ಜುಲೈ 23ಕ್ಕೆ ‘ಸಿದ್ಧರಾಮಯ್ಯ ಆಡಳಿತ ನೀತಿ-ನಿರ್ಧಾರ’ ಕೃತಿ ಬಿಡುಗಡೆ – ಲಕ್ಷ್ಮಣ ಕೊಡಸೆ

Promotion

 

ಮೈಸೂರು,ಜುಲೈ,21,2022(www.justkannada.in): 23 ಜುಲೈ 2022 ಶನಿವಾರದಂದು ನಗರದ ಕಲಾಮಂದಿರದಲ್ಲಿ ‘ಸಿದ್ಧರಾಮಯ್ಯ ಆಡಳಿತ ನೀತಿ-ನಿರ್ಧಾರ’ ಕೃತಿ ಬಿಡುಗಡೆಯಾಗಲಿದೆ ಎಂದು ಜನಮನ ಪ್ರತಿಷ್ಠಾನದ ಅಧ್ಯಕ್ಷ ಲಕ್ಷ್ಮಣ ಕೊಡಸೆ ಪತ್ರಿಕಾ ಘೋಷ್ಠಿಯಲ್ಲಿ ತಿಳಿಸಿದರು.

ನಗರದ ಜಿಲ್ಲಾ ಪತ್ರಕರ್ತರ ಸಂಘದಲ್ಲಿ ನಡೆದ ಪತ್ರಿಕಾಘೋಷ್ಠಿಯಲ್ಲಿ ಮಾತನಾಡಿದ ಅವರು, ಇದು ಜನಮನ ಪ್ರತಿಷ್ಠಾನದ ಎರಡನೇ ಕೃತಿಯಾಗಿದ್ದು, ‘ಸಿದ್ಧರಾಮಯ್ಯ ಆಡಳಿತ ನೀತಿ-ನಿರ್ಧಾರ’ ಎಂಬ ತಾತ್ವಿಕ ವಿವೇಚನೆಯ ಕೃತಿಯನ್ನು ಸಿದ್ಧಪಡಿಸಲಾಗಿದೆ. ಈ ಕೃತಿಗೆ ನಾಡಿನ 27 ಮಂದಿ ಹಿರಿಯ-ಕಿರಿಯ ವಿದ್ವಾಂಸರು ಲೇಖನ ಒದಗಿಸಿದ್ದು, 440 ಪುಟಗಳನ್ನು ಒಳಗೊಂಡಿದೆ. ಕಲಾಮಂದಿರದಲ್ಲಿ ದಿನಾಂಕ 23 ಜುಲೈ 2022 ಶನಿವಾರ ಬೆಳಿಗ್ಗೆ 10-00 ಗಂಟೆಗೆ ಜನಪದ ಕಲೆಗಳ ಪ್ರದರ್ಶನಗಳೊಂದಿಗೆ ಪ್ರಾರಂಭವಾಗುತ್ತದೆ. ಸಮಾರಂಭದಲ್ಲಿ ಶ್ರೀ ಶಿವರಾತ್ರಿ ದೇಶಿಕೇಂದ್ರ ಮಹಾಸ್ವಾಮಿಗಳು, ಶ್ರೀ ಡಾ|| ನಿರ್ಮಲಾನಂದ ಮಹಾಸ್ವಾಮಿಗಳು, ಶ್ರೀ ಶಿವನಂದಪುರಿ ಮಹಾಸ್ವಾಮಿಗಳ ಸಮ್ಮುಖದಲ್ಲಿ ರಾಜ್ಯಸಭೆಯ ವಿರೋಧಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರು ಕೃತಿಯನ್ನು ಲೋಕಾರ್ಪಣೆ ಮಾಡಲಿದ್ದಾರೆ. ಸಮಾರಂಭದ ಅಧ್ಯಕ್ಷತೆಯನ್ನು ವಿಧಾನ ಪರಿಷತ್ತಿನ ಮಾಜಿ ಸಭಾಪತಿ ಡಾ. ಬಿ.ಎಲ್. ಶಂಕರ್‌ ವಹಿಸಲಿದ್ದಾರೆ. ವಿಶ್ರಾಂತ ಕುಲಪತಿ ಸಬೀಹಾ ಭೂಮಿಗೌಡ ಕೃತಿ ಪರಿಚಯ ಮಾಡಲಿದ್ದಾರೆ. ಮಾಜಿ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರು ಉಪಸ್ಥಿತರಿರುತ್ತಾರೆ.

ಮಧ್ಯಾಹ್ನ 3.30ರಿಂದ ‘ಸಮಕಾಲೀನ ಸಂವೇದನೆ’ ಎಂಬ ಸಂವಾದ ಕಾರ್ಯಕ್ರಮವನ್ನು ಇಟ್ಟುಕೊಳ್ಳಲಾಗಿದ್ದು ಇದರಲ್ಲಿ ಗ್ರಂಥದ ಲೇಖಕರ ಜೊತೆಗೆ ಸುಮಾರು 70ಕ್ಕೂ ಹೆಚ್ಚಿನ ಸಂಖ್ಯೆಯ ಸಮಾಜ ಮತ್ತು ಸಂಸ್ಕೃತಿ ಚಿಂತಕರು ಹಾಗೂ ಯುವಜನರು ಭಾಗವಹಿಸಲಿದ್ದಾರೆ. ಈ ಸಂವಾದದಲ್ಲಿ ಸಿದ್ದರಾಮಯ್ಯ ಅವರು ಉಪಸ್ಥಿತರಿದ್ದು ಡಾ. ಬಂಜಗೆರೆ ಜಯಪ್ರಕಾಶ್ ಅವರು ಸಂವಾದವನ್ನು ನಡೆಸಿಕೊಡಲಿದ್ದಾರೆ. ಸಮಾರಂಭಕ್ಕೆ ಅಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಯಶಸ್ವಿಗೊಳಿಸಬೇಕೆಂದು ಮನವಿ ಮಾಡಿದರು. ಪತ್ರಿಕಾಘೋಷ್ಠಿಯಲ್ಲಿ ಸಾಹಿತಿ ಕಾ.ತ. ಚಿಕ್ಕಣ್ಣ ಉಪಸ್ಥಿತರಿದ್ದರು.

Key words: Release – Siddaramaiah-administration-policy-making -work – July 23.