ಜಿ.ಎನ್.ಮೋಹನ್ ಕ್ವಾರಂಟೈನ್ ಮೆಲುಕು: ವಾಟ್ಸ್ ಅಪ್ ಕನ್ನಡಿಯಲ್ಲಿಕಂಡ ಮುಖ…

‘ಸರ್ ಬೇಗ ಬನ್ನಿ ಗಂಜಿಗೆ ಕಾಫಿ ಬೆರೆಸಿದ್ದೇವೆ..’ ಅಂತ ಕಾಲ್ ಬಂತು.
ಅರೆರೆ! ಗಂಜಿಗೆ ಒಂದು ತುಂಡು ಮೀನು ಇಲ್ಲವೇ ಮಜ್ಜಿಗೆ ಮೆಣಸು ಅದೂ ಇಲ್ಲದಿದ್ದಲ್ಲಿ ಎಟ್ಟಿಚಟ್ನಿ ಮಾತ್ರ ಮಿಕ್ಸ್ ಮಾಡಿ ಗಡದ್ದಾಗಿ ತಿಂದಿರುವ ಅನುಭವ ಇರುವ ನಾನು ಗಂಜಿಗೆ ಕಾಫಿ ಕೂಡಾ ಮಿಕ್ಸ್ ಮಾಡುತ್ತಾರಾ ಅಂತ ಹೌಹಾರಿ ಹೋದೆ.

ಸರಿಯಾಗಿ ನಾನೇ ಕೇಳಿಸಿಕೊಂಡಿಲ್ಲವೇನೋ ಅನಿಸಿತು. ಆ ಕಡೆಯಲ್ಲಿದ್ದವರಿಗೆ ‘ಸರಿಯಾಗಿ ಕೇಳಿಸಲಿಲ್ಲ, ಗಂಜಿಗೆ ಏನುಂಟು?’ ಎಂದೆ. ತಕ್ಷಣ ಅವರು ‘ಕಾಫೀ..’ ಎಂದರು.

ನನ್ನನ್ನು ಇನ್ನಷ್ಟು ಗೊಂದಲಕ್ಕೆ ದೂಡಿದರೆ ವಿನಾ ಅವರು ಪರಿಸ್ಥಿತಿಯನ್ನೇನೂ ತಿಳಿ ಮಾಡಲಿಲ್ಲ.

ಸಾರ್ ಬೇಗ ಬನ್ನಿ ಗಂಜಿ ತಣ್ಣಗಿದ್ರೂ ನಡೀತದೆ ಕಾಫಿ ಆರಬಾರದಲ್ಲ ಅಂದರು. ನನ್ನನ್ನು ಮಂಗ ಮಾಡುತ್ತಿದ್ದಾರೆ ಅನಿಸಿಹೋಯಿತು. ಹೋಗಿ ಮಾರಾಯರೇ ಅಂದೆ. ಅವರಿಗೂ ನನ್ನ ಮಂಡೆ ಸಾಕಷ್ಟು ಬೆಚ್ಚಗಾಗಿದೆ ಎಂದು ಗೊತ್ತಾಯಿತೇನೋ ಮರುನಿಮಿಷದಿಂದ ನನ್ನ ಮೊಬೈಲ್ ‘ಟೊಯ್ ಟೊಯ್’ ಸದ್ದು ಮಾಡತೊಡಗಿತು. ಒಂದರ ಹಿಂದೆ ಒಂದು ಫೋಟೋ ಬಂದು ಬೀಳತೊಡಗಿತು.

ಇದೇನಿದು ಎಂದು ನೋಡಿದರೆ ಗಂಜಿ ಊಟ ಮಾಡುತ್ತಾ ಕುಳಿತವರ ಮಧ್ಯೆ ನನ್ನ ‘ಕಾಫಿ ಕಪ್ಪಿನೊಳಗೆ ಕೊಲಂಬಸ್’ ಪುಸ್ತಕ ಕೂತಿತ್ತು. ಓಹ್! ಎಂದುಕೊಂಡೆ. ಅಲ್ಲಿಯವರೆಗಿನ ನಿಗೂಢ ಮಾತಿಗೆ ಪಾಸ್ ವರ್ಡ್ ಸಿಕ್ಕಿಹೋಗಿತ್ತ್ತು.ಈಗ ಫೋನ್ ಮಾಡುವ ಸರದಿ ನನ್ನದು. ಆ ಕಡೆ ಇದ್ದದ್ದು ಮಂಜುನಾಥ ಕಾಮತ್.

