ಜಿ.ಎನ್ ಮೋಹನ್ ಸ್ಪೆಷಲ್ : ಅವರು ಕಲ್ಲೆ ಶಿವೋತ್ತಮ ರಾಯರು..

ಅವರು ಕಲ್ಲೆ ಶಿವೋತ್ತಮ ರಾಯರು..
———
ಆ ಮನೆಯಲ್ಲಿ ನನಗೆ ಸಿಕ್ಕಿದ್ದಕ್ಕೆ ಲೆಕ್ಕವಿಲ್ಲ..
ಸಿಂದಾಬಾದ್, ಟುವಾಟಾರ, ನದಿಯ ಮೇಲಿನ ಗಾಳಿ, ತಾಪಿ ನದಿ, ಮೂಲಕ ಮಹಾಶಯರು.. ಅದ್ಕಕಿಂತಲೂ ಹೆಚ್ಚಾಗಿ ವಾದ ವಿವಾದ, ಮಾತಿಗೆ ಮಾತು ಮಥಿಸಿ ಹುಟ್ಟಿದ ನವನೀತ ಎಲ್ಲವೂ.. ಗೋಪಾಲಗೌಡ, ಇ ಕೆ ನಯನಾರ್, ಆ ಕಾರ್ಲ್ ಮಾರ್ಕ್ಸ್, ಇದೂ ಮೀರಿ ಭಾರತ ಏಕೆ ಅಮೆರಿಕಾ ಎದುರಿಸಬೇಕು, ಚೀನಾ ಹೇಗೆ ನಮ್ಮ ಶತ್ರು, ಹಿಂದುಳಿದವರು ರಾಜಕೀಯ ಪ್ರಜ್ಞೆ ಇಲ್ಲದಿದ್ದರೆ ಏನಾಗುತ್ತದೆ ಎನ್ನುವ ಅರಿವನ್ನೂ ನಾನು ಅಲ್ಲಿ ಪಡೆದುಕೊಂಡೆ
ಆ ಮನೆಯ ಡೋರ್ ನಂಬರ್ ೮೮.
ಬಹುಷಃ ಅಂದು ಆ ಎಲ್ಲವೂ ಧಕ್ಕುವಾಗ ನನಗೆ ಆ ಮನೆಯ, ಅಲ್ಲಿದ್ದ ಹಿರಿಯ ಮನದ ಪ್ರಾಮುಖ್ಯತೆ ಗೊತ್ತಾಗುವ ದಿನಗಳಲ್ಲ. ಆದರೆ ಈಗ ನಾನು ಮಾಧ್ಯಮದ ದೋಣಿಯಲ್ಲಿ ಸಾಗುತ್ತಿರುವಾಗ ಅವರು ಬಿತ್ತಿದ ಅರಿವು ನನ್ನೊಳಗೆ ಆಡುತ್ತಲೇ ಇದೆ. ಮುನ್ನಡೆಸುತ್ತಲೇ ಇದೆ.jk-logo-justkannada-logo
ಅವರು ಕಲ್ಲೆ ಶಿವೋತ್ತಮ ರಾವ್.
ನಾನು ಅವರ ಮುಂದೆ ನಿಂತಾಗ ನನಗೆ ೧೦ ವರ್ಷ. ಚಿನ್ನಿ ದಾಂಡು, ಲಗೋರಿ, ಕುಂಟಾಬಿಲ್ಲೆ, ಕ್ರಿಕೆಟ್ ಗೆ ಅವರ ಮನೆಯಲ್ಲಿ ಮೂವರು ಜೊತೆಗಾರರು. ಹಾಗಾಗಿ ಎದ್ದರೆ ಬಿದ್ದರೆ ಅವರ ಮನೆಯಲ್ಲಿರುತ್ತಿದ್ದೆ. ಡೋರ್ ನಂಬರ್ ೧೪೨ ರ ಮೂಲಕ ನನ್ನ ಪ್ರಜ್ಞೆ ಕಟ್ಟಿಕೊಳ್ಳುತ್ತಿದ್ದ ನನಗೆ ಬೋನಸ್ ನಂತೆ ಸಿಕ್ಕಿದ್ದು ಈ ಡೋರ್ ನಂಬರ್ ೮೮.
