ಉದ್ದೇಶಪೂರ್ವಕವಾಗಿ ಮುಸ್ಲೀಮರ ಮೀಸಲಾತಿ ಕಡಿತ: ಬಿಜೆಪಿಯಿಂದ ದೇಶವನ್ನು ಒಡೆದು ಆಳುವ ಪ್ರಯತ್ನ- ಹೆಚ್.ಡಿಕೆ ವಾಗ್ದಾಳಿ.

ಮೈಸೂರು,ಮಾರ್ಚ್,27,2023(www.justkannada.in): ರಾಜ್ಯ ಬಿಜೆಪಿ ಸರ್ಕಾರ ಮುಸ್ಲಿಮರಿಗೆ ಇದ್ದ ಮೀಸಲಾತಿಯನ್ನ ಉದ್ದೇಶ ಪೂರ್ವಕವಾಗಿ ತೆಗೆದುಹಾಕಿದೆ. ಬಿಜೆಪಿ ಈ ದೇಶವನ್ನು ಒಡೆದು ಆಳುವ ಪ್ರಯತ್ನ ಮಾಡುತ್ತಿದೆ. ಸಮಾಜದಲ್ಲಿ ಬೆಂಕಿ ಹಚ್ಚುವ ಕೆಲಸ ಮಾಡಿದ್ದಾರೆ ಎಂದು ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ ವಾಗ್ದಾಳಿ ನಡೆಸಿದರು.

ನಿನ್ನೆ ಮೈಸೂರಿನಲ್ಲಿ ನಡೆದ ಪಂಚರತ್ನ ರಥಯಾತ್ರೆ ಯಶಸ್ವಿ ಹಿನ್ನಲೆ, ಇಂದು ಸುದ್ದಿಗೋಷ್ಠಿ ನಡೆಸಿದ ಮಾಜಿ ಸಿಎಂ ಎಚ್ಡಿ ಕುಮಾರಸ್ವಾಮಿ ಎಲ್ಲರಿಗೂ ಧನ್ಯವಾದ ಹೇಳಿದರು. ನಿನ್ನೆ ನಡೆದ ಪಂಚರತ್ನ ರಥಯಾತ್ರೆಯ ಯಶಸ್ಸನ್ನ ನಾಡಿನ ಜನತೆಗೆ ಸಂಪೂರ್ಣ ಮಾಹಿತಿಯನ್ನ ಕೊಟ್ಟ ಮಾಧ್ಯಮಗಳಿಗೆ ಧನ್ಯವಾದಗಳು. ನಿನ್ನೆ ಸಮಾವೇಶಕ್ಕೆ ರಾಜ್ಯದ 31 ಜಿಲ್ಲೆಗಳಿಂದಲೂ ಜನ ಬಂದಿದ್ದರು. ಕೆಎಸ್ಆರ್ಟಿಸಿ, ಬಿಎಂಟಿಸಿ ಬಸ್ ,ಖಾಸಗಿ ಬಸ್ ಮಾಲೀಕರು ಸೇರಿದಂತೆ ಎಲ್ಲರೂ  ಕಾರ್ಯಕ್ರಮದ ಯಶಸ್ವಿಗೆ ಕಾರಣಕರ್ತರಾಗಿದ್ದಾರೆ ಹಾಗಾಗಿ ಎಲ್ಲರಿಗೂ ಧನ್ಯವಾದಗಳು ಎಂದು ಹೆಚ್.ಡಿಕೆ ಹೇಳಿದರು.

ಈಗಾಗಲೇ ನಾನು 90 ವಿಧಾನಸಭಾ ಕ್ಷೇತ್ರಗಳಲ್ಲಿ ಪಂಚರತ್ನ ಯಾತ್ರೆ ಯಶಸ್ವಿಗೊಳಿಸಿದ್ದೇವೆ. ನಿನ್ನೆ ಸಮಾವೇಶದ ಬಳಿಕವೂ ಏಪ್ರಿಲ್  10 ರವರೆಗೂ ಪಂಚರತ್ನ ಯಾತ್ರೆ ಮುಂದುವರೆಯುತ್ತದೆ. ಏಪ್ರಿಲ್ 6 ರಂದು ಪಿರಿಯಾಪಟ್ಟಣಕ್ಕೆ ಬರುತ್ತದೆ. ಏಪ್ರಿಲ್ 4, 5 ಹನೂರು ನಿಗದಿಯಾಗಿದೆ ಎಂದು ಮಾಹಿತಿ ನೀಡಿದರು.

