ಪಿಯುಸಿ ಫಲಿತಾಂಶ ಹೆಚ್ಚಿಸಲು ಬಹು ಆಯ್ಕೆ ಪ್ರಶ್ನೆಗಳನ್ನು ಸೇರ್ಪಡೆಗೊಳಿಸಲು ಸರ್ಕಾರ ಚಿಂತನೆ.

ಬೆಂಗಳೂರು, ಡಿಸೆಂಬರ್ 1, 2022 (www.justkannada.in): ಕರ್ನಾಟಕ ಸರ್ಕಾರವು ಪದವಿಪೂರ್ವ ಪರೀಕ್ಷಾ ವ್ಯವಸ್ಥೆಯನ್ನು ಪರಿಷ್ಕರಿಸುವ ನಿಟ್ಟಿನಲ್ಲಿ ದೊಡ್ಡ ಬದಲಾವಣೆಗಳನ್ನು ತರಲು ಯೋಜಿಸಿದ್ದು, 15ರಿಂದ 20 ಅಂಕಗಳ ಬಹುಆಯ್ಕೆ ಪ್ರಶ್ನೆಗಳನ್ನು ಪರಿಚಯಿಸಲು ಯೋಜಿಸಿದೆ.

ಪದವಿಪೂರ್ವ ಪರೀಕ್ಷೆಗಳ ಉತ್ತೀರ್ಣತೆ ಪ್ರಮಾಣವನ್ನು ಹೆಚ್ಚಿಸುವ ಉದ್ದೇಶದೊಂದಿಗೆ ಈ ಪರಿಷ್ಕರಣೆಯನ್ನು ಯೋಜಿಸಿದ್ದು, ಇತ್ತೀಚೆಗೆ ಶಾಲಾ ಶಿಕ್ಷಣ ಹಾಗೂ ಸಾಕ್ಷರತಾ ಸಚಿವರಾದ ಬಿ.ಸಿ. ನಾಗೇಶ್ ಅವರ ಅಧ್ಯಕ್ಷತೆಯಲ್ಲಿ ಪಿಯು ಶಿಕ್ಷಣ ಇಲಾಖೆಯ ಅಧಿಕಾರಿಗಳೊಂದಿಗೆ ನಡೆಸಿದ ಪರಿಷ್ಕರಣಾ ಸಭೆಯಲ್ಲಿ ಈ ಕುರಿತು ಚರ್ಚಿಸಲಾಯಿತು. ರಾಜ್ಯ ಸರ್ಕಾರವು ಸಿಬಿಎಸ್‌ ಇ ಜೊತೆಗೆ ಸ್ಪರ್ಧಿಸಲು ಇಚ್ಛಿಸಿದ್ದು, ಪದವಿಪೂರ್ವ ಪರೀಕ್ಷೆಗಳ ಉತ್ತೀರ್ಣತೆಯ ಪ್ರಮಾಣವನ್ನು ಹೆಚ್ಚಿಸಿ, ಉನ್ನತ ಶಿಕ್ಷಣದಲ್ಲಿನ ಹಾಲಿ ಪ್ರವೇಶಾತಿ ಪ್ರಮಾಣವನ್ನು ಹೆಚ್ಚಿಸಲು ಉದ್ದೇಶಿಸಿದೆ.

ಮೂಲಗಳ ಪ್ರಕಾರ ಸರ್ಕಾರ ಮೊದಲ ಹಾಗೂ ಎರಡನೇ ಪಿಯು ಪರೀಕ್ಷೆಗಳಲ್ಲಿ ಬಹು ಆಯ್ಕೆಯ ಪ್ರಶ್ನೆಗಳನ್ನು ಪರಿಚಯಿಸಲು ಆಲೋಚಿಸುತ್ತಿದೆ. ಇದು ವಿದ್ಯಾರ್ಥಿಗಳಿಗೆ ಹೆಚ್ಚಿನ ಅಂಕಗಳನ್ನು ಗಳಿಸಲು ನೆರವಾಗಲಿದೆ ಎನ್ನುವುದು ಸರ್ಕಾರದ ಆಲೋಚನೆಯಾಗಿದೆ.

ಸಭೆಯಲ್ಲಿ ಹಾಜರಿದ್ದ ಕೆಲವು ಹಿರಿಯ ಅಧಿಕಾರಿಗಳು ಬಹುಆಯ್ಕೆ ಪ್ರಶ್ನೆಗಳನ್ನು ಬೆಂಬಲಿಸಿದರು. “ಕೆಲವು ಅಧಿಕಾರಿಗಳು ಪಿಯು ಫಲಿತಾಂಶವನ್ನು ಹೆಚ್ಚಿಸಲು ಬಹುಆಯ್ಕೆ ಪ್ರಶ್ನೆಗಳನ್ನು ಪರಿಚಯಿಸುವುದು ಉತ್ತಮ ವಿಧಾನವಾಗಿದೆ,” ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಸಭೆಯಲ್ಲಿ ಕೇಂದ್ರೀಯ ಬೋರ್ಡ್ ಗಳ ಫಲಿತಾಂಶಗಳೊಂದಿಗೆ ರಾಜ್ಯದ 2ನೇ ಪಿಯು ಫಲಿತಾಂಶವನ್ನು ಹೋಲಿಕೆ ಮಾಡಲಾಯಿತು. “ಅಧಿಕಾರಿಗಳು ಚರ್ಚಿಸಿದಂತೆ ವಿದ್ಯಾರ್ಥಿಗಳಲ್ಲಿ ಹೆಚ್ಚು ಅಂಕಗಳನ್ನು ಗಳಿಸುವ ಸಾಮರ್ಥ್ಯ ಹಾಗೂ ಉತ್ತೀರ್ಣತೆ ಪ್ರಮಾಣ ಇಳಿಕೆಯಾಗುತ್ತಿದೆ ಹಾಗೂ ನಮ್ಮ ವಿದ್ಯಾರ್ಥಿಗಳು ವೃತ್ತಿಪರ ಕೋರ್ಸ್ ಗಳಲ್ಲಿ ಸೀಟುಗಳನ್ನು ಗಿಟ್ಟಿಸಲು ಸಿಬಿಎಸ್‌ ಇ ವಿದ್ಯಾರ್ಥಿಗಳೊಂದಿಗೆ ಸ್ಪರ್ಧಿಸಲು ಹೆಣಗಾಡುತ್ತಿದ್ದಾರೆ,” ಎಂದು ಮೂಲಗಳ ಮೂಲಕ ತಿಳಿದು ಬಂದಿದೆ. ಈ ವರ್ಷದ ೨ನೇ ಪಿಯು ಪರೀಕ್ಷೆಗಳ ಒಟ್ಟಾರೆ ಉತ್ತೀರ್ಣತೆ ಪ್ರಮಾಣ ಶೇ.೬೧.೮೮ ರಷ್ಟಿದೆ.