ನನಗೆ ಅವರು ಯಾರು ಎನ್ನುವುದಕ್ಕಿಂತ ಒಂದು ತೂಕ ಹೆಚ್ಚು ಕುತೂಹಲವಿದ್ದದ್ದು ಅವರ ಹೆಸರಿನಲ್ಲಿದ್ದ ಕಲ್ಲೆಯ ಬಗ್ಗೆ. ಅದರ ಜೊತೆಗೆ ನನಗೆ ಒಗಟಾಗಿದ್ದದ್ದು ನನ್ನ ಜೊತೆ ಆಡುತ್ತಿದ್ದ ಅವರ ಮೂರು ಮಕ್ಕಳ ಹೆಸರುಗಳು. ಅಜಿತ್ ಅಶುತೋಷ್ ಕಲ್ಲೆ , ಅನಿತಾ ಪ್ರಿಯಕಾರಿಣಿ ಕಲ್ಲೆ, ಅಲಕರತ್ನ ಸ್ವರೂಪ ಕಲ್ಲೆ.
ಈ ಎಲ್ಲದರಿಂದಾಗಿ ನನಗೆ ಡೋರ್ ನಂಬರ್ ೮೮ ಒಂದು ಕುತೂಹಲದ ಕೇಂದ್ರವಾಯಿತು. ಅದಕ್ಕಿಂತಲೂ ಹೆಚ್ಚಾಗಿ ನಿಧನಿಧಾನವಾಗಿ ಅರಿವಿನ ತಾಣವಾಗುತ್ತಾ ಹೋಯಿತು.
ಕಾರ್ಕಳ ತಾಲೂಕಿನ ಬಳಿ ಕಲ್ಲೆ ಎನ್ನುವ ಊರಿದೆಯೆಂದು ನನಗೆ ಗೊತ್ತಾಗುವ ವೇಳೆಗೆ ಕಲ್ಲೆ ಶಿವೋತ್ತಮ ರಾವ್ ಇನ್ನೂ ಹೈಸ್ಕೂಲ್ ದಾಟದ ನನ್ನನ್ನು ನಿಲ್ಲಿಸಿಕೊಂಡು ಆ ಕಾಲದ ಸಂಘರ್ಷಗಳನ್ನು ಹೇಳುತ್ತಿದ್ದರು. ನನಗೆ ಎಷ್ಟು ಅರ್ಥವಾಗುತ್ತಿತ್ತೋ ಬಿಡುತ್ತಿತ್ತೋ ಆದರೆ ಅವರೊಳಗೆ ಮಾತನಾಡಲೇಬೇಕೆಂಬ ಹಠ ಎದ್ದು ಕಾಣುತ್ತಿತ್ತು. ತಮ್ಮೊಳಗೆ ಗೂಡು ಕಟ್ಟಿದ್ದ ವಿಚಾರವನ್ನು ಹೊರಗೆ ಹಾಕಬೇಕೆಂಬ ಉದ್ವೇಗವೂ..
ಆ ಕಾಲಕ್ಕೆ ಹಠ, ಉದ್ವೇಗ ಅನಿಸಿದ್ದು ನಂತರ ನನಗೆ ಗೊತ್ತಿಲ್ಲದೆಯೇ ಅದು ಪತ್ರಿಕೋದ್ಯಮಕ್ಕೆ ನನಗೆ ಹಾಕಿಕೊಟ್ಟ ಅಡಿಪಾಯವಾಗಿ ಹೋಗಿತ್ತು. ನನ್ನ ಪತ್ರಿಕೋದ್ಯಮ ಜೀವನಕ್ಕೆ ನಾನು ಎನಿತು ಜೀವಗಳಿಗೆ ಋಣಿಯೋ ಎನ್ನುವಾಗ ನನ್ನೆದುರು ನಿಲ್ಲುವುದು ನನ್ನ ಅಣ್ಣ ಹಾಗೂ ಕಲ್ಲೆ ಶಿವೋತ್ತಮ ರಾವ್.
