ಕೇಂದ್ರದಲ್ಲಿ ಬಹುಮತ ಬರುತ್ತೇವೆ ಎಂಬ ಕಾಂಗ್ರೆಸ್ ಹೇಳಿಕೆ ಹಾಸ್ಯಾಸ್ಪದ- ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಟೀಕೆ.

ಹಾವೇರಿ,ಏಪ್ರಿಲ್,15,2024 (www.justkannada.in): ಕೇಂದ್ರದಲ್ಲಿ ಬಹುಮತ ಬರುತ್ತೇವೆ ಎಂಬ ಕಾಂಗ್ರೆಸ್ ಹೇಳಿಕೆ ಹಾಸ್ಯಾಸ್ಪದ ಎಂದು  ಮಾಜಿ ಮುಖ್ಯಮಂತ್ರಿ ಹಾಗೂ ಹಾವೇರಿ ಗದಗ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಬಸವರಾಜ ಬೊಮ್ಮಾಯಿ ಟೀಕಿಸಿದರು.

ಹಾವೇರಿಯಲ್ಲಿ ಇಂದು  ನಾಮಪತ್ರ ಸಲ್ಲಿಸಿದ ಬಳಿಕ ಮಾತನಾಡಿದ ಬಸವರಾಜ ಬೊಮ್ಮಾಯಿ, ಇವತ್ತು ಒಳ್ಳೆಯ ಮುಹೂರ್ತ ಇದೆ. ಎರಡು ಸೆಟ್ ನಾಮಪತ್ರ ಸಲ್ಲಿಸಿದ್ದೇನೆ. ಏಪ್ರೀಲ್ 19ರಂದು ಬೃಹತ್ ಮೆರವಣಿಗೆಯೊಂದಿಗೆ ನಾಮಪತ್ರ ಸಲ್ಲಿಸುವೆ. ಅವತ್ತು ನಮ್ಮ ನಾಯಕರಾದ ಯಡಿಯೂರಪ್ಪ, ಬೈರತಿ ಬಸವರಾಜ ಸೇರಿ ಹಲವು ನಾಯಕರು ಬರುತ್ತಾರೆ. ಇವತ್ತು ಶುಭ ಘಳಿಗೆಯಲ್ಲಿ ನಾಮಪತ್ರ ಸಲ್ಲಿಸಿರುವೆ. ಅತಿ ಹೆಚ್ಚು ಮತಗಳ ಅಂತರಗಳಲ್ಲಿ ಗೆಲ್ಲುವ ಆತ್ಮವಿಶ್ವಾಸ ಇದೆ ಎಂದು ಹೇಳಿದರು.

ಈ ಚುನಾವಣೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಹೆಸರಿನೊಂದಿಗೆ ಕೇಂದ್ರ  ಸರ್ಕಾರ ಹಾಗೂ ನಮ್ಮ ಅವಧಿಯ ಸಾಧನೆಗಳನ್ನು ಜನರಿಗೆ ತಿಳಿಸುತ್ತೇವೆ ಎಂದು ಹೇಳಿದ್ದಾರೆ.

ಕಾಂಗ್ರೆಸ್ ನವರು ಕೇಂದ್ರದಲ್ಲಿ ಬಹುಮತ ಬರುತ್ತೇವೆ ಎಂದು ನೀಡುವ ಹೇಳಿಕೆಗಳೆಲ್ಲ ಹಾಸ್ಯಾಸ್ಪದ. ಬಹುಮತಕ್ಕೆ 272 ಸ್ಥಾನ ಬೇಕು. ಅಷ್ಟು ಸ್ಥಾನಗಳಿಗೆ ನಿಲ್ಲುವ ಶಕ್ತಿ ಇಲ್ಲದವರು ಊರೆಲ್ಲ ಮಾತನಾಡುತ್ತಿದ್ದಾರೆ ಎಂದು ಕಾಂಗ್ರೆಸ್ ವಿರುದ್ದ ವಾಗ್ದಾಳಿ ನಡೆಸಿದರು.

ಕ್ಷೇತ್ರದಲ್ಲಿ ನೀರಾವರಿ ಸಾಧನೆ ಕುರಿತು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ತುಂಗಾ ಮೇಲ್ದಂಡೆ ಯೋಜನೆಯಲ್ಲಿ ಒಂದು ಲಕ್ಷ ಎಕರೆ ನೀರಾವರಿ ಮಾಡಿರುವುದು ಸಾಮಾನ್ಯ ಮಾತಲ್ಲ. ಇದರಿಂದ ಹಾನಗಲ್, ಹಿರೆಕೆರೂರು, ರಾಣೆಬೆನ್ನೂರು ತಾಲೂಕುಗಳಲ್ಲಿ ನೀರಾವರಿಯಾಗಿದೆ. ಈ ಕೆಲಸ ಸಾಧ್ಯವಿಲ್ಲ ಎಂದು ಹೇಳಿದ್ದರು. ಅದನ್ನು ಮಾಡಿ ತೋರಿಸಿದ್ದೇನೆ. ಶಿಗ್ಗಾಂವಿ ಕ್ಷೇತ್ರ ಬಿಟ್ಟು ಎಂಟು ಏತ ನೀರಾವರಿ ಯೋಜನೆ ಮಾಡಿದ್ದೇನೆ ಎಂದರು.

