ಕೋವಿಡ್ ನೆಪದಲ್ಲಿ ಬಿಜೆಪಿಯಿಂದ ಸಾವಿರಾರು ಕೋಟಿ ಲೂಟಿ: ಕೊರೋನಾ ಮೈಸೂರು ಪರಿಸ್ಥಿತಿ  ಬಗ್ಗೆ ಆತಂಕ ವ್ಯಕ್ತಪಡಿಸಿದ ಕೈ’ ಶಾಸಕ ರಿಜ್ವಾನ್ ಆರ್ಷದ್

ಮೈಸೂರು,ಆಗಸ್ಟ್,31,2020(www.justkannada.in):  ಕೊರೋನಾ ಪರಿಸ್ಥಿತಿ ನಿಭಾಯಿಸುವಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳೆರೆಡೂ ವಿಫಲವಾಗಿವೆ. ಕೋವಿಡ್ ನೆಪದಲ್ಲಿ ಬಿಜೆಪಿಯವರು ಸಾವಿರಾರು ಕೋಟಿ ಲೂಟಿ ಮಾಡಿದ್ದಾರೆ ಎಂದು ಶಿವಾಜಿನಗರ ಕಾಂಗ್ರೆಸ್ ಶಾಸಕ ರಿಜ್ವಾನ್ ಆರ್ಷದ್ ಗಂಭೀರ ಆರೋಪ ಮಾಡಿದರು.jk-logo-justkannada-logo

ಮೈಸೂರಿನ ಪತ್ರಕರ್ತರ ಭವನದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಶಾಸಕ ರಿಜ್ವಾನ್ ಅರ್ಷಾದ್, ಪ್ರಧಾನಿಯವರು 21 ದಿನದಲ್ಲಿ ಕೊರೋನಾ ನಿಯಂತ್ರಣ ಮಾಡುತ್ತೇವೆಂದು ಹೇಳಿದ್ದರು. ಪ್ರಧಾನಿಯವರು ಕೊರೋನಾ ಓಡಿಸಲು ಚಪ್ಪಾಳೆ ಹೊಡಿಸಿ, ದೀಪ ಹಚ್ಚಿಸಿ, ಕೊನೆಗೆ ಪಲ್ಟಿಯನ್ನೂ ಸಹ ಹೊಡೆಸಿದ್ದರು. ಆದರೂ ನಮ್ಮ ದೇಶದಲ್ಲಿ ಕೊರೊನಾ ನಿಯಂತ್ರಿಸುವಲ್ಲಿ ಪ್ರಧಾನಿಯವರು ವಿಫಲರಾಗಿದ್ದಾರೆ. ನಮ್ಮ ದೇಶ ಜಾಗತಿಕ ಕೊರೊನಾ ಸೋಂಕಿತರ ಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿದೆ ಪರಿಸ್ಥಿತಿ ಹೀಗೆ ಮುಂದುವರೆದರೆ ಎರಡನೇ ಸ್ಥಾನಕ್ಕೆ ಜಿಗಿಯುವುದು ಖಚಿತ. ಇಷ್ಟಿದ್ದರೂ ಪ್ರಧಾನಿಯವರು ಮಾತನ್ನೇ ಆಡುತ್ತಿಲ್ಲ. ಇನ್ನು ನಮ್ಮ ಆರೋಗ್ಯ ಸಚಿವರಂತೂ ಕೊರೊನಾದಿಂದ ನಮ್ಮನ್ನು ದೇವರೇ ಕಾಪಾಡಬೇಕು ಎಂಬ ಬಾಲಿಶ ಹೇಳಿಕೆ ನೀಡುತ್ತಾರೆ . ದೇಶದಲ್ಲಿ ಆರ್ಥಿಕತೆ ಅಧೋಗತಿಗೆ ಇಳಿದಿದೆ. ಮತ್ತೊಂದೆಡೆ ದೇಶದಲ್ಲಿ ಯುವಜನತೆ ಉದ್ಯೋಗ ಕಳೆದುಕೊಳ್ಳುತ್ತಿದ್ದಾರೆ ಎಂದು ಕಿಡಿಕಾರಿದರು.

