ನೋಡಿ, ನಿಜವಾದ ಡ್ರೋನ್ ಮ್ಯಾನ್ ಇಲ್ಲಿದ್ದಾನೆ..!

ಉಡುಪಿ, ಜು.17, 2020 : ( www.justkannada.in news ) ಡ್ರೋನ್ ಪ್ರತಾಪ್ ಸಂಶೋಧನೆ ಕುರಿತು ಮಾಧ್ಯಮಗಳಲ್ಲಿ ವಿವಾದ ಕಾವು ಪಡೆಯುತ್ತಿರುವ ಬೆನ್ನಲ್ಲೇ, ಉಡುಪಿಯಲ್ಲೊಬ್ಬ ಯುವಕನ ಡ್ರೋನ್ ಆಸಕ್ತಿ ಬಗೆಗೆ ಫೇಸ್ ಬುಕ್ ಮುಖಪುಟದಲ್ಲಿನ ಬರಹ ಆಸಕ್ತಿ ಕೆರಳಿಸಿದೆ.

ಉಡುಪಿಯ ಎಂಜಿಎಂ ಕಾಲೇಜಿನ ಪತ್ರಿಕೋಧ್ಯಮ ವಿಭಾಗದ ಉಪನ್ಯಾಸಕರಾದ ಮಂಜುನಾಥ್ ಕಾಮತ್, ಫೇಸ್ ಬುಕ್ ಮುಖಪಟದಲ್ಲಿ ಯುವಕ Glen Rebello ಬಗ್ಗೆ ಬರೆದ ಆರ್ಟಿಕಲ್ ಕುತೂಹಲ ಮೂಡಿಸಿದೆ. ಸಣ್ಣ ವಯಸ್ಸಿನಲ್ಲೇ ಡ್ರೋನ್ ಕುರಿತ ಆತನ ಜ್ಞಾನ, ಆಸಕ್ತಿ, ಜೊತೆಗೆ ಉದ್ಯಮ ಕಂಡು ಸ್ಪೂರ್ತಿಯಾಗಿ ಬರೆದ ಲೇಖನ ಹೀಗಿದೆ…..

