ಮೈಸೂರು,ಜುಲೈ,17,2025 (www.justkannada.in): ಕಾಂಗ್ರೆಸ್ ನಾಯಕರ ರಾಹುಲ್ ಗಾಂಧಿ ಅವರನ್ನ ನ್ಯಾಯಯೋಧ ಎಂದು ಕರೆದ ಸಿಎಂ ಸಿದ್ದರಾಮಯ್ಯ ವಿರುದ್ದ ವಾಗ್ದಾಳಿ ನಡೆಸಿರುವ ಬಿಜೆಪಿ ವಿಧಾನಪರಿಷತ್ ಸದಸ್ಯ, ಹೆಚ್.ವಿಶ್ವನಾಥ್ , ರಾಹುಲ್ ಗಾಂಧಿ ಯಾವ ನ್ಯಾಯ ಯೋಧ? ಸಿದ್ದರಾಮಯ್ಯಗೆ ಸಿಎಂ ಸ್ಥಾನದಿಂದ ಕೆಳಗಿಳಿಸುತ್ತಾರೆ ಅಂತ ಗೊತ್ತಾಗಿದೆ. ಹೀಗಾಗಿ ರಾಹುಲ್ ಗಾಂಧಿಗೆ ಚಮಚಗಿರಿ ಮಾಡುತ್ತಿದ್ದಾರೆ ಎಂದು ಕುಟುಕಿದರು.
ನಗರದ ಜಲಾದರ್ಶಿನಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಎಂಎಲ್.ಸಿ ವಿಶ್ವನಾಥ್, ಸಿದ್ದರಾಮಯ್ಯ ದೇಶದ ಹಿಂದುಳಿದ ವರ್ಗಗಳ ಕಮಿಟಿ ಮೆಂಬರ್ ಆಗಿದ್ದಾರೆ. ರಾಹುಲ್ ಗಾಂಧಿಗೆ ನ್ಯಾಯ ಯೋಧ ಎಂಬ ಬಿರುದು ಕೊಟ್ಟಿದ್ದಾರೆ ರಾಹುಲ್ ಗಾಂಧಿ ಯಾವ ನ್ಯಾಯ ಯೋಧ? ರಾಹುಲ್ ಗಾಂಧಿಗೆ ಚಮಚ ಗಿರಿ ಮಾಡುತ್ತಿದ್ದಾರೆ. ರಾಹುಲ್ ಗಾಂಧಿ ನ್ಯಾಯ ಯೋಧ ಅಲ್ಲ. ಸಿದ್ದರಾಮಯ್ಯನೂ ನ್ಯಾಯ ಯೋಧ ಅಲ್ಲ. ಸಿದ್ದರಾಮಯ್ಯ ಹಿಂದುಳಿದ ವರ್ಗಗಳ ಚಾಂಪಿಯನ್ ಅಂತಾರೆ. ನನ್ನ ಬಿಟ್ಟರೆ ಯಾರು ಇಲ್ಲ, ದೇವರಾಜ ಅರಸುಗೆ ನಾನು ಸಮ ಅಂತಾರೆ. ಈ ಹಿಂದೆ ಕಾಕ ಕಾಳೇಕಾರ್ ವರದಿಯನ್ನ ಇದೇ ಜವಾಹರ್ ಲಾಲ್ ನೆಹರು ತಿರಸ್ಕಾರ ಮಾಡಿದರು. ಹಿಂದುಳಿದ ವರ್ಗಕ್ಕೆ ಅನ್ಯಾಯ ಮಾಡಿದರು. ಮೊರಾರ್ಜಿ ದೇಸಾಯಿ ಬಂದು ಇದನ್ನು ಅನುಷ್ಠಾನಕ್ಕೆ ತಂದರು ಎಂದರು.
