ಪ್ರಮುಖ ಐಪಿಎಸ್ ಅಧಿಕಾರಿಗಳ ವರ್ಗಾವಣೆ: ಬೆಂಗಳೂರಿಗೆ ಹೊಸ ಸಂಚಾರಿ ಪೊಲೀಸ್ ಮುಖ್ಯಸ್ಥ

ಬೆಂಗಳೂರು, ನವೆಂಬರ್ 15, 2022 (www.justkannada.in): ರಾಜ್ಯ ಸರ್ಕಾರ ಸೋಮವಾರದಂದು ಹಿರಿಯ ಐಪಿಎಸ್ ಅಧಿಕಾರಿ ಎಂ. ಅಬ್ದುಲ್ಲಾ ಸಲೀಂ ಅವರನ್ನು ಅವರ ಹಾಲಿ ಹುದ್ದೆಯನ್ನೇ ಉನ್ನತೀಕರಿಸಿ ಬೆಂಗಳೂರು ಮಹಾನಗರದ ಸಂಚಾರಿ ಪೊಲೀಸ್ ವಿಭಾಗದ ಮುಖ್ಯಸ್ಥರನ್ನಾಗಿ ನೇಮಕ ಮಾಡಿ ಆದೇಶ ಹೊರಡಿಸಿದೆ.

ಹೆಚ್ಚುವರಿ ಪೊಲೀಸ್ ಪ್ರಧಾನ ನಿರ್ದೇಶಕರಾಗಿದ್ದಂತಹ (ಆಡಳಿತ) ಸಲೀಂ ಅವರು ಇನ್ನು ಮುಂದೆ ಬೆಂಗಳೂರು ಸಂಚಾರಿ ಪೊಲೀಸ್ ವಿಭಾಗದ ವಿಶೇಷ ಆಯುಕ್ತರಾಗಿ (ಸಂಚಾರಿ) ಕಾರ್ಯನಿರ್ವಹಿಸಲಿದ್ದಾರೆ. ಆಡಳಿತ ಮತ್ತು ಸಿಬ್ಬಂದಿ ಸುಧಾರಣೆ ಇಲಾಖೆಯ ಪ್ರಕಾರ, ಎಡಿಜಿಪಿ ಹಾಗೂ ವಿಶೇಷ ಆಯುಕ್ತರ (ಸಂಚಾರ) ಎರಡೂ ಹುದ್ದೆಗಳು ಸ್ಥಾನಮಾನ ಹಾಗೂ ಜವಾಬ್ದಾರಿಗಳಲ್ಲಿ ಎಡಿಜಿಪಿ (ಆಡಳಿತ) ಹುದ್ದೆಗೆ ಸಮಾನವಾಗಿರುತ್ತದೆ.

ಸಲೀಂ (೫೬) ಅವರು ಬೆಂಗಳೂರಿನ ಉತ್ತರ ಹೊರವಲಯ ಭಾಗದ ಸೋಲದೇವನಹಳ್ಳಿಯ ನಿವಾಸಿಯಾಗಿದ್ದು, ನಗರದ ಸಂಚಾರಿ ಸಮಸ್ಯೆಗಳ ಕುರಿತು ಬಹಳ ಚೆನ್ನಾಗಿ ಅರಿತಿದ್ದಾರೆ. ಇವರು ವಾಣಿಜ್ಯ ವಿಷಯದಲ್ಲಿ ಸ್ನಾತಕೋತ್ತರ ಪದವಿಯನ್ನು ಹೊಂದಿದ್ದು, ಸಂಚಾರ ನಿರ್ವಹಣೆಯಲ್ಲಿ ಡಾಕ್ಟರೇಟ್ ಅನ್ನೂ ಸಹ ಪಡೆದುಕೊಂಡಿದ್ದಾರೆ.

