ಮೈಸೂರು,ಆಗಸ್ಟ್,5,2025 (www.justkannada.in): ಹಿಂದೂಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್ (HAL) ಒಂದು ಒಡಂಬಡಿಕೆ ಪತ್ರದ (ಮೆಮೊರೆಂಡಂ ಆಫ್ ಅಂಡರ್ಸ್ಟಾಂಡಿಂಗ್ – ಎಂಒಯು) ಮೂಲಕ ಮಲೆ ಮಹದೇಶ್ವರ ಬೆಟ್ಟದ ದುರ್ಗಮ ಗುಡ್ಡಗಾಡು ಪ್ರದೇಶದ ಬುಡಕಟ್ಟು ಸಮುದಾಯಗಳ ಶಾಲಾ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ನಿಲಯ ನಿರ್ಮಿಸುವ ಸಲುವಾಗಿ 4.77 ಕೋಟಿ ರೂಪಾಯಿ ಒದಗಿಸುವ ಭರವಸೆ ನೀಡಿದೆ.
ಈ ಸಂಬಂಧ HAL ಮತ್ತು ಸಾಲೂರು ಮಠದ ನಡುವೆ ಒಪ್ಪಂದವಾಗಿದ್ದು, ಶಿಕ್ಷಣ ಕ್ಷೇತ್ರಕ್ಕೆ ಅಪಾರ ಕೊಡುಗೆ ನೀಡಿ, ಸಮಾಜವನ್ನು ಉನ್ನತೀಕರಿಸಲು ಬಹಳ ಶ್ರಮವಹಿಸಿದ್ದೂ ಇಂದಿಗೂ ಈ ಪ್ರದೇಶದ ಜನಮಾನಸದಲ್ಲಿ ನೆಲೆಸಿರುವ ಪಟ್ಟದ ಶ್ರೀ ಗುರುಸ್ವಾಮಿಯವರ ‘ಪುಣ್ಯ ಸಂಸ್ಮರಣೋತ್ಸವ’ದ ಸಂದರ್ಭದಲ್ಲಿ ಈ ಘೋಷಣೆ ಮಾಡಲಾಯಿತು. ಈ ಒಡಂಬಡಿಕೆ ಪತ್ರಕ್ಕೆ ಅಧಿಕೃತವಾಗಿ ಆಗಸ್ಟ್ 2, 2025ರ ಶನಿವಾರ ಎಚ್ಎಎಲ್ ಮತ್ತು ಶ್ರೀ ಸಾಲೂರು ಮಠದ ಮಠಾಧೀಶ ಶಾಂತ ಮಲ್ಲಿಕಾರ್ಜುನ ಸ್ವಾಮೀಜಿಯವರು ಸಹಿ ಹಾಕಿದರು.
ಇಂದಿನ ಆಧುನಿಕ ಡಿಜಿಟಲ್ ಯುಗದಲ್ಲೂ, ಮಲೆ ಮಹದೇಶ್ವರ ಬೆಟ್ಟ ಪ್ರದೇಶದ 18 ಹಳ್ಳಿಗಳು ವಿದ್ಯುತ್ ಮತ್ತು ರಸ್ತೆಯಂತಹ ಮೂಲಭೂತ ಸೌಕರ್ಯಗಳ ಕೊರತೆ ಅನುಭವಿಸುತ್ತಿವೆ. ಇಲ್ಲಿನ ವಿದ್ಯಾರ್ಥಿಗಳಿಗೆ ಕಾಡಿನ ದಾರಿಯಲ್ಲಿ, ಬೆಟ್ಟಗಳನ್ನೇರಿ, ವಿದ್ಯಾಭ್ಯಾಸಕ್ಕಾಗಿ ಮಲೆ ಮಹದೇಶ್ವರ ಬೆಟ್ಟಕ್ಕೆ ಸಾಗುವ ಅನಿವಾರ್ಯತೆ ಇದೆ. ಈ ಕಷ್ಟದಿಂದಾಗಿ ಮತ್ತು ಶೈಕ್ಷಣಿಕ ಅವಕಾಶಗಳ ಕೊರತೆಯಿಂದಾಗಿ ಬಹಳಷ್ಟು ವಿದ್ಯಾರ್ಥಿಗಳು ವಿದ್ಯಾಭ್ಯಾಸವನ್ನು ಮೊಟಕುಗೊಳಿಸಿದ್ದಾರೆ. ಆದರೆ, ಈಗ ನಿರ್ಮಾಣಗೊಳ್ಳಲಿರುವ ನೂತನ ವಸತಿ ನಿಲಯ ಶಿಕ್ಷಣ ವಂಚಿತ ಸಮುದಾಯಗಳಿಗೆ ಆಶಾಕಿರಣವಾಗಲಿದೆ.