ಇನ್ನೂ ರಾಜ್ಯದಲ್ಲೂ ಸಹ ಕೊರೊನಾ ಪರಿಸ್ಥಿತಿ ಶೋಚನೀಯವಾಗಿದೆ. ರಾಜ್ಯದಲ್ಲಿ ಕೊರೋನಾಗೆ ಚಿಕಿತ್ಸೆ ಸಿಗದೇ ಜನ ಸಾಯುತ್ತಿದ್ದಾರೆ. ಆಕ್ಸಿಜನ್, ವೆಂಟಿಲೇಟರ್ ಇಲ್ಲದೇ ಜನ ಸಾಯುತ್ತಿದ್ದರೂ ಸರ್ಕಾರ ಗಂಭೀರವಾಗಿ ಪರಿಗಣಿಸಿಲ್ಲ. ಮೈಸೂರಿನಲ್ಲಿ ಕೊರೋನಾದಿಂದ ಸಾವನ್ನಪ್ಪುವವರ ಸಂಖ್ಯೆ ದಿನೇ ದಿನೇ ಹೆಚ್ಚಾಗುತ್ತಿದೆ. ಮೈಸೂರಿನಲ್ಲಿ ಬಿಜೆಪಿ ಪಕ್ಷದ ಇಬ್ಬರು ಶಾಸಕರಿದ್ದಾರೆ. ಸಂಸದರೂ ಸಹ ಅವರದ್ದೇ ಪಕ್ಷದವರಿದ್ದಾರೆ. ಇನ್ನು ರಾಜ್ಯದಲ್ಲಿ ಹಾಗೂ ಕೇಂದ್ರದಲ್ಲೂ ಸಹ ಅವರದ್ದೇ ಪಕ್ಷ ಅಧಿಕಾರದಲ್ಲಿದೆ. ಇನ್ನು ಏನು ಬೇಕು ಬಿಜೆಪಿಯವರಿಗೆ ಎಂದು ಬಿಜೆಪಿ ಸರ್ಕಾರವನ್ನು ರಿಜ್ವಾನ್ ಅರ್ಷಾದ್ ಪ್ರಶ್ನಿಸಿದರು.

ಕೋವಿಡ್ ನೆಪದಲ್ಲಿ ಬಿಜೆಪಿಯವರಿಂದ ಸಾವಿರಾರು ಕೋಟಿ ಲೂಟಿ..

ಕೋವಿಡ್ ನೆಪದಲ್ಲಿ ಬಿಜೆಪಿಯವರು ಸಾವಿರಾರು ಕೋಟಿ ಲೂಟಿ ಮಾಡಿದ್ದಾರೆ. ಬಿಜೆಪಿಯ ಈ ಸರ್ಕಾರದಲ್ಲಿ ಹೇಳೋರು ಕೇಳೋರು ಯಾರು ಇಲ್ಲ. ಖಾಸಗಿ ಅಸ್ಪತ್ರೆಯವರು ಸುಲಿಗೆಯಲ್ಲಿ ನಿರತವಾಗಿದ್ದಾರೆ. ಅವರ ಜೊತೆ ಸರ್ಕಾರ ಮಾತುಕತೆ ನಡೆಸಿ ಚಿಕಿತ್ಸೆ ವಿಚಾರದಲ್ಲಿ ಕಡಿವಾಣ ಹಾಕಬಹುದಿತ್ತು. ಪರಿಸ್ಥಿತಿಯನ್ನು ನಿಭಾಯಿಸುವಲ್ಲಿ ಎಡವಿದ್ದಾರೆ ಎಂದು ರಿಜ್ವಾನ್ ಆರ್ಷಾದ್ ವಾಗ್ದಾಳಿ ನಡೆಸಿದರು.

ಮೈಸೂರು ನಗರವನ್ನು ಹಿಂದೆದೂ ಈ ಪರಿಸ್ಥಿತಿಯಲ್ಲಿ ನಾವು ನೋಡಿಲ್ಲ..

