‘ಲಿಂಗಾಯಿತರ ಪರ’ ಎಂದು ಪ್ರತಿಪಾದಿಸುವ ‘ಬಿಜೆಪಿಗೆ ಸಂಕಷ್ಟ’ ಕಾಲ?!

Promotion

ಬೆಂಗಳೂರು, ಏಪ್ರಿ ಲ್ 20 , 2023 (www.justkannada.in): ಬಿಜೆಪಿ ಎಂದರೆ, ಲಿಂಗಾಯತ ಸಮುದಾಯ ಬೆಂಬಲಿತ ಪಕ್ಷ, ಬಿಜೆಪಿ ಎಂದರೆ ಯಡಿಯೂರಪ್ಪ, ಎಂಬ ಮಾತು ಇದುವರೆಗೂ ಪ್ರಚಲಿತದಲ್ಲಿತ್ತು. ಆದರೆ ಪ್ರಬಲ ಲಿಂಗಾಯತ ನಾಯಕರಾದ ಜಗದೀಶ್ ಶೆಟ್ಟರ್ ಹಾಗೂ ಲಕ್ಷ್ಮಣ ಸವದಿ ಇನ್ನಿತರೆ ಲಿಂಗಾಯತ ಸಮುದಾಯದ ನಾಯಕರು ಕೇಸರಿ ಪಾಳೆಯದಿಂದ ಕಾಂಗ್ರೆಸ್ ಜೆಡಿಎಸ್ ಪಕ್ಷಗಳಿಗೆ ವಲಸ ಹೋದ ನಂತರ, ಮೋದಿ ಮೇನಿಯಾದಲ್ಲೆ ತೊಳಲಾಡುತ್ತಿರುವ ಪಕ್ಷಕ್ಕೆ ಈಗ ಅರಿವಾಗುತ್ತಿದೆ ಅನಿಸುತ್ತಿರಬೇಕು! ನಾವು ಇನ್ನೂ ಲಿಂಗಾಯತರ ಪರವೇ ಇದ್ದೇವೆ ಎಂದು ಆ ಸಮುದಾಯಕ್ಕೆ ನಂಬುಗೆ ಬರುವಂತೆ ಮಾಡದಿದ್ದರೆ, ಮುಂದಿನ ತಿಂಗಳು ನಡೆಯುವ ಚುನಾವಣೆಯಲ್ಲಿ ಗೆಲುವು ಕಷ್ಟವಾಗಬಹುದು.

ಪ್ರಮುಖ ಲಿಂಗಾಯತ ನಾಯಕರನ್ನು ಅವಮಾನಿಸಿ ಪಕ್ಷದಿಂದ ಹೊರ ಹೋಗುವಂತೆ ಮಾಡಿ, ಲಿಂಗಾಯತ ಸಮುದಾಯ ಎಂದೆಂದಿಗೂ ಬಿಜೆಪಿಯ ಜೊತೆಗೆ, ಲಿಂಗಾಯತ ಸಮುದಾಯದ ಬಸವರಾಜ ಬೊಮ್ಮಾಯಿಯವರನ್ನೇ ಮುಂದಿನ ಐದು ವರ್ಷಕ್ಕೆ ಮುಖ್ಯಮಂತ್ರಿ ಮಾಡುವುದಾಗಿ ಪಕ್ಷದ ಅಧ್ಯಕ್ಷ ಜೆ ಪಿ ನಡ್ಡಾ ಘೋಷಿಸಿದ್ದಾರೆ.

ಲಿಂಗಾಯತ ಸಮುದಾಯದ ಪರಮೋಚ್ಚ ನಾಯಕ, ಯಡಿಯೂರಪ್ಪ ನವರನ್ನು ಅಧಿಕಾರದಿಂದ ಕೆಳಗಿಳಿಸಿ, ಅವರ ಸ್ಥಾನಕ್ಕೆ ಬಸವರಾಜ ಬೊಮ್ಮಾಯಿ ಅವರನ್ನು ಕುಳ್ಳಿರಿಸಿದಾಗ, ಕಮಲ ಪಾಳೆಯ, ಬೊಮ್ಮಾಯಿ ನೇತ್ರತ್ವದಲ್ಲೇ  2023ರ ಚುನಾವಣೆಯನ್ನು ಎದುರಿಸುವುದಾಗಿ ಶಂಕ ಊದಿ, ದಿಢೀರನೆ ಯಡಿಯೂರಪ್ಪ ನವರಿಗೆ ಶರಣಾಯಿತು ಎಂದು ಜನರಿಗೆ ಗೊತ್ತಿದೆ. ಹಾಗಿದ್ದರೆ ಬೊಮ್ಮಾಯಿಯವರಿಗೆ ತಮ್ಮ ಸಮುದಾಯದ ಲಿಂಗಾಯತ ಮತ ಸೆಳೆಯುವ ಶಕ್ತಿ ಇಲ್ಲಎಂನ ಶಂಕೆಯೇ?

