ವಿಶ್ವ ಅಹಿಂಸಾ ದಿನಾಚಾರಣೆ: ಗಂಗೋತ್ರಿಯಲ್ಲಿ ‘ತಾಷ್ಕೆಂಟ್ ಡೈರಿ’ ಬಿಡುಗಡೆ….

ಮೈಸೂರು,ಅಕ್ಟೊಂಬರ್,02,2020(www.justkannada.in) : ಆಧುನಿಕ ಜೀವನದಲ್ಲಿ ಮೌಲ್ಯಗಳು ಕುಸಿಯುತಿದ್ದು, ಗಾಂಧೀಜಿಯವರ ಸತ್ಯ, ಅಹಿಂಸೆ ತತ್ವವಿಚಾರಧಾರೆಗಳು ಪ್ರಸ್ತುತ ಅಗತ್ಯ ಎಂದು ಮೈಸೂರು ವಿಶ್ವವಿದ್ಯಾನಿಲಯದ ಕುಲಪತಿ ಪ್ರೊ.ಜಿ.ಹೇಮಂತ್ ಕುಮಾರ್ ಹೇಳಿದರು.

ಮೈಸೂರು ವಿಶ್ವವಿದ್ಯಾನಿಲಯ ಗಾಂಧಿ ಅಧ್ಯಯನ ಕೇಂದ್ರದ ವತಿಯಿಂದ ಶುಕ್ರವಾರ ಮಾನಸಗಂಗೋತ್ರಿ ಆವರಣದ ಗಾಂಧಿಭವನ ಸಭಾಂಗಣದಲ್ಲಿ ಆಯೋಜಿಸಿದ್ದ ‘’152ನೇ ಗಾಂಧಿ ಜಯಂತಿ ಪ್ರಯುಕ್ತ ವಿಶ್ವ ಅಹಿಂಸಾ ದಿನಾಚರಣೆ’’ ಕಾರ್ಯಕ್ರಮವನ್ನು ಪ್ರೊ.ಜಿ.ಹೇಮಂತ್ ಕುಮಾರ್ ಉದ್ಘಾಟಿಸಿದರು.

ಬಳಿಕ ಮಾತನಾಡಿದ ಅವರು, ಜಗತ್ತಿನ ಎಲ್ಲಾ ತೆರನಾದ ಸಂಘರ್ಷಗಳಿಗೆ ಹಾಗೂ ರಾಜಕೀಯ, ಪರಿಸರ, ಪರಮಾಣು ಯುದ್ಧ, ಆಡಳಿತ ಸಮಸ್ಯೆಗಳು ಸೇರಿದಂತೆ ಆಶಾಂತಿಗೆ ಗಾಂಧೀಜಿ ಅವರ ದೃಷ್ಟಿಕೋನ ಮತ್ತು ವಿಚಾರಧಾರೆಗಳ ಮಾರ್ಗವು ಪರಿಹಾರ ನೀಡುವುದು ಎಂದರು.

ಗಾಂಧಿ ಎಂಬ ಹೆಸರು ಕೇಳಿದರೆ ಮೈಯಲ್ಲಿ ಸಂಚಲನ ಉಂಟಾಗುತ್ತದೆ. ದೇಶಕ್ಕೆ ಮಾತ್ರವಲ್ಲದೇ, ವಿಶ್ವಕ್ಕೆ ಅವರು ನೀಡಿದ ಕೊಡುಗೆ ಅಪಾರ. ಸತ್ಯ, ಅಹಿಂಸೆಯಂತಹ ತತ್ವವಿಚಾರಧಾರೆಗಳು ಇಂದಿಗೂ ಪ್ರಸ್ತುತ. ಅವರ ವ್ಯಕ್ತಿತ್ವವು ಪಾಂಡಿತ್ಯದಿಂದ ಮಾತ್ರವಲ್ಲದೇ, ಸತ್ಯ ಮತ್ತು ಅಹಿಂಸೆಯ ಸರಳ ಅನುಷ್ಠಾನದಿಂದ ರೂಪುಗೊಂಡಿತ್ತು ಎಂದು ಹೇಳಿದರು.