ಮೈಸೂರಿನ ಪರಿಸ್ಥಿತಿಯನ್ನು ಹೇಳೋ ಹಾಗಿಲ್ಲ, ಕೋವಿಡ್ ಮಿತಿ ಮಿರುತ್ತಿದೆ. ಮೈಸೂರು ನಗರವನ್ನು ಹಿಂದೆದೂ ಈ ಪರಿಸ್ಥಿತಿಯಲ್ಲಿ ನಾವು ನೋಡಿಲ್ಲ. ಇಂತಹ ಸಂದರ್ಭದಲ್ಲೂ ಕೂಡ ವರ್ಗಾವಣೆ ದಂಧೆ ನಡೆಸುತ್ತಿದ್ದಾರೆ. ಮೈಸೂರು ಜಿಲ್ಲಾಧಿಕಾರಿಗಳ ವರ್ಗಾವಣೆ ಇದಕ್ಕೆ ನಿದರ್ಶನ. ಮೋದಿ ಕೊಡುವ ಯೋಜನೆ ಜನರಿಗೆ ತಲುಪಲ್ಲ. ಆದರೆ ಸಿಎಂ ಯಡಿಯೂರಪ್ಪ ತಂದ ಸ್ಕೀಮ್ ನಲ್ಲಿ ಎಷ್ಟು ಜನರಿಗೆ 5 ಸಾವಿರ ಹಣ ಬಂದಿದೆ. ಎಷ್ಟು ಜನ ಆಟೋ ಚಾಲಕರಿಗೆ ಆ ಯೋಜನೆಯ ಲಾಭ ಆಗಿದೆ ಎಂದು ಶಾಸಕ ರಿಜ್ವಾನ್ ಅರ್ಷದ್   ಸರ್ಕಾರಕ್ಕೆ ಪ್ರಶ್ನಿಸಿದರು.

ಬಡವರಿಗಾಗಿ ಉತ್ತಮ ಕಾರ್ಯಕ್ರಮ ಹಾಕಿಕೊಂಡು ಅವರ ಬದುಕಿಗೆ ಸಹಾಯ ಮಾಡಬೇಕು. ಅವರ ಆರೋಗ್ಯ ಕಾಪಾಡುವುದು ಸರ್ಕಾರದ ಕೆಲಸ ಈ ಕಡೆ ಗಮನ ಹರಿಸಬೇಕು. ಭ್ರಷ್ಟಾಚಾರದ ಬಗ್ಗೆ ಕೇಳಿದ್ರೆ ಬಿಜೆಪಿಯವರು ಮಾತೆ ಆಡುವುದಿಲ್ಲ. ಬೆಡ್, ದಿಂಬು , ಗ್ಲೌಸ್ , ಎಲ್ಲಾದರಲ್ಲೂ ಹಗರಣ ಮಾಡಿದ್ದಾರೆ. ಭ್ರಷ್ಟಾಚಾರ ಬಿಜೆಪಿಯ ಡಿಎನ್ಎ ಅಲ್ಲಿಯೇ ಇದೆ. ಕೋವಿಡ್ ಅನ್ನು ಬಿಜೆಪಿ ಒಂದು ರೀತಿಯಲ್ಲಿ ಹಬ್ಬದಂತೆ ಮಾಡಿ ಹಣ ಮಾಡಿದ್ದಾರೆ. ಇದು ದಪ್ಪ ಚರ್ಮದ ಸರ್ಕಾರ , ತಾಲ್ಲೂಕು ಮಟ್ಟದ ನಾಯಕರು ಕೂಡ ಅಧಿಕಾರಿಗಳ ಮೇಲೆ ದರ್ಪ ನಡೆಸುತ್ತಿದ್ದಾರೆ. ಮೈಸೂರು ನಗರದ ಬಗ್ಗೆ ಮುಖ್ಯಮಂತ್ರಿಗಳು ಹಾಗೂ ಸಚಿವರು ಸ್ವಲ್ಪ ಕಾಳಜಿ ಇಟ್ಟುಕೊಳ್ಳಿ ಎಂದು ರಿಜ್ವಾನ್ ಆರ್ಷಾದ್ ನುಡಿದರು.

ಪೋಸ್ಟ್ ಕೋವಿಡ್ ಕೇರ್ ಯೋಜನೆ ಅನುಷ್ಟಾನಕ್ಕೆ ತರಬೇಕು…

ರಾಜ್ಯಾದ್ಯಂತ ಕೊರೊನಾ‌ ವೈರಸ್ ಸೋಂಕು ಬಡವರಿಗೆ ಹೆಚ್ಚಿನ ಪ್ರಮಾಣದಲ್ಲಿ ಹರಡಿದೆ. ಹಾಗಾಗಿ ರಾಜ್ಯ ಸರ್ಕಾರ ಪೋಸ್ಟ್ ಕೋವಿಡ್ ಕೇರ್ ಯೋಜನೆ ಅನುಷ್ಟಾನಕ್ಕೆ ತರಬೇಕು ಎಂದು ರಿಜ್ವಾನ್ ಆರ್ಷಾದ್ ಆಗ್ರಹಿಸಿದರು.state-central-government-failed-stop-corona-congress-mla-rizwan-arshad