ವಡೆ, ಬೋಂಡಾ ಹಪ್ಪಳ, ಉಪ್ಪಿನಕಾಯಿ ಮಾಡುವುದನ್ನು ನೋಡುತ್ತಾ ಬೆಳೆದ ಹುಡುಗ ಬಿಬಿಎಂ ಮಾಡಲು ನಿಟ್ಟೆ ಕಾಲೇಜಿನ ಬಾಗಿಲು ತಟ್ಟಿದ. ಮಾರ್ಕ್ಸ್ ಕಾರ್ಡುಗಳು ಒಳ್ಳೆ ಮಾತನಾಡಿದರೂ ಆತನಿಗೆ ಮಾತ್ರ ಯಾಕೋ ತಾನು ಹಳಿ ತಪ್ಪಿದ ರೈಲು ಎಂದೇ ಅನಿಸುತ್ತಾ ಹೋಯಿತು ಈ ಮಧ್ಯೆ ಈತ ಓದಿನಲ್ಲಿ ಇನ್ನೂ ಹತ್ತು ಹೆಜ್ಜೆ ಮುಂದೆ ಹೋಗಲಿ ಎಂದು ಚಿಕ್ಕಪ್ಪ ಒಂದು ಲ್ಯಾಪ್ ಟಾಪ್ ಕೊಡಿಸಿದರು. ಲ್ಯಾಪ್ ಟಾಪ್ ಜೊತೆಗೆ ಫ್ರೀಯಾಗಿ ಸಿಕ್ಕಿದ್ದು ಕೊಡಕ್ ಕ್ಯಾಮೆರಾ.

ಲ್ಯಾಪ್ ಟಾಪ್ ಬದಲು ಕೊಡಕ್ ಕಯ್ಯೇ ಮೇಲಾಯಿತು. ಮುಖ್ಯ ಹಾಡುಗಾರನಿಗಿಂತ ಪಕ್ಕವಾದ್ಯದವನೇ ಮಿಂಚಿ ಬಿಟ್ಟಂತೆ ಕ್ಯಾಮೆರಾ ಮಂಜುನಾಥ್ ಅನುದಿನದ ಸಂಗಾತಿಯಾಗಿ ಹೋಯಿತು. ಆ ವೇಳೆಗೆ ಲೈಬ್ರರಿಯನ್ ಶಾಲಿನಿ ಮೇಡಂ ಅಂಕಿಗಳೇ ಕುಣಿಯುತ್ತಿದ್ದ ತಲೆಗೆ ಕಾರಂತ, ತೇಜಸ್ವಿಯರೂ ಎಂಟ್ರಿ ಕೊಡುವಂತೆ ಮಾಡಿದ್ದರು. ಕಾರಂತ ತೇಜಸ್ವಿ ಹಾಗೂ ಕೊಡಕ್ ಕ್ಯಾಮೆರಾ ಕಾಂಬಿನೇಷನ್ ಇವರನ್ನು ಬಿಬಿಎಂ ತರಗತಿಗಳಿಂದ ಎಬ್ಬಿಸಿಕೊಂಡು ಬಂದೇಬಿಟ್ಟವು.

