Sunday, August 16, 2026

BDA Apartments

Home Front Page ಗಡಿಭಾಗದ ಹಳ್ಳಿಗಳಿಗೆ ಆರೋಗ್ಯ ವಿಮೆ ಜಾರಿ:ಮಹಾರಾಷ್ಟ್ರ ಸರ್ಕಾರದ ಕ್ರಮ ಉದ್ಧಟತನದ್ದು- ಮಾಜಿ ಸಿಎಂ ಸಿದ‍್ಧರಾಮಯ್ಯ ಕಿಡಿ.

ಗಡಿಭಾಗದ ಹಳ್ಳಿಗಳಿಗೆ ಆರೋಗ್ಯ ವಿಮೆ ಜಾರಿ:ಮಹಾರಾಷ್ಟ್ರ ಸರ್ಕಾರದ ಕ್ರಮ ಉದ್ಧಟತನದ್ದು- ಮಾಜಿ ಸಿಎಂ ಸಿದ‍್ಧರಾಮಯ್ಯ ಕಿಡಿ.

ಬೆಂಗಳೂರು,ಏಪ್ರಿಲ್,5,2023(www.justkannada.in):  ಕನ್ನಡಿಗರ ತೀವ್ರ ವಿರೋಧಧ ಹೊರತಾಗಿಯೂ ರಾಜ್ಯದ ಗಡಿಯೊಳಗಿರುವ 865 ಹಳ್ಳಿಗಳಿಗೆ ಆರೋಗ್ಯ ವಿಮೆ ಜಾರಿ ಮಾಡಿರುವ ಮಹಾರಾಷ್ಟ್ರ ಸರ್ಕಾರದ ಕ್ರಮ ಉದ್ಧಟತನದ್ದು. ಇದನ್ನು ಸಹಿಸಲು ಸಾಧ್ಯವೇ ಇಲ್ಲ. ಈ ಆದೇಶವನ್ನು ತಕ್ಷಣ ವಾಪಸ್ ಪಡೆಯದೆ ಇದ್ದರೆ ಪರಿಣಾಮ ನೆಟ್ಟಗಾಗದು ಎಂದು ಮಹಾರಾಷ್ಟ್ರ ಸರ್ಕಾರಕ್ಕೆ ಮಾಜಿ ಸಿಎಂ ಸಿದ‍್ಧರಾಮಯ್ಯ ಎಚ್ಚರಿಕೆ ನೀಡಿದ್ದಾರೆ.

ಈ ಕುರಿತು ಪತ್ರಿಕಾ ಪ್ರಕಟಣೆ ಹೊರಡಿಸಿರುವ ಸಿದ್ಧರಾಮಯ್ಯ,  ರಾಜ್ಯದಲ್ಲಿ ಆರೋಗ್ಯ ವಿಮೆ ಯೋಜನೆ ಜಾರಿಗೆ ಅವಕಾಶ ನೀಡುವುದಿಲ್ಲ ಎಂದು ರಾಜ್ಯದ ಮುಖ್ಯಮಂತ್ರಿಗಳು ಮತ್ತು ಕೇಂದ್ರ ಗೃಹಸಚಿವ ಅಮಿತ್ ಶಾ ಅವರು ಭರವಸೆ ನೀಡಿದ್ದರು. ಇವರಿಬ್ಬರ ಮಾತಿಗೆ ಮಹಾರಾಷ್ಟ್ರ ಮುಖ್ಯಮಂತ್ರಿಗಳು ಕವಡೆ ಕಾಸಿನ ಕಿಮ್ಮತ್ತು ಕೊಟ್ಟಿಲ್ಲ.

ರಾಜ್ಯದ ಗಡಿಯೊಳಗೆ ಆರೋಗ್ಯ ವಿಮೆ ಜಾರಿಗೆ ಮಹಾರಾಷ್ಟ್ರ ಸರ್ಕಾರ ಯತ್ನಿಸಿದಾಗಲೇ ನಾವು ವಿರೋಧಿಸಿದ್ದೆವು. ಅಲ್ಲಿಯವರೆಗೆ ತೆಪ್ಪಗಿದ್ದ ರಾಜ್ಯದ ಮುಖ್ಯಮಂತ್ರಿಗಳು ನಮ್ಮ ಒತ್ತಡಕ್ಕೆ ಮಣಿದು ವೀರಾವೇಶದ ಮಾತುಗಳನ್ನಾಡಿದ್ದರು. ಆ ಆವೇಶ, ಬದ್ಧತೆಯನ್ನು ತೋರಿಸಬೇಕಾದ ಕಾಲ ಈಗ ಬಂದಿದೆ ಎಂದು ಸರ್ಕಾರಕ್ಕೆ ಸಿದ್ಧರಾಮಯ್ಯ ಚಾಟಿ ಬೀಸಿದ್ದಾರೆ.

ಗಡಿ ವಿವಾದ ಇತ್ಯರ್ಥಗೊಳ್ಳುವವರೆಗೆ ಎರಡೂ ರಾಜ್ಯಗಳು ವಿವಾದವನ್ನು ಕೆದಕಬಾರದು ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ  ತಾಕೀತು ಮಾಡಿ ಎರಡೂ ರಾಜ್ಯಗಳ ಸದಸ್ಯರನ್ನೊಳಗೊಂಡ ಸಲಹಾ ಸಮಿತಿ ರಚಿಸಿದ್ದರು. ಆ ಸೂಚನೆಯನ್ನೆ ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ್ ಶಿಂದೆ ಧಿಕ್ಕರಿಸಿದ್ದಾರೆ

ಬೆಳಗಾವಿ ಗಡಿವಿವಾದ ನ್ಯಾಯಾಲಯದ ಕಟಕಟೆಯಲ್ಲಿದೆ. ಕನ್ನಡಿಗರಿಗೆ ನ್ಯಾಯ ಸಿಗುತ್ತದೆ ಎನ್ನುವ ಭರವಸೆ ನಮಗೆ ಇದೆ. ಈ ನಡುವೆ ರಾಜಕೀಯ ಲಾಭದ ದುರುದ್ದೇಶದಿಂದ ಮಹಾರಾಷ್ಟ್ರ ಆಗಾಗ ಗಡಿತಂಟೆಯನ್ನು ಕೆದಕುವ ಕಿಡಿಗೇಡಿತನ ಮಾಡುವುದು ಖಂಡನೀಯ. ಕನ್ನಡಿಗರು ಇದನ್ನು ಸಹಿಸುವುದಿಲ್ಲ ಎಂದು ಸಿದ್ಧರಾಮಯ್ಯ ವಾಗ್ದಾಳಿ ನಡೆಸಿದ್ದಾರೆ.

Key words: health insurance –border- villages-Maharashtra –government – Siddharamaiah