ಗೃಹಲಕ್ಷ್ಮೀ ಯೋಜನೆ ಪರಿಷ್ಕರಣೆ: ಸರ್ಕಾರಕ್ಕೆ ಕುಟುಕಿದ JDS

ಬೆಂಗಳೂರು, ಜೂನ್​​, 12,2026 (www.justkannada.in): ಗೃಹಲಕ್ಷ್ಮಿ ಯೋಜನೆಯಲ್ಲಿ ಆಗುತ್ತಿರುವ ದುರ್ಬಳಕೆ ತಡೆಯಲು ಪರಿಷ್ಕರಣೆಗೆ ಮುಂದಾಗಿರುವ ರಾಜ್ಯ ಸರ್ಕಾರಕ್ಕೆ ಜೆಡಿಎಸ್ ಟಾಂಗ್ ಕೊಟ್ಟಿದೆ.

ಗೃಹಲಕ್ಷ್ಮಿ ಯೋಜನೆಯ ಫಲಾನುಭವಿಗಳಿಗೆ  ಬಯೋಮೆಟ್ರಿಕ್ ದೃಢೀಕರಣ ಕಡ್ಡಾಯ  ಸೇರಿದಂತೆ ಕೆಲ ನಿಯಮಗಳ ಮೂಲಕ ಪರಿಷ್ಕರಣೆಗೆ ಮುಂದಾಗಿರುವ ರಾಜ್ಯ ಸರ್ಕಾರದ ವಿರುದ್ದ ಟ್ವಿಟ್ಟರ್ ನಲ್ಲಿ ವಾಗ್ದಾಳಿ ನಡೆಸಿರುವ ಜೆಡಿಎಸ್ ಘಟಕ ವಚನಭ್ರಷ್ಟ ಕಾಂಗ್ರೆಸ್‌ ನ ಗ್ಯಾರಂಟಿಗಳ ಅಸಲಿ ಬಣ್ಣ ಬಯಲಾಗಿದೆ. ಚುನಾವಣೆಗೂ ಮುನ್ನ ಯೋಜನೆಗೆ ಯಾವ ಷರತ್ತೂ ಇರಲಿಲ್ಲ. ಪ್ರತಿ ಮನೆಯೊಡತಿಗೆ 2,000 ಎಂದು ರಾಜ್ಯದ ತಾಯಂದಿರ ಕಿವಿಗೆ ಹೂವಿಟ್ಟ ಕಾಂಗ್ರೆಸ್​​ ಸರ್ಕಾರ ಇದೀಗ 17 ಜಿಲ್ಲೆಗಳಲ್ಲಿ ಬರೋಬ್ಬರಿ 1.1 ಲಕ್ಷಕ್ಕೂ ಹೆಚ್ಚು ಮಹಿಳೆಯರನ್ನು ಗೃಹಲಕ್ಷ್ಮಿ ಯೋಜನೆಯಿಂದ ಕಿತ್ತುಹಾಕಿ ತನ್ನ ನೈಜ ಮುಖವನ್ನು ಬಹಿರಂಗಪಡಿಸಿದೆ. ಬಯೋಮೆಟ್ರಿಕ್, ಸರ್ವರ್ ಪ್ರಾಬ್ಲಮ್ ಎಂದು ಒಂದಿಲ್ಲೊಂದು ನೆಪ ಹೇಳಿ ಬಡವರ ಹೊಟ್ಟೆಯ ಮೇಲೆ ಹೊಡೆಯುತ್ತಿರುವ ಈ ‘ಕೈ’ ಸರ್ಕಾರದ ದ್ರೋಹವನ್ನು ರಾಜ್ಯದ ಜನತೆ ನೋಡುತ್ತಿದ್ದಾರೆ ಎಂದು ಸರ್ಕಾರಕ್ಕೆ ಕುಟುಕಿದೆ.

ಇದಕ್ಕಿಂತ ನಾಚಿಕೆಗೇಡಿನ ಸಂಗತಿ ಎಂದರೆ, ಗೃಹಲಕ್ಷ್ಮಿ ಕಡಿತದ ಬಗ್ಗೆ ಸಾಕ್ಷಾತ್ ಮುಖ್ಯಮಂತ್ರಿಗಳನ್ನೇ ಕೇಳಿದರೆ, ನನಗೆ ಗೊತ್ತಿಲ್ಲ ಎಂಬ ಬೇಜವಾಬ್ದಾರಿ ಉತ್ತರ ಕೊಡುತ್ತಾರೆ. ಹಾಗಾದರೆ ರಾಜ್ಯದಲ್ಲಿ ಆಡಳಿತ ನಡೆಸುತ್ತಿರುವುದು ಯಾರು? ಸಿಎಂ ಅವರಿಗೆ ಗೊತ್ತಿಲ್ಲದೆ ಇಲಾಖೆಗಳಲ್ಲಿ ಇಷ್ಟೆಲ್ಲಾ ನಡೆಯುತ್ತಿದೆಯೇ ಅಥವಾ ಗೊತ್ತಿದ್ದೂ ನಾಟಕವಾಡುತ್ತಿದ್ದಾರೆಯೇ? ಎಂದು ಜೆಡಿಎಸ್ ಪ್ರಶ್ನಿಸಿದೆ.

5,000 ಕೋಟಿ ರೂ. ಗೃಹಲಕ್ಷ್ಮಿ ಹಣವನ್ನು ತಿಂದು ತೇಗಿರುವ ಭ್ರಷ್ಟ ಕಾಂಗ್ರೆಸ್ ಸರ್ಕಾರ, ಮತಕ್ಕಾಗಿ ಮಹಿಳೆಯರನ್ನು ಯಾಮಾರಿಸಿ ಅಧಿಕಾರ ಸಿಕ್ಕ ಮೇಲೆ ಅವರನ್ನು ಅನರ್ಹರು ಎಂದು ಬೀದಿಗೆ ತಳ್ಳುವುದು ಯಾವ ರೀತಿಯ ಮಹಿಳಾ ಸಬಲೀಕರಣ? ಇದು ಕೇವಲ ವೋಟ್ ಬ್ಯಾಂಕ್​​ಗಾಗಿ ಮಾಡಿದ ವಂಚನೆಯಾಗಿದ್ದು, ಕಾಂಗ್ರೆಸ್ ಸರ್ಕಾರ ತಾಯಂದಿರ ಕ್ಷಮೆ ಕೇಳಬೇಕು. ಕೊಟ್ಟ ಮಾತಿಗೆ ತಪ್ಪಿದವರನ್ನು ಈ ನಾಡಿನ ಜನತೆ ಎಂದಿಗೂ ಕ್ಷಮಿಸುವುದಿಲ್ಲ ಎಂದು ಜೆಡಿಎಸ್ ಕಿಡಿಕಾರಿದೆ.

Key words: Revision, Grihalakshmi Yojana, government, JDS