ನಂತರ ಹೊರಳಿಕೊಂಡದ್ದು ಪತ್ರಿಕೋದ್ಯಮಕ್ಕೆ. ಉಜಿರೆಯಲ್ಲಿ ಸ್ನಾತಕೋತ್ತರ ಪದವಿ ಮುಗಿಸಿ ಉಡುಪಿಯ ಎಂ ಜಿ ಎಂ ಕಾಲೇಜಿನಲ್ಲಿ ಉಪನ್ಯಾಸಕನಾಗುವ ವೇಳೆಗೆ ಮಂಜುನಾಥ್ ಹೊಳೆ ನದಿ ಸಮುದ್ರ ಕಾಡು ಕಣಿವೆ ಎಲ್ಲವನ್ನೂ ಮಾತನಾಡಿಸಿಯಾಗಿತ್ತು
.
‘ಏನಾದರೂ ಮಾಡುತಿರು ತಮ್ಮ ನೀ ಸುಮ್ಮನಿರಬೇಡ..’ ಎನ್ನುವ ನುಡಿ ಉಡುಪಿಯ ಹುಡುಗನ ಮಡಿಲಿಗೆ ಬಂದು ಬಿತ್ತು. ಮಂಜುನಾಥ್ ಸುಮ್ಮನೆ ಕೂರಲೇ ಇಲ್ಲ. ಶಾಲಿನಿ ಮೇಡಂ ಹರಡಿದ ಪುಸ್ತಕದ ಹುಳು ದೊಡ್ಡದಾಗೇ ಬೆಳೆದು ಹೋಗಿತ್ತು. ಸರಿ ಮೇಲಿಂದ ಮೇಲೆ ಪುಸ್ತಕ ಓದತೊಡಗಿದ ಮಂಜುನಾಥ್ ಗೆ ಓದಿದ್ದು ಹಂಚಿಕೊಳ್ಳಲು, ಚರ್ಚೆ ಮಾಡಲು.. ತಾನು ಓದಿದ ರೀತಿ ಸರಿಯೇ ಎಂದು ಪರಿಶೀಲಿಸಿಕೊಳ್ಳಲು ಜನ ಇಲ್ಲವಲ್ಲಾ ಅನಿಸಿತು.

ಆಗ ಪತ್ರಕರ್ತ ಶಶಿಧರ ಮಾಸ್ತಿಬೈಲು ವಾಟ್ಸ್ ಅಪ್ ನಲ್ಲಿ ಯಾಕೆ ಒಂದು ಓದುಗ ಬಳಗ ಮಾಡಬಾರದು ಎಂದರು. ಮಲ್ಪೆಯ ಅಧೋ ರಾತ್ರಿಯಲ್ಲಿ ದಿಕ್ಕಿನ ದೀಪ ಹೊತ್ತಿದಂತೆ ಆಯಿತು. ತಕ್ಷಣ ‘ವಾಟ್ಸ್ ಅಪ್ ಓದುಗ ಬಳಗ’ ಅಸ್ತಿತ್ವಕ್ಕೆ ಬಂದೇಬಿಟ್ಟಿತು..

ವಾಟ್ಸ್ ಅಪ್ ಬಳಗ ಶುರುವಾಗಿದ್ದೇ ಆಗಿದ್ದು ಉಡುಪಿ ಮಣಿಪಾಲದಲ್ಲಿ ಒಂದಷ್ಟು ಜನರ ಬದುಕಂತೂ ಬದಲಾಗಿ ಹೋಯಿತು. ತಾವು ಓದಿದ ಪುಸ್ತಕ, ನೋಡಿದ ಚಿತ್ರ ಎಲ್ಲವೂ ಶೇರ್ ಆಗತೊಡಗಿದವು.

ಆ ವೇಳೆಗೆ ಸಿನೆಮಾ ರಂಗದಲ್ಲಿ ಅಪಾರ ಆಸಕ್ತಿ ಇರುವ ಸುಧೀರ್ ಶಾನಭಾಗ್ ಬೆಂಗಳೂರಿನಲ್ಲಿ ‘ನಾನು ಅವನಲ್ಲ, ಅವಳು’ ಸಿನೆಮಾ ನೋಡಿದ್ದರು. ಅದರ ವ್ಯಾಕರಣಕ್ಕೆ ಮಾರುಹೋದ ಅವರು ಇಂತಹ ಸಿನೆಮಾ ಉಡುಪಿಗೂ ಬರಬಾರದೇಕೆ ಎಂದು ಪ್ರಶ್ನಿಸಿದರು. ಅವರ ಪ್ರಶ್ನೆಯಲ್ಲಿ ಈ ಸಿನೆಮಾ ಉಡುಪಿಗೆ ಬರುವುದಂತೂ ಸಾಧ್ಯವಿಲ್ಲ ಎನ್ನುವ ದನಿ ಇತ್ತು. ಆಗಲೇ ವಾಟ್ಸ್ ಅಪ್ ಬಳಗ ‘ವೈ ನಾಟ್’ ಅಂತ ಎದ್ದು ನಿಂತದ್ದು.