jk-logo-justkannada-logo

ಡ್ರೋನ್ ಹಾರ್ಬೇಕಾದ್ರೆ ನಾಲ್ಕು ಫ್ಯಾನ್. ನಾಲ್ಕು ಮೋಟರ್. ಒಂದು ಬ್ಯಾಟರಿ. ಮತ್ತೊಂದು ರಿಮೋಟ್ ಸಾಕು ತಾನೇ?
ಆಟಿಕೆಗಳಿಂದ ಮೋಟರ್ ಕೀಳಲಾಯ್ತು. ಕಂಪ್ಯೂಟರ್ ಸಿ.ಪಿ.ಯುನಲ್ಲಿ ಕೂಲಿಂಗ್ ಫ್ಯಾನ್ ಇರುತ್ತಲ್ಲ, ಅದನ್ನು ಖರೀದಿಸಲಾಯ್ತು. ಮತ್ತೊಂದು 9 ವೋಲ್ಟ್ ಬ್ಯಾಟರಿ ಸಿಕ್ಕಿಸಿ ಡ್ರೋನ್ ತಯಾರಿಸಿ, ರಿಮೋಟಿನ ಬಟನ್ ಒತ್ತಲಾಯ್ತು. ಅದು ಹಾರಿತಾ?
ವಿಮಾನದ ಸದ್ದು ಕೇಳಿದ ಕೂಡಲೇ ಹೊರಗೆ ಬರುವ, ಮದುವೆ ಕಾರ್ಯಕ್ರಮಗಳಲ್ಲಿ ವೀಡಿಯೋ ರೆಕಾರ್ಡಿಂಗಿಗೆ ಬಳಸುವ ಡ್ರೋನ್ ಕಂಡು ಕುತೂಹಲಗೊಳ್ಳುವ ಗ್ಲೆನ್ ರೆಬೆಲ್ಲೋ ರಚಿಸಿದ ಮೊದಲ ಡ್ರೋನ್ ಅದು. ಆಗ ಕೇವಲ 9 ನೇ ತರಗತಿಯ ಹುಡುಗ. ಈಗ 18ರ ಹರೆಯವಷ್ಟೇ.
ಉಡುಪಿ ಜಿಲ್ಲೆಯ ಮೂಡುಬೆಳ್ಳೆಯ ಹುಡುಗ ಆಟದ ಸಾಮಾನುಗಳಿಂದ ತಯಾರಿಸಿದ ಮೊದಲ ಡ್ರೋನ್ ಏಳಲೇ ಇಲ್ಲ. ಬೇಸರವಾಯ್ತು. ಹಠ ಮೂಡಿತು. ಕಾರಣ ಹುಡುಕತೊಡಗಿದ. ಅಂತರ್ಜಾಲದಲ್ಲಿ ಅಡ್ಡಾಡಿದ. ಒಂದಷ್ಟು ಜನರ ಪರಿಚಯ ಮಾಡ್ಕೊಂಡ. ಡ್ರೋನಿಗೆ ಬಳಸುವ ಉಪಕರಣಗಳು ಎಲ್ಲೆಲ್ಲಿ ಸಿಗುತ್ತವೆ? ಅದರ ಮೌಲ್ಯಗಳೆಷ್ಟು ಎಂದು ತಿಳಿದುಕೊಂಡ. ಬರೀ ಮೋಟರಿಗೇ ರೂ. 8,000! ಅಷ್ಟು ಹಣ ಎಲ್ಲಿದೆ?
ಸ್ಕಾಲರ್ಶಿಪ್ ದುಡ್ಡು, ಅಮ್ಮ, ಅಣ್ಣ ಸಂಬಂಧಿಕರನ್ನು ಓಲೈಸಿ ಸಂಗ್ರಹಿಸಿದ ಹಣದಿಂದ ಸಲಕರಣೆಗಳನ್ನು ತರಿಸಿಕೊಂಡ. ಆದರೆ ಅದನ್ನು ಮುಟ್ಟಲು ಒಂದಿಡೀ ವರ್ಷ ಅಮ್ಮ ಬಿಡಲೇ ಇಲ್ಲ. ಎಸ್ಸೆಸ್ಸೆಲ್ಸಿ ಪರೀಕ್ಷೆ. ಡ್ರೋನ್ ನಿರ್ಮಾಣದ ಕನವರಿಕೆಯಲ್ಲೇ 10ನೇ ತರಗತಿ ಯ ಪಾಠಗಳನ್ನು ಚೆನ್ನಾಗಿ ಓದಿ, ಪರೀಕ್ಷೆ ಬರೆದು 85.6% ಅಂಕಗಳಿಸಿದ. ಪರೀಕ್ಷೆ ಮುಗಿದ ಸಂಜೆಯಿಂದಲೇ ಪ್ರಯೋಗಕ್ಕಿಳಿದ.
ಆಧುನಿಕ ಸಲಕರಣೆಗಳಿಂದ ತಯಾರಿಸಿದ ಈ ಎರಡನೇ ಪ್ರಯೋಗವೂ ವಿಫಲ. ಅಲ್ಲೂ ಕುಗ್ಗಲಿಲ್ಲ. ಸಾಮಾಜಿಕ ಜಾಲತಾಣದಲ್ಲಿ ಡ್ರೋನ್ ತಯಾರಿಸುವವರನ್ನು ಸಂಪರ್ಕಿಸಿದ. ಯುನೈಟೆಡ್‌‌ ಕಿಂಗ್ಡಮ್ ನ ಹವ್ಯಾಸಿ ಡ್ರೋನ್ ಹಾರಾಟಗಾರ Ashcarter ಎಂಬೊಬ್ಬರ ಸ್ನೇಹಿತನಾದ. ಅವ್ರಿಂದ ಪಾಠ ಹೇಳಿಸಿಕೊಂಡು, ಅಲ್ಲಿಂದಲೇ ಒಂದಷ್ಟು ಸಾಮಾಗ್ರಿಗಳನ್ನು, ಅಲ್ಲೇ ಕೆಲಸ ಮಾಡುವ ಅಮ್ಮನ ತಮ್ಮ ಅನಿಲ್ ಡಿಸೋಜ ಪೆರ್ನಾಲ್ ಅವರಿಗೆ ತಿಳಿಸಿ, ತರಿಸಿಕೊಂಡು ಡ್ರೋನ್ ತಯಾರಿಸಿದ. ಅದು ಹಾರಿಯೇ ಬಿಡ್ತು. ಅಲ್ಲಿಂದ ಗ್ಲೆನ್ ಕನಸು ಗರಿಗೆದರಿತು.

