ಜಿ.ಎನ್.ಮೋಹನ್ ಸ್ಪೆಷಲ್: ಯಾಕೋ ಮನಸ್ಸು ತೀರಾ ಭಾರ…

ಯಾಕೋ ಮನಸ್ಸು ತೀರಾ ಭಾರ.. —-

ಯಾಕೋ ಮನಸ್ಸು ತೀರಾ ಭಾರ ಲಾಕ್ ಡೌನ್ ಕಾಲದ ಎಷ್ಟೋ ಕಥೆಗಳನ್ನು ಹುಡುಕುಡುಕಿ ಓದುತ್ತಿದ್ದ ನಾನು ಇದನ್ನು ಓದಿದವನೇ ಮಾತಿಲ್ಲದವನಾಗಿ ಹೋದೆ. ನನ್ನೊಳಗೆ ಇನ್ನಿಲ್ಲದ ದುಃಖ ಮಡುಗಟ್ಟಿತ್ತು. ಮುಂಬೈನಲ್ಲಿ ಸಂಬಂಧಿಕರ ಮದುವೆ.

ತೆಲಂಗಾಣದಿಂದ ಮದುವೆಗೆ ಹೋದ ಅಮ್ಮ ಅಲಿ ಲಾಕ್ ಡೌನ್ ನಲ್ಲಿ ಸಿಕ್ಕು ಬಿದ್ದಿದ್ದಾಳೆ. ಯಾವಾಗ ಲಾಕ್ ಡೌನ್ ಸ್ವಲ್ಪ ತೆರವಾಯಿತೋ ರೆಕ್ಕೆ ಬಿಚ್ಚಿದ ಹಕ್ಕಿಯಂತೆ ತನ್ನ ಮನೆಗೆ ಹಾರಲು ಸಜ್ಜಾಗಿದ್ದಾಳೆ. ಸಂಭ್ರಮದಿಂದ ಮನೆಗೆ ಬಂದ ಅಮ್ಮನಿಗೆ ಕಂಡದ್ದು ಮನೆಯ ಗೇಟಿಗೆ ಬಿದ್ದಿರುವ ಬೀಗ. ಅಯ್ಯೋ, ಮಗ ಸೊಸೆ ಎಲ್ಲಿ ಹೋದರೋ ಎಂದು ಅಲವತ್ತುಕೊಂಡಿದ್ದಾಳೆ. ಏನು ಮಾಡುವುದು ಎಂದು ತೋಚದೆ ಗಲಿಬಿಲಿಯಾಗಿದ್ದಾಗ ಮನೆಯ ಒಳಗಿನಿಂದ ಒಗ್ಗರಣೆ ವಾಸನೆ ಬಂದಿದೆ. ಹಾಗಾದರೆ ಮನೆಯಲ್ಲಿ ಯಾರೋ ಇದ್ದಾರೆ.