ಕಂಡ ಕಂಡ ಕಡೆ ಸೊಂಡಿಲ ಚಾಚುವ ಆನೆಗೆ ಅಂಕುಶವಿಲ್ಲ ಎನ್ನುವಂತೆ.. ವಾಟ್ಸ್ ಅಪ್ ಬಳಗ ಚಿತ್ರ ಮಂದಿರದವರನ್ನು ಭೇಟಿ ಮಾಡಲು ಹೊರಟೇಬಿಟ್ಟರು.

ಸಿನೆಮಾ ಬರಲ್ಲ ಅನ್ನುವ ಉಡುಪಿಯಲ್ಲಿ ಚಿತ್ರ ಪ್ರದರ್ಶಿಸಿ ಸುಮ್ಮನಾಗಿಬಿಡಬಹುದಿತ್ತು ಆದರೆ ಈ ಹುಡುಗರು ಅಷ್ಟು ಮಾತ್ರದವರಲ್ಲ. ಸಿನೆಮಾ ಪ್ರದರ್ಶನಕ್ಕೆ ಮುನ್ನವೇ ಉಡುಪಿ ಆಸುಪಾಸಿನಲ್ಲಿ ಎಷ್ಟು ಮಂಗಳಮುಖಿಯರಿದ್ದಾರೆ ಎನ್ನುವುದರ ಮಾಹಿತಿ ಸಂಗ್ರಹಿಸಿದರು. ಎಲ್ಲರನ್ನೂ ಸಿನೆಮಾಗೆ ಬರುವಂತೆ ಮಾಡಲು ಹರಸಾಹಸ ಪಟ್ಟರು. ರೈಲು ನಿಲ್ದಾಣದಲ್ಲಿ ಗವ್ವೆನ್ನುವ ಕತ್ತಲು ಕವಿದ ಮೇಲೆ, ಹೆದ್ದಾರಿಯ ಬದಿಯಲ್ಲಿ ಕಾಣಿಸಿಕೊಳ್ಳುತ್ತಿದ್ದ ಮಂಗಳಮುಖಿಯರು ಮೊತ್ತ ಮೊದಲ ಬಾರಿ ಸಿನೆಮಾ ಮಂದಿರದಲ್ಲಿ ಕಾಣಿಸಿಕೊಂಡರು. ಸಿನೆಮಾ ಅರ್ಧ ಆಗಿತ್ತೇನೋ.. ಒಬ್ಬಾಕೆ ಭಿಕ್ಕಿ ಭಿಕ್ಕಿ ಅಳತೊಡಗಿದ್ದಳು. ನಾನೂ ಲಿವಿಂಗ್ ಸ್ಮೈಲ್ ವಿದ್ಯಾ ಥರಾ ಆಗಬೇಕು ಎನ್ನುವುದೊಂದೇ ಅವರ ಮುಂದೆ ಆಗ ಇದ್ದದ್ದು.

ಸಿನೆಮಾ ಪ್ರದರ್ಶನ ಮುಗಿಯಿತು ಈ ತಂಡಕ್ಕೆ ಮಂಗಳಮುಖಿಯರ ನೋವಿನ ನೆನಪು ಹೋಗಿರಲಿಲ್ಲ. ಅವರಿಗೂ.. ಕೊನೆಗೆ ನಗ್ಮಾ ಹಾಗೂ ಕಾಜಲ್ ಇವರತ್ತ ಬಂದರು. ಆಗ ಈ ವಾಟ್ಸ್ ಅಪ್ ಬಳಗ ಇವರನ್ನು ಕರೆದೊಯ್ದು ಎಸ್ ಎಸ್ ಎಲ್ ಸಿ ಪರೀಕ್ಷೆ ಬರೆಸಲು ತಯಾರಿ ಆರಂಭಿಸಿದರು.