ಮುಂದಿನ ಮೂರು ವರ್ಷಗಳ ಅವಧಿಯಲ್ಲಿ, ಶ್ರೀ ಮಲೆ ಮಹದೇಶ್ವರ ಸ್ವಾಮಿ ಕೃಪಾ ಶಿಕ್ಷಣ ಸಂಸ್ಥೆ ಎಚ್ಎಎಲ್ ಒದಗಿಸುವ ಹಣಕಾಸಿನ ನೆರವನ್ನು ಕಾರ್ಯರೂಪಕ್ಕೆ ತರಲಿದೆ. ಬುಡಕಟ್ಟು ಸಮುದಾಯಗಳ, ಅದರಲ್ಲೂ ಮಲೆ ಮಹದೇಶ್ವರ ಬೆಟ್ಟ ಪ್ರಾಂತ್ಯದ ಗುಡ್ಡಗಳಲ್ಲಿರುವ 18 ಹಳ್ಳಿಗಳ ಬೇಡಗಂಪಣ ಮತ್ತು ಸೋಲಿಗ ಸಮುದಾಯಗಳ ವಿದ್ಯಾರ್ಥಿಗಳಿಗೆ ವಸತಿ ಶಿಕ್ಷಣದ ಅವಶ್ಯಕತೆ ಬಹಳಷ್ಟಿದ್ದು, ಇದನ್ನು ಒದಗಿಸುವ ನಿಟ್ಟಿನಲ್ಲಿ ವಸತಿ ನಿಲಯ ನಿರ್ಮಾಣ ಕಾಮಗಾರಿ ತಕ್ಷಣವೇ ಆರಂಭಗೊಳ್ಳಲಿದೆ. ಈ ಭೂ ಪ್ರದೇಶ ಬಹಳ ಸವಾಲಿನದಾಗಿದ್ದು, ಸುದೀರ್ಘ ಅವಧಿಯಿಂದಲೂ ಶಿಕ್ಷಣ ಪಡೆಯಲು ವಿದ್ಯಾರ್ಥಿಗಳಿಗೆ ಅಡಚಣೆಯಾಗಿ ಪರಿಣಮಿಸಿದೆ. ಆದರೆ, ನೂತನ ವಸತಿ ನಿಲಯ 1,000ಕ್ಕೂ ಹೆಚ್ಚು ವಿದ್ಯಾರ್ಥಿಗಳ ಕಷ್ಟವನ್ನು ಪರಿಹರಿಸಲಿದ್ದು, ಅವರಲ್ಲಿ 300ಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಮಠದ ವತಿಯಿಂದ ಈಗಾಗಲೇ ವಸತಿ ಶಿಕ್ಷಣ ಒದಗಿಸಲಾಗುತ್ತಿದೆ.