ಗಾಂಧೀಜಿಯವರದ್ದು, ಅನುಕರಣೀಯ ವ್ಯಕ್ತಿತ್ವ

ಲೋಕಕಲ್ಯಾಣ ದೃಷ್ಟಿ, ಮಾನವೀಯತೆ, ಸಹನೆ, ಶಾಂತಿ, ಸಾಧಿಸುವ ಛಲ ಹೀಗೆ…ಹತ್ತು ಹಲವು ಗುಣಗಳು ಅವರಲ್ಲಿ ಕೇಂದ್ರಿಕೃತವಾಗಿತ್ತು. ಬುದ್ಧ, ಬಸವ, ಅಂಬೇಡ್ಕರ್ ಅವರ ಗುಣಗಳನ್ನು ಅವರು ಒಳಗೊಂಡಿದ್ದರು. ಹೀಗಾಗಿ, ಮಹಾತ್ಮ ಎಂದು ಗುರುತಿಸಿಕೊಂಡಿದ್ದಾರೆ. ಗಾಂಧೀಜಿಯವರದ್ದು, ಅನುಕರಣೀಯ ವ್ಯಕ್ತಿತ್ವವಾಗಿದೆ ಎಂದು ಸ್ಮರಿಸಿದರು.

ಜಗತ್ತಿನಲ್ಲಿ ಹೆಚ್ಚು ಪ್ರಸಾರವಾದ ಸಿದ್ಧಾಂತಗಳಲ್ಲಿ ಗಾಂಧಿ ಸಾಹಿತ್ಯವು ಪ್ರಮುಖ ವಾಗಿದೆ. ಸರಳ ಬದುಕು, ಶ್ರೀಮಂತ ಚಿಂತನೆಯ ಧೀಮಂತ ವ್ಯಕ್ತಿ ಗಾಂಧಿಯಾಗಿದ್ದಾರೆ. ಅವರು ಸ್ವಾವಲಂಭಿ ಬದುಕಿನ ವಿಚಾರಧಾರೆಗಳನ್ನು ಜನಮಾನಸದಲ್ಲಿ ಬಿತ್ತಿದರು. ಆಧುನಿಕ ಸದೃಢ ರಾಷ್ಟ್ರ ನಿರ್ಮಾಣದ ಭದ್ರ ಬುನಾದಿ ಹಾಕಿದರು ಎಂದು ನೆನದರು.

ಗಾಂಧೀಜಿ ವಿಚಾರಧಾರೆಗಳಿಂದ ವಿಶ್ವ ಸ್ಪೂರ್ತಿಗೊಂಡಿದೆ

ಗಾಂಧೀಜಿ ನಮ್ಮ ಐಕಾನ್ ಆಗಿದ್ದು, ಸಾಮಾಜವಿಜ್ಞಾನಿ, ತತ್ವಜ್ಞಾನಿ, ಸರ್ವೋದಯದ ನೇತರ, ಸ್ವದೇಶಿ ನಿಷ್ಟ, ಮಾನವೀಯತೆಯ ಮಂಗಳ ರೂಪವಾಗಿದ್ದಾರೆ. ಅವರ ಜೀವನ ಕ್ರಮವು ಭಾರತೀಯ ಜೀವನ ಪದ್ಧತಿಯ ಯಶಸ್ವಿ ಪ್ರಯೋಗ ಶಾಲೆಯಾಗಿದೆ.  ಅವರ ವಿಚಾರಧಾರೆಗಳಿಂದ ವಿಶ್ವವೇ ಸ್ಪೂರ್ತಿಗೊಂಡಿದೆ. ಹೀಗಾಗಿ, ಹಿಂದಿಗಿಂತಲೂ ಅವರ ವಿಚಾರಧಾರೆಗಳು ಇಂದು ಪ್ರಸ್ತುತವಾಗಿದೆ ಎಂದು ತಿಳಿಸಿದರು.