ಕೊರೊನಾ ಸೋಂಕು ತಗುಲಿದವರು ಗುಣಮುಖರಾದ ನಂತರವೂ ಎರಡು ಮೂರು ತಿಂಗಳ ಕಾಲ ಅಶಕ್ತರಾಗಿರುತ್ತಾರೆ. ಅವರಿಗೆ ಯಾವುದೇ ಕೆಲಸ ಕಾರ್ಯಗಳನ್ನು ಮಾಡಲು ಆಗುವುದಿಲ್ಲ. ಕೊರೊನಾ ಸೋಂಕು ಬಡವರಿಗೆ ಅತಿ ಹೆಚ್ಚು ತಗುಲಿದೆ. ಕೊರೋನಾ ಸೋಂಕಿನಿಂದ ಗುಣಮುಖರಾದ ಬಡವರು ತೀವ್ರ ತೊಂದರೆಗೆ ಸಿಲುಕಿದ್ದಾರೆ. ಹಾಗಾಗಿ ರಾಜ್ಯ ಸರ್ಕಾರ ಪೋಸ್ಟ್ ಕೋವಿಡ್ ಕೇರ್ ಯೋಜನೆ ಅನುಷ್ಟಾನಕ್ಕೆ ತರುವ ಮೂಲಕ ಬಡ ಜನರಿಗೆ ನೆರವು ನೀಡಲಿ. ಈ ಯೋಜನೆಗೆ ಬಿಪಿಎಲ್ ಎಪಿಎಲ್ ಕಾರ್ಡುದಾರರನ್ನು ಒಳಪಡಿಸಲಿ ಒತ್ತಾಯಿಸಿದರು.

ಸರಳ ದಸರಾ ಆಚರಣೆ ಸೂಕ್ತ…

ಇನ್ನೂ ಮೈಸೂರು ದಸರಾ ಆಚರಣೆ ಕುರಿತು ಪ್ರತಿಕ್ರಿಯಿಸಿದ  ರಿಜ್ವಾನ್ ಆರ್ಷಾದ್ , ದಸರಾ ನಮ್ಮ ಸಂಪ್ರದಾಯ ಹಾಗೂ ಭಾವನೆ. ಕೋವಿಡ್ ಹಿನ್ನೆಲೆಯಲ್ಲಿ ದಸರಾವನ್ನು ಸರಳವಾಗಿ ಆಚರಿಸುವುದು ಆದಷ್ಟೂ ಸೂಕ್ತ. ಕೋವಿಡ್ ನಂತಹ ಪರಿಸ್ಥಿತಿಯಲ್ಲಿ ಸರ್ಕಾರ ಆದಷ್ಟು ಸರಳ ಹಾಗೂ ಇತಿಮಿತಿಯಲಿ ಆಚರಿಸುವುದು ಒಳಿತು. ಇದು ನನ್ನ ವೈಯಕ್ತಿಕ ಅಭಿಪ್ರಾಯ ಎಂದರು.

ಪೊಲೀಸರು ಸೀರಿಯಸ್‌ ಆದ್ರೆ ಡ್ರಗ್ಸ್ ಮಾಫಿಯಾ ಕಡಿವಾಣ ಹಾಕಬಹುದು..

ರಾಜಧಾನಿ ಬೆಂಗಳೂರಿನಲ್ಲಿ ಡ್ರಗ್ಸ್ ಮಾಫಿಯಾ ವಿಚಾರ ಕುರಿತು ಪ್ರತಿಕ್ರಿಯಿಸಿದ ರಿಜ್ವಾನ್ ಆರ್ಷಾದ್, ಪೊಲೀಸರು ಸೀರಿಯಸ್‌ ಆದ್ರೆ ಡ್ರಗ್ಸ್ ಮಾಫಿಯಾ ಕಡಿವಾಣ ಹಾಕಬಹುದು. ಪೊಲೀಸರು ಪ್ರಮಾಣ ಮಾಡಿ ಹೊರಟರೆ ನೂರಕ್ಕೆ ನೂರರಷ್ಟು ಕಡಿವಾಣ ಹಾಕಬಹುದು ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

