ಬಂಗಾಳ ಕೊಲ್ಲಿ ಮಾರುತ ಕರ್ನಾಟಕಕ್ಕೆ: ಇನ್ನು ಮೂರು ದಿನಗಳ ಕಾಲ ಭಾರಿ ಮಳೆ ಸಂಭವ…

ಬೆಂಗಳೂರು,ಅ,9,2019(www.justkannada.in): ರಾಜ್ಯದ ಬಹುತೇಕ ಭಾಗಗಳು ಪ್ರವಾಹದಿಂದ ತತ್ತರಿಸಿಹೋಗಿದ್ದು ಇದರ ನಡುವೆಯೇ ಮಂಗಳೂರು, ಉಡುಪಿ, ಉತ್ತರ ಕನ್ನಡ ಮೈಸೂರು, ಮಂಡ್ಯ, ಕೊಡಗು ಸೇರಿದಂತೆ ಹದಿನೈದಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಇನ್ನೂ ಎರಡು-ಮೂರು ದಿನಗಳ ಕಾಲ ಭಾರೀ ಮಳೆ ಸುರಿಯಲಿದೆ.

ಹವಾಮಾನ ಇಲಾಖೆ ಈ ಕುರಿತು ಮಾಹಿತಿ ನೀಡಿದ್ದು ದಾವಣಗೆರೆ, ಗದಗ್, ತುಮಕೂರು, ಕೋಲಾರ, ಬಳ್ಳಾರಿ ಸೇರಿದಂತೆ ಹಲವು ಜಿಲ್ಲೆಗಳಲ್ಲಿ ಮಳೆಯ ಪ್ರಮಾಣ ಇಲ್ಲವೇ ಇಲ್ಲ ಎನ್ನುವಷ್ಟು ಕಡಿಮೆ ಎಂದು ಹೇಳಿವೆ.

ಕೃಷ್ಣೆ, ಕಾವೇರಿ, ಘಟಪ್ರಭ, ಮಲಪ್ರಭ ಸೇರಿದಂತೆ ಹಲವು ನದಿ ಪಾತ್ರಗಳಲ್ಲಿ ಭಾರೀ ಮಳೆಯಿಂದ ಪ್ರವಾಹ ಪರಿಸ್ಥಿತಿ ಸೃಷ್ಟಿಯಾಗಿದ್ದು ಇದೇ ರೀತಿ ಮುಂದಿನ ಎರಡರಿಂದ ಮೂರು ದಿನಗಳ ಕಾಲ ಭಾರೀ ಮಳೆ ಮುಂದುವರಿಯಲಿದೆ.

ಅರಬ್ಬಿ ಸಮುದ್ರದಲ್ಲಿ ಉಂಟಾದ ವಾಯುಭಾರ ಕುಸಿತದ ಪರಿಣಾಮವಾಗಿ ಇಷ್ಟು ದಿನಗಳ ಕಾಲ ಮಳೆ ಸುರಿಸಿದ ಮಾರುತಗಳು ಇದೀಗ ಪಾಕಿಸ್ತಾನದ ಕರಾಚಿಯತ್ತ ಧಾವಿಸುತ್ತಿದೆಯಾದರೂ ಬಂಗಾಳ ಕೊಲ್ಲಿಯಲ್ಲಿಯಲ್ಲಿ ಉಂಟಾದ ವಾಯುಭಾರ ಕುಸಿತದ ಪರಿಣಾಮವಾಗಿ ಆ ಭಾಗದ ಮಳೆಯ ಮಾರುತಗಳು ಕರ್ನಾಟಕದ ಬಹುತೇಕ ಭಾಗಗಳನ್ನು ಆವರಿಸತೊಡಗಿದೆ.

ಹೀಗಾಗಿ ಕಳೆದ ಕೆಲ ದಿನಗಳಿಂದ ಸುರಿಯುತ್ತಿದ್ದ ಮಳೆ ಪ್ರವಾಹದ ಪರಿಸ್ಥಿತಿಯನ್ನು ಸೃಷ್ಟಿಸಿದರೆ ಈಗ ಹೊಸತಾಗಿ ಬಂಗಾಳ ಕೊಲ್ಲಿಯ ಮೂಲಕ ಬರುತ್ತಿರುವ ಮಾರುತಗಳು ಇನ್ನಷ್ಟು ಮಳೆ ಸುರಿಸಿ ಪರಿಸ್ಥಿತಿ ವಿಕೋಪಕ್ಕೆ ಹೋಗುವಂತೆ ಮಾಡಲಿವೆ.

ಮೈಸೂರು, ಮಂಡ್ಯ, ಕೊಡಗು ಜಿಲ್ಲೆಗಳಲ್ಲಿ ಮೂರು ದಿನಗಳ ಕಾಲ ಭಾರೀ ಮಳೆ ಸುರಿಯಲಿದ್ದರೆ ಚಾಮರಾಜನಗರ ಜಿಲ್ಲೆಯಲ್ಲಿ ಅರಬ್ಬಿ ಸಮುದ್ರದಿಂದ ಉಂಟಾದ ಮಳೆಯ ಮಾರುತಗಳು ಕಡಿಮೆಯಾಗಿವೆ. ಅದೇ ಕಾಲಕ್ಕೆ ಬಂಗಾಳ ಕೊಲ್ಲಿಯಲ್ಲಿ ಉಂಟಾದ ವಾಯುಭಾರ ಕುಸಿತದ ಪರಿಣಾಮವಾಗಿ ಸೃಷ್ಟಿಯಾಗಿರುವ ಮಳೆಯ ಮಾರುತಗಳು ಚಾಮರಾಜನಗರದ ಮೇಲೆ ದೃಷ್ಟಿ ಬೀರಿಲ್ಲ.

ಇದು ಸಧ್ಯದ ಸ್ಥಿತಿಯಾಗಿದ್ದು ಮೂರು ದಿನಗಳ ನಂತರವೂ ಬಂಗಾಳ ಕೊಲ್ಲಿಯಿಂದ ಆಗಮಿಸುತ್ತಿರುವ ಮಳೆಯ ಮಾರುತಗಳು ಗಣನೀಯ ಪ್ರಮಾಣದ ಮಳೆಗೆ ಕಾರಣವಾಗಬಹುದು ಎಂದು ಹವಾಮಾನ ಇಲಾಖೆ ಹೇಳಿದೆ.

ಮೈಸೂರು, ಮಂಡ್ಯ, ಕೊಡಗು ಜಿಲ್ಲೆಯನ್ನು ಕಾಡಲಿರುವ ಬಂಗಾಳ ಕೊಲ್ಲಿಯ ಮಳೆ ಮಾರುತಗಳು ಅದೇ ಕಾಲಕ್ಕೆ ಶಿವಮೊಗ್ಗ, ಚಿಕ್ಕಮಗಳೂರು, ರಾಯಚೂರು, ಬೀದರ್ ಸೇರಿದಂತೆ ವಿವಿಧ ಜಿಲ್ಲೆಗಳಲ್ಲಿ ಧಾರಾಕಾರ ಮಳೆ ಸುರಿಸಲಿವೆ ಎಂದು ಇಲಾಖೆ ಸ್ಪಷ್ಟವಾಗಿ ಹೇಳಿದೆ.

Key words: Heavy rain- expected -three days-karnataka