ಸ್ನೇಹಾ ಟ್ಯುಟೋರಿಯಲ್ನಲ್ಲಿ ನಗ್ಮಾ ಟ್ಯೂಷನ್ ಗೆ ಹೋಗತೊಡಗಿದಳು. ಕೆಲಸ ಮಾಡುತ್ತಾ ಡಿಗ್ರಿ ಪರೀಕ್ಷೆ ಬರೆಯಬೇಕು ಎಂಬ ಹಂಬಲವಿದ್ದ ಕಾಜಲ್ ಗೆ ಉದ್ಯೋಗ ಕೊಡಿಸಲು ಪಿ ವಿ ಭಂಡಾರಿ ಅವರ ಬಳಿಗೆ ಕರೆದುಕೊಂಡು ಹೋದರು.

ಒಂದು ಒಂದು ಹನ್ನೊಂದಾಯಿತು. ವರ್ಷ ಬಿಟ್ಟು ‘ಅಮರವಾತಿ’ ಚಿತ್ರ ತೆರೆ ಕಂಡಿತು. ಇನ್ನೂ ಒಂದು ವಾರ ಕಳೆದಿರಲಿಲ್ಲ. ಆಗಲೇ ಚಿತ್ರ ಎತ್ತಂಗಡಿಯಾಗುವ ಸೂಚನೆ ಸಿಕ್ಕಿಹೋಗಿತ್ತು. ಜನ ನೋಡಲು ಬಂದರೂ ಚಿತ್ರಮಂದಿರ ಸಿಗದ ಬಗ್ಗೆ ಚಿತ್ರ ನಿರ್ದೇಶಿಸಿದ ಬಿ ಎಂ ಗಿರಿರಾಜ್ ಸಾಕಷ್ಟು ನೊಂದುಹೋಗಿದ್ದರು. ನಾನು ಸಿನೆಮಾ ಮಾಡುವುದನ್ನೇ ನಿಲ್ಲಿಸುತ್ತೇನೆ ಎನ್ನುವ ಹೇಳಿಕೆ ಕೊಟ್ಟಿದ್ದರು.

ಇದನ್ನು ನೋಡಿದ ಈ ವಾಟ್ಸ್ ಅಪ್ ಬಳಗ ಮತ್ತೆ ‘ವೈ ನಾಟ್’ ಎಂದು ಎದ್ದು ನಿಂತೇಬಿಟ್ಟಿತು. ಇದು ಪೌರ ಕಾರ್ಮಿಕರ ಬದುಕಿನ ಚಿತ್ರ. ಹಾಗಾಗಿ ಈಗ ಈ ಬಳಗ ಪೌರ ಕಾರ್ಮಿರನ್ನು ಹುಡುಕಿಕೊಂಡು ಹೋಯಿತು ಚಿತ್ರ ನೋಡಿದ್ದು ಮಾತ್ರವೇ ಅಲ್ಲದೆ ‘ಅರೆ! ಇದು ನಮ್ಮದೇ ಕಥೆ ಮಾರಾರ್ರೆ’ ಅಂದು ಕಾರ್ಮಿಕರು ಅಚ್ಚರಿಪಟ್ಟರು. ‘ಸವಲತ್ತು ಅಂತಾರೆ.. ಅಲವತ್ತುಕೊಂಡರೂ ಕೊಡೋಲ್ಲ’ ಎನ್ನುವ ನಿಟ್ಟುಸಿರು ಹೊರಹಾಕಿದರು.

ಈ ಮಧ್ಯೆ ಸಿನೆಮಾದ ಒಳಗೆ ಹರಿಯುವ ಎರಡನೇ ಟ್ರ್ಯಾಕ್ ನಂತೆ ನುಸುಳಿದ್ದೇ ಗಂಜಿಯ ಕಥೆ. ಎಂ ಜಿ ಎಂ ಕಾಲೇಜಿನ ಪತ್ರಿಕೋದ್ಯಮ ಉಪನ್ಯಾಸಕ ಸುಚಿತ್ ಕೋಟ್ಯಾನ್ ಗೆ ಸದಾ ಕೈನಲ್ಲೊಂದು ಪುಸ್ತಕ ಇರಲೇಬೇಕು. ಬಸ್ ನಲ್ಲಿರಲಿ, ಕಾರಿಡಾರ್ ನಲ್ಲಿ ಹೋಗುತ್ತಿರಲಿ ಪುಸ್ತಕ ಕೈನಲ್ಲಿ. ಜೊತೆಯಲ್ಲಿದ್ದ ಕೊಲೀಗ್ಸ್, ಪಾಠ ಕೇಳುತ್ತಿದ್ದ ವಿದ್ಯಾರ್ಥಿಗಳೂ ಪುಸ್ತಕದ ಕಡೆ ಕಣ್ಣು ಹಾಯಿಸುತ್ತಿದ್ದರು. ಆಗೀಗ ಓದಿ ಕೊಡುತ್ತೇನೆ ಅಂತ ತೆಗೆದುಕೊಂಡು ಹೋಗುತ್ತಿದ್ದರು.