ಈ ಚುನಾವಣೆಯಲ್ಲಿ ಬಿಜೆಪಿಯವರು ಕೇವಲ ಪ್ರಧಾನಿ ನರೇಂದ್ರ ಮೋದಿ ಹೆಸರು ಹೇಳುತ್ತಿದ್ದಾರೆ  ಎಂಬ ಪ್ರತಿಪಕ್ಷಗಳ ಆರೋಪಕ್ಕೆ ತಿರುಗೇಟು ನೀಡಿದ ಅವರು, ಇದು ಲೋಕಸಭಾ ಚುನಾವಣೆ, ರಾಷ್ಟ್ರದ ಚುನಾವಣೆ. ಮೋದಿಯವರ ಹೆಸರು ಹೇಳಲೇಬೇಕು ಹೇಳುತ್ತೇವೆ.  ಅದರ ಜೊತೆಗೆ ನಾವು ಮಾಡಿದ ಅಭಿವೃದ್ಧಿ ಕಾರ್ಯಗಳನ್ನು ಸೇರಿಸಿ ಮತ ಕೇಳುತ್ತೇವೆ ಎಂದರು.

ಇದೇ ವೇಳೆ, ಪ್ರಧಾನಿ ಮೋದಿ ಪ್ರಚಾರದ ಕುರಿತು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಏಪ್ರಿಲ್ 25 ಅಥವಾ 26ರ ನಂತರ ಉತ್ತರ ಕರ್ನಾಟಕ ಭಾಗದಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ಪ್ರವಾಸ ಮಾಡಲಿದ್ದು, ಎರಡು ಅಥವಾ ಮೂರು ಲೋಕಸಭೆಗೆ ಒಂದು ಕ್ಲಸ್ಟರ್ ಮಾಡಿದ್ದಾರೆ ಎಂದರು.

ಇನ್ನು ನಟ ಪ್ರಕಾಶ್ ರೈ ಪ್ರಧಾನಿ ಮೋದಿ ಕುರಿತು ನೀಡಿರುವ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ಪ್ರಕಾಶ ರೈ ಯಾವಾಗ ಫೇಸ್ ರೀಡರ್ ಆದರು. ಮೋದಿಯವರು ವಿಶ್ವದ ನಾಯಕ ಅವರು ನೋಡುವ ದೃಷ್ಟಿಕೋನ ಹಾಗಿದೆ ಎಂದು ಹೇಳಿದರು.

ನಾಮಪತ್ರ ಸಲ್ಲಿಕೆ ಸಂದರ್ಭದಲ್ಲಿ ಮಾಜಿ ಸಚಿವ ಬಿ.ಸಿ.ಪಾಟೀಲ್, ಶಾಸಕ ಡಾ. ಚಂದ್ರು ಲಮಾಣಿ, ಮಾಜಿ ಶಾಸಕ  ವಿರೂಪಾಕ್ಷಪ್ಪ ಬಳ್ಳಾರಿ, ಅರುಣ್ ಕುಮಾರ್ ಪೂಜಾರಿ, ಶಿವರಾಜ ಸಜ್ಜನ್ ಹಾಗೂ ಬಿಜೆಪಿ ಮುಖಂಡ ಶಂಕರಣ್ಣ ಮಾಂತನವರ ಹಾಜರಿದ್ದರು.

ತಂದೆ ತಾಯಿ ಸಮಾಧಿಗೆ ನಮನ

ಬಸವರಾಜ ಬೊಮ್ಮಾಯಿಯವರು ಇಂದು ನಾಮಪತ್ರ ಸಲ್ಲಿಕೆಗೂ ಮೊದಲು ಹುಬ್ಬಳ್ಳಿಯ ರಾಯಾಪುರ ಬಳಿ ಇರುವ ಅವರ ತಂದೆ ತಾಯಿಯ ಗದ್ದುಗೆಗೆ ತೆರಳಿ ಪೂಜೆ ಸಲ್ಲಿಸಿ ಆಶೀರ್ವಾದ ಪಡೆದುಕೊಂಡರು.

ಇದೇ ಸಮಯದಲ್ಲಿ ತಮ್ಮ ಮೊಮ್ಮಗನ ಜೊತೆಗೆ ವಿಡಿಯೊ ಕಾಲ್ ಮೂಲಕ ಮಾತನಾಡಿ, ನಂತರ ನಾಮಪತ್ರ‌ ಸಲ್ಲಿಸಲು ತೆರಳಿದರು.

Key words: Haveri, Basavaraja Bommai, nomination