ಉತ್ತರ ಕರ್ನಾಟಕದ 10 ಜಿಲ್ಲೆಗಳಲ್ಲಿ ಸುಮಾರು 30% ಕುಟುಂಬಗಳಲ್ಲಿ ಮಕ್ಕಳಲ್ಲಿ  ಪೌಷ್ಟಿಕಾಂಶ ಕೊರತೆಯಿಂದ ಬೆಳವಣಿಗೆ ಕುಂಠಿತವಾಗಿರುವುದರ ಬಗ್ಗೆ ಡೆಕ್ಕನ್ ಹೆರಾಲ್ಡ್ ಪತ್ರಿಕೆ ವರದಿ ಮಾಡಿದೆ. ರಾಜ್ಯ ಮತ್ತು ಕೇಂದ್ರ ಸರ್ಕಾರ ಸಂಪೂರ್ಣ ವಿಫಲವಾಗಿವೆ. ಆ ಭಾಗದ ಜನರ ಆರೋಗ್ಯ ವೃದ್ಧಿಗೆ ನಿಮ್ಮ ಕೊಡುಗೆ ಏನು ಎಂದು ಹೆಚ್.ಡಿಕೆ ಪ್ರಶ್ನಿಸಿದರು.

ನರೇಂದ್ರ ಮೋದಿಯವರ ರೋಡ್ ಶೋ ನನ್ನ ಹಳ್ಳಿಗಳಲ್ಲಿ ಸಿಕ್ಕ ಸ್ವಾಗತಕ್ಕೆ ಸಮ.

ನರೇಂದ್ರ ಮೋದಿಯವರ ರೋಡ್ ಶೋ ನನ್ನ ಹಳ್ಳಿಗಳಲ್ಲಿ ಸಿಕ್ಕ ಸ್ವಾಗತಕ್ಕೆ ಸಮ. ನಿನ್ನೆ ನಮ್ಮ ನಿರೀಕ್ಷೆಗೂ ಮೀರಿ ಜನ ಸಮಾವೇಶಕ್ಕೆ ಆಗಮಿಸಿದ್ದರು. ನಮ್ಮ ತಂದೆ ಜನರನ್ನ ನೋಡಿ ಭಾವೋದ್ವೇಗವಾಗಿ ಕಣ್ಣೀರೀಟ್ಟರು. ನಾನೂ ಕೂಡ ಭಾವುಕನಾಗಿದ್ದೆ ಆದರೂ ನಾನು ತಡೆದುಕೊಂಡೆ. ಜನ ದೇವೇಗೌಡರ ನೋಡಿ ಕಣ್ಣೀರಿಟ್ಟ ಸನ್ನಿವೇಶ ನಡೆಯಿತು. ತಾಯಿ ಚಾಮುಂಡೇಶ್ವರಿ ನಮ್ಮ ತಂದೆಗೆ ಶಕ್ತಿ ಕೊಟ್ಟು ಇಲ್ಲಿಗೆ ಬರುವಾಗೆ ಮಾಡಿದ್ದು. ಚಾಮುಂಡೇಶ್ವರಿಯ ಆಶೀರ್ವಾದ ನಮಗೆ ಇದೆ. ಹಾಗಾಗಿ ನಮಗೆ ನಿರೀಕ್ಷೆಗೂ ಮೀರಿ ಯಶಸ್ಸು ಸಿಕ್ಕಿದೆ ಎಂದರು.

ಕಾಂಗ್ರೆಸ್ ಗೆ ಈ ಬಾರಿ 70 ರಿಂದ 75 ಸೀಟು ಗೆಲ್ಲೋದೆ ಹೆಚ್ಚು. ಅವರೇನು ಅವರ ಶಕ್ತಿ ಏನೂ ಅಂತ ನನಗೆ ಗೊತ್ತಿಲ್ವಾ. ಸಿದ್ದರಾಮಯ್ಯನವರು  ಇನ್ನೂ ಕ್ಷೇತ್ರ ಹುಡುಕಾಟದಲ್ಲೇ ಇದ್ದಾರೆ. ವರುಣಾ ಜೊತೆಗೆ ಇನ್ನೊಂದು ಕ್ಷೇತ್ರದಲ್ಲಿ ನಿಲ್ಲಲು ನೋಡುತ್ತಿದ್ದಾರೆ. ಅವರಿಗೆ ಇಲ್ಲೂ ಗೆಲ್ಲುವ ಭರವಸೆ ಇಲ್ಲದೆ ಬೇರೆ ಬೇರೆ ಜಾಗ ನೋಡ್ತಾ ಇದ್ದಾರೆ. ವರುಣದಲ್ಲಿ ನಿಂತರೆ ಮಗನ ಭವಿಷ್ಯಕ್ಕೆ  ಧಕ್ಕೆ ಅಂತ ಹೇಳೋರು ನಮ್ಮನ್ಯಾಕೆ ಕುಟುಂಬ ರಾಜಕಾರಣ ಅಂತಾರೆ.? ರಾಜಕಾರಣದಲ್ಲಿ ಸೋಲು ಗೆಲುವು ಸಹಜ ಎಂದು ಹೆಚ್.ಡಿ ಕುಮಾರಸ್ವಾಮಿ ಟಾಂಗ್ ನೀಡಿದರು.