ಈ ಮಧ್ಯೆ ಬಿರುಬೇಸಿಗೆಯಲ್ಲಿ ದೇಹ ತಂಪಾಗಲಿ ಎಂದು ಒಂದು ಗುಂಪೇ ಗಂಜಿ ಊಟ ಹುಡುಕುತ್ತಾ ಹೊರಡುತ್ತಿತ್ತು. ಆಗ ಹೊಳೆದದ್ದೇ ಗಂಜಿ ಮನೆಯನ್ನೇ ರೀಡಿಂಗ್ ಲೈಬ್ರರಿ ಮಾಡಿದರೆ ಹೇಗೆ ಅಂತ. ಹೊಟ್ಟೆಗೂ ಮಿದುಳಿಗೂ ಒಟ್ಟಿಗೇ ಊಟ.

ಆಗ ಕೈಗೆ ಸಿಕ್ಕಿದ್ದೇ ನನ್ನ ‘ಕಾಫಿ ಕಪ್ಪಿನೊಳಗೆ ಕೊಲಂಬಸ್’.

ನಮ್ಮ ಸಮುದ್ರ ದಂಡೆಗೆ ಬರಲಾಗದೇ ಹೋದ ಕೊಲಂಬಸ್ ನನ್ನು ಈ ಇಡೀ ಗುಂಪು ಎತ್ತಾಕಿಕೊಂಡು ಬಂದು ಮಣಿಪಾಲದ ಗೀತಾ ಮಂದಿರದ ಬಳಿಯ ಶೇಖರ್ ನಾಯಕ್ ಗಂಜಿ ಊಟದ ಹೋಟೆಲ್ ನಲ್ಲಿ ಕೂಡಿಸಿತ್ತು.

ಹಾಗೆ ಅವರು ಕರೆದುಕೊಂಡು ಬಂದದ್ದು ಕೊಲಂಬಸ್ ನನ್ನ ಮಾತ್ರವಲ್ಲ.. ಶಿವರಾಮ ಕಾರಂತ, ಅಬ್ದುಲ್ ಕಲಾಂ, ಕೆ ಪಿ ರಾವ್, ವಾಮನ ನಂದಾವರ, ಕು ಶಿ ಹರಿದಾಸ ಭಟ್ಟ , ಉಲ್ಲಾಸ ಕಾರಂತ, ಜೋಗಿ, ಡಿ ಕೆ ಚೌಟ, ಪ್ರಸಾದ್ ಶೆಣೈ, ಎಂ ವೈ ಘೋರ್ಪಡೆ, ಕೆ ಕೆ ಹೆಬ್ಬಾರ್, ರಹಮತ್ ತರೀಕೆರೆ ಹೀಗೆ ಹತ್ತು ಹಲವು ಬರಹಗಾರರನ್ನು.

ಇಲ್ಲಿ ಕಥೆ ಕಾದಂಬರಿ, ಪ್ರವಾಸ ಕಥನ, ಸಂಶೋಧನೆ, ಅನುಭವ ಕಥನ ಎಲ್ಲವೂ ತೆರೆದುಕೊಳ್ಳುತ್ತಾ ಹೋಯಿತು. ಪತ್ರಿಕೋದ್ಯಮ, ಸಾಹಿತ್ಯ, ರಸಾಯನ ಶಾಸ್ತ್ರ, ಗ್ರಂಥಾಲಯ ಶಾಸ್ತ್ರ ಎಲ್ಲವೂ ಒಂದಾಗುತ್ತಾ ಹೋಯಿತು. ಅರುಣ್ ಕುಮಾರ್, ಕೃಷ್ಣ ಕುಮಾರ್, ಕಿಶೋರ್ ಚಂದನ್, ಅರುಣ್ ನಾಯಕ್, ಅವಿನಾಶ್ ಆಚಾರ್ಯ, ಶಮಂತ್, ಪದ್ಮನಾಭ್ ಹೀಗೆ ದಂಡು ಬೆಳೆಯುತ್ತಾ ಹೋಯಿತು.