ನಾನು ಅವರಿಗೆ ಕಿವಿಯಾಗಿ ಕುಳಿತುಕೊಳ್ಳಲು ಒಂದು ಬಲವಾದ ಕಾರಣವಂತೂ ಇತ್ತು. ಅದು ಅವರ ಮನೆಯ ಅಗಾಧ ಗ್ರಂಥ ಭಂಡಾರ ಮತ್ತು ಅವರ ಮನೆಗೆ ಬರುತ್ತಿದ್ದ ಅಸಂಖ್ಯಾತ ದಿನ ಹಾಗೂ ವಾರಪತ್ರಿಕೆಗಳು.
ನನಗ್ ‘ಪ್ರಪಂಚ’ದ ಪಾಟೀಲ ಪುಟ್ಟಪ್ಪ, ಕನ್ನಡ ಸಾಹಿತ್ಯ ಪರಿಷತ್ತಿನ ಹಂಪ ನಾಗರಾಜಯ್ಯ, ‘ಪ್ರಜಾವಾಣಿ’ಯ ಹೇಮದಳ ರಾಮದಾಸ್, ರಾಜಕಾರಣಿ ಕೆ ಎಚ್ ರಂಗನಾಥ್.. ಹೀಗೆ ದೊಡ್ಡ ದಂಡು ನೋಡಲು ಸಿಕ್ಕಿದ್ದು ಅವರ ಮನೆಯಲ್ಲಿ.
ನಾನು ನೋಡುವ ವೇಳೆಗೆ ಅವರು ‘ಜನಪ್ರಗತಿ’ ಸಂಪಾದಕ- ಮಾಲೀಕರಾಗಿದ್ದರು. ನನಗೆ ಪತ್ರಿಕೋದ್ಯಮದ ಮಸಿ-ಘಮ ಎರಡೂ ಧಕ್ಕಿದ್ದೆ ಅವರ ಮನೆಯಲ್ಲಿ. ಮಾರುಕಟ್ಟೆಗೂ ಹೋಗುವ ಮೊದಲೇ ಒಂದು ಪತ್ರಿಕೆಯನ್ನು ನಾನು ಓದಿದ್ದೆ ಎಂದರೆ ಅದು ಜನಪ್ರಗತಿಯೇ
ಪ್ರೂಫಿಂಗ್ ಗ್ಯಾಲಿಗಳು, ಪ್ರೂಫ್ ಮಾರ್ಕುಗಳು, ಕೊನೆಯಚ್ಚು ಎಲ್ಲವೂ ನನ್ನ ಮೈಗೂ ಅಂಟುತ್ತಾ ಹೋಯಿತು. ಕಲ್ಲೆ ಶಿವೋತ್ತಮ ರಾವ್ ಅವರು ಸುಮ್ಮನಿರಲಿಲ್ಲ, ನನಗೂ ಬರಿ ಎಂದು ಒತ್ತಾಯಿಸಿದರು. ನಾನು ಅಲ್ಲಿ ಬರುತ್ತಿದ್ದ ಲೇಖನಗಳಿಗೆ ಪ್ರತಿಕ್ರಿಯೆ ಎಂದು ಏನೋ ಗೀಚುತ್ತಾ ಕೊನೆಗೆ ಚಂಪಾ ಅವರು ಗೋಕಾಕ್ ಹೋರಾಟಕ್ಕೆ ಹರಿಶಿನ ಕುಂಕುಮ ಕೊಟ್ಟು ಕರೆಯಬೇಕಾ ಎಂದಿದ್ದರ ಬಗ್ಗೆ ದನಿಗೂಡಿಸಿ ಹೀಗೆ ಏನೇನೋ ಬರೆಯುತ್ತಾ ಹೋದೆ.
ಅವರ ಮನೆಯಲ್ಲಿದ್ದ ಅಜ್ಜ, ಕಲ್ಲೆ ಶಿವೋತ್ತಮರಾಯರ ತಂದೆ ಸ್ವಾತಂತ್ರ್ಯ ಹೋರಾಟಗಾರರೆಂದೂ ಅವರ ತಲೆಯ ಮೇಲೆ ಆಗಲೇ ಬ್ರಿಟಿಷರು ದೊಡ್ಡ ಬೆಲೆ ನಿಗದಿಪಡಿಸಿದ್ದರೆಂದೂ ನನಗೆ ಗೊತ್ತಾದದ್ದು ತೀರಾ ಇತ್ತೀಚಿಗೆ.
