ಮೇ 26ಕ್ಕೆ ಮೈಸೂರಿನಲ್ಲಿ ‘ಜತೆಗಿರುವನು ಚಂದಿರ’ ನಾಟಕ ಪ್ರದರ್ಶನ.

ಮೈಸೂರು,ಮೇ,23,2024 (www.justkannada.in): ಮೇ 26 ರಂದು ಮೈಸೂರಿನಲ್ಲಿ ‘ಜತೆಗಿರುವನು ಚಂದಿರ’ ಎಂಬ ನಾಟಕ ಪ್ರದರ್ಶನಗೊಳ್ಳಲಿದೆ.

ಮೈಸೂರಿನ ರಾಮಕೃಷ್ಣನಗರದ ನಟನ ರಂಗಶಾಲೆಯಲ್ಲಿ. ಮೇ 26ರಂದು ಭಾನುವಾರ ಸಂಜೆ 6.30ಕ್ಕೆ ನಾಟಕ ಪ್ರದರ್ಶನಗೊಳ್ಳಲಿದೆ. ಬುಕ್‌ ಮೈ ಶೋ ನಲ್ಲಿ Book my show ನಲ್ಲಿ ಟಿಕೆಟ್‌ಗಳು ಲಭ್ಯವಿರಲಿದೆ.  ಶ್ರೀನಿವಾಸ ಭಟ್,ರಂಗಾಯಣ ಅವರ ಸಂಗೀತ .  ವಿನ್ಯಾಸ,ನಟನೆ, ನಿರ್ದೇಶನ: ಹುಲುಗಪ್ಪ ಕಟ್ಟೀಮನಿ ಅವರದ್ದು.

ಜತೆಗಿರುವನು ಚಂದಿರ ನಾಟಕ. ಕಥೆ ಭಾರತದ ವಿಭಜನೆಯ ಹಿನ್ನೆಲೆಯನ್ನು ಹೊಂದಿದೆ. ಅರ್ಥಹೀನ ಕೋಮು ದ್ವೇಷ, ಹಿಂಸೆ ಮತ್ತು ದಂಗೆ ಈ ಬೆಳಗುವ ಮಾನವತೆಯ ಹಿನ್ನೆಲೆಯ ಅಂಧಕಾರವಾಗಿ ನಮ್ಮ ಕಣ್ಣಿಗೆ ಕಟ್ಟುತ್ತದೆ. ಆದ್ದರಿಂದಲೇ ಇದು ಸಮಕಾಲೀನ.

ಯುದ್ಧ,ದೇಶ ವಿಭಜನೆ, ಅಭಿವೃದ್ಧಿ,ಆಣೆಕಟ್ಟು- ಇತ್ಯಾದಿಗಳ ನೆಪದಲ್ಲಿ  ಮನುಷ್ಯನ ಸ್ಥಾನಾಂತರ- ಉಚ್ಛಾಟನೆಗಳು ನಡೆದೇ ಇವೆ. ಭಾರತದ ದೇಶ ಛೇದದ ಸಂದರ್ಭದಲ್ಲಿ ಈ ನಾಟಕವನ್ನು ಅಳವಡಿಸಲು ಯತ್ನಿಸಲಾಗಿದೆ. ಛೇದ ಉತ್ತರ ಭಾರತದಲ್ಲಾದರೂ ದಕ್ಷಿಣ ಕರಾವಳಿಯ ಹಳ್ಳಿಯ ಮೆರಲಾಗುವ ಅದರ ಗಾಯ ಈ ನಾಟಕದ ವಸ್ತು.

ಈ ನಾಟಕದ ಮೊದಲ ರೂಪವು 1964ರಲ್ಲಿ ನ್ಯೂಯಾರ್ಕ್ ನಗರದ ಬ್ರಾಡ್ವೇಯಲ್ಲಿ ಪ್ರದರ್ಶನ ಕಂಡಿತು. ಎಂದರೆ ಈ ನಾಟಕಕ್ಕೆ ಈಗ ವಜ್ರ ಮಹೋತ್ಸವ. ಇದು ಎಂಥಾ ಯಶಸ್ವಿ ನಾಟಕವಾಯಿತೆಂದರೆ ಸತತವಾಗಿ 3242 ಪ್ರದರ್ಶನಗಳನ್ನು ಕಂಡಿತು. ನಂತರ ಲಂಡನ್ ನಲ್ಲಿಯೂ  2000ಕ್ಕೂ ಹೆಚ್ಚು ಪ್ರದರ್ಶನಗಳು. ಆಸ್ಟ್ರೇಲಿಯಾ ಜರ್ಮನಿ, ಫ್ರಾನ್ಸ್ ಹೀಗೆ ಹೋದಲ್ಲೆಲ್ಲ ಜಯಭೇರಿ.  ಮೂಲ ಕಥೆಗಾರ ಶೋಲೇಂ ಆಲ್ಕೈಮ್ 1905ರ ಉಕ್ರೇನ್ ನ ಹಳ್ಳಿಗಾಡಿನ ಯಹೂದಿ ಕುಟುಂಬದ ಕಥೆಯಾಗಿ ಇದನ್ನು ಬರೆದಿದ್ದ.  ಹೆಸರು ‘ಟೇವ್ಯೆ ಮತ್ತು ಆತನ ಹೆಣ್ಣು ಮಕ್ಕಳು’. ನಾಟಕ ರೂಪವನ್ನು ಮುಗಿಸುವ ಮುನ್ನ ತೀರಿಕೊಂಡಿದ್ದ. 20ನೆಯ ಶತಮಾನದ ಪೂರ್ವಾರ್ಧದಲ್ಲಿಯೇ ಯಿದ್ದಿಶ್ ಭಾಷೆಯಲ್ಲಿ ಇದು ನಾಟಕವೂ, ನಂತರ ಚಲನಚಿತ್ರವೂ ಆಗಿ ಯಶಸ್ವಿಯಾಗಿತ್ತು.

