ಗದಗ ,ಮೇ,16,2025 (www.justkannada.in): ತಾಲ್ಲೂಕು ಮತ್ತು ಜಿಲ್ಲೆಯ ಹುಲಕೋಟಿಯ ಮಾದರಿ ಗ್ರಾಮ ಪಂಚಾಯತ್ ಗೆ ಚುನಾವಣೆ ಆಯುಕ್ತ ಜಿ.ಎಸ್. ಸಂಗ್ರೆಶಿ ಅವರು ಭೇಟಿ ನೀಡಿದರು.
ಕಾನೂನು ಸಚಿವ ಎಚ್.ಕೆ. ಪಾಟೀಲ್ ಅವರ ಮೂಲ ಊರಿನಲ್ಲಿರುವ ಈ ಗ್ರಾಮ ಪಂಚಾಯತ್, ರಾಜ್ಯದ ಗ್ರಾಮೀಣ ಆಡಳಿತ ಮತ್ತು ಮೂಲಸೌಕರ್ಯ ಅಭಿವೃದ್ಧಿಗೆ ಹೊಸ ಮಾನದಂಡವನ್ನು ಸ್ಥಾಪಿಸಿದೆ.
ಕರ್ನಾಟಕ ವಿಧಾನಸಭೆ ಹೋಲುವ ರೀತಿಯ ಅತ್ಯುತ್ತಮ ಸಭಾಂಗಣವಿರುವ ಉತ್ತಮ ಕಟ್ಟಡ. ಈ ಅದ್ಭುತ ಕಟ್ಟಡವು ಹುಲಕೋಟಿಯ ಅಭಿವೃದ್ಧಿಯಲ್ಲಿ ಪ್ರಮುಖ ಪಾತ್ರವಹಿಸಿದ್ದ ಸಚಿವ ಎಚ್.ಕೆ. ಪಾಟೀಲ್ ಅವರ ದೃಷ್ಟಿಕೋನಕ್ಕೆ ಸಾಕ್ಷಿಯಾಗಿದೆ.
ಹುಲಕೋಟಿಯ ಗ್ರಾಮ ಪಂಚಾಯತ್ ಕಟ್ಟಡವು ಕರ್ನಾಟಕ ರಾಜ್ಯದಲ್ಲಿ ಇತರ ಯಾವುದೇ ಪಂಚಾಯತ್ ಕಟ್ಟಡಕ್ಕೆ ಹೋಲಿಕೆ ಆಗದಂತಹದ್ದು, ಇತರರಿಗೆ ಮಾದರಿಯಾಗಿದೆ. ಇದು ಪಂಚಾಯತ್ ಸದಸ್ಯರಷ್ಟೇ ಅಲ್ಲದೆ ಸಂಪೂರ್ಣ ಗ್ರಾಮದ ಜನತೆಗೆ ಅಗತ್ಯವಾದ ಮೂಲಸೌಕರ್ಯ ಒದಗಿಸುತ್ತಿದ್ದು, ಗ್ರಾಮದ ಒಟ್ಟು ಅಭಿವೃದ್ಧಿಗೆ ಮಹತ್ವಪೂರ್ಣವಾಗಿದೆ.
ಸಂಗ್ರೆಶಿ ಅವರ ತಾಲ್ಲೂಕು ಮತ್ತು ಜಿಲ್ಲಾ ಪಂಚಾಯತ್ ಚುನಾವಣೆಗೆ ಸಂಬಂಧಿಸಿದ ಪೂರ್ವ ಸಿದ್ದತಾ ಪ್ರವಾಸದ ಭಾಗವಾಗಿ ಗದಗ ತಾಲ್ಲೂಕು ಕಚೇರಿಗೆ ಭೇಟಿ ನೀಡಿದ ಸಂದರ್ಭದಲ್ಲಿ ತಹಶೀಲ್ದಾರ್ ಹಾಗೂ ಸಹಾಯಕ ಆಯುಕ್ತರೊಂದಿಗೆ ಚುನಾವಣಾ ತಯಾರಿಗಳ ಕುರಿತು ನಡೆಸಿದ ಚರ್ಚೆಗಳು ಫಲಕಾರಿಯಾಗಿದ್ದು, ಇದೇ ಸಂದರ್ಭದಲ್ಲಿಯೇ ಸಹಾಯಕ ಆಯುಕ್ತರು ಹುಲಕೋಟಿಯ ಮಾದರಿ ಗ್ರಾಮ ಪಂಚಾಯತ್ ಕಟ್ಟಡದ ಬಗ್ಗೆ ಚುನಾವಣಾ ಆಯುಕ್ತ ಸಂಗ್ರೆಶಿ ಅವರ ಗಮನ ಸೆಳೆದರು.
ಗ್ರಾಮ ಪಂಚಾಯತ್ ಕಟ್ಟಡಕ್ಕೆ ಭೇಟಿ ನೀಡಿದ ನಂತರ, ಆಯುಕ್ತ ಜಿ.ಎಸ್. ಸಂಗ್ರೆಶಿ ಮೆಚ್ಚುಗೆ ವ್ಯಕ್ತಪಡಿಸಿ, ಈ ಮಾದರಿಯು ರಾಜ್ಯದಾದ್ಯಂತ ಅನುಕರಿಸಲು ಯೋಗ್ಯವಾಗಿದೆ. ಇಂತಹ ಆದರ್ಶ ಮಾದರಿಯನ್ನು ಸರ್ಕಾರದ ಗಮನಕ್ಕೆ ತರುವುದಾಗಿ ತಿಳಿಸಿ, ರಾಜ್ಯದ ಇತರ ಭಾಗಗಳಲ್ಲಿಯೂ ಇಂತಹ ಅಭಿವೃದ್ಧಿಗೆ ಪ್ರೇರಣೆಯಾಗಲಿ ಎಂಬುದು ಉದ್ದೇಶ ಎಂದರು.
ಇದೇ ವೇಳೆ ಕಾನೂನು ಸಚಿವ ಎಚ್.ಕೆ. ಪಾಟೀಲ ಅವರ ಶ್ಲಾಘನೀಯ ಕೆಲಸ ಹಾಗೂ ದೃಷ್ಟಿಕೋನವನ್ನು ಸಂಗ್ರೆಶಿ ಪ್ರಶಂಸಿಸಿದರು.
ಹುಲಕೋಟಿ ಗ್ರಾಮ ಮತ್ತು ಅದರ ಗ್ರಾಮ ಪಂಚಾಯತ್ ಕಟ್ಟಡದ ಅಭಿವೃದ್ಧಿ, ಗ್ರಾಮೀಣ ಅಭಿವೃದ್ಧಿ ಮತ್ತು ಉತ್ತಮ ಆಡಳಿತದ ಮೇಲಿನ ಎಚ್.ಕೆ. ಪಾಟೀಲ್ ಅವರ ಬದ್ಧತೆಯ ನೇರ ಪ್ರತಿಬಿಂಬವಾಗಿದೆ ಇದು ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
Key words: Hulakoti, model, gram panchayat, Election Commissioner G.S Sangreshi