೧೯೯೩ನೇ ಬ್ಯಾಚ್‌ನ ಐಪಿಎಸ್ ಅಧಿಕಾರಿಯಾಗಿರುವ ಡಾ. ಸಲೀಂ ಅವರು ಬೆಂಗಳೂರು ಮಹಾನಗರದ ಸಂಚಾರಿ ಪೊಲೀಸ್ ವಿಬಾಗದಲ್ಲಿ ಇತರೆ ಹಲವು ಹುದ್ದೆಗಳಲ್ಲಿ ಸೇವೆ ಸಲ್ಲಿಸಿ ಅಪಾರ ಅನುಭವವನ್ನು ಪಡೆದಿದ್ದರೆ. ಈ ಹಿಂದೆ ಇವರು ಉಪ ಪೋಲಿಸ್ ಆಯುಕ್ತರು (ಸಂಚಾರ – ಪೂರ್ವ) ಹಾಗೂ ಹೆಚ್ಚುವರಿ ಪೊಲೀಸ್ ಆಯುಕ್ತರಾಗಿಯೂ (ಸಂಚಾರ) ಸೇವೆ ಸಲ್ಲಿಸಿದ್ದಾರೆ.

ಡಾ. ಸಲೀಂ ಅವರು ಕಳೆದ ಮೂರು ವರ್ಷಗಳಿಗಿಂತಲೂ ಹೆಚ್ಚಿನ ಕಾಲದವರೆಗೆ ನಗರದ ಸಂಚಾರಿ ವಿಭಾಗವನ್ನು ಮುನ್ನಡೆಸುತ್ತಿದ್ದಂತಹ ಡಾ. ಬಿ.ಆರ್. ರವಿಕಾಂತೇ ಗೌಡ ಅವರ ಸ್ಥಾನವನ್ನು ತುಂಬಿದ್ದಾರೆ.
ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದ ಕೂಡಲೇ ಅಂದರೆ ಆಗಸ್ಟ್ ೫, ೨೦೧೯ರಂದು ಡೆಪ್ಯೂಟಿ ಐಜಿಪಿಯಾಗಿದ್ದಂತಹ ಡಾ. ಗೌಡ ಅವರನ್ನು ಜಂಟಿ ಪೊಲೀಸ್ ಆಯುಕ್ತರನ್ನಾಗಿ (ಸಂಚಾರ) ನೇಮಕ ಮಾಡಿತು. ಈಗ ಇವರು ಸಿಯಡಿ ವಿಭಾಗದ ಡಿಐಜಿ ಆಗಿ ಹುದ್ದೆ ಅಲಂಕರಿಸಿದ್ದಾರೆ.
ಇತರೆ ಬಡ್ತಿ/ ವರ್ಗಾವಣೆಗಳು
ಬೆಂಗಳೂರಿನ ಆರ್ಥಿಕ ಅಪರಾಧಗಳ ವಿಭಾಗದ (ಸಿಐಡಿ) ಎಡಿಜಿಪಿ ಉಮೇಶ್ ಕುಮಾರ್ ಅವರನ್ನು ಡಾ. ಸಲೀಂ ಅವರಿದ್ದಂತಹ ಎಡಿಜಿಪಿಯಾಗಿ (ಆಡಳಿತ) ನೇಮಕ ಮಾಡಲಾಗಿದೆ.
ಬೆಂಗಳುರು ನಗರದ ಜಂಟಿ ಪೊಲೀಸ್ ಆಯುಕ್ತರಾಗಿದ್ದಂತಹ ರಮನ್ ಗುಪ್ತಾ (ಅಪರಾಧಗಳು), ಅವರನ್ನು ನಗರದ ಜಂಟಿ ಪೋಲಿಸ್ ಆಯುಕ್ತರನ್ನಾಗಿ (ಇಂಟೆಲಿಜೆನ್ಸ್) ಆಗಿ ವರ್ಗಾವಣೆ ಮಾಡಲಾಗಿದೆ.
