ಕೂಡಲೇ ಸಂಸದ ಪ್ರತಾಪ ಸಿಂಹ ಅವರನ್ನ ಅಮಾನತು ಮಾಡಿ: ಘಟನೆ ಕುರಿತು ಸಂಪೂರ್ಣ ತನಿಖೆಯಾಗಲಿ- ಎಂ.ಲಕ್ಷ್ಮಣ್ ಆಗ್ರಹ.

ಮೈಸೂರು,ಡಿಸೆಂಬರ್,14,2023(www.justkannada.in):  ಲೋಕಸಭೆಯಲ್ಲಿ ಭದ್ರತಾ ವೈಪಲ್ಯ, ಪ್ರಕರಣ ಸಂಬಂಧ , ಘಟನೆ ಬಗ್ಗೆ ಸಂಪೂರ್ಣ ತನಿಖೆಯಾಗಬೇಕು. ಈ ಕೂಡಲೇ ಸಂಸದ ಪ್ರತಾಪ್ ಸಿಂಹ ಅವರನ್ನು ಸಂಸತ್ ಸ್ಥಾನದಿಂದ  ಅಮಾನತು ಮಾಡಬೇಕು ಎಂದು ಕೆಪಿಸಿಸಿ ವಕ್ತಾರ ಎಂ.ಲಕ್ಷ್ಮಣ್ ಆಗ್ರಹಿಸಿದರು.

ಮೈಸೂರಿನಲ್ಲಿ ಇಂದು ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಕಾಂಗ್ರೆಸ್ ವಕ್ತಾರ ಎಂ ಲಕ್ಷ್ಮಣ್, ಕೇಂದ್ರ ಭದ್ರತಾ ಲೋಪಕ್ಕೆ ಸಂಬಂಧ ಪಟ್ಟಂತ ವಿಚಾರಕ್ಕೆ ನಮ್ಮಲ್ಲಿ ಸೂಕ್ತ ದಾಖಲೆಗಳಿವೆ. ಮನೋರಂಜನ್ ಮೈಸೂರಿನಲ್ಲಿ ಹುಟ್ಟಿ ಬೆಳೆದ ವ್ಯಕ್ತಿ. ಇವನು ಸಂಸದ ಪ್ರತಾಪ್ ಸಿಂಹನ ಜೊತೆ ನಿಕಟ ಸಂಪರ್ಕದಲ್ಲಿದ್ದ ವ್ಯಕ್ತಿ. ಸಾಗರ್ ಶರ್ಮ, ಮನೋರಂಜನ್ ಅವರಿಗೆ ಸ್ವತಃ ತಮ್ಮ ಹಸ್ತಾಕ್ಷರದಿಂದ ಸಹಿ ಮಾಡಿಕೊಟ್ಟಿರುವ ಪಾಸ್ ಗಳವು. ಇದರ ಬಗ್ಗೆ ಹೆಚ್ಚಿನ ತನಿಖೆ ಆಗಬೇಕು. ಅವರ ಕಚೇರಿಗಳನ್ನು ಸೀಜ್ ಮಾಡಬೇಕು ಎಂದು ಒತ್ತಾಯಿಸಿದರು.

ಈ ಒಂದು ಘಟನೆಯನ್ನು ಬಿಜೆಪಿಯವರು ಲಘುವಾಗಿ ಪರಿಗಣಿಸುತ್ತಿದ್ದಾರೆ. ಇದರ ಬಗ್ಗೆ ಯಾರೂ ತುಟಿ ಬಿಚ್ಚುತ್ತಿಲ್ಲ. ಘಟನೆ ನಡೆದು 24 ಗಂಟೆ ಆದರೂ ಬಿಜೆಪಿ ನಾಯಕರು ಯಾರೂ ಮಾತಾನಾಡುತ್ತಿಲ್ಲ. ಪ್ರತಾಪ್ ಸಿಂಹ ಅವರಿಗೆ ಮಾನ ಮರ್ಯಾದೆ ಇದ್ದರೆ ಒಂದು ಟ್ವೀಟ್ ಮೂಲಕವಾದರೂ ಇದರ ಬಗ್ಗೆ ಸ್ಪಷ್ಟನೆ ಕೊಡಬೇಕು.  ಪ್ರತಾಪ್ ಸಿಂಹ ಎಲ್ಲಿದ್ದಾರೆ ಎನ್ನೋದೆ ಗೊತ್ತಿಲ್ಲ. ಯಾವಾಗಲೂ ಫೇಸ್ ಬುಕ್ ಲೈವ್ ಬರ್ತಾ ಇದ್ದ ವ್ಯಕ್ತಿ ಎಲ್ಲಿ ಕಾಣೆಯಾಗಿದ್ದಾರೆ. ಈ ಕೂಡಲೇ ನೀವು ಎಲ್ಲೇ ಇದ್ದರೂ ಘಟನೆ ಕುರಿತು ಸ್ಪಷ್ಟನೆ ಕೊಡಬೇಕು. ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಬೇಕು ಎಂದು ಹೇಳಿದರು.