ವರ್ಷದ ವೇಳೆಗೆ ಗ್ರಂಥಾಲಯ ನಿರ್ಮಾಣ

ಗಾಂಧಿ ಅಧ್ಯಯನ ಕೇಂದ್ರದಲ್ಲಿ ಗಾಂಧೀಜಿ ಸಂಬಂಧಿಸಿದಂತೆ ಅನೇಕ ಕೃತಿಗಳಿದ್ದು, ಅವುಗಳ ಸಂರಕ್ಷಣೆಗೆ ಹಾಗೂ ಓದುಗರಿಗೆ ಅನುಕೂಲ ಮಾಡಿಕೊಡುವ ನಿಟ್ಟಿನಲ್ಲಿ ಗಾಂಧಿ ಭವನದ ಆವರಣದಲ್ಲಿ ಚಿಕ್ಕ ಗ್ರಂಥಾಲಯ ನಿರ್ಮಿಸುವಂತೆ  ಗಾಂಧಿ ಭವನ ನಿರ್ದೇಶಕ ಪ್ರೊ.ಎಂ.ಎಸ್.ಶೇಖರ್ ಮನವಿ ಮಾಡಿದರು. ಇದಕ್ಕೆ ಪ್ರತಿಕ್ರಿಯಿಸಿ ಮುಂದಿನ ವರ್ಷದೊಳಗೆ ಗಾಂಧಿ ಭವನ ಆವರಣದಲ್ಲಿ ಗ್ರಂಥಾಲಯ ನಿರ್ಮಾಣ ಮಾಡಿಕೊಡುವುದಾಗಿ ಕುಲಪತಿಗಳು ಭರವಸೆ ನೀಡಿದರು.

ಕಾರ್ಯಕ್ರಮದಲ್ಲಿ ಲಾಲ್ ಬಹೂದ್ದೂರ್ ಶಾಸ್ತ್ರಿ ಅವರನ್ನು ಕುರಿತಂತೆ ಎಸ್.ಉಮೇಶ್ ಬರೆದಿರುವ ‘’ತಾಷ್ಕೆಂಟ್ ಡೈರಿ’’ ಕೃತಿಯನ್ನು ಕುಲಪತಿಗಳು ಬಿಡುಗಡೆ ಮಾಡಿದರು.

ವಿಶ್ರಾಂತ ಪ್ರಾಧ್ಯಾಪಕ ಪ್ರೊ.ಸಿ.ನಾಗಣ್ಣ ಅವರು ಮೊದಲ ನೋಟದಲ್ಲಿ ಗಾಂಧಿ ವಿಷಯ ಕುರಿತು ಹಾಗೂ ತಾಷ್ಕೆಂಟ್ ಡೈರಿ ಕುರಿತು ಮಾತನಾಡಿದರು.gandhi-jayanthi-university-of-mysore-thaskent-dairy-release-manasa-gangotri-vc-prof-g-hemant-kumar

ಕಾರ್ಯಕ್ರಮ ಆರಂಭದಲ್ಲಿ ಲಲಿತ ಕಾಲೇಜಿನ ವಿದ್ಯಾರ್ಥಿನಿಯರು ವೈಷ್ಣವ ಜನತೋ, ರಘುಪತಿ ರಾಘವ ರಾಜಾರಾಮ್ ಗೀತೆಗಳನ್ನು ಹಾಡುವ ಮೂಲಕ ಗಾಂಧೀಜಿಯವರನ್ನು ಸ್ಮರಿಸಿದರು.

ಕಾರ್ಯಕ್ರಮದಲ್ಲಿ ಮೈಸೂರು ವಿವಿ ಕುಲಸಚಿವ ಪ್ರೊ.ಆರ್.ಶಿವಪ್ಪ, ಗಾಂಧಿ ಭವನ ನಿರ್ದೇಶಕ ಪ್ರೊ.ಎಂ.ಎಸ್.ಶೇಖರ್, ಲೇಖಕ ಎಸ್.ಉಮೇಶ್ ಇತರರು ಉಪಸ್ಥಿತರಿದ್ದರು.

key words: gandhi jayanthi- university of mysore-Thaskent dairy- release-manasa gangotri- VC-Prof. G. Hemant Kumar