ಒಳ ಮೀಸಲಾತಿ: ಇಂದು ಕ್ಯಾಬಿನೆಟ್ ವಿಶೇಷ ಸಭೆಯಲ್ಲಿ ಅಂತಿಮ ತೀರ್ಮಾನ

ಬೆಂಗಳೂರು,ಆಗಸ್ಟ್, 19,2025 (www.justkannada.in):  ಒಳ ಮೀಸಲಾತಿ ಜಾರಿ ಸಂಬಂಧ ನಿವೃತ್ತ ನ್ಯಾಯಮೂರ್ತಿ ನಾಗಮೋಹನ್ ದಾಸ್ ಸಲ್ಲಿಸಿರುವ ವರದಿ ಜಾರಿ ಕುರಿತು ಇಂದು ವಿಶೇಷ ಸಚಿವ ಸಂಪುಟ ಸಭೆ ನಡೆಯಲಿದೆ.

ಇಂದು ಸಂಜೆ ಸಿಎಂ ಸಿದ್ದರಾಮಯ್ಯ ನೇತೃತ್ವದಲ್ಲಿ ವಿಧಾನಸೌಧದಲ್ಲಿ ವಿಶೇಷ ಸಚಿವ ಸಂಪುಟ ಸಭೆ ನಡೆಯಲಿದ್ದು ಒಳ ಮೀಸಲಾತಿ  ವರದಿ ಜಾರಿ ಸಂಬಂಧ ಅಂತಿಮ ತೀರ್ಮಾನ ಕೈಗೊಳ್ಳುವ ಸಾಧ್ಯತೆ ಇದೆ. ದಲಿತ ಎಡಗೈ, ಬಲಗೈ ಸಮುದಾಯದ ಸಚಿವರಲ್ಲಿ ವರದಿ ಬಗ್ಗೆ ಒಮ್ಮತ ಮೂಡದಿರುವ ಹಿನ್ನೆಲೆಯಲ್ಲಿ ಚರ್ಚೆ ಆಗಲಿದೆ. ಮೊದಲು ಸಚಿವರ ಅಭಿಪ್ರಾಯವನ್ನು ಆಲಿಸಲಿರುವ ಸಿದ್ದರಾಮಯ್ಯ ನಂತರ ನಿರ್ಧಾರಕ್ಕೆ ಬರಲಿದ್ದಾರೆ.

ಶಿಕ್ಷಣ ಮತ್ತು ಸರ್ಕಾರಿ ಸೇವೆಗಳಲ್ಲಿ ಪರಿಶಿಷ್ಟ ಜಾತಿಯಲ್ಲಿ ಒಳ ಮೀಸಲಾತಿ ಕಲ್ಪಿಸಲು ಉಪಪಂಗಡಗಳ ಅಂಕಿ-ಅಂಶಗಳ ಸಮೀಕ್ಷೆಗಾಗಿ ರಾಜ್ಯ ಸರ್ಕಾರ ನಿವೃತ್ತ ನ್ಯಾಯಮೂರ್ತಿ ಹೆಚ್​​ಎನ್ ನಾಗಮೋಹನ್ ದಾಸ್ ನೇತೃತ್ವದ ಏಕಸದಸ್ಯ ಆಯೋಗ ರಚಿಸಿತ್ತು. ಆಯೋಗವು ಆಗಸ್ಟ್​ 4 ರಂದು ಸರ್ಕಾರಕ್ಕೆ ವರದಿ ಸಲ್ಲಿಕೆ ಮಾಡಿದೆ.

ಒಳಮೀಸಲಾತಿ ಜಾರಿ ಹಿನ್ನಲೆಯಲ್ಲಿ ರಾಜ್ಯದ ಕಳೆದ ಒಂದು ವರ್ಷದಿಂದ ನೇಮಕಾತಿಗಳು ಸ್ಥಗಿತಗೊಂಡಿದ್ದು ಇದರಿಂದಾಗಿ ಲಕ್ಷಾಂತರ ಸರ್ಕಾರಿ ಹುದ್ದೆ ಆಕಾಂಕ್ಷಿಗಳ ಭವಿಷ್ಯ ಸಂಕಷ್ಟದಲ್ಲಿದೆ. ಈ ಹಿನ್ನೆಲೆಯಲ್ಲಿ ಒಳಮೀಸಲಾತಿ ಒಳಗೊಂಡ ನೇಮಕಾತಿಗಳನ್ನ ಆರಂಭಿಸುವಂತೆ ಆಗ್ರಹಿಸಿ ವಿವಿಧ ಸಂಘಟನೆಗಳಿಂದ ಹೋರಾಟಗಳು ನಡೆದಿದ್ದವು.  ರಾಜ್ಯದಲ್ಲಿ 2.5 ಲಕ್ಷಕ್ಕೂ ಅಧಿಕ ಸರ್ಕಾರಿ ಹುದ್ದೆಗಳು ಖಾಲಿ ಇವೆ. ಈ ಪೈಕಿ ಶಿಕ್ಷಣ ಇಲಾಖೆಯಲ್ಲೇ ಸುಮಾರು 70 ಸಾವಿರ ಹುದ್ದೆಗಳು ಖಾಲಿ ಇದ್ದು ಈ ಹಿನ್ನೆಲೆಯಲ್ಲಿ ನೇಮಕಾತಿಗಳು ತುರ್ತಾಗಿ ಆರಂಭವಾಗಲೇಬೇಕಿದೆ. ಹೀಗಾಗಿ ಇಂದು ನಡೆಯುವ ಸಂಪುಟ ಸಭೆಯಲ್ಲಿ ಒಳಮೀಸಲಾತಿ ಜಾರಿ ಬಗ್ಗೆ ಏನು ನಿರ್ಧಾರ ತೆಗೆದುಕೊಳ್ಳಲಿದ್ದಾರೆ  ಎಂಬ ಬಗ್ಗೆ ಕುತೂಹಲ ಮೂಡಿಸಿದೆ. ಈ ನಡುವೆ ಒಳ ಮೀಸಲಾತಿ ಜಾರಿ ಸಂಬಂಧ ಆಗಸ್ಟ್ 16 ರಂದು ಕರೆದಿದ್ದ ವಿಶೆಷ ಸಚಿವ ಸಂಪುಟ ಸಭೆಯನ್ನು ಇಂದಿಗೆ ಮುಂದೂಡಿಕೆ ಮಾಡಲಾಗಿತ್ತು.

Key words: Internal reservation,  Final decision , special, cabinet meeting