಸಿದ್ದಾರೆ.

Key words: Kannada-free- nameplates- hoardings -eviction – Belgaum