ಕಂಬಳ ತುಳುನಾಡಿನ ಸೀಮೆ ದಾಟಿ ಹೋಗಬಾರದು- ಡಾ. ವಿಶ್ವ ಸಂತೋಷ ಭಾರತೀ ಸ್ವಾಮೀಜಿ

ಬೆಂಗಳೂರು- ಜುಲೈ, 27,2026 (www.justkannada.in): ಕರಾವಳಿಯ ಸಂಸ್ಕೃತಿ, ಪರಂಪರೆ ಮತ್ತು ಪದ್ಧತಿಯ ಭಾಗವಾಗಿರುವ ಕಂಬಳ ತುಳುನಾಡಿನ ಸೀಮೆಯನ್ನು ದಾಟಿ ಹೋಗಬಾರದು ಎಂದು ಡಾ. ವಿಶ್ವ ಸಂತೋಷ ಭಾರತೀ ಸ್ವಾಮೀಜಿ ಆಶಯ ವ್ಯಕ್ತಪಡಿಸಿದರು.

ನಗರದ ರವೀಂದ್ರ ಕಲಾಕ್ಷೇತ್ರದಲ್ಲಿ ತುಳುವೆರೆ ಚಾವಡಿ, ಬೆಂಗಳೂರು ಆಯೋಜಿಸಿದ್ದ 28ನೇ ವರ್ಷದ ‘ಪರ್ಬದ ಲೇಸ್’ ಕಾರ್ಯಕ್ರಮದಲ್ಲಿ ಸಾಧಕರಿಗೆ ಸನ್ಮಾನಿಸಿ ಮಾತನಾಡಿದ ಅವರು, ಕಂಬಳ ಅಂದ್ರೆ ಬರೀ ಕೋಣಗಳ ಓಟವಲ್ಲ. ತುಳುನಾಡಿನ ಇತಿಹಾಸ, ಪರಂಪರೆ ಹಾಗೂ ದೈವರಾಧನೆಯ ಹಿನ್ನಲೆಯಿಂದ ಕಂಬಳ ಪಾವಿತ್ರ್ಯತೆ ಪಡೆದುಕೊಂಡಿದೆ.  ಹಾಗಾಗಿ ಕಂಬಳ ಪ್ರತಿಷ್ಠೆಯ ಅಖಾಡವಾಗಬಾರದು ಎಂದು ಅಭಿಪ್ರಾಯಪಟ್ಟರು.

ರಾಜಕಾರಣಿಗಳು, ಗಣ್ಯರನ್ನು ಕರೆಸುವಾಗ ಯಕ್ಷಗಾನ ಕಲಾವಿದರನ್ನು ಬಳಸಬಾರದು. ಗಂಡುಕಲೆಯ ಯಕ್ಷಗಾನದ ಘನತೆಯನ್ನು ಉಳಿಸಿಕೊಳ್ಳಬೇಕು ಎಂದ ಅವರು,  ಭಜನೆ ತುಳುನಾಡಿನ  ಸಂಸ್ಕೃತಿಯಾಗಿ ಬೆಳೆಯುತ್ತಿದೆ. ಪ್ರತಿ ಹಳ್ಳಿಯಲ್ಲೂ ಕುಣಿತ ಭಜನೆಯಿಂದ ಸಂಸ್ಕೃತಿ ಪರಂಪರೆಯನ್ನು ಉಳಿಸುವ ಪ್ರಯತ್ನ ನಡೆಯುತ್ತಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಕನ್ನಡ ಭಾಷೆಯಷ್ಟೇ ಪ್ರಾಚೀನ ಭಾಷೆ ತುಳು ಭಾಷೆ. ಮಲೆಯಾಳಂ ಭಾಷೆಯ ಹುಟ್ಟಿಗೂ ಕಾರಣವಾಗಿದೆ. ತುಳುನಾಡಿನ ಇತಿಹಾಸವೇ ಶ್ರೀಮಂತವಾಗಿದೆ. ನಮ್ಮ ಸಂಸ್ಕೃತಿ, ಪರಂಪರೆಯನ್ನು ನಾವು ಉಳಿಸಿಕೊಳ್ಳಬೇಕು. ನಮ್ಮ ಯುವ ಜನತೆಗೆ ಸಂಸ್ಕೃತಿ ಸಂಪ್ರದಾಯವನ್ನು ಮರೆಯಬಾರದು ಎಂದು ಕಿವಿ ಮಾತು ಹೇಳಿದರು. .

ಕಾರ್ಯಕ್ರಮದಲ್ಲಿ ವಿವಿಧ ಕ್ಷೇತ್ರಗಳ ಸಾಧಕರಿಗೆ ಗೌರವಿಸಿ ಸನ್ಮಾನಿಸಲಾಯಿತು. ಪ್ರತಿಷ್ಠಿತ ದಿ. ಡಿ.ಕೆ. ಚೌಟ ಪ್ರಶಸ್ತಿಯನ್ನು ಕೃಷಿ ಕ್ಷೇತ್ರದ ಸಾಧಕ ಕಡಮಜಲು ಶುಭಾಷ್ ರೈ ಹಾಗೂ ದಿ. ವಿಜಯ್ ಕುಮಾರ್ ಕುಲಶೇಖರ ನೆನಪಿನ ಪ್ರಶಸ್ತಿಯನ್ನು ತುಳು ಭಾಷೆಯ ಸೇವೆಗೆ ಶ್ರಮಿಸಿದ್ದ ಜಿ.ವಿ.ಎಸ್. ಉಳ್ಳಾಲ್ ಅವರಿಗೆ ತುಳುನಾಡು ಸಿರಿ ಪ್ರಶಸ್ತಿಯನ್ನು ಸಮಾಜ ಸೇವಕ ಕೋಡಿಬೆಟ್ಟು ಅರುಣ್ ಶೆಟ್ಟಿ ಅವರಿಗೆ  ಮತ್ತು ಶಿಕ್ಷಣ ಮತ್ತು ಸಾಹಿತ್ಯ ಕ್ಷೇತ್ರದಲ್ಲಿ ಗಣನೀಯ ಸೇವೆ ಸಲ್ಲಿಸಿರುವ ವಿಜಯಲಕ್ಷ್ಮಿ ಕಟೀಲ್ ಅವರಿಗೆ ನೀಡಿ ಸನ್ಮಾನಿಸಲಾಯಿತು. ಚಿತ್ರಕಲೆಯಲ್ಲಿ ಅಪ್ರತಿಮ ಸಾಧನೆ ಮಾಡಿರುವ ಗಣೇಶ್ ಪಂಜಿಮಾರ್  ಮತ್ತು ಕುಸುಮಾ ಪಂಜಿಮಾರ್ ಅವರಿಗೆ ಪ್ರತಿಭಾ ಪುರಸ್ಕಾರ ನೀಡಿ ಪ್ರೋತ್ಸಾಹಿಸಲಾಯಿತು.

ಬೆಂಗಳೂರಿನ ತುಳುವೆರೆ ಚಾವಡಿಯ ಗೌರವಾಧ್ಯಕ್ಷ ಪುರುಷೋತ್ತಮ್ ಚೇಂಡ್ಲಾ, ಅಧ್ಯಕ ಮುಂಡಾಲುಗುತ್ತು ವಿಶು ಕುಮಾರ್ ರೈ, ಪ್ರಧಾನ ಕಾರ್ಯದರ್ಶಿ ರಘುವೀರ್ ನಾಯ್ಕ್ ಉಪಸ್ಥಿತರಿದ್ದರು.

Key words: Kambala, not cross, Tulunad, Vishwa Santhosh Bharati Swamiji