ನಾನು ಬಿಜೆಪಿ ರಾಜ್ಯಾಧ್ಯಕ್ಷ ಹುದ್ದೆಯ ರೇಸ್ ನಲ್ಲಿ ಇಲ್ಲ- ಮಾಜಿ ಸಚಿವ ಸಿ.ಟಿ ರವಿ.

ಮೈಸೂರು,ಆಗಸ್ಟ್,18,2023(www.justkannada.in):  ಬಿಜೆಪಿ ರಾಜ್ಯಾಧ್ಯಕ್ಷ  ರೇಸ್ ನಲ್ಲಿ ತಮ್ಮ ಹೆಸರು ಪ್ರಸ್ತಾಪ ವಿಚಾರ ಕುರಿತು ಪ್ರತಿಕ್ರಿಯಿಸಿದ ಮಾಜಿ ಸಚಿವ ಸಿ.ಟಿ ರವಿ,  ನಾನು ರಾಜ್ಯಾಧ್ಯಕ್ಷ ಹುದ್ದೆಯ ರೇಸ್ ನಲ್ಲಿ ಇಲ್ಲ. ಪಕ್ಷ  ಯಾವುದೇ ಹುದ್ದೆ ಕೊಟ್ಟರೂ ಕೆಲಸ ಮಾಡುತ್ತೇನೆ ಎಂದು ತಿಳಿಸಿದರು.

ಮೈಸೂರಿನಲ್ಲಿ ಇಂದು ಮಾತನಾಡಿದ ಸಿ.ಟಿ ರವಿ,  ಮಂತ್ರಿ ಇದ್ದಾಗ ಪಕ್ಷ ಸೂಚನೆ ಕೊಟ್ಟಾಗ ರಾಜೀನಾಮೆ ಕೊಟ್ಟು ಪಕ್ಷದ ಕೆಲಸದಲ್ಲಿ ತೊಡಗಿಸಿಕೊಂಡೆ. ನನ್ನ ಹೆಸರನ್ನು ಎಲ್ಲದಕ್ಕೂ ತೂರಿಸಲಾಗುತ್ತೆ. ಸದ್ಯ ವಿರೋಧ ಪಕ್ಷದ ರೇಸ್ ನಲ್ಲಿ ಎನ್ನುವುದನ್ನು ತೋರಿಸಿಲ್ಲ. ಅದು ಆಗಲು ಸಾಧ್ಯವಿಲ್ಲ. ಪಕ್ಷ ಬಯಸಿದ್ರೆ ಕೆಲಸ ಮಾಡುತ್ತೇನೆ ಎಂದು ಸ್ಪಷ್ಟನೆ ನೀಡಿದರು.

ಲೋಕಸಭಾ ಚುನಾವಣೆಯಲ್ಲಿ ಜೆಡಿಎಸ್ ಜೊತೆ ಮೈತ್ರಿ ವಿಚಾರ ಕುರಿತು ಪ್ರತಿಕ್ರಿಯಿಸಿದ ಸಿಟಿ ರವಿ,  28 ಸ್ಥಾನಗಳನ್ನ ಗೆಲ್ಲಲ್ಲು ಅಗತ್ಯ ಇರುವ ಎಲ್ಲಾ ಯೋಚನೆ ಮಾಡುತ್ತೇವೆ. ನಾವು 28 ಸ್ಥಾನ ಗೆಲ್ಲಬೇಕು. ಅದರ ಬಗ್ಗೆ ಯೋಚನೆ ಮಾಡುತ್ತೇವೆ. ದೇಶದ ಹಿತದೃಷ್ಟಿಯಿಂದ ಮೋದಿ ಅವರು ಮತ್ತೆ ಪ್ರಧಾನಿಯಾಗಬೇಕು. ಮುಂದಿನ ಅವಧಿಗೆ ವಿಶ್ವದ ಮೂರನೇ ಶಕ್ತಿಯಾಗಿ ಬೆಳೆಯಬೇಕು ಎಂಬುದು ಮೋದಿಯವರ ಆಶಯ. ಈ‌ ಕಾರಣದಿಂದ ಮೋದಿಯವರು ಮತ್ತೆ ಪ್ರಧಾನಿಯಾಗಬೇಕು ಎಂದರು.

ರಾಜ್ಯ ಸರ್ಕಾರಕ್ಕೆ ಅಭದ್ರತೆ ಕಾಡುತ್ತಿದೆ. ಹೀಗಾಗಿ ಆಪರೇಷನ್ ಹಸ್ತಕ್ಕೆ ಮುಂದಾಗಿದ್ದಾರೆ. ಕಾಂಗ್ರೆಸ್ ಪಕ್ಷ 135 ಸ್ಥಾ‌ನ ಗಳಿಸಿದೆ. ಸರ್ಕಾರ ಅಸ್ತಿತ್ವಕ್ಕೆ ಬಂದ ಎರಡೇ ತಿಂಗಳಿಗೆ ಶಾಸಕರು ಅಸಮಾಧಾನ ಹೊರ ಹಾಕಿದ್ದಾರೆ. ಇದರ ಬೆನ್ನಲ್ಲೇ ಸಿಎಂ ಸಿದ್ದರಾಮಯ್ಯ ಜಿಲ್ಲಾವಾರು ಸಚಿವರು, ಶಾಸಕರ ಸಭೆ ನಡೆಸುತ್ತಿದ್ದಾರೆ. ನಮ್ಮ ಪಕ್ಷದ ಮುಖಂಡ  ಬಸನಗೌಡ ಪಾಟೀಲ್ ಯತ್ನಾಳ್ ಕೂಡ ಈ ಸರ್ಕಾರ ಆರು ತಿಂಗಳು ಇರುವುದಿಲ್ಲ ಎಂದಿದ್ದರು. ಹೀಗಾಗಿ ಕಾಂಗ್ರೆಸ್ ನವರು ಭಯಗೊಂಡಿದ್ದು ಅಭದ್ರತೆ ಕಾಡುತ್ತಿದೆ. ಪರಿಣಾಮ ಆಪರೇಷನ್ ಹಸ್ತಕ್ಕೆ ಮುಂದಾಗಿದ್ದಾರೆ. ಆದರೆ ದೂರಾಲೋಚನೆ ಇರುವ ಯಾರೊಬ್ಬರೂ ಕಾಂಗ್ರೆಸ್ ಗೆ ಹೋಗುವುದಿಲ್ಲ. ಈ ಬಗ್ಗೆ ನಮ್ಮ ಪಕ್ಷದ ಶಾಸಕರ ಜೊತೆಗೂ ಮಾತನಾಡುತ್ತೇನೆ. ಯಾರು ಕೂಡ ಅಷ್ಟು ಸುಲಭವಾಗಿ ಕಾಂಗ್ರೆಸ್ ಗೆ ಹೋಗುವುದಿಲ್ಲ ಎಂದರು.

Key words: I am -not – race – post- BJP state president- Former minister- CT Ravi.