ಆಪ್ತನಿಗೆ ಮುಡಾ ಅಧ್ಯಕ್ಷ ಸ್ಥಾನಕೊಡಿಸಲು ಸಚಿವ ಸಾ.ರ.ಮಹೇಶ್ ಎಷ್ಟಕ್ಕೆ ಸೇಲ್ ಆದ್ರು ಅನ್ನೋದನ್ನೂ ಆಣೆ ಮಾಡಿ ಹೇಳಲಿ : ವಿಶ್ವನಾಥ್ ಪುತ್ರ ಅಮಿತ್ ಸವಾಲು

 

ಮೈಸೂರು, ಜು.19, 2019 : (www.justkannada.in news) : ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ ( ಮುಡಾ) ಅಧ್ಯಕ್ಷರನ್ನು ನೇಮಕ ಮಾಡುವ ಸಂದರ್ಭದಲ್ಲಿ ಎಷ್ಟು ಹಣವನ್ನು ಪಡದಿದ್ದಾರೆ ಎಂಬುದನ್ನು ಸಹ ಮಕ್ಕಳ ಮೇಲೆ, ಅವ್ರ ಮೇಲೆ ಆಣೆ ಹಾಕಿಕೊಂಡು ಹೇಳಲಿ ಎಂದು ಜಿಲ್ಲಾ ಪಂಚಾಯ್ತಿ ಸದಸ್ಯರೂ ಆಗಿರುವ ಅಡಗೂರು ಎಚ್. ವಿಶ್ವನಾಥ್ ಪುತ್ರ, ಅಮಿತ್ ದೇವರಹಟ್ಟಿ ಸವಾಲು ಹಾಕಿದ್ದಾರೆ.

ಇಂದು ವಿಧಾನಸಭೆಯಲ್ಲಿ ನಡೆದ ಚರ್ಚೆಯಲ್ಲಿ ಭಾಗವಹಿಸಿದ್ದ ಕೆ.ಆರ್.ನಗರದ ಶಾಸಕ, ಸಚಿವ ಸಾ.ರ.ಮಹೇಶ್ ಅವರು ಮಾಡಿದ ಆರೋಪಕ್ಕೆ ಜಸ್ಟ್ ಕನ್ನಡ ಡಾಟ್ ಇನ್ ಗೆ ಪ್ರತ್ರಿಕ್ರಿಯಿಸಿದ ಅಮಿತ್ ದೇವರಹಟ್ಟಿ ಹೇಳಿದಿಷ್ಟು….

ನಮ್ಮ ತಂದೆ ಅಡಗೂರು ವಿಶ್ವನಾಥ್ ಅವರ ಬಗ್ಗೆ ಆರೋಪ ಮಾಡಿದ್ದಾರೆ, ಇರ್ಲಿ, ಇದಕ್ಕೆ ತಂದೆಯವರೆ ಸೂಕ್ತ ಪ್ರತಿಕ್ರಿಯೆ ನೀಡುತ್ತಾರೆ. ಯಾರು ಏನು ಮಾಡಿದ್ರು, ಹೇಗೆ ನಡೆದುಕೊಂಡರು ಎಂಬುದನ್ನು ಬಹಿರಂಗ ಪಡಿಸುತ್ತಾರೆ. ಸಚಿವ ಸಾ.ರ.ಮಹೇಶ್, ಆರೋಪ ಮಾಡುವಾಗ ಮಕ್ಕಳ ಮೇಲೆ, ತಮ್ಮ ಮೇಲೆ ಆಣೆ ಹಾಕಿದ್ರು, ಆ ಮೂಲಕ ಅವ್ರು ಹೇಳೋದೆಲ್ಲಾ ಸತ್ಯ ಅಂತ ನಂಬಿಸಲು ಪ್ರಯತ್ನಿಸಿದ್ರು, ಅದೇ ರೀತಿ ಮುಡಾಗೆ ಅಧ್ಯಕ್ಷರನ್ನು ನೇಮಕ ಮಾಡುವಾಗ ಎಷ್ಟಕ್ಕೆ ಸಾ.ರ.ಮಹೇಶ್ ಸೇಲ್ ಆದ್ರು ಅನ್ನೋದನ್ನ ಆಣೆ ಮಾಡಿ ಹೇಳಲಿ ಎಂದ ಅಮಿತ್ , ಮೈಸೂರಿನ ಮಾಜಿ ಉಪ ಮೇಯರ್ ಎಂ.ಜೆ.ರವಿಕುಮಾರ್ (ಚೆನ್ನಿರವಿ) ಅವರ ಹೆಸರು ಮುಡಾ (MUDA) ಅಧ್ಯಕ್ಷ ಸ್ಥಾನಕ್ಕೆ ಫೈನಲ್ ಆಗಿತ್ತು. ಆದರೆ ಕಡೆಗಳಿಗೆಯಲ್ಲಿ ಒತ್ತಡ ತಂದು ರವಿಕುಮಾರ್ ಹೆಸರು ಕೈಬಿಡಿಸಿ ಇವರ ಆಪ್ತರನ್ನು ನೇಮಕ ಮಾಡಿದ್ರು. ಇದೇನು ಪುಗ್ಸಟ್ಟೆಗೆ ಮಾಡಿಸಿದ ನೇಮಕನ ಅಥವಾ ಕಾಸಿಗಾಗಿ ಮಾಡಿಸಿದ್ದ ಎಂಬುದನ್ನು ಸಚಿವರೇ ಬಹಿರಂಗ ಪಡಿಸಲಿ ಎಂದು ಸವಾಲು ಹಾಕಿದರು.