ಎಚ್ಎಎಲ್ ಸಂಸ್ಥೆಯ ಉನ್ನತ ಅಧಿಕಾರಿಗಳು ಸಮಾರಂಭದಲ್ಲಿ ಉಪಸ್ಥಿತರಿದ್ದು, ಸಮಾರಂಭದ ಮಹತ್ವವನ್ನು ಸಾರಿದರು. ಎಚ್ಎಎಲ್ ಅಧ್ಯಕ್ಷರು ಮತ್ತು ವ್ಯವಸ್ಥಾಪಕ ನಿರ್ದೇಶಕರಾದ ಡಾ. ಡಿ ಕೆ ಸುನಿಲ್ ಎಚ್ಎಎಲ್ ತಂಡದ ನೇತೃತ್ವ ವಹಿಸಿದ್ದರು. ಅವರೊಡನೆ, ಶ್ರೀ ರವಿ ಕೆ (ಕಾರ್ಯಾಚರಣಾ ನಿರ್ದೇಶಕರು), ಶ್ರೀ ಬಿ ಸೇನಾಪತಿ (ಹಣಕಾಸು ನಿರ್ದೇಶಕರು), ಶ್ರೀ ಎಂಜಿ ಬಾಲಸುಬ್ರಹ್ಮಣ್ಯ (ಮಾನವ ಸಂಪನ್ಮೂಲ ನಿರ್ದೇಶಕರು) ಉಪಸ್ಥಿತರಿದ್ದರು. ಅವರ ಉಪಸ್ಥಿತಿ ಗ್ರಾಮೀಣ ಶಿಕ್ಷಣ ಮತ್ತು ಸಾಮಾಜಿಕ ಸಮಾನತೆಯ ಕುರಿತು ಎಚ್ಎಎಲ್ ಹೊಂದಿರುವ ಬದ್ಧತೆಯನ್ನು ಪ್ರತಿಪಾದಿಸಿತು. ಸಮಾರಂಭದಲ್ಲಿ ಉಪಸ್ಥಿತರಿದ್ದ ಬಾಹ್ಯಾಕಾಶ ಮತ್ತು ರಕ್ಷಣಾ ವಿಶ್ಲೇಷಕರಾದ ಗಿರೀಶ್ ಲಿಂಗಣ್ಣ ಏರೋಸ್ಪೇಸ್ ಕ್ಷೇತ್ರದ ಸಂಸ್ಥೆ ತಳಮಟ್ಟದ ಅಭಿವೃದ್ಧಿಗೆ ಇಳಿಯುವುದರ ದೊಡ್ಡ ಚಿತ್ರಣವನ್ನು ವಿವರಿಸಿ, ಇದು ಅಸಾಧಾರಣ ಬದಲಾವಣೆ ತರಲಿದೆ ಎಂದರು.
ಕಾರ್ಯಕ್ರಮದಲ್ಲಿ ಚಾಮರಾಜನಗರ ಜಿಲ್ಲಾಧಿಕಾರಿ ಶಿಲ್ಪಾ ನಾಗ್, ಜಿಲ್ಲಾ ಪಂಚಾಯತ್ ಸಿಇಒ ಮೊನೋರೋಹಿತ್ ಪೊಲೀಸ್ ವರಿಷ್ಠಾಧಿಕಾರಿ ಕವಿತಾ, ಶಾಸಕ ನರೇಂದ್ರಸ್ವಾಮಿ, ಹನೂರು ಶಾಸಕ ಮಂಜುನಾಥ್, ಕೊಳ್ಳೇಗಾಲ ಶಾಸಕ ಎ ಆರ್ ಕೃಷ್ಣಮೂರ್ತಿ, ಮತ್ತು ತಮಿಳುನಾಡಿನ ಶಾಸಕ ಎಜಿ ವೆಂಕಟಾಚಲಂ (ಅಂಡಿಯೂರು), ಮತ್ತು ಸದಾಶಿವಂ (ಮೆಟ್ಟೂರು) ಸಕರ್ನಾಟಕ ಸರ್ಕಾರದ ಮಲೆ ಮಹದೇಶ್ವರ ಬೆಟ್ಟ ಅಭಿವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿಗಳಾದ ರಘು ಎ ಇ ಉಪಸ್ಥಿತರಿದ್ದರು.
Key words: Construction, hostel, tribal area, Agreement, HAL, Salur Mutt