ಜೀವ ಬಂದಂತಾಗಿ ಹೊರಗಿನಿಂದಲೇ ಮಗ ಸೊಸೆಯನ್ನು ಕೂಗಿ ಕರೆದಿದ್ದಾಳೆ. ಯಾರೆಂದರೆ ಯಾರ ಉತ್ತರವೂ ಇಲ್ಲ. ಗೇಟು, ಮನೆಯ ಬಾಗಿಲೂ ತೆರೆಯಲಿಲ್ಲ. ದಿಕ್ಕು ತೋಚದಂತಾದ ಅಮ್ಮ ಅಲ್ಲೇ ಗೇಟಿನಲ್ಲಿಯೇ ಕುಸಿದು ಕೂತಿದ್ದಾಳೆ. ಮನೆಯೊಳಗೆ ಎಲ್ಲಾ ಸದ್ದೂ ಕೇಳುತ್ತಿದೆ. ಆದರೆ ಬಾಗಿಲು ತೆರೆಯುತ್ತಿಲ್ಲ. ಇಡೀ ಒಂದು ಹಗಲು ಒಂದು ರಾತ್ರಿಯನ್ನು ಗೇಟಿನಲ್ಲೇ ಮಲಗಿ ಕಳೆದ ಅವರನ್ನು ನೋಡಿ ನೆರೆಹೊರೆಯವರಿಗೆ ಅಯ್ಯೋ ಅನಿಸಿದೆ. ನಾವು ವರ್ಷಗಳಿಂದ ನೋಡುತ್ತಿರುವ, ನಮ್ಮ ಜೊತೆ ದೇವಸ್ಥಾನಕ್ಕೂ ತರಕಾರಿ ಮಾರುಕಟ್ಟೆಗೂ ಜೊತೆಯಾಗುತ್ತಿದ್ದ ಅಮ್ಮ ಯಾಕೆ ಗೇಟಿನಲ್ಲಿ ಕುಸಿದು ಕುಳಿತಿದ್ದಾರೆ ಎಂದು ವಿಚಾರಿಸಿದ್ದಾರೆ. ಮನೆಯೊಳಗೇ ಎಲ್ಲರೂ ಇದ್ದಾರೆ ಆದರೆ ಬಾಗಿಲು ತೆರೆಯುತ್ತಿಲ್ಲ ಎಂದು ಗೊತ್ತಾಗಿ ಅಕ್ಕಪಕ್ಕದ ಮನೆಯವರೂ ಕೂಗಿ ಕರೆದಿದ್ದಾರೆ. ಅದಕ್ಕೂ ಉತ್ತರವಿಲ್ಲ. ಆಗ ದಾರಿ ಕಾಣದೆ ತಮ್ಮ ಶಾಸಕನಿಗೂ, ಕಾರ್ಪೊರೇಟರ್ ಗೂ ಮೊರೆ ಹೋಗಿದ್ದಾರೆ ಯಾವಾಗ ಅವರು ಪೊಲೀಸರ ಸಮೇತ ಮನೆಗೆ ಬಂದರೋ ಆಗ ಬಾಗಿಲು ತೆರೆದಿದೆ. ಆದರೆ ಅಮ್ಮನನ್ನು ಒಳಗೆ ಬಿಟ್ಟುಕೊಳ್ಳಲು ಮಾತ್ರ ರೆಡಿ ಇಲ್ಲ. ಕಾರಣ ಆಕೆ ಮುಂಬೈನಿಂದ ಬಂದಿದ್ದಾಳೆ.

ಅರೆ! ಬಂದರೇನಂತೆ ಅವರನ್ನು ಹೋಮ್ ಕ್ವಾರಂಟೈನ್ ಮಾಡಿ ಎಂದಿದ್ದಾರೆ. ಮಗ ಸೊಸೆ ಬಿಲ್ ಕುಲ್ ಒಪ್ಪಿಲ್ಲ. ಹೋಗಲಿ ಅವರಿಗೆ ಅನ್ನ ನೀರು ಕೊಟ್ಟು ಏನು ಮಾಡಬಹುದು ಎಂದು ಅವರೊಡನೆ ಮಾತನಾಡಬಹುದಿತ್ತಲ್ಲಾ ಎಂದು ಕೇಳಿದರೆ ಅದಕ್ಕೆಲ್ಲ ನಮಗೆ ಪುರುಸೊತ್ತಿಲ್ಲ ಎನ್ನುವ ಉತ್ತರ ಬಂದಿದೆ. ಮನೆ ಒಳಗೆ ಪ್ರವೇಶಿಸಿದ ಪೊಲೀಸರು ನೋಡಿದರೆ ಅಮ್ಮ ಪ್ರತ್ಯೇಕವಾಗಿ ಕ್ವಾರಂಟೈನ್ ನಲ್ಲಿರಲು ವ್ಯವಸ್ಥೆಯಂತೂ ಇದೆ. ಗದರಿಸಿ ಕೇಳಿದರೆ ಕೊಠಡಿಯೇನೋ ಪ್ರತ್ಯೇಕ ಇದೆ ಆದರೆ ವಾಶ್ ಬೇಸಿನ್ ಒಂದೇ ಇದೆ ಎನ್ನುವ ಕುಂಟು ಉತ್ತರ. ಅರೆ ವಾಶ್ ರೂಮ್ ಒಂದೇ ಆದರೆ ಆತಂಕಪಟ್ಟುಕೊಳ್ಳಬಹುದು ಆದರೆ ವಾಶ್ ಬೇಸಿನ್ ಬಳಸದೆ ಇರಬಹುದಲ್ಲ ಎಂದರೆ ಅದಕ್ಕೂ ಅಡ್ಡ ಉತ್ತರ. ಕೊನೆಗೆ ಶಾಸಕ, ಕಾರ್ಪೊರೇಟರ್, ಪೊಲೀಸರು ತಕ್ಕ ಪರಿಣಾಮದ ಬಗ್ಗೆ ಮಾತನಾಡಿದ ಮೇಲೆಯೇ ಅವರನ್ನು ಒಳಗೆ ಬಿಟ್ಟು ಕೊಂಡದ್ದು.. ಏಕೆ ಹೀಗೆ..