ಮೀಸಲಾತಿ ಹೆಚ್ಚಳ ಘೋಷಣೆ ಮಾಡಿರುವ ವಿಚಾರದಲ್ಲಿ ಮಕ್ಕಳ ಆಟವಾಡಿದ್ದಾರೆ. ಚುನಾವಣೆ ಘೋಷಣೆಗೆ ಕೆಲವೇ ದಿನಗಳಿರುವಾಗ ಮೀಸಲಾತಿ ಹೆಚ್ಚಳ ಮಾಡುವ ಮೂಲಕ ಜನರ ಕಿವಿಗೆ ಹೂವು ಮುಡಿಸಿದ್ದಾರೆ. ಈಗ ಲಿಂಗಾಯತರು, ಒಕ್ಕಲಿಗರ ಕಿವಿಗೆ ಹೂವು ಮುಡಿಸಿದ್ದಾರೆ. ಇವರು ಮಾಡಿರುವ ಮೀಸಲಾತಿ ಹೆಚ್ಚಳ ಕಾರ್ಯರೂಪಕ್ಕೆ ಬರುವುದಿಲ್ಲ. ಸಮಾಜವನ್ನು ಒಡೆಯುವ ಸಲುವಾಗಿ ಮುಸ್ಲಿಮರ ಮೀಸಲಾತಿ ಕಡಿತ ಮಾಡಿ ಬೇರೆ ಸಮುದಾಯಕ್ಕೆ ಹಂಚಿದ್ದಾರೆ. ಈ ಮೂಲಕ ಹಿಂದೂ ಮುಸ್ಲಿಮರ ಮಧ್ಯೆ ಸಂಘರ್ಷ ಹುಟ್ಟು ಹಾಕಲು, ಬೆಂಕಿ ಹಚ್ಚಲು ಈ ರೀತಿ ಮಾಡಿದ್ದಾರೆ ಎಂದು ಕಿಡಿಕಾರಿದರು.

ಜೆಡಿಎಸ್ ಅಭ್ಯರ್ಥಿಗಳ  ಎರಡನೇ ಪಟ್ಟಿ ಶೀಘ್ರದಲ್ಲೇ ಬಿಡುಗಡೆ

ಜೆಡಿಎಸ್ ಅಭ್ಯರ್ಥಿಗಳ  ಎರಡನೇ ಪಟ್ಟಿ ಶೀಘ್ರದಲ್ಲೇ ಬಿಡುಗಡೆ ಮಾಡುತ್ತೇವೆ. ನಮ್ಮ ಪಕ್ಷ 123 ಸೀಟು ರೀಚ್  ಆಗಲು ಏನು ಕೆಲಸ ಆಗಬೇಕು ಆ ಕೆಲಸ ಮಾಡುತ್ತೇವೆ. ಈಗ ನಾನು ಶ್ರಮ ಹಾಕದಿದ್ದರೂ 50 ಸೀಟು ಗೆಲ್ಲುತ್ತೇನೆ. ಈಗ ನಾನು 123 ಸೀಟು ಗೆಲ್ಲಲೇಬೇಕು ಎಂದು ಶ್ರಮವಹಿಸಿ ಪಕ್ಷ ಬಲ ಪಡಿಸುವ ಕೆಲಸ ಮಾಡುತ್ತಿದ್ದೇನೆ ಎಂದು ಹೆಚ್.ಡಿಕೆ ಹೇಳಿದರು.

Key words: reduction -Muslim –reservation-BJP- divide – country- HD Kumaraswamy