udupi-drone-boy- Glen Rebello-manjunath-kamath
ಫೋಟೋ, ವೀಡಿಯೋ, ಡೆಲಿವರಿ, ಕೃಷಿ ಚಟುವಟಿಕೆಗಳಿಗೆ ಡ್ರೋನ್ ಬಳಸುವುದರ ಜೊತೆಗೆ ಡ್ರೋನ್ ರೇಸಿಂಗು ಅನ್ನೋದೊಂದು ಉಂಟು ಎಂದು ಕಂಡುಕೊಂಡ. ಮಣಿಪಾಲದಲ್ಲಿ ನಡೆದೊಂದು ರೇಸಿನಲ್ಲಿ ಭಾಗವಹಿಸಿದ. ಸಾಮಾನ್ಯ ಡ್ರೋನುಗಳು ಗಂಟೆಗೆ 50 ರಿಂದ 60 ಕಿ.ಮೀ ವೇಗದಲ್ಲಿ ಚಲಿಸಿದರೆ ರೇಸಿಂಗ್ ಡ್ರೋನುಗಳ ವೇಗ ಗಂಟೆಗೆ 180 ರಿಂದ 220 ಕಿ.ಮೀ ಓಡುವುದನ್ನು ಗಮನಿಸಿದ. ಅಂತಹ ಡ್ರೋನುಗಳನ್ನೂ ತಯಾರಿಸಲು ಗ್ಲೆನ್ ಮುಂದಾದ. ಯಶಸ್ವಿಯಾದ.
ಕಳೆದ ಒಂದೂವರೆ ವರ್ಷದಲ್ಲಿ ಈ ಹುಡುಗ ಒಟ್ಟು 22 ಡ್ರೋನ್ ನಿರ್ಮಾಣ ಮಾಡಿದ್ದಾನೆ. ಸಹಜ ಕುತೂಹಲದಿಂದ ಆರಂಭಗೊಂಡು, ಹವ್ಯಾಸವಾಗಿ ಇದೀಗ ಸಣ್ಣ ಪ್ರಮಾಣದ ಉದ್ಯಮವನ್ನೂ ಕೇವಲ 18ರ ವಯಸ್ಸಿನ ಗ್ಲೆನ್ ಮಾಡುತ್ತಿದ್ದಾನೆ.
“ಆರಂಭದಲ್ಲಿ ಹೊರಗಿನಿಂದ ಖರೀದಿಸುವ ಒಂದು ಡ್ರೋನಿನ ಬೆಲೆ ಕನಿಷ್ಟ ಒಂದೂವರೆ ಲಕ್ಷದ ಮೇಲಿತ್ತು. ಅದೇ, ಉಪಕರಣಗಳನ್ನು ಖರೀದಿಸಿ ತಯಾರಿಸಿದಾಗ ಕೇವಲ 32,000ವಷ್ಟೇ ತಗುಲಿತು. ನಿರ್ಮಾಣದ ಜೊತೆಗೆ ರಿಪೇರಿಯನ್ನೂ ಕಲಿತೆ. ಊರ ಛಾಯಾಗ್ರಾಹಾಕರುಗಳಿಗೆ, ಮುಂಬೈಯ ಕೆಲವು ಸಿನಿಮಾ ಮಂದಿಗೆ ನನ್ನ ವಿಷಯ ಗೊತ್ತಾಗಿ ಬೇಡಿಕೆ ಬರಲು ಶುರುವಾದವು” ಎನ್ನುತ್ತಾನೆ ಗ್ಲೆನ್.
ಮೊನ್ನೆಯಷ್ಟೇ ದ್ವಿತೀಯ ಪಿ.ಯು.ಸಿ ಫಲಿತಾಂಶ ಬಂದಿದೆ. 72.5% ಅಂಕ ಗಳಿಸಿದ್ದಾನೆ. ಮಣಿಪಾಲದಲ್ಲಿ ಏರೋನಾಟಿಕ್ಸ್ ಇಂಜಿನಿಯರಿಂಗ್ ಕಲಿಯುವ ಆಸೆ ಹೊತ್ತಿದ್ದಾನೆ. ಜೊತೆ ಜೊತೆಗೇ ಡ್ರೋನಿನ ವ್ಯವಹಾರ. ವೀಡಿಯೋ, ರೇಸಿಂಗ್ ಡ್ರೋನುಗಳ ಜೊತೆಗೆ ವಸ್ತುಗಳ ಸಾಗಾಟ, ಕೃಷಿ ಚಟುವಟಿಕೆಗಳಿಗೆ ಅನುಕೂಲವಾಗುವ ಕಸ್ಟಮೈಸ್ಡ್ ಡ್ರೋನ್ ಗಳನ್ನೂ ಗ್ಲೆನ್ ತಯಾರಿಸಿ ಕೊಡುತ್ತಾನೆ. “ನಾನು ಹೊಸತೇನನ್ನೂ ಸಂಶೋಧನೆ ಮಾಡಿಲ್ಲ. ಇರುವ ತಂತ್ರಜ್ಞಾನಗಳನ್ನು ಬಳಸಿ, ಕುತೂಹಲದಿಂದ ಕಲಿತು ಮಾಡುತ್ತಿದ್ದೇನೆ. ಮುಂದೆ ಹೊಸತುಗಳನ್ನು ಸಂಶೋಧಿಸುವ ಪ್ರಯತ್ನ ಮಾಡ್ತೇನೆ” ಎನ್ನುತ್ತಾನೆ ಹುಡುಗ.
ಡ್ರೋನ್ ಹಾರಾಟದಲ್ಲಿನ ಕಾರ್ಯಕ್ಷಮತೆ ಕಂಡು ಹಲವು ಅವಕಾಶಗಳು ಈ ಹುಡುಗನನ್ನು ಅರಸಿಬಂದಿವೆ. ಅದರಲ್ಲಿ ಪ್ರಮುಖವಾದದ್ದು Army Yachting Node & Yachting Association of India ಮುಂಬೈಯಲ್ಲಿ ಆಯೋಜಿಸಿದ್ದ ರಾಷ್ಟ್ರ ಮಟ್ಟದ Sail India ಸ್ಪರ್ಧೆ. ಅದರ ಡ್ರೋನ್ ಚಿತ್ರೀಕರಣಕ್ಕೆ ಕರೆದದ್ದು ಉಡುಪಿಯ ಈ ಹುಡುಗ ಗ್ಲೆನ್ ನನ್ನು.

