ಟೋಯಿಂಗ್‌ ಸಮಸ್ಯೆ ಬಗ್ಗೆ ಇಂದು ಸಭೆಯಲ್ಲಿ ಚರ್ಚೆ ನಡೆಸಿ ತೀರ್ಮಾನ- ಗೃಹ ಸಚಿವ ಅರಗ ಜ್ಞಾನೇಂದ್ರ.

ಮೈಸೂರು,ಫೆಬ್ರವರಿ,2,2022(www.justkannada.in): ಟೋಯಿಂಗ್‌ ನಿಂದ ಸಾರ್ವಜನಿಕರಿಗೆ ಸಮಸ್ಯೆಯಾಗುತ್ತಿರುವ ವಿಚಾರಕ್ಕೆ ಸಂಬಂಧಿಸಿದಂತೆ ಇಂದು ಸಭೆ ನಡೆಸಿ ಚರ್ಚಿಸಿ ತೀರ್ಮಾನ ಕೈಗೊಳ್ಳಲಾಗುತ್ತದೆ ಎಂದು ಗೃಹ ಸಚಿವ ಅರಗ ಜ್ಞಾನೇಂದ್ರ ತಿಳಿಸಿದರು.

ಮೈಸೂರಿನಲ್ಲಿ ಇಂದು ಮಾಧ್ಯಮಗಳ ಜತೆ ಮಾತನಾಡಿದ ಗೃಹ ಸಚಿವ ಅರಗ ಜ್ಞಾನೇಂದ್ರ, ಎಲ್ಲಿಯವರೆಗೂ ಸಾರ್ವಜನಿಕರು ಹೊಣೆಗಾರಿಕೆ ಅರಿಯುವುದಿಲ್ಲ. ಅಲ್ಲಿಯವರೆಗೂ ಪೊಲೀಸರಿಂದ ಕಾನೂನಾತ್ಮಕ ಕ್ರಮ ಅನಿವಾರ್ಯ. ಖಾಸಗಿಯವರಿಂದ ಟೋಯಿಂಗ್ ವಿಚಾರದಲ್ಲಿ ಜನರಿಗೆ ಸಮಸ್ಯೆ ಆಗಿದೆ. ಹೆಚ್ಚಿನ ಕಮಿಷನ್‌ ಗಾಗಿ ಜನರಿಗೆ ತೊಂದರೆ ಕೊಟ್ಟಿರುವುದು ಸತ್ಯ. ಸದ್ಯಕ್ಕೆ ಟೋಯಿಂಗ್ ನಿಲ್ಲಿಸಲಾಗಿದೆ. ಇಂದು ಈ ಬಗ್ಗೆ ಸಂಜೆ ಸಭೆ ನಡೆಸಲಾಗುತ್ತಿದೆ. ಸಭೆಯಲ್ಲಿ ವಿಸ್ತೃತವಾದ ಚರ್ಚೆ ನಡೆಸಿ ತೀರ್ಮಾನ ಮಾಡುತ್ತೇವೆ. ಜನರು ಅಡ್ಡಾದಿಡ್ಡಿ ವಾಹನ ನಿಲ್ಲಿಸುವುದರಿಂದ ಸಮಸ್ಯೆಯಾಗುತ್ತಿದೆ ಎಂದು ಹೇಳಿದರು.

ಮುಂಬಡ್ತಿ ನೇಮಕಾತಿ ಅನುಪಾತ ಬದಲಾವಣೆ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ಗೃಹ ಸಚಿವ ಅರಗ ಜ್ಞಾನೇಂದ್ರ, ಈ ಬಗ್ಗೆ ಪರಿಶೀಲನೆ ಮಾಡಿ ಕ್ರಮ ಕೈಗೊಳ್ಳಲಾಗುವುದು. ಪೊಲೀಸ್ ಇಲಾಖೆ ಬೇರೆ ಇಲಾಖೆಗಿಂತ ಭಿನ್ನ. ಪೊಲೀಸ್ ಇಲಾಖೆಗೆ ಹೊಸ ಬ್ಲಡ್ ಬರಬೇಕು. ಯುವಕರು ಹೆಚ್ಚಿನ ಸಂಖ್ಯೆಯಲ್ಲಿ ಬರಬೇಕು. ಈ ಬಗ್ಗೆ ಪರಿಶೀಲನೆ ಮಾಡಿ ಕ್ರಮ ಕೈಗೊಳ್ಳುತ್ತೇವೆ ಎಂದರು.

Key words: Home Minister -Araga Gnanendra -Towing