—– ಈ ಹಿಂದೆ ಆರ್ ಟಿ ವಿಠ್ಠಲಮೂರ್ತಿ ಒಂದು ಲೇಖನ ಬರೆದಿದ್ದರು. ಒಂದು ಬೆಳಕಿನ ಬಗ್ಗೆ. ಎಸ್ ಎಸ್ ಕುಮಟಾ ಎನ್ನುವ ಸಮಾಜವಾದಿ ನಿಗಿ ನಿಗಿ ಕೆಂಡದಂತೆ ಉರಿದು ದನಿಯಿಲ್ಲದವರ ದನಿಯಾದವರ ಪತ್ನಿಯ ಬಗ್ಗೆ. ಅಂತಹ ಎಸ್ ಎಸ್ ಕುಮಟಾ ಅವರ ಹೆಂಡತಿ ರತ್ನಮ್ಮ ತೀರಿ ಹೋದರು. ರತ್ನಮ್ಮ ಹೇಗೆ ಕುಮಟಾ ಅವರ ಜೊತೆ ಜೊತೆಗೆ ಇದ್ದು ಅವರೊಳಗಿನ ಕಿಡಿ ನಂದದಂತೆ ನೋಡಿಕೊಂಡರು. ಹೇಗೆ ಹಸಿವನ್ನು ತನ್ನ ಗಂಡನಿಗೆ ಕಾಣದಂತೆ ತಮ್ಮೊಳಗೆ ಮುಚ್ಚಿಟ್ಟುಕೊಂಡರು. ಹೇಗೆ ಅವರು ಬಡಜನರ ಕಣ್ಣಿಗೆ ಬೆಳಕು ತುಂಬಲು ಹೆಗಲಾಗಿ ನಿಂತರು ಎಂದು ಬರೆದಿದ್ದರು. ಆದರೆ.. ಆದರೆ ನನ್ನ ಮನಸ್ಸು ಕುಸಿದು ಹೋದದ್ದು ಅದಕ್ಕಲ್ಲ. ಅವರ ಸಾವಿಗಿಂತಲೂ ತೀವ್ರವಾಗಿ ತಟ್ಟಿದ್ದು ಅವರು ತಮ್ಮ ಕೊನೆಯ ದಿನಗಳನ್ನು ವೃದ್ಧಾಶ್ರಮದಲ್ಲಿ ಕಳೆಯಬೇಕಾಯಿತು ಎನ್ನುವುದರ ಬಗ್ಗೆ. ರತ್ನಮ್ಮನವರಿಗೆ ಮಕ್ಕಳಿದ್ದಾರೆ. ಸ್ಥಿತಿವಂತರೂ ಹೌದು. ಆದರೆ ಅವರು ಮಾತ್ರ ವೃದ್ಧಾಶ್ರಮದಲ್ಲಿರಬೇಕಾಯಿತು.

ನಾನು ಆ ತಾಯಿಯನ್ನು ಕಂಡಿದ್ದೇನೆ. ಅಷ್ಟೇ ಅಲ್ಲ ಅವರ ಮಗಳು ಸುಜಾತ ಕುಮಟಾ ಅವರ ಪತಿ ಉಮರಬ್ಬ ಅಪಘಾತದಲ್ಲಿ ತೀರಿ ಹೋದಾಗ ಅವರೊಂದಿಗೆ ಮಳೆ ಗಾಳಿ ಲೆಕ್ಕಿಸದೆ ಪಶ್ಚಿಮ ಘಟ್ಟ ಇಳಿದು ಕರಾವಳಿಯ ಬಗಲಲ್ಲಿದ್ದ ಸುರತ್ಕಲ್ ವರೆಗೆ ಹೋಗಿ ಬಂದಿದ್ದೇನೆ. ಆಕೆ ಗಟ್ಟಿಗಿತ್ತಿ. ಅವರ ಮಾತಿನೊಳಗೆ ಅವರ ಜೀವನದ ಏಟುಗಳು ಕಾಣದಂತೆ ಆದರೆ ಅವುಗಳಿಂದ ಪಾಠ ಕಲಿತು ಮುಂದೆ ಸಾಗುತ್ತಿರುವ ಕುರುಹಿತ್ತು. ಅಷ್ಟೂ ಮಕ್ಕಳಿಗೂ, ಅಂತೆಯೇ ಮೊಮ್ಮಕ್ಕಳಿಗೂ ಆಕೆ ಇನ್ನಿಲ್ಲದ ಆಧಾರವಾಗಿದ್ದರು. ಆದರೆ ಆಕೆ ವೃದ್ಧಾಶ್ರಮದಲ್ಲಿದ್ದರು. ಅದು ಆಕೆಗೆ ಬೇಕಿರಲಿಲ್ಲ. ಇಲ್ಲಿಂದ ಕರೆದುಕೊಂಡು ಹೋಗಿ ಎಂದು ಗೋಗರೆಯುತ್ತಿದ್ದರು. ಒಂದು ಬೆಳಕಿನ ದೊಂದಿಯಾಗಿದ್ದ, ಬೆಳಕ ದೀವಿಗೆಗೆ ಹೆಗಲಾಗಿದ್ದ ರತ್ನಮ್ಮ ಹೀಗೆ ಹೊರಟುಬಿಟ್ಟರು.