ಬಸವರಾಜ ಬೊಮ್ಮಾಯಿಯವರ ಸಾರಥ್ಯದಲ್ಲಿ ಚುನಾವಣೆ ಎದುರಿಸುವುದಾಗಿ, ಘೋಷಿಸಿ ಎಂಬತ್ತರ ವಯೋವೃಧ್ದ, ಈಗಾಗಲೇ ಮೂಲೆ ಗುಂಪು ಮಾಡಲು ಎಲ್ಲಾ ತಯಾರಿ ನಡೆಸಿದ್ದ ಬಿಜೆಪಿ, ಮತ್ತೆ ಯಡಿಯೂರಪ್ಪ ನವರಿಗೇ ಜೈ ಎನ್ನುವ ದೈನೇಸಿ ಸ್ಥಿತಿ ತನಗೆ ತಾನೆ ತಂದುಕೊಂಡಿತು ಎಂದು ಜನ ಮಾತನಾಡುತ್ತಿದ್ದಾರೆ!

ಹಲವಾರು ಬದಲಾವಣೆಗಳನ್ನು ಈ ಚುನಾವಣೆಯಲ್ಲಿ ತಂದು, ಪಕ್ಷವನ್ನು ಯಾರೂ ಎದುರು ಹಾಕಿಕೊಳ್ಳುವ ಸಾಹಸ ಮಾಡಲಾರರು ಲಿಂಗಾಯಿತ, ದಲಿತ, ಹಿಂದುಳಿದ ಮತಗಳನ್ನೆ ಪಕ್ಷ ನಂಬಿಲ್ಲಾ. ಬೇರೆ ಬೇರೆ ಸಮಯದಾಗಳ ಬೆಂಬಲವಿದೆ ಎಂದು ಪ್ರದರ್ಶಿಸಲು ಹೋಗಿ, ಹಲವಾರು, ಲಿಂಗಾಯತ ನಾಯಕರನ್ನು ಹಣಿಯಲಾಯಿತು . ಹಿಂದುಳಿದ ವರ್ಗದ, ಅದರಲ್ಲೂ ಕುರುಬ ಸಮಾಜದ ನಾಯಕ ಕೆ ಎಸ್ ಈಶ್ವರಪ್ಪ ನವರಿಗೆ ಬೆದರಿಸಿ ಮೂಲೆಗೆ ಸರಿಸಲಾಸಯಿತು. ದಲಿತ ನಾಯಕ ಗೋವಿಂದ ಕಾರಜೋಳ ರಿಗೆ ಟಿಕೇಟ್ ಇಲ್ಲಾ ಎಂದು ಹರಿಬಿಟ್ಟು, ತಣ್ಣಗಾಗುವಂತೆ ಮಾಡಲಾಯಿತು. ಪರಿಶಿಷ್ಟ ಪಂಗಡದ ಬಿ ಶ್ರೀರಾಮುಲು ಉಪ ಮುಖ್ಯಮಂತ್ರಿ ಮಾಡಿ ಎಂದು ಅಂಗಲಾಚಿದರೂ, ಪಕ್ಷ ಕ್ಯಾರೆ ಎನ್ನಲಿಲ್ಲಾ.