ಡ್ರಗ್ಸ್ ಮಾಫಿಯಾ ಒಂದು ದೊಡ್ಡ ಇಂಡಸ್ಟ್ರಿ ರೀತಿ ಬೃಹದಾಕಾರವಾಗಿ ಬೆಳೆದಿದೆ. ಈ ಸಂಬಂಧ ನಾನು ಬೆಂಗಳೂರು ಪೊಲೀಸ್ ಆಯುಕ್ತರನ್ನ ಭೇಟಿ ಮಾಡಿದ್ದೆ. ಡ್ರಗ್ಸ್ ಮಾಫಿಯಾಗೆ ಕಡಿವಾಣ ಹಾಕಿ ಅಂತ ವೈಯುಕ್ತಿಕವಾಗಿ ಮನವಿ ಮಾಡಿದ್ದೇನೆ ಎಂದರು.

ಸಿನಿಮಾ ಇಂಡಸ್ಟ್ರಿಗೂ ಡ್ರಗ್ಸ್ ಮಾಫಿಯಾ ನಂಟು ವಿಚಾರ ಕುರಿತು ಪ್ರತಿಕ್ರಿಯಿಸಿದ ರಿಜ್ವಾನ್ ಆರ್ಷಾದ್, ನನಗೆ ಸಿನಿಮಾ ರಂಗದ ನಂಟು‌ ಕಡಿಮೆ. ಆದರೆ ಸಿನಿಮಾ‌ ರಂಗ ಇರಲಿ, ವಿದ್ಯಾರ್ಥಿಗಳಾಗಿರಲಿ ಇದು ಮನುಷ್ಯತ್ವಕ್ಕೆ ಧಕ್ಕೆ ತರುವ ಕೆಲಸ. ಶಾಲಾ ಕಾಲೇಜು ಹಂತದಲ್ಲೇ ವಿದ್ಯಾರ್ಥಿಗಳನ್ನ ಡ್ರಗ್ಸ್‌ಗೆ ಅಡಿಟ್ ಮಾಡಿಸುವ ದೊಡ್ಡ ಮಾಫಿಯಾ ಇದೆ ಎಂದು ರಿಜ್ವಾನ್ ಆರ್ಷಾದ್ ಬೇಸರ ವ್ಯಕ್ತಪಡಿಸಿದರು.

ಕೆ.ಜೆ ಹಳ್ಳಿ ಗಲಭೆಕೋರರು ಗಾಂಜಾ ಸೇವನೆ ಆರೋಪ ಸಂಬಂಧ ಮಾತನಾಡಿದ ಶಾಸಲ ರಿಜ್ವಾನ್, ನಿಶ್ಚಿತವಾಗಿ ಕೆಲ ಯುವಕರು ಗಾಂಜಾ ಅಫೀಮಿಗೆ ಬಲಿಯಾಗಿದ್ದಾರೆ. ಡಿಜೆ ಹಳ್ಳಿ ವಿಚಾರದಲ್ಲಿ ಗಾಂಜಾ ಸೇವಿಸಿರಲಿ, ಬಿಡಲಿ ಆರೋಪಿಗಳಿಗೆ ಶಿಕ್ಷೆ ಯಾಗಬೇಕು ಎಂದು ಆಗ್ರಹಿಸಿದರು.

ಕಾಂಗ್ರೆಸ್ ಸತ್ಯಶೋಧನಾ ಸಮಿತಿಯಿಂದ ವರದಿ ಸಲ್ಲಿಕೆಗೆ ವಿಳಂಭ ಹಿನ್ನೆಲೆ, ವರದಿ ಸಲ್ಲಿಸಲು ಯಾವುದೇ ವಿಳಂಬ ಮಾಡಿಲ್ಲ. ನಾವು ಒಂದು ತಿಂಗಳೊಳಗೆ ವರದಿ ಪಡೆಯುತ್ತೇವೆ ಎಂದು ಹೇಳಿದ್ದೆವು. ಶೀಘ್ರದಲ್ಲೇ ಕೆಪಿಸಿಸಿಗೆ ಸತ್ಯಶೋಧನಾ ಸಮಿತಿ ವರದಿ ಸಲ್ಲಿಸಲಿದೆ ಎಂದು ತಿಳಿಸಿದರು.

Key words: State-central -government -failed -stop –corona- congress-MLA-Rizwan Arshad.