ನೋಡ ನೋಡುತ್ತಿದ್ದಂತೆ ಊಟದ ಕೇಂದ್ರದ ಮಾಲೀಕರು ‘ಇವತ್ತು ಯಾವ ಪುಸ್ತಕ ಮಾರಾಯ್ರೇ’ ಎಂದು ಕೇಳತೊಡಗಿದರು. ಈ ಗುಂಪಿಗಾಗಿಯೇ ಎಂದು ಒಳ್ಳೆ ಟೇಬಲ್ ಬಿಡಿಸಿಕೊಡುತ್ತಿದ್ದರು.

ಊಟದ ಟೇಬಲ್ ಮಧ್ಯೆ ಪುಸ್ತಕ ಎಲ್ಲರಿಗೂ ಕಾಣುವಂತೆ ಜೋಡಿಸುತ್ತಿದ್ದರು. ಊಟಕ್ಕೆ ಬರುತ್ತಿದ್ದವರು ಅದನ್ನು ನೋಡಿ ಪುಟ ತಿರುಗಿಸಿದರೆ ಈ ಗುಂಪು ಆ ಪುಸ್ತಕದ ಜೊತೆ ಸೆಲ್ಫಿಗೆ ನಿಲ್ಲುತ್ತಿತ್ತು.

ಈ ಮಧ್ಯೆ ಹೆದ್ದಾರಿಯೊಂದು ಹಾದು ಹೋಗಿ ಸೇತುವೆಯೊಂದು ಬಳಸದೆ ಮೂಲೆಗುಂಪಾಗಿದ್ದದ್ದನ್ನು ಈ ಬಳಗ ಕಂಡಿತು. ಅದು ಸಾಣೂರು ಸೇತುವೆ. ಬಳಗದಲ್ಲಿದ್ದ ದೀಪಕ್ ಕಾಮತ್ ಅವರು ಈ ಸೇತುವೆಯ ಮೇಲೆಯೇ ‘ಶರಸೇತು ಬಂಧ’ ಆಗಿಹೋಗಬಾರದೇಕೆ ಎಂದರು.

ಮತ್ತೆ ಬಳಗ ‘ವೈ ನಾಟ್’ ಎಂದು ಎದ್ದುನಿಂತಿತು.

ಸಾಣೂರಿನ ಸೇತುವೆಯ ಮೇಲೆ ಯಕ್ಷಗಾನ ತಾಳಮದ್ದಳೆ ನಡೆಸಲು ದಿನ ಗೊತ್ತಾಗಿಯೇ ಹೋಯಿತು. ರಾಮ ಲಕ್ಷ್ಮಣ ಹನುಮಂತ ಇನ್ನೇನು ಕಥೆಯಾಗಿ ಜಿಗಿಯಬೇಕು ಹತ್ತು ಹಲವು ಮಂದಿ ಸೇತುವೆಯ ಮಗ್ಗುಲಲ್ಲೇ ಮಸೀದಿಯಿದೆ ಎನ್ನುವ ಆತಂಕ ಹಬ್ಬಿಸಿದರು. ಆದರೆ ಈ ವಾಟ್ಸ್ ಅಪ್ ಓದುಗರ ಗುಂಪು ದೇಗುಲಕ್ಕೂ, ಮಸೀದಿಗೂ ಹೋಗಿ ಆಹ್ವಾನ ಕೊಟ್ಟು ಹರಕೆ ಹೊತ್ತು ಬಂತು.