ಈ ಮೂಲಕ ತಂದೆ ಪರ ಬ್ಯಾಟ್ ಬೀಸಿದ ಅಮಿತ್ ದೇವರಹಟ್ಟಿ ಮುಂದುವರೆದು, ಕೆಲ ದಿನಗಳ ಹಿಂದೆಯಷ್ಟೆ ಸಿಎಂ ಎಚ್.ಡಿ.ಕುಮಾರಸ್ವಾಮಿ ದೂರವಾಣಿ ಕರೆ ಮಾಡಿ ತಂದೆಯವರನ್ನು ವಾಪಸ್ಸು ಕರೆಸಿ, ಅವರ ಬೇಡಿಕೆಗಳೇನಿದೆಯೋ ಅದನ್ನು ಪೂರೈಸುತ್ತೇವೆ. ನಮ್ಮ ವಿರೋಧವೇನಿದ್ರು ಸಿದ್ದರಾಮಯ್ಯನ ವಿರುದ್ಧ ಮಾತ್ರ. ನಾವೆಲ್ಲಾ ಒಟ್ಟಾಗಿ ಹೋಗೋಣ ಎಂದು ಆಶ್ವಾಸನೆ ನೀಡಿದ್ರು, ಜತೆಗೆ ಶಾಸಕ ರವೀದ್ರ ಶ್ರೀಕಂಠಯ್ಯ ಹಾಗೂ ಫಾರುಕ್ ಸಹ ದೂರವಾಣಿ ಕರೆ ಮಾಡಿ ಇದೇ ರೀತಿಯಾದ ಆಶ್ವಾಸನೆ ನೀಡಿ ತಂದೆಯವರನ್ನು ವಾಪಸ್ಸು ಬರಹೇಳಿ ಎಂದು ಒತ್ತಡ ಹೇರಿದ್ರು ಎಂದರು.

ಈ ಆರೋಪಕ್ಕೆ ಸಂಬಂಧಿಸಿದಂತೆ ಸಾಕ್ಷಿ ಏನಿದೆ ಎಂಬ ಪ್ರಶ್ನೆಗೆ, ಇದಕ್ಕೆ ಸಂಬಂಧಿಸಿದ ಟೆಲಿಫೋನ್ ಕಾಲ್ ರೆಕಾರ್ಡ್ ನನ್ನ ಬಳಿ ಇದೆ ಎಂದು ಅಮಿತ್ ದೇವರಹಟ್ಟಿ ಸಮಜಾಯಿಷಿ ನೀಡಿದರು.

 

key words : H.Vishwanath son Amithdevarahatti open challenge to minister Sa.Ra.Mahesh