—– ಇನ್ನೊಂದು ದಿನ ಮಂಗಳೂರಿಗೆ ಹೋಗಲು ಬಸ್ ಹತ್ತಿ ಕೂತಿದ್ದೆ. ಹೊರಗೆ ಯಾರೋ ಭಿಕ್ಕುವ ಸದ್ದು ಏನು ಎಂದು ಇಳಿದು ಹತ್ತಿರ ಹೋದರೆ ಒಬ್ಬ ಹೆಂಗಸು, ಎದುರುಗಡೆ ಕುಡಿದು ತೂರಾಡುತ್ತಿರುವ ಯುವಕ. ಏನಮ್ಮ ಎಂದು ಕೇಳಿದೆ ಅಷ್ಟೇ ಸಾಕಾಯಿತೇನೋ ಆಕೆಗೆ. ಭಿಕ್ಕಿ ಭಿಕ್ಕಿ ಅಳತೊಡಗಿದಳು ಆಕೆಯೂ ಮಂಗಳೂರಿನ ಬಸ್ ಹತ್ತಬೇಕಿತ್ತು. ವಾರದ ಕೊನೆಯ ದಿನ. ಹಾಗಾಗಿ ಬಸ್ ನಲ್ಲಿ ಇನ್ನಿಲ್ಲದ ರಶ್ ಇರುತ್ತದೆ ಎಂದು ಮಗನನ್ನು ಕರೆದು ಆತನ ಕೈಗೆ ದುಡ್ಡು ಇಟ್ಟಿದ್ದಾಳೆ. ನಾನು ಬರುವ ವೇಳೆಗೆ ಟಿಕೆಟ್ ಮಾಡಿಸಿರು ಅಂತ ಆದರೆ ಆತ ಕೈಗೆ ಸಿಕ್ಕ ಆ ಹಣ ಹಿಡಿದು ಸೀದಾ ಗಡಂಗಿನ ದಾರಿ ಹಿಡಿದಿದ್ದಾನೆ.

ಅಮ್ಮ ಕೊಟ್ಟ ಹಣ ಮುಗಿಯುವವರೆಗೂ ಕುಡಿದಿದ್ದಾನೆ. ಕೊನೆಗೆ ತೂರಾಡಿಕೊಂಡು ಬಸ್ ನಿಲ್ದಾಣಕ್ಕೆ ಬಂದಿದ್ದಾನೆ ಅಮ್ಮ ಬಟ್ಟೆ ಬ್ಯಾಗ್ ಹಿಡಿದುಕೊಂಡು ನಿಲ್ದಾಣಕ್ಕೆ ಬಂದರೆ ಮಗ ತೂರಾಡುತ್ತಿದ್ದಾನೆ. ಕೈನಲ್ಲಿ ಟಿಕೆಟ್ ಇಲ್ಲ. ಅಮ್ಮನಿಗೆ ಎಲ್ಲಾ ಅರ್ಥವಾಗಿ ಭಿಕ್ಕುತ್ತಿದ್ದಾಳೆ ‘ಮನೆ ಕಸ ಮುಸುರೆ ಮಾಡುತ್ತೇನೆ ಸಾರ್ ಅದರಲ್ಲಿ ಬರುವ ಅಷ್ಟೋ ಇಷ್ಟೋ ಹಣ ಕೂಡಿಸಿ ಧರ್ಮಸ್ಥಳಕ್ಕೆ ಹೊರಟಿದ್ದೆ. ಮಗನಿಗೆ ಒಂದು ಕೆಲಸವಾದರೂ ಸಿಗಲಿ ಅಂತ ದೇವರಿಗೆ ಬೇಡಿಕೊಳ್ಳುವುದಕ್ಕೆ. ಈಗ ಕುಡಿದು ಮುಗಿಸಿದ್ದಾನೆ. ನನ್ನ ಬಳಿ ಇನ್ನು ಹಣವೂ ಇಲ್ಲ ಹೊಟ್ಟೆಯೊಳಗೆ ಸಂಕ