ಮೈಸೂರು,ಆಗಸ್ಟ್,17,2026 (www.justkannada.in): ತಮಿಳುನಾಡಿಗೆ ಪ್ರತಿನಿತ್ಯ 15 ದಿನಗಳ ಕಾಲ 12 ಸಾವಿರ ಕ್ಯೂಸೆಕ್ ನೀರು ಹರಿಸುವಂತೆ ಕಾವೇರಿ ನೀರು ನಿರ್ವಹಣಾ ಸಮಿತಿ ನೀಡಿದ ಆದೇಶಕ್ಕೆ ಕರ್ನಾಟಕ ರಾಜ್ಯ ಸರ್ಕಾರ ತಲೆಬಾಗಿದ್ದು ಅಗತ್ಯಕ್ಕಿಂತಲೂ ಹೆಚ್ಚು ನೀರನ್ನು ಹರಿಸಿ ಸಂಕಷ್ಟಸೂತ್ರ ಪಾಲನೆ ಮಾಡಿದೆ.
ತಮಿಳುನಾಡಿಗೆ ಮಣಿದಿರುವ ರಾಜ್ಯ ಸರ್ಕಾರ, ಅಧಿಕಾರಿಗಳು ಬರೋಬ್ಬರಿ 13,600 ಕ್ಯೂಸೆಕ್ ನೀರನ್ನು ಹರಿಸುತ್ತಿದ್ದು, ಈ ಮೂಲಕ ರಾಜ್ಯ ರೈತರ ಹಿತ ಕಾಯುವ ಬದಲಿಗೆ ಮರಣ ಶಾಸನ ಬರೆಯಲು ಸರ್ಕಾರ ತಯಾರಿ ನಡೆಸುತ್ತಿದೆ.
ನಾಲ್ಕು ದಿನಗಳ ಹಿಂದೆ ಡ್ಯಾಂನಲ್ಲಿ 83 ಅಡಿ ನೀರಿತ್ತು. ಈಗ ಕೇವಲ 80 ಅಡಿಗೆ ಕಬಿನಿ ನೀರಿನ ಮಟ್ಟ ಕುಸಿದಿದ್ದು ಡ್ಯಾಂ ಖಾಲಿ ಖಾಲಿಯಾಗುತ್ತಿದೆ. ಜಲಾಶಯದ ಒಟ್ಟು ಎತ್ತರ 84 ಅಡಿಗಳಿದ್ದು ಜಲಾಶಯ ಭರ್ತಿಗೆ ಇನ್ನೂ 4 ಅಡಿಗಳು ಅಂದರೆ ಬರೋಬ್ಬರಿ 2.5 ಟಿಎಂಸಿ ನೀರು ಬೇಕಾಗಿದೆ. ಇದರ ಜೊತೆಗೆ ಜಲಾಶಯಕ್ಕೆ ಒಳಹರಿವಿನ ಪ್ರಮಾಣವೂ ಕಡಿಮೆಯಾಗಿದೆ. ಜಲಾಶಯಕ್ಕೆ 7300 ಕ್ಯೂಸೆಕ್ ಒಳಹರಿವು ಬರುತ್ತಿದೆ. ಒಳಹರಿವಿನ ಪ್ರಮಾಣ ಕಡಿಮೆಯಾದರೂ ಸಿಬ್ಬಂದಿಗಳು ತಮಿಳುನಾಡಿಗೆ ನಿರಂತರವಾಗಿ ನೀರು ಹರಿಸುತ್ತಿದ್ದು ಮಂಡ್ಯ ರೈತರ ಗಮನ ಬೇರೆಡೆ ಸೆಳೆದು ಕಬಿನಿ ಖಾಲಿ ಮಾಡಲು ಅಧಿಕಾರಿಗಳು ಮುಂದಾಗಿದ್ದಾರೆ.
ಕೆಆರ್ ಎಸ್ ಅಣಕಟ್ಟೆಯಿಂದ ಮೂರು ಸಾವಿರ ಕ್ಯೂಸೆಕ್ ಮಾತ್ರ ಹೊರಹರಿವಿದ್ದು. ಮಂಡ್ಯ ಭಾಗದಲ್ಲಿ ರೈತರು ನಿತ್ಯ ಪ್ರತಿಭಟನೆಗಳಿಗಿದ್ದು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಆದರೆ ಕಬಿನಿ ಡ್ಯಾಂ ಖಾಲಿ ಮಾಡಿದರೂ ಸಹ ಮೈಸೂರು ಭಾಗದ ರೈತರು ಮೌನಕ್ಕೆ ಜಾರಿದ್ದು, ಇತ್ತ ಮಂಡ್ಯ ಭಾಗದ ರೈತರ ಕಬಿನಿ ಡ್ಯಾಂ ಖಾಲಿಗೆ ಅಧಿಕಾರಿಗಳು ಕಣ್ಣೊರೆಸಲು ಮುಂದಾಗಿದ್ದಾರೆ.
Key words: State government, Tamil Nadu, Kabini Dam, empty, before, filling