ಪ್ರಕರಣದಲ್ಲಿ ಒಬ್ಬ ಏನಾದರೂ ಮುಸ್ಲಿಂ ಸಮುದಾಯದ ವ್ಯಕ್ತಿ ಇದ್ದರೆ ಇಡೀ ದೇಶದಲ್ಲಿ ಬೆಂಕಿ ಹಚ್ಚುವ ಕೆಲಸ ಮಾಡುತ್ತಿದ್ದರು. ಈಗ ಯಾಕೆ ಪ್ರಕರಣವನ್ನು ಹಳ್ಳ ಹಿಡಿಯುವ ನಿಟ್ಟಿನಲ್ಲಿ ಮುಂದಾಗಿದ್ದಾರೆ. ಸ್ಮೋಕ್ ಡಬ್ಬಿಗಳನ್ನ ಹೇಗೆ ಒಳ ಭಾಗಕ್ಕೆ ತೆಗೆದುಕೊಂಡು ಹೋದರು.? ಅಂತಹ ಅನಾಹುತ ಆದರೂ ಸ್ಥಳಕ್ಕೆ ಒಬ್ಬ ವೈದ್ಯರೂ ಬರಲಿಲ್ಲ. ಇದರ ಅರ್ಥ ಏನು, ಇದೆಲ್ಲ ಪೂರ್ವ ನಿಯೋಜಿತ ಕೃತ್ಯನಾ.? ಎಂದು ಎಂ.ಲಕ್ಷ್ಮಣ್ ಕಿಡಿಕಾರಿದರು.

ಬಿಜೆಪಿ ಮತ್ತು ಪ್ರತಾಪ್ ಸಿಂಹ ಅವರಿಗೆ 10 ಪ್ರಶ್ನೆ ಕೇಳುತ್ತೇನೆ. ನಿಮಗೂ ಮನೋರಂಜನ್ ತಂದೆಗೂ ಏನ್ ಸಂಬಂಧ.? ಐಟಿ ಸೆಲ್ ನಲ್ಲಿ ಮನೋರಂಜನ್ ಕೆಲಸ ಮಾಡುತ್ತಿದ್ದರಾ ಇಲ್ವಾ.? ನಿಮ್ಮ ಗಮನಕ್ಕೆ ಬಾರದೆ ಪಾಸ್ ಹೇಗೆ ಕೊಟ್ಟಿದ್ದೀರಿ.? ಅಮಿತ್ ಶಾ ಅವರ ಜೊತೆ ಭೇಟಿ ಮಾಡುವ ಅವಕಾಶ ಮಾಡಿಕೊಟ್ಟಿಲ್ವಾ.? 4 ತಿಂಗಳಲ್ಲಿ ಎಷ್ಟು ಬಾರಿ ಮಾಡಿದ್ದೀರಿ.? ಆರ್ ಎಸ್ ಎಸ್ ಮುಖಂಡರ ಭೇಟಿ ಮಾಡಿಸಿದ್ದೀರಾ ಇಲ್ವಾ.? ನಿಮ್ಮ ದೆಹಲಿಯಲ್ಲಿರುವ  ಎಂಪಿ  ಕ್ವಾರ್ಟರ್ಸ್ ನಲ್ಲಿ ಇವರು ಉಳಿಸುಕೊಂಡಿಲ್ವಾ.? ಆ ಆರು ಜನರಲ್ಲಿ ದಲಿತರು ಯಾರು.?  ಎಂದು ಪ್ರಶ್ನಿಸಿದರು.

ಈ ಕೂಡಲೇ ಸಂಸದ ಪ್ರತಾಪ್ ಸಿಂಹ ಅವರನ್ನು ಸಂಸತ್ ಸ್ಥಾನದಿಂದ  ಅಮಾನತು ಮಾಡಬೇಕು. ಇಲ್ಲಿವರೆಗೂ ಎಫ್ .ಐ.ಆರ್ ಯಾಕೆ ದಾಖಲಾಗಿಲ್ಲ ಯಾಕೆ.? ಯಾವ ಸೆಕ್ಷನ್ ಹಾಕಿದ್ದೀರ ಅಂತ ಜನರ ಮುಂದಿಡಿ. ಘಟನೆ ಕುರಿತು ಒಂದು ಸಂಪೂರ್ಣ ತನಿಖೆ ಆಗಬೇಕು.  ಪೋಲಿಸ್ ನವರು ಯಾರ ಪರನೂ ಬೇಡ ವಿರೋಧನೂ ಬೇಡ ನಿಮ್ಮ ಕೆಲಸ ನೀವು ಮಾಡಿ ಎಂದು ಕಾಂಗ್ರೆಸ್ ವಕ್ತಾರ ಎಂ ಲಕ್ಷ್ಮಣ್ ಹೇಳಿದರು.

ಪ್ರಕರಣದ ಸಂಪೂರ್ಣ ಜವಾಬ್ದಾರಿಯನ್ನ ಗೃಹ ಸಚಿವ ಅಮಿತ್ ಶಾ ಹೊರಬೇಕು. ಈ ಕೂಡಲೇ ಅಮಿತ್ ಶಾ ಕೂಡಲೇ ರಾಜೀನಾಮೆ ನೀಡಬೇಕು. ಸರ್ಪಗಾವಲಿನಲ್ಲಿ ಹೇಗೆ ಅಲ್ಲಿಗೆ ಹೋದರು.? ನಾಲ್ಕು ಲೇಯರ್ ನ ಸೆಕ್ಯುರಿಟಿ ವ್ಯವಸ್ಥೆ ತಪ್ಪಿಸಿಕೊಂಡು ಒಳಗಡೆ ಹೇಗೆ ಹೋದರು.? ಪ್ರಕರಣದ ಕುರಿತು ಈ ಕೂಡಲೇ ಸುಪ್ರೀಂ ಕೋರ್ಟಿನ‌ ಮುಖ್ಯ ನ್ಯಾಯಾಧೀಶರ ನೇತೃತ್ವದಲ್ಲಿ ಸಮಗ್ರ ತನಿಖೆ ಆಗಬೇಕು ಎಂದು ಎಂ ಲಕ್ಷ್ಮಣ್ ಆಗ್ರಹಿಸಿದರು.

Key words: Immediately- suspend- MP Pratap Simha –KPCC-Spokesperson- M. Laxman