ಒಕ್ಕಲಿಗೆ ಸಮುದಾಯದ ಆರ್ ಆಶೋಕ್, ಡಾ ಅಶ್ವಥ್ ನಾರಾಯಣ, ಎಸ್ ಟಿ ಸೋಮಶೇಖರ್ ಇವರನ್ನು ಆ ಸಮುದಾಯದ ನಾಯಕರನ್ನಾಗಿ ಬೆಳೆಸುವ ಎಲ್ಲಾ ಪ್ರಯತ್ನಗಳೂ ಸೋತವು.  ಇತ್ತೀಚೆಗೆ ಮೀಸಲಾತಿ ಹೆಚ್ಚಳ ಮಾಡಿ, ಒಕ್ಕಲಿಗ, ಲಿಂಗಾಯತ, ದಲಿತ ಸಮುದಾಯಗಳ ಬೆಂಬಲ ಪಡೆಯುವ ಸರ್ಕಸ್ ಸಹ ಬಿಜೆಪಿಗೆ ಗಿಟ್ಟಿದಂತಿಲ್ಲ. ಇನ್ನು ಬತ್ತಳಿಕೆಯಲ್ಲಿರುವ ಲಿಂಗಾಯತ ಅಸ್ತ್ರ ವೂ ಖಾಲಿ ಆದರೆ, ಗತಿ ಏನು ಎಂಬ ಭಯ, ಶೆಟ್ಟರ್, ಸವದಿ ನಿರ್ಗಮನ ದಿಂದ ಬಿಜೆಪಿಯನ್ನು ಕಾಡುತ್ತಿರಬಹುದು.

ಈಶ್ವರಪ್ಪ ನವರಿಗೆ ಟಿಕೇಟ್ ತಪ್ಪಿಸಿ, ಅವರ ಮಗನಿಗಾದರೂ ಕೊಡಬಹುದು ಎಂಬ ನಿರೀಕ್ಷೆ ಸಹ ಹುಸಿಯಾಯಿತು. ಚುನಾವಣಾ ಕಣದಿಂದ ದೂರ ಸರಿದ ಯಡಿಯೂರಪ್ಪ ನವರ ಪುತ್ರ ವಿಜಯೇಂದ್ರಗೆ ಟಿಕೇಟ್ ಸಿಗುತ್ತೆ. ಅದೇ ಭಾಗ್ಯ ಈಶ್ವರಪ್ಪ ನವರಿಗೆ ಇಲ್ಲಾ. ಅರವಿಂದ ಲಿಂಬಾವಳಿಯ ಬದಲು, ಅವರ ಪತ್ನಿ ಗೆ ಟಿಕೇಟ್. ಆದರೆ ಈಶ್ವರಪ್ಪ ನವರಿಗೆ ಇಲ್ಲಾ.

ಉತ್ತರ ಕರ್ನಾಟಕ, ಮದ್ಯ ಕರ್ನಾಟಕದ  ಭಾಗದಲ್ಲಿ ಜಗದೀಶ್ ಶೆಟ್ಟರ್, ಸವದಿ ಮತ್ತು ಶಾಮನೂರು ಶಿವಶಂಕರಪ್ಪ, ಕಾಂಗ್ರೆಸ್ ಗೆ ಲಿಂಗಾಯತ ಮತಗಳನ್ನು ಸೆಳೆಯಬಲ್ಲರು ಎಂಬ ಶಂಕೆ ಬಿಜೆಪಿಯನ್ನು ಕಾಡುತ್ತಿರುವಂತಿದೆ. ಹಾಗಾಗಿ ಲಿಂಗಾಯತ ಸಮುದಾಯ ತನ್ನ ತೆಕ್ಕೆಯಿಂದ ಜಾರದಿರಲಿ ಎಂದು ಹಲವಾರು ಭರವಸೆ ತಂತ್ರ ರೂಪಿಸುತ್ತಿದೆ ಬಿಜೆಪಿ.  ಎಲ್ಲಾ ಪ್ರಯೋಗ, ಪ್ರಯತ್ನಗಳು ಫಲ ನೀಡಲಿವೆಯೇ? ಈ ಪ್ರಶ್ನೆಗೆ ಉತ್ತರ ಸಿಗಲು  ಮೇ 13 ರ ವರೆಗೆ ಕಾಯಬೇಕು.

M.SIDDARAJU, SENIOR JOURNALIST
  • ಎಂ.ಸಿದ್ದರಾಜು, ಹಿರಿಯ ಪತ್ರಕರ್ತರು, ಬೆಂಗಳೂರು