‘ಜನರನ್ನು ಎಲ್ಲಿ ಕೂರಿಸುತ್ತೀರಿ ಇರಿ’ ಎಂದು ಹೇಳಿ ಮಸೀದಿಯವರು ಕುರ್ಚಿಗಳನ್ನ ತಂದು ಹಾಕಿದರು. ಪ್ರಾರ್ಥನೆ ವೇಳೆ ತಾಳಮದ್ದಲೆಗೆ ತೊಂದರೆ ಆಗದಿರಲಿ ಎಂದು ಧ್ವನಿ ವರ್ಧಕದ ಸದ್ದು ತಗ್ಗಿಸಿದರು. ಭಾಗವತರಿಗೆ ಸನ್ಮಾನ ಮಾಡಿದರು. ‘ಹೊಸ ಪಾಠ ಕಲಿತುಬಂದೆವು’ ಎನ್ನುತ್ತಾರೆ ಮಂಜುನಾಥ ಕಾಮತ್.

’ನಾವು ಹೀಗೆ ಊರೂರಿಗೆ, ಮನೆ ಮನೆಗೆ ಹೋಗುತ್ತಾ ಇಲ್ಲದಿದ್ದರೆ, ಪುಸ್ತಕದ ಒಳಗೆ ಮುಖ ಹುದುಗಿಸದಿದ್ದರೆ ಪಾಠ ಮಾಡುವಾಗ ವಿದ್ಯಾರ್ಥಿಗಳ ಸಂಕಟಕ್ಕೂ ಕಿವಿ ಆಗದೆ ಹೋಗಿದ್ದಿದ್ದರೆ ಬದುಕು ಎನ್ನುವುದೇ ಅರ್ಥವಾಗುತ್ತಿರಲಿಲ್ಲ’ ಎಂದು ಮಂಜುನಾಥ ಕಾಮತ್ ಅನುಭವ ಬಿಚ್ಚಿಕೊಳ್ಳುತ್ತಾ ನಿಂತಿದ್ದರು.

ಬದುಕು ಅವರಿಗೆ ಎಷ್ಟು ಮೊಗೆದು ಕೊಟ್ಟಿದೆಯೋ ಅಷ್ಟೇ ಬದುಕಿಗೂ ಅವರು ಮೊಗೆದು ಕೊಟ್ಟಿದ್ದಾರೆ ಅನಿಸಿತು. ಆ ವೇಳೆಗೆ ಸುಚಿತ್ ಕೈನಲ್ಲಿ ಪುಸ್ತಕ ಇರಲಿಲ್ಲ. ಬದಲಿಗೆ ಒಂದು ಡಬ್ಬ ಇತ್ತು . ಹಣ ಸಂಗ್ರಹದ ಡಬ್ಬ. ಎಲ್ಲೋ ದೂರದಿ ಇದ್ದ ಶಾಹೀನಾ ತನ್ನ ಮಗಳು ಮಹೆಕ್ ಗೆ ಕ್ಯಾನ್ಸರ್ ಎಂದಾಗ ಕೈ ಕಾಲು ಬಿಟ್ಟರು.

ಮಣಿಪಾಲಕ್ಕೆ ಬಂದು ಚಿಕಿತ್ಸೆಗಾಗಿ ಬೀದಿ ಬೀದಿಯಲ್ಲಿ ಭಿಕ್ಷೆ ಎತ್ತುತ್ತಿದ್ದರು. ಅದನ್ನು ಕಂಡ ಸುಚಿತ್ ತಮ್ಮ ವಾಟ್ಸ್ ಅಪ್ ಬಳಗದೊಂದಿಗೆ ‘ಮಾನವೀಯತೆಯ ಪರಿಮಳ’ ಎನ್ನುವ ಹೆಸರಿನಲ್ಲಿ ಮಹೆಕ್ ನತ್ತ ಹೊರಟೇಬಿಟ್ಟರು. ಈಗ ಮಣಿಪಾಲ- ಉಡುಪಿ ಬಿಡಿ ರಾಜ್ಯದ ಎಲ್ಲೆಡೆಯಿಂದ ಜನ ನೆರವಿನ ಹಸ್ತ ಚಾಚುತ್ತಿದ್ದಾರೆ ಎಂದರು.

‘ಎದೆ ಎದೆಗಳ ನಡುವೆ ಇರುವ ಸೇತುವೆಗಳು ಮುರಿದಿವೆ..’ ಎನ್ನುವ ಹಾಡನ್ನು ಸುಳ್ಳು ಮಾಡಲು ಎಲ್ಲರೂ ಕೈ ಜೋಡಿಸಿದ್ದರು.