ಇಂದು ಮಂಡಲ ವರದಿ ಇದೆ. ಕಾಂಗ್ರೆಸ್ ಎಂದೂ ಕೂಡ ಹಿಂದುಳಿದ ವರ್ಗಗಳ ಆಯೋಗದ ಪರ ನಿಂತಿಲ್ಲ. ವರದಿಗಳನ್ನು ತಿರಸ್ಕಾರ ಮಾಡಿಕೊಂಡು ಬಂದಿದೆ. ಅಹಿಂದ ಮಾಡಿದ್ದು ದ್ವಾರಕನಾಥ್. ಅದಕ್ಕೆ ಪುಷ್ಟಿ ಕೊಟ್ಟಿದ್ದು ಜಾಲಪ್ಪ. ಮೊದಲ ಸಭೆ ಆಗಿದ್ದು ಕೋಲಾರದಲ್ಲಿ. ಅಂದು ಧರ್ಮಸಿಂಗ್ ಬಂದಿದ್ದರು. ಈ ನಡುವೆ ಸಿದ್ದರಾಮಯ್ಯ ರಾತೋರಾತ್ರಿ ಜಾಲಪ್ಪ ಅವರ ಫೋಟೋ ತೆಗೆಸಿ ಇವರ ಫೋಟೋ ಹಾಕೊಂಡರು. ಇದೇ ಸಿದ್ದರಾಮಯ್ಯ ಮಾಡಿಕೊಂಡು ಬಂದಿರುವುದು. ಹಿಂದುಳಿದ ವರ್ಗದ ನಾಯಕ ದುರ್ಬಲರ ನಾಯಕ ಅಂದರೆ ದೇವರಾಜ ಅರಸು ಮಾತ್ರ. ಸಿದ್ದರಾಮಯ್ಯ ಹಿಂದುಳಿದ ವರ್ಗದ ನಾಯಕ ಅಲ್ಲ. ಸಿದ್ದರಾಮಯ್ಯಗೆ 4 ಜಾತಿ ಹೆಸರು ಬಿಟ್ಟರೆ ಹಿಂದುಳಿದ ವರ್ಗಗಳ ಜಾತಿಗಳ ಬಗ್ಗೆ ಗೊತ್ತಿಲ್ಲ. ಅವನ್ಯಾಯ ಹಿಂದುಳಿದ ವರ್ಗದ ನಾಯಕ ಎಂದು ಕಿಡಿಕಾರಿದರು.
ಹಿರಿಯ ಪತ್ರಕರ್ತ ಕೆ.ಬಿ ಗಣಪತಿ ಅವರಿಗೆ ಸರ್ಕಾರಿ ಗೌರವ ಸಿಗಲಿಲ್ಲ
ಹಿರಿಯ ಪತ್ರಕರ್ತ ಮೈಸೂರು ಮಿತ್ರ ಸಂಪಾದಕ ಗಣಪತಿ ನಿಧನರಾದರು. ಆದರೆ ಸಿಎಂ ಸಿದ್ದರಾಮಯ್ಯ ಅವರಿಗೆ ಸರ್ಕಾರದಿಂದ ಸಿಗುವ ಗೌರವ ಸಿಗದಂತೆ ನೋಡಿಕೊಂಡರು. ಈ ಹಿಂದೆ ರಾಜಶೇಖರ್ ಕೋಟಿ ವಿಧಿವಶರಾದಾಗ ಸರ್ಕಾರದ ಗೌರವಗಳನ್ನು ಕೊಟ್ಟರು. ಆದರೆ ಗಣಪತಿ ಅವರು ತೀರಿಕೊಂಡಾಗ ಸರ್ಕಾರಿ ಗೌರವ ಸಿಗಲಿಲ್ಲ. ಸಿದ್ದರಾಮಯ್ಯ ಈ ನೀತಿಗೆ ನನ್ನ ಧಿಕ್ಕಾರ ಎಂದು ವಿಶ್ವನಾಥ್ ಹರಿಹಾಯ್ದರು.
ಪತ್ರಕರ್ತರ ಸಂಘ ಸಿಎಂ ಸಿದ್ದರಾಮಯ್ಯಗೆ ಧಿಕ್ಕಾರ ಹೇಳಬೇಕು. ನಾಳೆ ಮೈಸೂರಿಗೆ ಸಿಎಂ ಬಂದಾಗ ಬಹಿಷ್ಕಾರ ಹಾಕಬೇಕು. ಎಲ್ಲರನ್ನೂ ಏಕವಚನದಲ್ಲಿ ಸಿದ್ದರಾಮಯ್ಯ ಮಾತನಾಡಿಸುತ್ತಾರೆ. ಹಿರಿಯ ಪತ್ರಕರ್ತರಿಗೆ ಅವಮಾನ ಮಾಡಿದ್ದಾರೆ ಎಂದು ಎಂ.ಎಲ್.ಸಿ ವಿಶ್ವನಾಥ್ ವಾಗ್ದಾಳಿ ನಡೆಸಿದರು.
Key words: Rahul Gandhi, Sidddaramaiah, justice, H. Vishwanath, Mysore