ಕಲ್ಲೆಯೆಂಬ ಪುಟ್ಟ ಊರಿನ ಹುಡುಗನೊಬ್ಬ ಬೆಂಗಳೂರು ತಲುಪಿಕೊಂಡು ಪ್ರಜಾವಾಣಿ ಸೇರಿ ಅಲ್ಲಿ ನಿರ್ಭೀತ ಸಂಪಾದಕೀಯ ಬರೆದು ಮಾಲೀಕರ ಕಣ್ಣು ಕೆಂಪಗಾದಾಗ ಹೆದರದೆ ರಾಜೀನಾಮೆ ಕೊಟ್ಟು ಹೊರಬಂದು ನಂತರ ಜನಪ್ರಗತಿ ಸೇರಿ ಅದರ ಸಂಪಾದಕರಾಗುವವರೆಗಿನ ಕಥೆ ಒಂದು ರೀತಿಯದ್ದು.GN Mohan Special
ನಮಗೆ ಗೊತ್ತಿಲ್ಲದ್ದು ಅವರು ಆಗಿನ ಕಾಲಕ್ಕೆ ವಿಶ್ವ ವಿದ್ಯಮಾನಗಳ ಬಗ್ಗೆ ಮಹತ್ವದ ವಿಶ್ಲೇಷಕರಾಗಿದ್ದರು. ಆಗ ಭಾರತ ಮತ್ತು ಚೀನಾ ನಡುವೆ ವೈಷಮ್ಯ ತಲೆದೋರಿದಾಗ ಕನ್ನಡದವರು ಬಿಡಿ ದೇಶದ ಅನೇಕರು ಇವರ ವಿಶ್ಲೇಷಣೆಗೆ ಕಾಯುವಷ್ಟು ಇವರು ಆ ವಿಷಯದ ಆಳ ಗೊತ್ತಿದ್ದವರಾಗಿದ್ದರು.
ಹಿಂದುಳಿದವರು ರಾಜಕೀಯ ಪ್ರಜ್ಞೆ ಹೊಂದಬೇಕು ಅದರಿಂದಾಗಿ ನೊಂದವರ ದನಿ ಕೇಳುವಂತಾಗಬೇಕು ಎಂದು ಅವರು ಪಟ್ಟ ಸಾಹಸವನ್ನು ಹತ್ತಿರದಿಂದ ಕಂಡಿದ್ದೇನೆ. ದೇವರಾಜ ಅರಸು ಅವರ ಥಿಂಕ್ ಟ್ಯಾಂಕ್ ನಲ್ಲಿ ಕಲ್ಲೆ ಅವರು ಪ್ರಮುಖರಾಗಿದ್ದರು. ಅಷ್ಟೇ ಅಲ್ಲ ಅವರ ಬಹುತೇಕ ಭಾಷಣಗಳ ಹಿಂದೆ ಇದ್ದ ಶಕ್ತಿ ಇವರು.
ಆಗಿನ ಕಾಲದಲ್ಲಿ ಕಾಳೇಗೌಡ ನಾಗವಾರ, ಬೆಸಗರಹಳ್ಳಿ ರಾಮಣ್ಣ.. ಹೀಗೆ ಅಸಂಖ್ಯಾತ ಲೇಖಕರಿಗೆ ಕನ್ನೆನೆಲವಾಗಿದ್ದದ್ದು ಇದೇ ಜನಪ್ರಗತಿ.
ಇಂತಹ ಕಲ್ಲೆ ಊರಿಗೆ ಮೊನ್ನೆ ಹೋಗಿ ಬಂದೆ. ಕಲ್ಲೆ ಶಿವೋತ್ತಮ ರಾಯರು ಓಡಾಡಿದ ಎಲ್ಲಾ ಕಡೆ ಓಡಾಡಿ ಬಂದೆ ಎನ್ನುವುದು ನನಗೆ ಕೊಂಬು ಮೂಡಿಸಿತ್ತು.
ಇಂದು ಕಲ್ಲೆ ಶಿವೋತ್ತಮರಾಯರ ೯೨ ನೇ ಜನ್ಮ ದಿನ. ಎಲ್ಲಾ ನೆನಪಿಗೆ ಬಂತು.