ರಾಜ್ಯಸಭೆ ಉಪಚುನಾವಣೆ: ಮೂವರು ಅಭ್ಯರ್ಥಿಗಳಿಂದ ನಾಮಪತ್ರ ಸಲ್ಲಿಕೆ…

ಬೆಂಗಳೂರು,ಡಿ,2,2019(www.justkannada.in): ರಾಜ್ಯಸಭೆ ಉಪಚುನಾವಣೆಗೆ  ಮೂವರು ಅಭ್ಯರ್ಥಿಗಳು ನಾಮಪತ್ರ ಸಲ್ಲಿಕೆ ಮಾಡಿದ್ದಾರೆ ಎಂದು ಚುನಾವಣಾಧಿಕಾರಿ ಎಂ.ಕೆ.ವಿಶಾಲಾಕ್ಷಿ ತಿಳಿಸಿದರು.

ಈ ಬಗ್ಗೆ ಇಂದು ಮಾತನಾಡಿ ಮಾಹಿತಿ ನೀಡಿದ ಚುನಾವಣಾಧಿಕಾರಿ ಎಂ.ಕೆ.ವಿಶಾಲಾಕ್ಷಿ, ಇಂದು ನಾಮಪತ್ರ ಸಲ್ಲಿಕೆ ಮಾಡಲು ಕೊನೆಯ ದಿನವಾಗಿತ್ತು. ಈವರೆಗೆ ಮೂವರು ಅಭ್ಯರ್ಥಿ ಗಳು ನಾಮಪತ್ರ ಸಲ್ಲಿಕೆ ಮಾಡಿದ್ದಾರೆ. ಬಿಜೆಪಿಯಿಂದ ಕೆ.ಸಿ.ರಾಮಮೂರ್ತಿ ನಾಮಪತ್ರ ಸಲ್ಲಿಕೆ ಮಾಡಿದ್ದರೆ, ಉಳಿದಂತೆ ಸ್ವತಂತ್ರ ಅಭ್ಯರ್ಥಿಯಾಗಿ ಡಾ.ಕೆ. ಪದ್ಮರಾಜ ಮತ್ತು ಹಿಂದುಸ್ತಾನ್ ಜನತಾ ಪಾರ್ಟಿಯಿಂದ ಶ್ರೀವೆಂಕಟೇಶ್ವರ ಮಹಾಸ್ವಾಮಿ ಎಂಬವರು ನಾಮಪತ್ರ ಸಲ್ಲಿಸಿದ್ದಾರೆ. ಬೇರೆ ಯಾವುದೇ ರಾಜಕೀಯ ಪಕ್ಷದಿಂದ ಅಭ್ಯರ್ಥಿಗಳು ನಾಮಪತ್ರ ಸಲ್ಲಿಕೆ ಮಾಡಿಲ್ಲ ಎಂದು ತಿಳಿಸಿದರು.

ನಾಮಪತ್ರ ಸಲ್ಲಿಸುವ ಅಭ್ಯರ್ಥಿಗಳು 10 ಮಂದಿ ಅನುಮೋದಕರ ಸಹಿ ಹಾಕುವುದು ಕಡ್ಡಾಯವಾಗಿದೆ. ಇಬ್ಬರು ಸ್ವತಂತ್ರ ಅಭ್ಯರ್ಥಿಗಳಿಗೆ ಯಾರೇ ಅನುಮೋದಕರು ಸಹಿ ಹಾಕಿಲ್ಲ. ಬಿಜೆಪಿ ಅಭ್ಯರ್ಥಿ ಕೆ.ಸಿ.ರಾಮಮೂರ್ತಿಗೆ ಹತ್ತು ಮಂದಿ ಅನುಮೋದಕರು ಸಹಿ ಹಾಕಿದ್ದಾರೆ. ನಾಳೆ ನಾಮಪತ್ರ ಪರಿಶೀಲನೆ ನಡೆಯಲಿದ್ದು, ನಾಮಪತ್ರ ಸಮರ್ಪಕವಾಗಿರದಿದ್ದರೆ ಅಂತವರ ನಾಮಪತ್ರ ತಿರಸ್ಕರಿಸಲಾಗುತ್ತದೆ. ನಾಮಪತ್ರ ಹಿಂಪಡೆಯಲು ಡಿಸೆಂಬರ್ 5 ಕಡೇ ದಿನವಾಗಿದೆ. ಅಂದು ಅಂತಿಮ ಘೋಷಣೆ ಮಾಡಲಿದ್ದೇವೆ ಎಂದು ಚುನಾವಣಾಧಿಕಾರಿ ಎಂ.ಕೆ.ವಿಶಾಲಾಕ್ಷಿ ಹೇಳಿದರು.

Key words: Rajya Sabha –by- election- Nomination -submission – three candidates- Election -officer- MK Vishalakshi