ಕನ್ನಡಕ್ಕೆ ತಂದರು ಕಾಯ್ಕಿಣಿ

ಕನ್ನಡಕ್ಕೆ ಇದನ್ನು ರೂಪಾಂತರಿಸಿದ ಜಯಂತ ಕಾಯ್ಕಿಣಿಯವರು ಮೂಲದಲ್ಲಿ ಇರುವ ಪಾತ್ರ ಚಿತ್ರಣ, ಒಟ್ಟಾರೆ ವಾತಾವರಣ, ಹಾಡು ಮತ್ತು ನೃತ್ಯದ ನವಲವಿಕೆ ಎಲ್ಲವನ್ನು ಹಿಡಿದಿಡುವಂತೆ ಅನುವಾದ ಮಾಡಿದ್ದಾರೆ. ಆದರೆ ಅದನ್ನು ನಮ್ಮ ಭಾರತೀಯ ಸಂದರ್ಭಕ್ಕೆ ಹಾಗೂ ಮುಸ್ಲಿಂ ಸಮುದಾಯದ ಸಂಸ್ಕೃತಿಗೆ ಒಗ್ಗುವಂತೆ ರೂಪಾಂತರಿಸಿರುವ ಪ್ರತಿಭೆ ಇದೆಯಲ್ಲ, ಅದು ಅಸಾಧಾರಣವಾದದ್ದು. ಎಷ್ಟೋ ಕಡೆ ಅವರ ಅನುವಾದ ಮೂಲವನ್ನು ಮೀರಿದೆ. ಉದಾಹರಣೆಗೆ ‘ವಿಸ್ಮಯ ಆಹಾ ವಿಸ್ಮಯ’ ಎಂಬ ಹಾಡು ಮತ್ತು ಬಡೇ ಮಿಯಾ ಹುಟ್ಟಿಸಿಕೊಂಡು ಅಭಿನಯಿಸುವ ಕನಸಿನ ದೃಶ್ಯದಲ್ಲಿ ಸೇರಿಕೊಂಡಿರುವ ಅಂಶಗಳು. ನಾಟಕದ ಉದ್ದಕ್ಕೂ ಬಡೇ ಮಿಯಾ ಆಗಿ ನಟಿಸಿರುವ ಹಾಗೂ ನಾಟಕದ ನಿರ್ದೇಶನ ಸಹ ಮಾಡಿರುವ ಹುಲಿಗಪ್ಪ ಕಟ್ಟಿಮನಿ ಹಾಗೂ ತಾಯಿ ಮುನೀರ್ ಜಾನ್ ಪಾತ್ರದಲ್ಲಿ ಎನ್. ಮಂಗಳ ಅಮೋಘವಾದ ಅಭಿನಯ ನೀಡಿದ್ದಾರೆ.

ನೀನಾಸಂ ನಂತರ ಸಂಕಲ್ಪ

ಕನ್ನಡದಲ್ಲಿ ನೀನಾಸಂ ಸಂಸ್ಥೆಯು ತನ್ನ ವಾರ್ಷಿಕ ತಿರುಗಾಟದ ಭಾಗವಾಗಿ ಇದನ್ನು 1998-99 ರಲ್ಲಿ ಮೊದಲ ಬಾರಿಗೆ ಪ್ರದರ್ಶಿಸಿತು.  ಹೀಗಾಗಿ ಕನ್ನಡದಲ್ಲಿ ಇದಕ್ಕೆ ಬೆಳ್ಳಿ ಹಬ್ಬ. ಇದನ್ನು ಈಗ ನಿರ್ದೇಶಿಸುತ್ತಿರುವವರು ಹಿರಿಯ ಕಲಾವಿದ ಹುಲುಗಪ್ಪ ಕಟ್ಟಿಮನಿ. ಈ ಬಾರಿ ಮೈಸೂರಿನ ‘ಸಂಕಲ್ಪ’ ತಂಡದಿಂದ ರಂಗಶಂಕರದಲ್ಲಿ ಪ್ರೇಕ್ಷಕರನ್ನು ಸಂಪೂರ್ಣವಾಗಿ ಗೆದ್ದುಕೊಂಡು ಸತತವಾಗಿ ಹೌಸ್ ಫುಲ್ ಆಗಿ ಪ್ರದರ್ಶಿತವಾಯಿತು. ಈಗ ಮೈಸೂರಿನಲ್ಲಿ ಸಂಕಲ್ಪದಿಂದಲೇ ನಾಟಕ ಪ್ರದರ್ಶನವಾಗುತ್ತಿದೆ. ಬನ್ನಿ ವಿಭಿನ್ನ ನಾಟಕ ನೋಡಿ.

ಮಾಹಿತಿಗಾಗಿ ಹುಲಗಪ್ಪ ಕಟ್ಟಿಮನಿ(97439 12770) ಸಂಪರ್ಕಿಸಿ.

Key words: ‘Jategiruvanu Chandira, Drama, Mysore