ಅವರ ಸ್ಥಾನದಲ್ಲಿ ಉಪ ಪೊಲೀಸ್ ಆಯುಕ್ತ (ಅಪರಾಧ-೧) ಎಸ್.ಡಿ. ಶರಣಪ್ಪ ಅವರನ್ನು ಜಂಟಿ ಪೊಲೀಸ್ಆ ಯುಕ್ತರನ್ನಾಗಿ (ಅಪರಾಧಗಳು) ನೇಮಕ ಮಾಡಲಾಗಿದೆ.
ಪೊಲೀಸ್ ವರಿಷ್ಠಾಧಿಕಾರಿ (ಸಿಐಡಿ) ಎಂ.ಎನ್. ಅನುಚೇತ್ ಅವರನ್ನು ಹೊಸದಾಗಿ ಸೃಷ್ಟಿಸಲಾಗಿರುವ ಜಂಟಿ ಪೊಲೀಸ್ ಆಯುಕ್ತ (ಸಂಚಾರ) ಆಗಿ ನೇಮಕ ಮಾಡಲಾಗಿದೆ.
ಬೆಂಗಳೂರಿನ ಹೊರಗೆ, ದೇವಜ್ಯೋತಿ ರೇ, ಐಜಿಪಿ, ಪೂರ್ವ ಪ್ರದೇಶ, ಮಂಗಳೂರು ಇವರನ್ನು ಐಜಿಪಿ (ಕುಂದುಕೊರತೆಗಳು ಹಾಗೂ ಮಾನವ ಹಕ್ಕುಗಳು) ಆಗಿ ನೇಮಿಸಲಾಗಿದೆ.
ಡಿಐಜಿಪಿ ಆಂತರಿಕ ಭದ್ರತೆ ಬಿ.ಎಸ್. ಲೋಕೇಶ್ ಕುಮಾರ್ ಅವರನ್ನು ಬಳ್ಳಾರಿ ವಿಭಾಗದ ಡಿಐಜಿಪಿ ಆಗಿ ನೇಮಿಸಲಾಗಿದೆ. ಈ ಹುದ್ದೆ ಕರ್ನಾಟಕ ರಾಜ್ಯ ಮೀಸಲು ಪೊಲೀಸ್ ಪಡೆ (ಕೆಎಸ್‌ಆರ್‌ಪಿ) ವಿಭಾಗದ ಡಿಐಜಿಪಿ ಸ್ಥಾನಮಾನ ಹಾಗೂ ಜವಾಬ್ದಾರಿಗಳಿಗೆ ಸಮ ಎಂದು ಗುರುತಿಸಲಾಗಿದೆ.
ಮೈಸೂರು ನಗರಕ್ಕೆ ಹೊಸ ಪೋಲಿಸ್ ಆಯುಕ್ತ
ಮೈಸೂರು ನಗರದ ಪೊಲೀಸ್ ಆಯುಕ್ತರಾದ ಡಾ. ಚಂದ್ರಗುಪ್ತ ಅವರನ್ನು ವರ್ಗಾವಣೆ ಮಾಡಿ ಮಂಗಳೂರಿನ ಪೂರ್ವ ವಿಭಾಗದ ಡಿಐಜಿಪಿ ಆಗಿ ನೇಮಕ ಮಾಡಲಾಗಿದೆ. ಅವರ ಸ್ಥಾನದಲ್ಲಿ ಬಿ. ರಮೇಶ್, ಪೊಲೀಸ್ವ ರಿಷ್ಠಾಧಿಕಾರಿ (ಸಿಐಡಿ-೨) ಅವರನ್ನು ನೇಮಕ ಮಾಡಲಾಗಿದೆ. ಪೊಲೀಸ್ ವರಿಷ್ಠಾಧಿಕಾರಿ (ಸಿಐಡಿ-೩) ರವಿ ಡಿ. ಚಣ್ಣನ್ನವರ್ ಅವರನ್ನು ವರ್ಗಾವಣೆ ಮಾಡಿ ಕರ್ನಾಟಕ ರಾಜ್ಯ ವಿದ್ಯುನ್ಮಾನ ಅಭಿವೃದ್ಧಿ ನಿಗಮದ (ಕಿಯೋನಿಕ್ಸ್) ವ್ಯವಸ್ಥಾಪಕ ನಿರ್ದೇಶಕರನ್ನಾಗಿ ನೇಮಕ ಮಾಡಲಾಗಿದೆ.
ಸುದ್ದಿ ಮೂಲ: ಡೆಕ್ಕನ್ ಹೆರಾಲ್ಡ್