(https://youtu.be/do-cs7ftMfY).

ಸಣ್ಣಪ್ರಾಯದಲ್ಲೇ ಸಾಧನೆ, ಸಂಪಾದನೆ ಮಾಡುತ್ತಿರುವ ಮಗನ ಬಗ್ಗೆ ತಾಯಿ ಗ್ಲ್ಯಾಡಿಸ್ ರೆಬೆಲ್ಲೋಗೆ ಬಹಳ ಹೆಮ್ಮೆ ಇದೆ. ಮಗನ ಮುಂದೆ ಯಾವತ್ತೂ ಹೇಳಿಕೊಳ್ಳುವುದಿಲ್ಲ. ಯಾವಾಗ ನೋಡಿದರೂ ಡ್ರೋನಿನ ಕನವರಿಕೆಯಲ್ಲೇ ಇರುವ ಗ್ಲೆನ್ ಓದು, ಮುಂದಿನ ಗುರಿಯ ಬಗ್ಗೆ ಚಿಂತೆ ಅವರಿಗೆ. ಆದರೆ ಇಂಜಿನಿಯರಿಂಗ್ ವಿದ್ಯಾರ್ಥಿಗಳಿಗೂ ಸುಲಭದಲ್ಲಿ ಮಾಡಲಾಗದ ಕೆಲಸವನ್ನು ಹೈಸ್ಕೂಲು, ಪಿಯುಸಿಯಲ್ಲೇ ಮಾಡಿ ತೋರಿಸಿದ ಗ್ಲೆನ್ ಭವಿಷ್ಯ ಖಂಡಿತವಾಗಿಯೂ ಉಜ್ವಲವಾಗಲಿದೆ. ಸರಕಾರ, ಸಂಸ್ಥೆ, ಮಾಧ್ಯಮಗಳು ಇಂತಹ ಸಹಜ ಕುತೂಹಲಿ, ಸತ್ಯ ಪ್ರತಿಭೆಗಳನ್ನು ಗುರುತಿಸಿ, ಪ್ರೋತ್ಸಾಹಿಸಬೇಕು. ಈಗ ಮೊಬೈಲ್ ಇಲ್ಲದ ಮನೆಯೇ ಇಲ್ಲ ಅನ್ನುವಂತೆ ಮುಂದೆ ಡ್ರೋನ್ ಬಳಸದ ಕ್ಷೇತ್ರವೇ ಇಲ್ಲ ಅನ್ನುವಷ್ಟರ ಮಟ್ಟಿಗೆ ಅದರ ಉಪಯೋಗಗಳಿವೆ. ಅವುಗಳನ್ನು ಗ್ಲೆನ್ ನಂತಹ ಹುಡುಗರನ್ನು ಬಳಸಿ ಪ್ರಯೋಗ, ಸಂಶೋಧನೆ, ಪ್ರಚಾರ ಮಾಡಿಸಬಹುದು. ಸ್ವಾವಲಂಬಿ, ನವ ಭಾರತ ನಿರ್ಮಾಣ ಮಾಡಬಹುದು.

– ಮಂಜುನಾಥ್ ಕಾಮತ್

 

oooooo

key words : udupi-drone-boy- Glen Rebello-manjunath-kamath