ಪ್ರಸ್ತುತ, ದ್ವಿತೀಯ ಪಿಯು ಪ್ರಶ್ನೆ ಪತ್ರಿಕೆಗಳಲ್ಲಿ ಕೇವಲ ಪ್ರಶ್ನೆ-ಉತ್ತರಗಳ ಮಾದರಿಯಿವೆ. ಒಂದು ಅಂಕಿಯ ಪ್ರಶ್ನೆಗಳೂ ಸಹ ವಿವರಣಾತ್ಮಕವಾಗಿವೆ. ಹಲವು ವರ್ಷಗಳಿಂದ ದ್ವಿತೀಯ ಪಿಯು ಉತ್ತೀರ್ಣತೆಯ ಪ್ರಮಾಣ ಶೇ.೬೫% ಅನ್ನು ದಾಟಿಲ್ಲ. ಆದರೆ ಸಿಬಿಎಸ್‌ಇ ದ್ವಿತೀಯ ಪಿಯು ಉತ್ತೀರ್ಣತೆಯ ಪ್ರಮಾಣ ಶೇ.೯೦ ರಿಂದ ಶೇ.೧೦೦% ರಷ್ಟಿದೆ.

ಸಚಿವ ನಾಗೇಶ್ ಒಳಗೊಂಡಂತೆ ಹಿರಿಯ ಅಧಿಕಾರಿಗಳು ೨೦೨೩ನೇ ಪಿಯು ಪರೀಕ್ಷೆಗಳಲ್ಲಿಯೇ ಬಹು ಆಯ್ಕೆ ಪ್ರಶ್ನೆಗಳನ್ನು ಪರಿಚಯಿಸಲು ಉತ್ಸುಕತೆಯನ್ನು ತೋರಿದ್ದಾರೆ. ಆದರೆ, ಇದನ್ನು ಅಂತಿಮಗೊಳಿಸುವುದಕ್ಕೆ ಮುಂಚೆ ಮತ್ತೊಂದು ಸಭೆಯನ್ನು ನಡೆಸಲು ನಿರ್ಧರಿಸಲಾಗಿದೆಯಂತೆ.

2022 ರ ಬೋರ್ಡ್ ಪರೀಕ್ಷೆಗಳ ಸಂದರ್ಭದಲ್ಲಿ ಪಿಯು ಇಲಾಖೆಯು ವಿದ್ಯಾರ್ಥಿಗಳಿಗೆ ನೆರವಾಗುವ ಸಲುವಾಗಿ ಅವರಿಗೆ ಹೆಚ್ಚಿನ ಆಯ್ಕೆಗಳನ್ನು ಒದಗಿಸಲು ಪ್ರಶ್ನೆಗಳನ್ನು ಹೆಚ್ಚಿಸಿದ್ದರು. ಇದರಿಂದಾಗಿ ಒಟ್ಟಾರೆ ಫಲಿತಾಂಶ ವೃದ್ಧಿಯಾಗಿತ್ತು. ಕೋವಿಡ್-೧೯ ಸಾಂಕ್ರಾಮಿಕ ಇದ್ದ ಕಾರಣ ಹಾಗೂ ಆಫ್‌ ಲೈನ್ ತರಗತಿಗಳು ಇಲ್ಲದಿದ್ದ ಕಾರಣದಿಂದಾಗಿ ಹೀಗೆ ಮಾಡಲಾಗಿತ್ತು.

ಈ ವರ್ಷ ಇಲಾಖೆಯು ದ್ವಿತೀಯ ಪಿಯು ಪ್ರಶ್ನೆ ಪತ್ರಿಕೆಗಳ ಮಾದರಿಯನ್ನು ಸಾಂಕ್ರಾಮಿಕಕ್ಕೆ ಮುಂಚಿನ ವರ್ಷಗಳಲ್ಲಿ ರೀತಿಯಲ್ಲೇ ಉಳಿಸಿಕೊಳ್ಳುವುದಾಗಿ ಈಗಾಗಲೇ ಘೋಷಿಸಿದೆ. ಈ ಬಾರಿ ದ್ವಿತೀಯ ಪಿಯು ಪರೀಕ್ಷೆಗಳನ್ನು ಮಾರ್ಚ್ ೯ ರಿಂದ ೨೯ರ ನಡುವೆ ನಡೆಸಲಾಗುತ್ತದೆ.

ಸುದ್ದಿ ಮೂಲ: ಡೆಕ್ಕನ್ ಹೆರಾಲ್ಡ್

Key words: Government – include- multiple choice -questions – increase- PUC result.