ಬೆಂಗಳೂರು,ಸೆಪ್ಟಂಬರ್,11,2026 (www.justkannada.in): ‘ಉದ್ಯೋಗ ನಿಧಿ’ ಯೋಜನೆಗೆ ರಾಜ್ಯ ಸಚಿವ ಸಂಪುಟ ಅನುಮೋದನೆ ನೀಡಿದ್ದು, 11 ಹಿಂದುಳಿದ ಜಿಲ್ಲೆಗಳಲ್ಲಿ 1 ಲಕ್ಷ ಉದ್ಯೋಗ ಸೃಷ್ಠಿ ಗುರಿಯನ್ನು ಹೊಂದಲಾಗಿದೆ ಎಂದು ಗೃಹ ಸಚಿವ ಪ್ರಿಯಾಂಕ್ ಖರ್ಗೆ ತಿಳಿಸಿದ್ದಾರೆ.
ಈ ಕುರಿತು ಮಾಧ್ಯಮ ಪ್ರಕಟಣೆ ಮೂಲಕ ಮಾಹಿತಿ ನೀಡಿರುವ ಗೃಹ ಸಚಿವ ಪ್ರಿಯಾಂಕ್ ಖರ್ಗೆ, ರಾಜ್ಯದ ಪ್ರಾದೇಶಿಕ ಅಸಮಾನತೆಯನ್ನು ಕಡಿಮೆ ಮಾಡಿ, ಅಭಿವೃದ್ಧಿಯಲ್ಲಿ ಹಿಂದುಳಿದಿರುವ 11 ಜಿಲ್ಲೆಗಳಲ್ಲಿ 1 ಲಕ್ಷ ಹೊಸ ಉದ್ಯೋಗಗಳನ್ನು ಸೃಷ್ಟಿಸುವ ಗುರಿಯೊಂದಿಗೆ ಈ ಯೋಜನೆಯನ್ನು ರೂಪಿಸಲಾಗಿದೆ. ಯೋಜನೆಯಡಿ ಅರ್ಹ ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳು ಹಾಗೂ ಕೈಗಾರಿಕಾ ಸಂಸ್ಥೆಗಳು ಹೆಚ್ಚುವರಿಯಾಗಿ ಉದ್ಯೋಗಿಗಳನ್ನು ನೇಮಕ ಮಾಡಿಕೊಂಡಲ್ಲಿ, ಪ್ರತಿ ಹೆಚ್ಚುವರಿ ಉದ್ಯೋಗಿಗೆ ತಿಂಗಳಿಗೆ ₹2,500ರಂತೆ ಗರಿಷ್ಠ 24 ತಿಂಗಳವರೆಗೆ ಸರ್ಕಾರ ಪ್ರೋತ್ಸಾಹಧನ ನೀಡಲಿದೆ ಎಂದು ತಿಳಿಸಿದ್ದಾರೆ.
ಹಾಗೆಯೇ ಯೋಜನೆಗೆ ವಾರ್ಷಿಕ 3.5 ಕೋಟಿ ರೂ.ಅನುದಾನ ನೀಡಲಾಗುತ್ತದೆ . ಎಂಎಸ್ ಎಂಇ ಕೈಗಾರಿಕೆಗಳಿಗೆ ಉದ್ಯೋಗ ಸೃಷ್ಠಿಗೆ ಪ್ರೋತ್ಸಾಹ ನೀಡಲಾಗುತ್ತದೆ. ಕಲಬುರಗಿ, ಬೀದರ್, ರಾಯಚೂರು, ಯಾದಗಿರಿ ಮತ್ತು ಬಾಗಲಕೋಟೆ ಸೇರಿದಂತೆ ಅಭಿವೃದ್ಧಿಯಲ್ಲಿ ಹಿಂದುಳಿದ 11 ಜಿಲ್ಲೆಗಳಲ್ಲಿ ಹೊಸ ಕೈಗಾರಿಕೆಗಳ ಸ್ಥಾಪನೆ ಹಾಗೂ ಈಗಾಗಲೇ ಕಾರ್ಯನಿರ್ವಹಿಸುತ್ತಿರುವ ಉದ್ಯಮಗಳ ವಿಸ್ತರಣೆಗೆ ಈ ಯೋಜನೆ ಉತ್ತೇಜನ ನೀಡಲಿದೆ ಎಂದು ಗೃಹ ಸಚಿವ ಪ್ರಿಯಾಂಕ್ ಖರ್ಗೆ ತಿಳಿಸಿದ್ದಾರೆ.
Key words: ‘Udyoga Nidhi’ scheme, create, 1 lakh jobs, Home Minister, Priyank Kharge







