ಹುಣಸೂರಿನಲ್ಲಿ ಹನುಮ ಜಯಂತಿ ಮೆರವಣಿಗೆಗೆ ಕ್ಷಣಗಣನೆ: ಭಾರಿ ಪೋಲಿಸ್ ಬಂದೋಬಸ್ತ್

ಮೈಸೂರು,ಡಿಸೆಂಬರ್,26,2023(www.justkannada.in): ಮೈಸೂರು ಜಿಲ್ಲೆ ಹುಣಸೂರು ಪಟ್ಟಣದಲ್ಲಿ ಇಂದು ಹನುಮ ಜಯಂತಿ ಆಚರಣೆ ನಡೆಯಲಿದ್ದು,  ಹನುಮ ಜಯಂತಿ ಮೆರವಣಿಗೆಗೆ ಕ್ಷಣಗಣನೆ ಆರಂಭವಾಗಿದೆ.

ಈ ಹಿನ್ನೆಲೆಯಲ್ಲಿ ಪಟ್ಟಣದಲ್ಲಿ ಭಾರಿ ಪೋಲಿಸ್ ಬಂದೋಬಸ್ತ್ ವ್ಯವಸ್ಥೆ ಮಾಡಲಾಗಿದ್ದು ಯಾವುದೇ ಅಹಿತಕರ ಘಟನೆಗೆ ಅವಕಾಶವಾಗದಂತೆ ಪೋಲಿಸ್ ಸರ್ಪಗಾವಲು ಹಾಕಲಾಗಿದೆ. ಜಿಲ್ಲಾ ಪೋಲಿಸ್ ವತಿಯಿಂದ ಮುಂಜಾಗ್ರತಾ ಕ್ರಮ ಕೈಗೊಳ್ಳಲಾಗಿದೆ. ಮೈಸೂರು ಜಿಲ್ಲಾ ಎಸ್ಪಿ ಸೀಮಾ ಲಾಟ್ಕರ್ ನೇತೃತ್ವದಲ್ಲಿ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಪೊಲೀಸ್ ಪಥಸಂಚಲನ ನಡೆಸಲಾಗಿದ್ದು ನಗರದ ಪ್ರಮುಖ ರಸ್ತೆಗಳಲ್ಲಿ ಪೋಲಿಸ್ ವಾಹನಗಳ ಗಸ್ತು ತಿರುಗುತ್ತಿದೆ. ಭದ್ರತೆಗಾಗಿ ಸುಮಾರು 1800 ಪೊಲೀಸರ ನಿಯೋಜನೆ ಮಾಡಲಾಗಿದೆ.  ಎಸ್.ಪಿ, ಮೂವರು ಎ.ಎಸ್.ಪಿ, ಹತ್ತು ಡಿವೈಎಸ್‌ಪಿ, 32 ಇನ್ಸ್ಪೆಕ್ಟರ್, 88 ಎಸ್.ಐ.ಗಳು, 157ಎ.ಎಸ್.ಐ.ಗಳು, 1100 ಪೊಲೀಸರು, 10ಕೆಎಸ್‌ಆರ್‌ಪಿ ಮತ್ತು 6ಡಿಎಆರ್ ತುಕಡಿಗಳು, 2 ತುಕಡಿ ಕ್ಷಿಪ್ರಕಾರ್ಯಪಡೆ, 2ಆ್ಯಂಟಿ ಬಾಂಬ್‌ ಸ್ಕ್ವಾಡ್ ನಿಯೋಜನೆ ಮಾಡಲಾಗಿದೆ.

ಮೆರವಣಿಗೆಗರ ವಿಡಿಯೋ ಚಿತ್ರೀಕರಣ ತಂಡ ಕಾರ್ಯನಿರ್ವಹಿಸಲಿದ್ದು, ಮೆರವಣಿಗೆಯಲ್ಲಿ ಮೂರು ಬೃಹತ್ ಆಂಜನೇಯಸ್ವಾಮಿ ವಿಗ್ರಹ, ಓಂ, ದತ್ತಾತ್ರೇಯ, ಶ್ರೀ ರಾಮ ಲಕ್ಷ್ಮಣ ವಿಗ್ರಹ, ಆಂಜನೇಯ ಗದೆ ಸೇರಿದಂತೆ ಒಟ್ಟು 12 ಸ್ಥಬ್ದಚಿತ್ರಗಳು ಭಾಗಿಯಾಗಲಿವೆ. ಕಲ್ಕುಣಿಕೆ, ಸೇತುವೆ, ಸಂವಿಧಾನ ಸರ್ಕಲ್, ಬಸ್ ನಿಲ್ದಾಣದ ಮುಖ್ಯ ರಸ್ತೆ, ಕಲ್ಪತರು ವೃತ್ತ, ಅಕ್ಷಯ ಭಂಡಾರ್, ಬಜಾರ್ ರಸ್ತೆ, ಜೆ.ಎಲ್.ಬಿ.ರಸ್ತೆ, ಎಸ್.ಜೆ ರಸ್ತೆಗಳ ಮೂಲಕ ಮೆರವಣಿಗೆ ನಡೆಯಲಿದ್ದು ಶಾಲಾ ಕಾಲೇಜುಗಳಿಗೆ ರಜೆ ಘೋಷಣೆ ಮಾಡಲಾಗಿದೆ.

ಹನುಮಜಯಂತಿ ಮೆರವಣಿಗೆಗೆ ಹಿನ್ನೆಲೆಯಲ್ಲಿ ಹುಣಸೂರು ನಗರವೇ ಕೇಸರಿಮಯವಾಗಿದ್ದು ಬೃಹತ್ ಆಂಜನೇಯ ಉತ್ಸವ ಮೂರ್ತಿ ಹಾಗೂ ಹನುಮ ಗಧೆ ರೆಡಿಯಾಗಿದ್ದು, ಮುನೇಶ್ವರಕಾವಲ್ ಮೈದಾನದಲ್ಲಿ ಪ್ರತಿಷ್ಠಾಪಿಸಿ, ವಿಶೇಷ ಪೂಜೆ ಸಲ್ಲಿಸಲಾಗುತ್ತದೆ.  ಬೆಳಿಗ್ಗೆ 11 ಗಂಟೆಗೆ ರಂಗನಾಥ ಬಡಾವಣೆಯಿಂದ ಮೆರವಣಿಗೆ ಆರಂಭ ಆಗಲಿದ್ದು ಸಾಂಬಸದಾಶಿವಸ್ವಾಮೀಜಿ, ನಟರಾಜ ಸ್ವಾಮಿಜಿ ಹಾಗೂ ಎಂಎಲ್ಸಿ ಎಚ್. ವಿಶ್ವನಾಥ್, ಶಾಸಕ ಜಿ.ಡಿ. ಹರೀಶ್‌ ಗೌಡ, ಸಂಸದ ಪ್ರತಾಪ್ ಸಿಂಹ, ಮಾಜಿ ಶಾಸಕ ಎಚ್.ಪಿ.ಮಂಜುನಾಥ್  ರಿಂದ  ಚಾಲನೆ ದೊರೆಯಲಿದೆ.

Key words: Countdown – Hanuma Jayanti – Hunsur-police -security